ಕಾವಲುಗಾರ ನಾಯಿ!!

ಕಾವಲುಗಾರ ನಾಯಿ!!

ನಾಯಿ ಪವಿತ್ರ ಇಸ್ಲಾಮಿನಲ್ಲಿ ಕಠಿಣ ನಜಸ್ (ನಜಸ್ ಮುಘಲ್ಲಳ್) ಆಗಿರುತ್ತದೆ. ನಾಯಿ ಸ್ಪರ್ಶಿಸಿದ್ದನ್ನು ಏಳು ಬಾರಿ ತೊಳೆಯಬೇಕೆಂದೂ ಆ ಪೈಕಿ ಒಂದು ಬಾರಿ ಮಣ್ಣಿನಿಂದ ಆಗಿರಬೇಕೆಂದೂ ಕಡ್ಡಾಯ ನಿಯಮವಿದೆ. ಆದಾಗ್ಯೂ ನಾಯಿಯನ್ನು ಇಸ್ಲಾಂ ಯಾವತ್ತೂ ಹೀನವಾಗಿ ಅಥವಾ ಕೀಳು ಮಟ್ಟದ ಪ್ರಾಣಿಯಾಗಿ ಕಂಡಿಲ್ಲ. ಇತರೆಲ್ಲ ಜೀವಿಗಳಂತೆಯೇ ಕಾಣುತ್ತದೆ. ಖುರ್‌ಆನಿನಲ್ಲಿ ಉಲ್ಲೇಖಿಸಲ್ಪಟ್ಟ ಗುಹಾವಾಸಿಗಳನ್ನು (ಅಸ್ಹಾಬುಲ್ ಕಹ್ಫ್) ಹಿಂಬಾಲಿಸಿ ಹೋದ ಕಂದು ಬಣ್ಣದ ಖಿತ್ಮೀರ್ ಎಂಬ ಹೆಸರಿನ ನಾಯಿಯು ಸ್ವರ್ಗ ಪ್ರವೇಶದ ವಿಶೇಷ ಅವಕಾಶ ದೊರೆತ ಐದು ಪ್ರಾಣಿಗಳಲ್ಲಿ ಒಂದಾಗಿದೆ. ಪವಿತ್ರ ಖುರ್‌ಆನಿನ ಅಲ್‌ಕಹ್ಫ್ ಎಂಬ ಅಧ್ಯಾಯದಲ್ಲಿ ಈ ನಾಯಿಯ ಬಗ್ಗೆ ದೀರ್ಘವಾದ ಪ್ರಸ್ತಾಪವಿದೆ.
ಮಾಲಿಕಿ ಮಝ್ಹಬ್ ಹೊರತು ಇಸ್ಲಾಮಿನ ಇತರ ಮೂರು ಮಝ್ಹಬ್‌ಗಳಲ್ಲೂ ನಾಯಿ ನಜಸ್ (ಮಲಿನ) ಆಗಿರುತ್ತದೆ. ಮಾಲಿಕಿಯಲ್ಲಿ ನಜಸ್ ಅಲ್ಲದಿದ್ದರೂ ನಿಯಮ ಪಾಲನೆ ಎಂಬ ದೃಷ್ಟಿಯಿಂದ ಏಳು ಬಾರಿ ತೊಳೆಯುವುದು ಕಡ್ಡಾಯವಾಗಿರುತ್ತದೆ.
ನಾಯಿ ಯಾವಾಗಲೂ ಕ್ರಿಯಾಶೀಲವಾಗಿರುವ ಒಂದು ಸಾಕು ಪ್ರಾಣಿ. ಸೋಮಾರಿತನ, ಅಲಸ್ಯ, ಜಡ ಎಂಬುದು ನಾಯಿಗೆ ಗೊತ್ತೇ ಇಲ್ಲ. ಯಾವಾಗಲೂ ಉತ್ಸಾಹಿಯಾಗಿರುವ ನಾಯಿಗೆ ತನ್ನ ಯಜಮಾನನೊಂದಿಗೆ ಬೇಟೆಯಾಡಲು ಹೋಗುವುದೆಂದರೆ ಎಲ್ಲಿಲ್ಲದ ಖುಷಿ.
ಗರ್ಭಧಾರಣೆಯಾಗಿ ಬರೇ ಎರಡೇ ತಿಂಗಳಲ್ಲಿ ಮರಿ ಹಾಕುವ ನಾಯಿಯು ಸಾಧಾರಣ ಎರಡರಿಂದ ಆರರ ತನಕ ಮಕ್ಕಳಿಗೆ ಜನ್ಮ ನೀಡುತ್ತದೆ. ಕೆಲವೊಮ್ಮೆ ಆದು ಹತ್ತರ ತನಕ ಮುಟ್ಟುವುದೂ ಉಂಟು. ಹುಟ್ಟಿದ ನವಜಾತ ನಾಯಿ ಮರಿಯ ಕಣ್ಣು, ಹುಟ್ಟಿದಂದಿನಿಂದ ಹನ್ನೆರಡು ದಿನಗಳ ತನಕ ಸಂಪೂರ್ಣ ಮುಚ್ಚಿರುತ್ತದೆ. ನಂತರ ಅದಾಗಿಯೇ ತೆರೆಯುತ್ತದೆ.
ಸುಮಾರು 15ರಿಂದ 20 ವರುಷ ಬದುಕುವ (ಆಯುಷ್ಯ) ನಾಯಿಗೆ ನಿದ್ದೆ ಬಹಳ ಕಡಿಮೆ. ರಾತ್ರಿ ವೇಳೆಯಲ್ಲಿ ಯಾವಾಗಲೂ ಎಚ್ಚರದಿಂದಿರುತ್ತದೆ. ಹಗಲು ಹೊತ್ತಿನಲ್ಲಿ ಮಾತ್ರ ಸ್ವಲ್ಪ ನಿದ್ದೆ ಮಾಡುತ್ತದೆ. ಆದರೆ ಯಾವ ಗಾಢ ನಿದ್ದೆಯಲ್ಲಿದ್ದರೂ ಶ್ರವಣ ಶಕ್ತಿಗೆ ಯಾವುದೇ ಬದಲಾವಣೆ ಅಥವಾ ಕೊರತೆ ಇರುವುದಿಲ್ಲ. ನಿದ್ದೆಯಲ್ಲಿರುವಾಗಲೂ ಚೆನ್ನಾಗಿ ಕೇಳಿಸುತ್ತದೆ. ಅಲ್ಲಾಹುವಿನ ಸೃಷ್ಟಿಗಳಲ್ಲಿ ಇಷ್ಟೊಂದು ಬಲಿಷ್ಠ ಶ್ರವಣ ಶಕ್ತಿ ಇರುವ ಜೀವಿ ಬೇರೊಂದಿಲ್ಲ. ರಾತ್ರಿ ಹೊತ್ತು ಸೂಜಿ ಕೈಯಿಂದ ಬಿದ್ದರೆ ಉಂಟಾಗುವ ಶಬ್ದ ಕೂಡ ನಾಯಿಗೆ ತಿಳಿಯುತ್ತದೆ.
ಅಂತೆಯೇ ಮೂಗಿನಿಂದ ಮೂಸಿ ನೋಡುವ ಘ್ರಾಣ ಶಕ್ತಿಯಲ್ಲೂ ನಾಯಿ ಅಗ್ರಗಣ್ಯ. ಸುಲೂಖಿಯ್ಯಿ ಎಂಬ ಜಾತಿಯ ನಾಯಿಗೆ ಒಬ್ಬನನ್ನು ಅಥವಾ ಅವನು ಸ್ಪರ್ಶಿಸಿದ ಜಾಗವನ್ನು ಮೂಸಲು ಕೊಟ್ಟು ನಂತರ ವರುಷಗಳು ಕಳೆದರೂ ಆ ವಾಸನೆ ಮತ್ತೆ ಮರುಕಳಿಸಿದರೆ ಈ ನಾಯಿಗೆ ಅದು ತಿಳಿಯುತ್ತದೆ. ಆ ಕಡತವು ತನ್ನ ಮೆಮೊರಿಯಲ್ಲಿ ಹಾಗೆಯೇ ಮಾಯದೆ (ಡಿಲೀಟ್ ಆಗದೆ) ಇರುತ್ತದೆ. ಅಪರಾಧಿಗಳನ್ನು ಪತ್ತೆ ಹಚ್ಚಲು ಪೋಲೀಸರು ಇಂತಹಾ ನಾಯಿಯನ್ನು ಬಳಸುತ್ತಾರೆ.
ಬಿಳಿ ಬಣ್ಣದ ವಸ್ತ್ರಧರಿಸಿ ಒಳ್ಳೆ ಡೀಸೆಂಟ್ ಆಗಿ ನಡೆಯುವವರನ್ನು ಕಂಡರೆ ನಾಯಿ ಅವರಿಗೆ ಒಳ್ಳೆಯ ಗೌರವ ಕೊಡುತ್ತದೆ. ಅವರನ್ನು ಕಾಣುವಾಗ ಬೊಗಳುವುದಿಲ್ಲ. ಮಾತ್ರವಲ್ಲ ಕೆಲವೊಮ್ಮೆ ಅವರಿಗೆ ದಾರಿ ಕೂಡ ಬಿಟ್ಟು ಕೊಡುತ್ತದೆ. ಆದರೆ ವಸ್ತ್ರಧಾರಣೆಯಲ್ಲಿ ಸಭ್ಯತನವಿಲ್ಲದೆ ಟಪೋರಿ, ಕಿಲಾಡಿ, ಪೋಕರಿಗಳಂತೆ ಕಂಡರೆ ಬೊಗಳುವುದಲ್ಲದೆ ಕೆಲವೊಮ್ಮೆ ಅವರ ಮೇಲೆ ಹಾರುವುದು ಕೂಡ ಉಂಟು.
ಕಪ್ಪು ಬಣ್ಣದವರು ಮತ್ತು ಕಪ್ಪು ಬಣ್ಣದ ವಸ್ತ್ರ ಧರಿಸುವವರನ್ನು ಕಂಡರೆ ನಾಯಿಗೆ ಎಲ್ಲಿಲ್ಲದ ಅಲರ್ಜಿ ಮತ್ತು ಅಸಹ್ಯ. ಕೆಲವೊಮ್ಮೆ ಅವರ ಕಥೆಯನ್ನೇ ಮುಗಿಸಿ ಬಿಡುತ್ತದೆ.
ಒಬ್ಬ ಯಜಮಾನನ ಸಂಪೂರ್ಣ ತರಬೇತಿಯಲ್ಲಿ ಬೆಳೆದು ಬಂದ ನಾಯಿ ತನ್ನ ಮಾಲಕನಿಗೆ ಬೇಕಾಗಿ ಯಾವ ತ್ಯಾಗಕ್ಕೂ ಸಿದ್ದನಾಗಿರುತ್ತದೆ. ಅವನ ಹಾಜರಿಯಲ್ಲೂ ಗೈರು ಹಾಜರಿಯಲ್ಲೂ ಅವನು ನಿದ್ರಿಸುತ್ತಿರುವಾಗಲೂ ಎಚ್ಚರದಲ್ಲಿರುವಾಗಲೂ ಅವನಿಗೂ ಅವನ ಎಲ್ಲಾ ಆಸ್ತಿಪಾಸ್ತಿಗೂ ಸಂಪೂರ್ಣ ಕಾವಲುಗಾರನಾಗಿರುತ್ತದೆ. ಅವನು ಆಜ್ಞಾಪಿಸುವ ಯಾವ ಕಷ್ಟದ ಕೆಲಸವನ್ನೂ ಚಾಚೂ ತಪ್ಪದೆ ಮಾಡುತ್ತದೆ. ಅವನ ಕಾನೂನು ನಿಯಮಗಳಿಗೆ ಸಂಪೂರ್ಣ ವಿಧೇಯನಾಗಿರುತ್ತದೆ. ಎಷ್ಟರ ತನಕವೆಂದರೆ ನಾಯಿಯ ತಲೆಯಲ್ಲಿ ಒಂದು ಉರಿಯು ತ್ತಿರುವ ಚಿಮಿಣಿಯಂತಹಾ ದೀಪವನ್ನಿಟ್ಟು ಅದರ ಎದುರಲ್ಲೇ ಮಾಂಸದ ತುಂಡುಗಳನ್ನು ಹಾಕಿದರೂ ಯಜಮಾನನ ಹಸಿರು ನಿಶಾನೆ ಸಿಗುವ ತನಕ ಒಂದಿಷ್ಟೂ ಅಲುಗಾಡದೆ ದೀಪ ನಂದದ ಹಾಗೂ ಕೆಳಗೆ ಬೀಳದ ರೀತಿಯಲ್ಲಿ ಹಾಗೆಯೇ ಗಂಟೆಗಟ್ಟಲೆ ನಿಲ್ಲುತ್ತದೆ.
ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ, ಕಾರ್ಯನಿರ್ವಹಣೆ ಇತ್ಯಾದಿ ಉತ್ತಮ ಗುಣ ನಡತೆಯ ವಿಷಯಗಳಲ್ಲಿ ನಾಯಿಗೆ ಸರಿಸಮಾನವಾದ ಪ್ರಾಣಿ ಬೇರೊಂದಿಲ್ಲ.
ತನ್ನ ಯಜಮಾನನ ಆಸ್ತಿ ಪಾಸ್ತಿಯ ರಕ್ಷಣಾ ಜವಾಬ್ದಾರಿಯು ತನಗಿರುವುದರಿಂದ ನಾಯಿ ಅಪರೂಪಕ್ಕೆ ರಾತ್ರಿ ನಿದ್ದೆ ಮಾಡುವುದಾದರೂ ನಿದ್ರಿಸುವಾಗ ತನ್ನ ಕಣ್ಣಿನ ರೆಪ್ಪೆಯನ್ನು ಮಡಚದೆ ಹಾಗೆಯೇ ಬಿಡುತ್ತದೆ. ಮಡಚಿದರೆ ಕೆಲವೊಮ್ಮೆ ಗಾಢ ನಿದ್ದೆಯಲ್ಲಿ ಬೀಳಬಹುದೆಂದು ಭಯದಿಂದ.
ಕತ್ತೆಕಿರುಬ ಮೃಗವೆಂದರೆ ನಾಯಿಗೆ ಎಲ್ಲಿಲ್ಲದ ಭಯ. ಎಷ್ಟರ ತನಕವೆಂದರೆ ಕತ್ತೆಕಿರುಬನನ್ನು ಮುಖಾಮುಖಿ ಕಂಡರೆ ನಾಯಿ ಪ್ರಜ್ಞೆ ತಪ್ಪಿ ಕುಸಿದು ಬೀಳುತ್ತದೆ. ಕತ್ತೆಕಿರುಬನಿಗೆ ನಾಯಿಯ ನೆರಳನ್ನು ಕಂಡರೆ ಕೂಡ ಆಗದು. ಅಷ್ಟಕ್ಕೂ ವೈರಾಗ್ಯ. ಚಂದ್ರ ಬೆಳಕು ಇರುವ ರಾತ್ರಿ ಬೆಟ್ಟ, ಗುಡ್ಡ ಮುಂತಾದ ಎತ್ತರದ  ಜಾಗದಲ್ಲಿ ನಡೆಯುವಾಗ ಬೆಟ್ಟದ ಬುಡಕ್ಕೆ ಬೀಳುವ ನಾಯಿಯ ನೆರಳು ಕತ್ತೆಕುರುಬನ ಮೇಲೆ ಬಿದ್ದರೆ  ತನ್ನ ತಡೆಯಲಾಗದ ಸಿಟ್ಟಿನ ಪರಾಕಾಷ್ಟೆಯಿಂದ ನಾಯಿಯ ಮೇಲೆ ಹಾರಿ ನಾಯಿಯನ್ನು ನಿರಾಯಾಸ ಕೊಂದು ತಿನ್ನುತ್ತದೆ.
ಮಾಂಸಾಹಾರಿಯಾದ ನಾಯಿಗೆ ತಾಜಾ ಮಾಂಸಕ್ಕಿಂತ ಕೆಟ್ಟು ಕೊಳೆತದ್ದೇ ಇಷ್ಟ. ಕೊಳೆತ ಶವ ದೊರೆತರೆ ಆದಿನ ನಾಯಿಗೆ ಸಡಗರವೇ ಸೈ.
ಬಾಲ ಅಲ್ಲಾಡಿಸುವುದು, ನೋವಾಗದಂತೆ ಯಜಮಾನನ ಕಾಲಿಗೆ ಕಚ್ಚುವುದು ಇದೆಲ್ಲಾ ಯಜಮಾನನಲ್ಲಿರುವ ಪ್ರೀತಿ ಮಮತೆ, ನಮ್ರತೆ ಅಂತೆಯೇ ಅವನಿಗೆ ಕೊಡುವ ಗೌರವದ ನಿಶಾನೆ ಮತ್ತು ಸೂಚನೆಯಾಗಿದೆ.
ನಾಯಿ ಮಧ್ಯರಾತ್ರಿ ನಂತರ ಬೊಗಳುವುದನ್ನು ಕೇಳಿದರೆ ನೀವು ಅಲ್ಲಾಹನಲ್ಲಿ ಶೈತಾನನಿಂದ ಕಾವಲನ್ನು ಯಾಚಿಸಿರಿ. ಯಾಕೆಂದರೆ ನಿಮ್ಮ ಕಣ್ಣಿಗೆ ಗೋಚರವಾಗದ ಹಲವಾರು ಸಂಗತಿ ನಾಯಿಯ ಕಣ್ಣಿಗೆ ಗೋಚರವಾಗುತ್ತದೆ ಎಂದು ಸಹೀಹಾದ ಹದೀಸಿನಲ್ಲಿದೆ.
ಪ್ರವಾದಿ ಆದಂ ನಬಿಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸ್ವರ್ಗ ಲೋಕದಿಂದ ಭೂಮಿಗೆ ಬಂದಾಗ ಅವರ ಮೇಲೆ ಆಕ್ರಮಣ ನಡೆಸಲು ಅವರ ಕಟ್ಟಾ ವೈರಿ ಇಬ್ಲೀಸನು (ಲಅನತುಲ್ಲಾಹಿ ಅಲೈಹಿ) ನಾಯಿಯನ್ನು ಬಿಟ್ಟಿದ್ದ. ಆಗ ಆದಂ ನಬಿ ಅಲೈಹಿಸ್ಸಲಾಮ್ ರು ಜಿಬ್ರೀಲ್ ಅಲೈಹಿಸ್ಸಲಾಮ್ ರವರ ಆದೇಶ ಪ್ರಕಾರ ಬಂದ ನಾಯಿಯ ಬೆನ್ನಿನ ಮೇಲೆ ತನ್ನ ಪವಿತ್ರ ಕೈಯಿಂದ ಸವರಿದರು. ಸುಬ್ಹಾನಲ್ಲಾ…!! ಆಕ್ರಮಣ ಮಾಡಲು ಬಂದ ನಾಯಿ ಆದಂ ನಬಿಯವರ ಕೈಯ ಬರಕತ್ತಿ ನಿಂದ ಅವರ ಕಾವಲುಗಾರನಾಗಿ ಅಲ್ಲಿ ನಿಂತಿತು. ಮಾತ್ರವಲ್ಲ.. ತಂದೆಗೆ ಕಾವಲುಗಾರನಾದ ಈ ನಾಯಿಯ ಪಾರಂಪರ್ಯ ಆದಂ ನಬಿ ಅಲೈಹಿಸ್ಸಲಾಮ್ ಸಂತಾನ ಪರಂಪರೆಗೆ ಅಂತ್ಯ ದಿನದವರೆಗೂ ಪಹರೆಗಾರನಾಗಿ ಇರುತ್ತದೆ.
ಆದಂ ನಬಿ ಅಲೈಹಿಸ್ಸಲಾಮ್ ನಂತರ ನಾಯಿಯನ್ನು ಕಾವಲಿಗೆ ಬಳಸಿದ್ದು ಪ್ರವಾದಿ ನೂಹ್ ಅಲೈಹಿಸ್ಸಲಾಮ್ ಆಗಿರುತ್ತಾರೆ. ಜಗತ್ತಿನ ಪ್ರಪ್ರಥಮ ಹಡಗು ನಿರ್ಮಾಣವಾಗುತ್ತಿರುವಾಗ ಅವರ ಶತ್ರುಗಳು ನಿರ್ಮಾಣದಲ್ಲಿರುವ ಹಡಗನ್ನು ನಾಶ ಮಾಡಲು ರಾತ್ರಿ ಹೊತ್ತು ಯತ್ನಿಸುತ್ತಿದ್ದರು. ಆಗ ನೂಹ್ ನಬಿ ಅಲೈಹಿಸ್ಸಲಾಮ್ ಅವರು ನಾಯಿಯನ್ನು ಹಡಗಿನತ್ತ ಕಾವಲಿಗೆ ನಿಲ್ಲಿಸಿದ್ದರು. ಹಡಗನ್ನು ಹಾನಿ ಮಾಡಲು ವೈರಿಗಳು ಬಂದರೆ ನಾಯಿ ದೊಡ್ಡ ಧ್ವನಿಯಿಂದ ಬೊಗಳುತ್ತಿತ್ತು. ಇದರಿಂದಾಗಿ ಹಡಗು ನಿರ್ಮಾಣ ಕಾಮಗಾರಿ ಅಡಚಣೆ ಇಲ್ಲದೆ ಸುಲಭವಾಗಿ ನಡೆಯಿತು.
ಮತ್ತೊಂದು ಸ್ವಾರಸ್ಯಕರ ಸಂಗತಿಯೆಂದರೆ ಹಡಗು ನಿರ್ಮಾಣ ಆದ ನಂತರ ಜಗತ್ತು ಕಂಡ ಅತಿ ದೊಡ್ಡ ಜಲಪ್ರಳಯ ಸಂಧರ್ಭದಲ್ಲಿ ನೂಹ್ ನಬಿ ಅಲೈಹಿಸ್ಸಲಾಮ್ ರು ಅಲ್ಲಾಹುವಿನ ನಿರ್ದೇಶದಂತೆ ಸತ್ಯ ವಿಶ್ವಾಸಿಗಳಲ್ಲದೆ ಎಲ್ಲಾ ಜೀವರಾಶಿಗಳಿಂದಲೂ ಒಂದು ಗಂಡು ಮತ್ತು ಒಂದು ಹೆಣ್ಣನ್ನು ತನ್ನ ಹಡಗಿನಲ್ಲಿ ಹತ್ತಿಸಿದ್ದರು. (ಸಂತಾನ ನಾಶವಾಗದಿರಲು) ಪ್ರಳಯ ಭೂಮಿಯಲ್ಲಿ ಹಡಗು ಚಲಿಸುತ್ತಿರುವಾಗ ನೂಹ್ ನಬಿ ಅಲೈಹಿಸ್ಸಲಾಮ್ ಒಂದು ಆಜ್ಞೆ ಹೊರಡಿಸಿದರು. ಇದೊಂದು ಉಲ್ಲಾಸ ಅಥವಾ ಪಿಕ್‌ನಿಕ್ ಯಾತ್ರೆ ಅಲ್ಲ. ಎಲ್ಲರೂ ಅಲ್ಲಾಹನನ್ನು ಭಯಪಡಬೇಕಾದ ಸಮಯ ವಾಗಿದೆ ಇದು. ಆದಕಾರಣ ಯಾರೂ ಮನರಂಜನೆ ಅಥವಾ ವಿನೋದಗಳಲ್ಲಿ ತಲ್ಲಿನರಾಗಬಾರದು. ಎಲ್ಲರೂ ಆರಾಧನೆಯಲ್ಲಿರಬೇಕು. ಮಾತ್ರವಲ್ಲ ಯಾವ ಕಾರಣಕ್ಕೂ ನೀವು ಲೈಂಗಿಕ ಚಟುವಟಿಕೆಗಳಲ್ಲಿ ಏರ್ಪಡಬಾರದು.
ನೂಹ್ ನಬಿಯವರ ಈ ತಾಕೀತನ್ನು ಎಲ್ಲರೂ ತಪ್ಪದೆ ಪಾಲಿಸಿದ್ದರು. ಆದರೆ ನಾಯಿ ಮಾತ್ರ ತನ್ನ ಒಟ್ಟಿಗಿರುವ ಸಂಗಾತಿಯೊಂದಿಗೆ ನೂಹ್ ನಬಿ ಅಲೈಹಿಸ್ಸಲಾಮ್ ಕಣ್ಣು ತಪ್ಪಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡ ಗುತ್ತಿತ್ತು. ಇದನ್ನು ಕಂಡ ಬೆಕ್ಕು ನಾಯಿಯಲ್ಲಿ ಹೇಳಿತಂತೆ ನೀನು ಹೀಗೆ ಮಾಡುವುದು ಸರಿಯಲ್ಲ. ಮಾಡಿದ್ದಾಯಿತು. ಇನ್ನೂ ಪುನರಾವರ್ತನೆ ಮಾಡಿದರೆ ನಾನು ನೂಹ್ ನಬಿ ಅಲೈಹಿಸ್ಸಲಾಮ್ ರವರಿಗೆ ನಿನ್ನ ಬಗ್ಗೆ ದೂರು ಕೊಡುತ್ತೇನೆ. ಆದರೆ ಬೆಕ್ಕಿನ ಉಪದೇಶ ನಾಯಿಗೆ ಫಲಕಾರಿಯಾಗಲಿಲ್ಲ. ನಾಯಿ ಆಜ್ಞೋಲ್ಲಂಘನೆ ಮುಂದುವರಿಸಿತು. ಕೊನೆಗೆ ಸಿಟ್ಟುಗೊಂಡ ಬೆಕ್ಕು ನೂಹ್ ನಬಿ ಅಲೈಹಿಸ್ಸಲಾಮ್ ರಿಗೆ ವಿಷಯ ತಿಳಿಸಿತು. ಆದರೆ ನೂಹ್ ನಬಿ ಅಲೈಹಿಸ್ಸಲಾಮ್ ರವರು ಬರುವಾಗ ನಾಯಿ ಏನೂ ತಿಳಿಯವದಂತೆ ಒಳ್ಳೆ ಸೊಬಗನಾಗಿ ನಟನೆ ಮಾಡುತ್ತಿತ್ತು. ಆದರೆ ಅಲ್ಲಾಹನು ಈ ಆಜ್ಞೋಲ್ಲಂಘನೆಗೆ ಶಿಕ್ಷೆ ನೀಡಿದ. ಲೈಂಗಿಕ ಕ್ರಿಯೆ ಮುಗಿದರೂ ಅದು ಬಹಿರಂಗಗೊಂಡಿತು.
ಇದರ ಫಲವೆಂಬಂತೆ ನಾಯಿಯ ಲೈಂಗಿಕ ಚಟುವಟಿಕೆಗಳು ಬಹಳ ಬಹಿರಂಗವಾಗಿಯೂ, ಬೆಕ್ಕಿನ ಲೈಂಗಿಕ ಕ್ರಿಯೆ ಬಹಳ ರಹಸ್ಯವಾಗಿ ಯೂ ಮರೆಯಲ್ಲೂ ಆಗಿರುತ್ತದೆ.
ಪ್ರಾಚೀನ ಕಾಲದಲ್ಲಿ ಒಮ್ಮೆ ಮಹಿಳೆಯೊಬ್ಬಳು ಮರುಭೂಮಿಯಲ್ಲಿ ಸಂಚಾರ ಮಾಡುತ್ತಿರುವ ವೇಳೆ ಬಾಯಾರಿಕೆಯಾದಾಗ ದಾರಿ ಮಧ್ಯೆ ಕಂಡ ಒಂದು ಆಳವಾದ ಬಾವಿಗಿಳಿದು ಬೇಕಾದಷ್ಟು ನೀರು ಕುಡಿದು ತನ್ನ ದಾಹತೀರಿಸಿ ಮೇಲೇರಿದಾಗ ನಾಯಿಯೊಂದು ತನ್ನಂತೆಯೇ ಬಾಯಾರಿಕೆಯಿಂದ ಬಳಲುತ್ತಿರುವುದನ್ನು ಕಂಡು ಮನನೊಂದ ಅವಳು ಪುನಃ ಮತ್ತೊಮ್ಮೆ ಅದೇ ಬಾವಿಗಿಳಿದು ತಾನು ಕಾಲಿಗೆ ಧರಿಸಿದ್ದ ಚರ್ಮದ ಕಾಲುಚೀಲದಲ್ಲಿ ನೀರು ತುಂಬಿಸಿ ಮೇಲಕ್ಕೆ ತಂದು ನಾಯಿಗೆ ಕುಡಿಸಿದಳು. ಆ ಸತ್ಕರ್ಮದ ಕಾರಣದಿಂದ ಅವಳು ಸಂಪೂರ್ಣ ಪಾಪಮುಕ್ತಳಾಗಿ ಸ್ವರ್ಗ ಪ್ರವೇಶ ಮಾಡುತ್ತಾಳೆ ಎಂಬ ಘಟನೆಯನ್ನು ಪ್ರವಾದಿ ಮಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ತಮ್ಮ ಅನುಚರರಲ್ಲಿ ಹೇಳಿದ್ದನ್ನು ಇಮಾಮ್ ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ .
ಒಟ್ಟಿನಲ್ಲಿ ನಾಯಿ ಹಲವಾರು ವೈಶಿಷ್ಟ್ಯ ಮತ್ತು ವಿಶೇಷತೆಗಳಿರುವ ಒಂದು ಜೀವಿಯಾಗಿದೆ. ಇಸ್ಲಾಮಿನಲ್ಲಿ ಕಾರಣವಿಲ್ಲದೆ ನಾಯಿಯನ್ನು ಕೊಲ್ಲುವುದು ನಿಷಿದ್ಧವಾಗಿದೆ.

ಸಂಗ್ರಹ: (ಇಮಾಂ ಖಝ್ವೀನಿಯವರ ಅಜಾಯಿಬುಲ್ ಮಖ್ಲೂಕಾತ್ ಮತ್ತು ಇಮಾಂ ದುಮೈರಿಯವರ ಹಯಾತುಲ್ ಹಯವಾನ್ ಎಂಬ ಗ್ರಂಥ)

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors