ಆತ್ಮಜ್ಞಾನಿಗಳ ಅಧಿಪತಿ ಅಹ್ಮದುಲ್ ಕಬೀರ್ ರ‍್ರಿಫಾಈ (ರ)
ಹಾಫಿಳ್ ಮುಹಮ್ಮದ್ ಹಾಶಿರ್
ಆತ್ಮಜ್ಞಾನಿಗಳ ದೊರೆಯಾಗಿ ಆಧ್ಯಾತ್ಮಿಕ ಲೋಕವನ್ನು ಆಳಿದ ಸೂಫಿ ಸಂತರಾಗಿದ್ದಾರೆ ಶೈಖ್ ಅಹ್ಮದುಲ್ ಕಬೀರ್ ರಿಫಾಈ. ಅವರದ್ದು ಜ್ಞಾನ, ಭಕ್ತಿ, ದಯೆ, ಸಹನೆ, ಸಹಾನುಭೂತಿ ಇತ್ಯಾದಿ ಸದ್ಗುಣ ಮೇಳೈಸಿದ ವಿಶಿಷ್ಟ ವ್ಯಕ್ತಿತ್ವವಾಗಿತ್ತು. ಗರ್ಭಾವಸ್ಥೆಯಲ್ಲೇ ತಂದೆಯನ್ನು ಕಳೆದುಕೊಂಡ ಅವರು ಬೆಳೆದದ್ದು ಸೋದರ ಮಾವ ಶೈಖ್ ಮನ್ಸೂರ್‌ರವರ ಪೋಷಣೆಯಲ್ಲಿ. ಏಳನೇ ವರ್ಷದಲ್ಲಿ ಖುರ್‌ಆನ್ ಕಂಠಪಾಟ ಮಾಡಿದ ಅವರು ಬಳಿಕ ಅಂದಿನ ಅನೇಕ ಅಗ್ರೇಸರ ವಿದ್ವಾಂಸರ ಬಳಿ ಉನ್ನತ ಶಿಕ್ಷಣ ಪಡೆದರು. ಇಪ್ಪತ್ತನೇ ವಯಸ್ಸಿಗೆ ಗುರುವರ್ಯರಾದ ಅಬುಲ್ ಫಳ್‌ಲ್‌ರಿಂದ ಬೋಧನೆ ಮತ್ತು ಮಾರ್ಗದರ್ಶನ ನೀಡಕ್ಕಿರುವ ಅಧಿಕೃತ ಅನುಮತಿ (ಇಜಾಝತ್)ಯನ್ನು ಸ್ವೀಕರಿಸಿದರು. ಶರೀಅತ್ ಮತ್ತು ತ್ವರೀಖತ್‌ಗೆ ಸಂಬಂಧಿಸಿದ ವಿಷಯಗಳಲ್ಲಿ ಉದ್ಧಾಮರಾಗಿದ್ದ ಅವರು ವಿದ್ವಾಂಸರ ವಲಯದಲ್ಲಿ ‘ಅಬುಲ್ ಇಲ್ಮೈನ್’ ಎಂದೇ ಪ್ರಖ್ಯಾತರಾದರು.
ವ್ಯಕ್ತಿತ್ವ ಮತ್ತು ವೇಷಭೂಷಣ
ಮಂದಸ್ಮಿತ ದುಂಡು ಮುಖ, ಅಗಲವಾದ ಹಣೆ, ಕಪ್ಪುಬಣ್ಣದ ಗಡ್ಡ, ಲಾಸ್ಯವಾಡುವ ತುಟಿಗಳು. ಇದು ಅವರ ವ್ಯಕ್ತಿತ್ವದ ಆಕರ್ಷಣಾ ಬಿಂದು. ಬಿಳಿ ಖಮೀಸ್, ಬಿಳಿ ರೋಮಗಳಿಂದ ನಿರ್ಮಿಸಲ್ಪಟ್ಟ ಸಾಕ್ಸ್, ಬಿಳಿ ಬಣ್ಣದ ಶಾಲು, ಕಪ್ಪುಬಣ್ಣದ, ಕೆಲವೊಮ್ಮೆ ಬಿಳಿ ಬಣ್ಣದ ತಲೆ ದಿರಿಸು ಇದು ಅವರ ವೇಷ ಭೂಷಣ. ಸಹನೆ, ಶಾಂತ ಸ್ವಭಾವ, ದಯೆ, ವಿನಯ ಇದು ಅವರ ವ್ಯಕ್ತಿತ್ವದ ಪ್ರತಿಬಿಂಬ. ಎಲ್ಲರನ್ನೂ ‘ಸಯ್ಯಿದೀ’ (ನನ್ನ ಯಜಮಾನ/ಗೌರವಾನ್ವಿತರೆ) ಎಂದೇ ಸಂಬೋಧಿಸುತ್ತಿದ್ದ ಅವರು ಸಣ್ಣವರನ್ನೂ ದೊಡ್ಡ ದೃಷ್ಟಿಯಿಂದಲೇ ಕಂಡರು. ಸಾಮಾನ್ಯವಾಗಿ ಜನರು ಅವಗಣಿಸುವ ಜೀವಿಗಳನ್ನು ಅವರು ಪರಿಗಣಿಸಿದರು. ಬದುಕಿನಲ್ಲಿ ಕಾಯ್ದುಕೊಂಡ ಸೂಕ್ಮತೆ ಮತ್ತು ನಿರ್ವಹಿಸಿದ ಆರಾಧನೆಯು ಅವರನ್ನು ಆಧ್ಯಾತ್ಮಿಕತೆಯ ಔನ್ನತ್ಯಕ್ಕೆ ತಲುಪಿಸಿತು. ಅನೇಕ ಆಧ್ಯಾತ್ಮಿಕ ಗುರುವರ್ಯರುಗಳಿಂದ ತ್ವರೀಖತ್ (ಆಧ್ಯಾತ್ಮಿಕ ಮಾರ್ಗ) ಮತ್ತು ಸ್ಥಾನಬಟ್ಟೆಯನ್ನು (ಖಿರ್ಕ) ಪಡೆದುಕೊಂಡರು. ಆಧ್ಯಾತ್ಮದ ಪೋಷಾಕು ತೊಟ್ಟ ನಕಲಿ ಸೂಫಿಗಳ ವಿರುದ್ಧ ತಾತ್ವಿಕ ವಿರೋಧ ವ್ಯಕ್ತಪಡಿಸಿದರು. ಶೈಖ್ ರಿಫಾಈ ಹೇಳಿದರು; ‘”ಕೆಲವು ಮಂದಿ ಅವರು ಕೇವಲ ಬಾಹ್ಯ ಜ್ಞಾನಿಗಳು ‘ನಾವು ಆತ್ಮಜ್ಞಾನಿಗಳು ಎನ್ನುತ್ತಾರೆ’ ಆದರೆ ಇದು ಸರಿಯಲ್ಲ. ಇಸ್ಲಾಮ್‌ಗೆ ಹೊರ ಮತ್ತು ಒಳವಿದೆ. ಒಳಗಿನ ಭಾಗವೇ ಹೊರಭಾಗಕ್ಕೆ ಆಧಾರ. ಒಳಭಾಗವಿಲ್ಲದೆ ಹೊರಭಾಗವಾದರೂ ಹೇಗೆ ಇರುತ್ತೆ.? ದೇಹವಿಲ್ಲದೆ ಹೃದಯಕ್ಕೆ ಅಸ್ತಿತ್ವವಿದೆಯೇ? ಹೃದಯವು ದೇಹದ ಬೆಳಕು. ಈ ಬೆಳಕನ್ನು (ಹೃದಯವನ್ನು) ಆತ್ಮಜ್ಞಾನ ಸಂಸ್ಕರಿಸುತ್ತದೆ (ಶುದ್ಧೀಕರಿಸುತ್ತದೆ). ಹೃದಯ ಶುದ್ಧಿಯಾಗದೆ ನಡೆಸುವ ಕೇವಲ ಬಾಹ್ಯ ಕರ್ಮಗಳು ಅಪೂರ್ಣ. ಹೃದಯ ಸಂಶುದ್ಧವಾದರೆ (ಆ ವ್ಯಕ್ತಿಗೆ) ತಪ್ಪುಗಳ ಕಡೆಗೆ ತಿರುಗಲು ಸಾಧ್ಯವಾಗದು.”
ದಯೆ ಮತ್ತು ಸಹಾನುಭೂತಿ
ಶೈಖ್ ರಿಫಾಈಯವರ ಬೋಧನೆಯಲ್ಲಿ ಜ್ಞಾನದ ಜತೆಗೆ ಮಾನವೀಯತೆ ಮತ್ತು ಸಹಾನುಭೂತಿಯೂ ಮಿಳಿತವಾಗಿತ್ತು. ಆ ಕಾಲದ ಪ್ರಸಿದ್ಧ ಕರ್ಮಶಾಸ್ತ ವಿದ್ವಾಂಸರ ದಂಡೇ ಶೈಖ್ ರಿಫಾಈಯವರ ಪಾಠಶಾಲೆಯಲ್ಲಿತ್ತು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜ್ಞಾನ ಸಭೆಯಿಂದ ಸ್ವಹಾಬಿಗಳು ಹೇರಳವಾಗಿ ಅರಿವು ಸಂಪಾದಿಸುತ್ತಿದ್ದಂತೆ ಶೈಖ್ ರಿಫಾಈಯವರ ತರಗತಿಯಲ್ಲಿ ಹಾಜರಾದ ಪ್ರತಿಯೊಬ್ಬರಿಗೂ ತಮ್ಮ ಅಗತ್ಯಕ್ಕೆ ತಕ್ಕ ಅರಿವುಗಳು ಲಭಿಸುತ್ತಿದ್ದವೆಂದು ಅವರ ಶಿಷ್ಯ ಜಮಾಲುದ್ದೀನ್ ಅಲ್‌ಖತ್ವೀಬುಲ್ ಹದ್ದಾದಿರವರು ಹೇಳುತ್ತಾರೆ. ಪ್ರತಿಯೊಂದು ಕಾರ್ಯವನ್ನೂ ಅವರು ಸಕರಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದರು. ನಾಯಿ, ಹಂದಿ ಮುಂತಾದ ಪ್ರಾಣಿಗಳನ್ನು ಕಂಡಾಗ, “ಸಂತೋಷವಾಗಿರಿ” ಎನ್ನುತ್ತಿದ್ದರು. ‘ತಾವೇಕೆ ಹಾಗೆನ್ನುತ್ತಿದ್ದೀರೆಂಬ ಅನುಚರರ ಪ್ರಶ್ನೆಗೆ ಅವರ ಉತ್ತರ ಹೀಗಿತ್ತು: ‘ಏನನ್ನು ಕಂಡರೂ ಅದರ ಬಗ್ಗೆ ಒಳ್ಳೆಯದನ್ನೇ ಹೇಳಲು ನಾನು ನನಗೇ ತರಬೇತಿ ನೀಡುತ್ತಿದ್ದೇನೆ. ಇದು ಪ್ರವಾದಿ ಈಸಾರವರ ಮಾದರಿಯಾಗಿದೆ. ಅವರು (ಈಸಾ ನಬಿ) ಒಮ್ಮೆ ತನ್ನ ಅನುಯಾಯಿಗಳೊಂದಿಗೆ ತೆರಳುವ ವೇಳೆ ನಾಯಿಯ ಶವವನ್ನು ಕಂಡರು. ಎಂಥಾ ವಾಸನೆಯೆಂದು ಅನುಯಾಯಿಗಳು ಮೂಗುಮುಚ್ಚಿಕೊಂಡರು. ಆಗ ಅವರು ‘ಆ ನಾಯಿಯ ಹಲ್ಲುಗಳ ಬಿಳುಪಿನ ಬಗ್ಗೆ ನಿಮಗೆ ಏನೂ ಹೇಳಲಿಕ್ಕಿಲ್ಲವೇ ಎಂದು ಅವರು ಕೇಳಿದರು’ (ಅಲ್ ಉಹುದುಲ್ ಮುಹಮ್ಮದಿಯ್ಯ1983)
ರೋಗಿಗಳು, ಅಂಧರು, ವೃದ್ಧರು, ವಿಧವೆಯರು ಮತ್ತು ಅನಾಥರ ಅಸ ಹಾಯಕತೆಗೆ ಶೈಖ್ ರಿಫಾಈ(ರ)ರವರು ಸ್ಪಂದಿಸಿದರು. ಅವರನ್ನು ದಯೆ ಮತ್ತು ಮಮತೆಯಿಂದ ನಡೆಸಿಕೊಂಡರು. ಅವರ ಬಟ್ಟೆಗಳನ್ನು ಒಗೆದುಕೊಡುತ್ತಿದ್ದರು. ತಲೆಗೂದಲು ಮತ್ತು ಗಡ್ಡವನ್ನು ಬಾಚುತ್ತಿದ್ದರು. ಅವರಿಗೆ ಆಹಾರ ತಲುಪಿಸುತ್ತಿದ್ದರು. ಮತ್ತು ಅವರೊಂದಿಗೆ ಸೇರಿ ಆಹಾರ ಸೇವಿಸುತ್ತಿದ್ದರು. ಒಟ್ಟಾರೆ ಅವರ ಸೇವೆ ಮತ್ತು ಸಹವಾಸವನ್ನು ಕಡ್ಡಾಯ ಕರ್ತವ್ಯ ವೆಂದು ಪರಿಗಣಿಸಿದರು.
ಕರಾಮತ್‌ಗಳು
ಅನೇಕ ಪವಾಡಗಳು ಶೈಖ್ ರಿಫಾಈ ರವರಿಂದ ಪ್ರಕಟವಾಗಿದ್ದವು. ಈ ಪೈಕಿ ಕೆಲವನ್ನು ಇಲ್ಲಿ ಹೃಸ್ವವಾಗಿ ವಿವರಿಸಲಾಗಿದೆ.
ರೌಳಾ ಶರೀಫ್‌ನಿಂದ ನಬಿ ಸ್ವಲ್ಲ ಲ್ಲಾಹು ಅಲೈಹಿ ವಸಲ್ಲಮರ ಪವಿತ್ರ ಹಸ್ತ ಚಾಚಲ್ಪಟ್ಟ ಘಟನೆ ಬಹಳ ಪ್ರಸಿದ್ಧ. ಈ ಘಟನೆಗೆ ಲಕ್ಷ ಕ್ಕೂ ಮಿಕ್ಕ ಮಂದಿ ಸಾಕ್ಷಿಗಳಾಗಿದ್ದರು.
ಶೈಖ್ ರಿಫಾಈರವರು ಒಮ್ಮೆ ಉಜ್ವಲ ಭಾಷಣ ನಡೆಸಿದರು. ದೊರೆಗಳೂ, ಮಂತ್ರಿಗಳೂ, ವಿದ್ವಾಂ ಸರೂ ಅದರಲ್ಲಿ ಭಾಗವಹಿಸಿದ್ದರು. ಭಾಷಣದ ನಡುವೆ ಕೇಳಿದ ಇನ್ನೂರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸಿದರು. ಅವರ ಭಾಷಣ ಎಷ್ಟು ಪ್ರಖರ ಮತ್ತು ತೀಕ್ಷವಾಗಿತ್ತೆಂದರೆ ತಕ್ಷಣವೇ ಅಲ್ಲಿದ್ದ8000 ಮಂದಿ ಇಸ್ಲಾಂ ಸ್ವೀಕರಿಸಿದರು. ಐದು ಮಂದಿ ಅಲ್ಲೇ ಬಿದ್ದು ಮೃತಪಟ್ಟರು. 40,000 ಸಾವಿರ ಮಂದಿ ತಮ್ಮ ದುಷ್ಕೃತ್ಯಗಳಿಗೆ ಪಶ್ಚಾತ್ತಾಪ ನಡೆಸಿ ಸತ್ಪಥಕ್ಕೆ ಮರಳಿದರು.
ಜನರು ದ್ಸಿಕ್ರ‍್ಗಳನ್ನು ಬರೆದುಕೊ ಡುವಂತೆ ವಿನಂತಿಸಿದರೆ ಕಾಗದ ತೆಗೆದು ಬರಿಗೈಯಲ್ಲೇ ಬರೆಯುತ್ತಿ ದ್ದರು. ಆದರೆ ಅದರಲ್ಲಿ ಅಕ್ಷರಗಳು ಸ್ಪಷ್ಟವಾಗಿ ಮೂಡುತ್ತಿದ್ದವು. (ಯೂಸುಫುನ್ನಬ್ಹಾನಿ – ಜಾಮಿಉ ಕರಾಮಾತಿಲ್ ಔಲಿಯ1/297)
ಅವರ ಸಭೆಯಲ್ಲಿ ಲಕ್ಷಾಂತರ ಮಂದಿ ಸೇರಿದ್ದರೂ ಅವರ ಧ್ವನಿಯನ್ನು ಎಲ್ಲರೂ ಸಮಾನವಾಗಿ ಕೇಳುತ್ತಿದ್ದರು. (ಇಬ್ನು ಮುಲ್ಖೀನ್ – ತಬ ಖಾತುಲ್ ಔಲಿಯ, ಪುಟ 69).
ಅಸೂಯೆಕೋರರಾದ ನೂರ ಎಪ್ಪತ್ತಕ್ಕೂ ಮಿಕ್ಕ ಮಂದಿ ಅವರನ್ನು ಪರೀಕ್ಷಿಸಲೆಂದು ಬಂದರು. ಇದನ್ನು ತಿಳಿದ ಶೈಖ್ ರಿಫಾಈ ಅವರಿಗೆ ಊಟದ ವ್ಯವಸ್ಥೆ ಮಾಡಿದರು. ತನ್ನ ಕೈಗಳನ್ನೆತ್ತಿದ ಅವರು ನಿನ್ನ ಇಷ್ಟದಾಸರಿಗೆ ನೆರವಾಗಿ ನಿನ್ನ ಸಾಮರ್ಥ್ಯ ಪ್ರಕಟಿಸು ಎಂದು ಪ್ರಾರ್ಥಿಸಿದರು. ಆಗಮಿಸಿದ ಆ ಮಂದಿಗೆ ಆಹಾರ ಬಡಿಸಿದರು. ಅವರು ಬಿಸ್ಮಿ ಹೇಳಿ ಊಟದ ತಟ್ಟೆಗೆ ಕೈ ಚಾಚುತ್ತಿದ್ದಂತೆ ಅದು ಮೇಲೇರತೊಡಗಿತು. ಶೈಖ್ ರಿಫಾಈಯವರಿಗೆ ಅಲ್ಲಾಹು ನೀಡಿದ ಔನ್ನತ್ಯವನ್ನು ಹತ್ತಿರದಿಂದ ಕಂಡು ಅರ್ಥೈಸಿದ ಅವರು ಪಶ್ಚಾತ್ತಾಪ ನಡೆಸಿ ಮರಳಿದರು.
ಹೀಗೆ ಶೈಖ್ ರಿಫಾಈರವರಿಂದ ಪ್ರಕಟವಾದ ಅನೇಕ ಅದ್ಭುತ ಪವಾಡಗಳು ಇತಿಹಾಸ ಗ್ರಂಥಗಳಲ್ಲಿ ದಾಖಲಾಗಿವೆ.
ಗ್ರಂಥಗಳು/ವಫಾತ್
ವಿವಿಧ ವಿಷಯಗಳಲ್ಲಿ ಶೈಖ್ ರಿಫಾಈರವರು ಬಹಳಷ್ಟು ಗ್ರಂಥಗಳನ್ನು ರಚಿಸಿರುವರು. ಆ ಪೈಕಿ ಕೆಲವು ಮಾಂಗೋಲಿಯನ್ನರ ದಾಳಿಯಲ್ಲಿ ನಷ್ಟವಾದರೆ ಮತ್ತೆ ಕೆಲವು ಈಗಲೂ ಚಾಲ್ತಿಯಲ್ಲಿದೆ. ಜತೆಗೆ ತನ್ನ ಮುರೀದ್‌ಗಳಿಗಾಗಿ ಔರಾದ್, ವಳ್ವಾಇಫ್, ಮತ್ತು ದುಆಗಳನ್ನೂ ಅವರು ಕ್ರೋಢೀಕರಿಸಿರುವರು. ಆಧ್ಯಾತ್ಮಿಕ ಲೋಕದ ಅನಭಿಷಿಕ್ತ ದೊರೆಯಾಗಿ ಮೆರೆದ ಶೈಖ್ ಅಹ್ಮದುಲ್ ಕಬೀರ್ ರ‍್ರಿಫಾಈ ಹಿ.೫೭೬ರಲ್ಲಿ ನಿಧನರಾದರು. ಒಂದು ತಿಂಗಳುಗಳ ಕಾಲ ಮುಂದುವರೆದ ಉದರ ಸಂಬಂಧಿತ ಖಾಯಿಲೆಯು ಅವರ ಮರಣಕ್ಕೆ ಕಾರಣವಾಯಿತು. ಪಿತಾಮಹ ಇಬ್ನುನಜ್ಜಾರ್‌ರವರ ಸನಿಹದಲ್ಲೇ ಅವರನ್ನು ದಫನ ಮಾಡಲಾಯಿತು. ಅವರ ಸಾವಿರಾರು ಶಿಷ್ಯಂದಿರ ಮೂಲಕ ಅವರು ರೂಪ ಕೊಟ್ಟ ಸೂಫೀ ಪಂಥವು ನಂತರ ಕಾಲದಲ್ಲಿ (ತರೀಖತ್) ಪ್ರಪಂಚದಾದ್ಯAತ ಹರಡಿಕೊಂಡವು.
ಹೃಸ್ವ ಪರಿಚಯ
ಜನನ : ಹಿ 512 ರಜಬ್, ಗುರುವಾರ/ ಕ್ರಿ.ಶ 1119 ಜನನ ಸ್ಥಳ : ಇರಾಖ್‌ನ ಉಮ್ಮುಉಬೈದಾ
ಪೂರ್ಣನಾಮ : ಅಬೂಅಲ್ ಅಬ್ಬಾಸ್ ಅಹ್ಮದ್ ಇಬ್ನ್ ಅಲಿ ಅಲ್ ರಿಫಾಈ
ತಂದೆ : ಅಲಿಯ್ಯುಬ್ನು ಅಹ್ಮದ್
ತಾಯಿ : ಉಮ್ಮುಲ್ ಫಳ್‌ಲ್ ಫಾತಿಮತುಲ್ ಅನ್ಸಾರಿಯ್ಯ.
ಗುರುವರ್ಯರು : ಅಬ್ದುಸ್ಸಮೀಅï ಅಲ್ ಹರ್ಬೂನಿ, ಅಬುಲ್ ಫಳ್‌ಲ್ ಅಲಿ ವಾಸಿತ್ವಿ, ಅಬ್ದುಲ್ ಮಲಿಕ್ ಅಲ್ ಹರ್ಬೂನಿ, ಇಮಾಂ ಅಬೂ ಇಸ್ಹಾಖುಶ್ಶೀರಾಝಿ, ಅಬೂಬಕರ್ ಅಲ್ ವಾಸ್ವೀತ್ವೀ, ಶೈಖ್ ಮನ್ಸೂರ್
ಗೌರವನಾಮ : ಅಬುಲ್ ಇಲ್ಮೆನ್, ಶೈಖ್ ತ್ವರಾಇಖ್, ಅಶ್ಶೈಖುಲ್ ಕಬೀರ್, ಉಸ್ತಾದಿಲ್ ಜಮಾಅ
ಆಧ್ಯಾತ್ಮಿಕ ಬಿರುದು : ಸುಲ್ತಾನುಲ್ ಅವ್‌ಲಿಯಾಅï, ಸುಲ್ತಾನುಲ್ ಆರೀಫೀನ್, ಇಮಾಮುಲ್ ಮಶಾಇಖ್,
ಪತ್ನಿಯಂದಿರು : ಖದೀಜ, ಆಬಿದಾ
ಮಕ್ಕಳು : ಫಾತ್ವಿಮಾ, ಝೈನಬಾ (ಮೊದಲ ಪತ್ನಿಯಲ್ಲಿ) ಸ್ವಾಲಿಹ್ (ಇದು ಎರಡನೇ ಪತ್ನಿಯ ಮಗು. ಈ ಮಗು ಬಾಲ್ಯದಲ್ಲೇ ಮೃತಪಟ್ಟಿತ್ತು)
ಕೃತಿಗಳು : ಹಾಲತು ಅಹ್ಲಿಲ್ ಹಖೀಕತಿ ಮಹಲ್ಲಾಹಿ, ಅಸ್ಸಿರಾತುಲ್ ಮುಸ್ತಖೀಂ, ಕಿತಾಬುಲ್ ಹಿಕಂ, ಅಲ್ ಬುರ್ಹಾನುಲ್ ಮುಅಯ್ಯದ್, ಮಆನಿ ಬಿಸ್ಮಿಲ್ಲಾಹರ‍್ರಹ್ಮಾನರ‍್ರಹೀಂ, ತಫ್ಸೀರು ಸೂರತುಲ್ ಖದ್ರ್, ಅಲ್ ಬಹ್ಜ ಅನ್ನಿಳಾಮುಲ್ ಖಾಸ್ವಿ ಲಿ ಅಹ್ಲಿಲ್ ಇಖ್ತಿಬಾಸ್, ಅಲ್ ಮಜ್ಲಿಸುಲ್ ಅಹ್ಮದಿಯ್ಯ, (ಇವು ಅಸ್ತಿತ್ವದಲ್ಲಿರುವ ಗ್ರಂಥಗಳು)
ಪ್ರಮುಖ ಶಿಷ್ಯಂದಿರು : ಅಬುಲ್ ಫತ್ಹ್ ಅಲ್ ವಾಸಿತ್ವಿ, ಅಬೂ ಮುಹಮ್ಮದ್ ಅಲಿ ಅಲ್ ಹರೀರಿ, ಅಲಿ ಅಬೂ ಶುಬ್ಬಾಕ್, ಶೈಖ್ ಅಹ್ಮದುಲ್ ಬದವಿ, ಶೈಖ್ ನಜ್ಮುದ್ದೀನ್ ಅಲ್ ಇಸ್ಫಹಾನೀ,
ವಫಾತ್ :578 (570) ಎಂಬ ಅಭಿಪ್ರಾಯವೂ ಇದೆ) ಜುಮಾದುಲ್ ಊಲಾ 12
ಳುಹ್ರ್ ಸಮಯ
ಶೈಖ್ ರಿಫಾಈಯವರ ಬಗ್ಗೆ ಬೆಳಕು ಚೆಲ್ಲಿದ ಗ್ರಂಥಗಳು : ಇಮಾಮ್ ಸುಯೂತ್ವಿಯವರ ಅಲ್‌ಹಾವಿ, ಇಮಾಮ್ ಶಅïರಾನಿಯವರ ತಬಕಾತುಲ್ ಖುಬ್‌ರ, ಯೂಸುಫುನ್ನಬ್ಹಾನಿಯವರ ಜಾಮಿಉ ಕರಾಮಾತಿಲ್ ಔಲಿಯಾ, ಇಬ್ನು ಹಜರುಲ್ ಹೈತಮಿಯವರ ಫತಾವಲ್ ಹದೀಸಿಯ್ಯ, ಮತ್ತು ಇಬ್ನು ಮುಲ್ಖೀನ್‌ರವರ ತಬಕಾತುಲ್ ಔಲಿಯಾ
ಮಖ್‌ಬರ : ಉಮ್ಮು ಅಬೀದಾ (ಇರಾಖ್)




















