ಎಸ್.ಪಿ. ಹಂಝ ಸಖಾಫಿ ಬಂಟ್ವಾಳ
ಬರೆಯಲು ಕುಳಿತು ಖುರ್ ಆನ್ ಎಂಬ ವಿಷಯವನ್ನು ಆರಿಸಿಕೊಂಡಿದ್ದೇನೆ. ಎದುರಿಗೆ ಒಂದಿಷ್ಟು ಕದಗಳು ತೆರೆದುಕೊಂಡಿವೆ. ಒಂದೊಂದಕ್ಕೆ ಇಣುಕಿ ನೋಡಿದಾಗ ಮತ್ತೂ ಕದಗಳು ತೆರೆಯುತ್ತಿವೆ. ಯಾವ ಕದದೊಳಗೆ ಪ್ರವೇಶ ಮಾಡಿದರೂ ಪ್ರಯಾಣ ಮುಗಿಯದು. ಖುರ್‌ಆನ್ ಎಂಬ ವಿಷಯ ಹಾಗೆಯೇ. ನಿಜಕ್ಕೂ ಖುರ್‌ಆನ್‌ನ ಅರಿವು ನೀಡಲಾದಂತಹ ಭಾಗ್ಯವಂತ ಮತ್ತೋರ್ವ ಇಲ್ಲ. ಅದೊಂದು ಮಹಾ ಸೌಭಾಗ್ಯ. ಒಬ್ಬ ತಂದೆ ತನ್ನ ಮಗನನ್ನು ಖುರ್‌ಆನ್ ಕಲಿಯಲು ಕಳುಹಿಸಿಕೊಡುತ್ತಾರೆಂದಾದರೆ... ಕೇವಲ ಪಾರಾಯಣ ಮಾತ್ರವಲ್ಲ; ಅದರೊಳಗಿನ ಜ್ಞಾನವನ್ನು ಸಜ್ಜನರ ಹಾದಿಯಲ್ಲಿ ಕಲಿಯಲು ಕಳುಹಿಸಿದ್ದರೆ ಆ ತಂದೆ/ತಾಯಿ ತಮ್ಮ ಮಗ/ಮಗಳಿಗೆ ನೀಡುವ ಮಹಾ ಕೊಡುಗೆಯದು. ಇಹಲೋಕದಲ್ಲಿ ಅದಕ್ಕೆ ಸಮಾನ ವೆನಿಸುವ ಇನ್ನೊಂದು ಕೊಡುಗೆಯಿಲ್ಲ. ಈ ಕೊಡುಗೆಯನ್ನು ಪಡೆದವರು ಮಾತ್ರವೇ ಕೊಡುಗೆಯ ಬೆಲೆಯೇನೆಂದು ತಿಳಿದಿರುತ್ತಾನೆ. ನೂರು ರೂಪಾಯಿಗೆ ಮಾರಾಟ ಮಾಡುವ ಉಂಗುರ ಕಲ್ಲುಗಳ ರಾಶಿಯಲ್ಲಿ ಮಾರಾಟಗಾರನಿಗೆ ತಿಳಿಯದೆ ಕೋಟಿ ಬೆಲೆಬಾಳುವ ಉಂಗುರ ಕಲ್ಲೊಂದು ಅಡಗಿದ್ದಲ್ಲಿ ಕಲ್ಲುಗಳ ಬಗ್ಗೆ ಆಳ ಜ್ಞಾನ ಇರುವವ ರಿಗೆ ಮಾತ್ರ ಅದರ ವಾಸ್ತವಿಕತೆ ಗೊತ್ತಿರುತ್ತದೆ. ಉಳಿದವರಿಗೆ ಅದು ನೂರು ರೂಪಾಯಿಗೆ ಸಿಗುವ ಒಂದು ಉಂಗುರ ಕಲ್ಲು ಅಷ್ಟೇ.
ಖುರ್‌ಆನ್ ಬಗ್ಗೆ ಖುರ್‌ಆನ್ ಹೇಳಿದ ಸೂಕ್ತವೊಂದನ್ನು ಆರಿಸೋಣ. 39ನೇ ಅಧ್ಯಾಯ ಸೂರಾ ಅಝ್ಝುಮರ್‌ನ 23ನೇ ಸೂಕ್ತವದು. ಅಲ್ಲಾ ಹನು ಅಹ್‌ಸನುಲ್ ಹದೀಸನ್ನು ಅವತೀರ್ಣಗೊಳಿಸಿದನು ಎನ್ನುತ್ತದೆ ಸೂಕ್ತದ ಆರಂಭ. ಹದೀಸ್ ಎನ್ನುವ ಪದವನ್ನು ಸರಳವಾಗಿ ‘ಮಾತು’ ಎಂದು ಭಾಷಾಂತರಿಸೋಣ. ಅಹ್ ಸನ್ ಎನ್ನುವುದು ಒಂದು ಗುಣವಾಚಕ ಪದ. ಖುರ್‌ಆನ್‌ನಲ್ಲಿ ಗುಣವಾಚಕವಾಗಿ ಈ ಪದವನ್ನು 38 ಬಾರಿ ಬಳಸಲಾಗಿದೆ. ವ್ಯಕ್ತಿ/ವಸ್ತು/ವಿಷಯಗಳನ್ನು ವರ್ಣಿಸುವಾಗ ಶ್ರೇಷ್ಠವಾದ, ಉತ್ತಮವಾದ, ಸುಂದರವಾದ, ಒಳಿತಿರುವ, ಸೂಕ್ತ, ಒಳ್ಳೆಯ ಮುಂತಾದ ಅರ್ಥಗಳಲ್ಲಿ ಅಹ್‌ಸನ್ ಎಂಬ ಪದವು ಬಳಕೆಯಾಗುತ್ತದೆ. ಹಾಗಿರುವಾಗ ‘ಅಹ್‌ಸನುಲ್ ಹದೀಸ್’ ಎನ್ನುವುದು ಒಂದು ಮಾತನ್ನು ಎಲ್ಲ ರೀತಿಯ ಧನಾತ್ಮಕ ಮಗ್ಗುಲಿನಲ್ಲಿ ವರ್ಣಿಸುವ ವಚನವೆನಿಸುತ್ತದೆ. ಎಲ್ಲ ರೀತಿಯ ಒಳಿತುಗಳು ತುಂಬಿರುವ ಶ್ರೇಷ್ಠವಾದ ಸುಂದರ ಆಕರ್ಷಣೀಯ ವಚನವೆಂದು ವರ್ಣಿಸಲಾಗಿದೆ ಎಂದರ್ಥ. ಖುರ್‌ಆನ್‌ಗೆ ಈ ವರ್ಣನೆಗಳೆಲ್ಲ ಏಕಿದೆ? ಒಬ್ಬ ವ್ಯಕ್ತಿಯನ್ನು ನಾವು ಉತ್ತಮ ಮಾತುಗಾರ ಎಂದು ಹೇಳುತ್ತೇವೆ. ಆತ ಮಾತನಾಡಲು ಬಳಸಿದ ವಾಕ್ಯಗಳು, ವಾಕ್ಯಗಳಲ್ಲಿರುವ ಪದಗಳು, ಸಂದರ್ಭೋಚಿತವಾದ ನುಡಿ, ಸುಂದರ ಶೈಲಿ, ಅರ್ಥಪೂರ್ಣ ವಿಚಾರಗಳು, ಸತ್ಯವನ್ನು ಮಾತ್ರ ಹೇಳಿರುವುದು, ಸಂಶಯಗಳಿಗೆ ಅವಕಾಶವಿಲ್ಲದಿರುವುದು ಹೀಗೆ ಅನೇಕ ಕಾರಣಗಳು ಅವನನ್ನು ಉತ್ತಮ ಮಾತುಗಾರನ ಸ್ಥಾನಕ್ಕೆ ತಂದು ನಿಲ್ಲಿಸುತ್ತದೆ.
ಪವಿತ್ರ ಖುರ್‌ಆನಿನ ವಚನ ಸೌಂದರ್ಯವು ವರ್ಣನಾತೀತ. ಅರೇಬಿಯನ್ ಸಾಹಿತ್ಯದ ಅಗ್ರೇಸರ ಪ್ರತಿಭಾವಂತರು ಖುರ್‌ಆನಿನ ವಚನ ಸೌಂದರ್ಯದೆದುರು ನಿಬ್ಬೆರಗಾಗಿ ಬಿಟ್ಟರು. ಶತ್ರು ನಾಯಕರಲ್ಲೊಬ್ಬರಾದ ವಲೀದನಿಗೆ ಕೂಡ ಅದನ್ನು ಮಹಮ್ಮದರ ಸೃಷ್ಟಿ ಎಂದು ಹೇಳಲು ಧೈರ್ಯ ಬರಲಿಲ್ಲ. ಒಂದು ಕ್ಷಣ ಆ ಸಾಹಿತ್ಯದ ಹರಿವಿನೆದುರು ಆತ ಮೂಕವಿಸ್ಮಿತನಾಗಿಬಿಟ್ಟ. ಹಾಗಾದರೆ ಆ ‘ಅಹ್‌ಸನುಲ್ ಹದೀಸ್’ನ ಒಳಗೇನಿತ್ತು? ನಿಜಕ್ಕೂ ಆ ಖುರ್‌ಆನಿನ ಪಾರಾಯಣಕ್ಕೆ ಅರ್ಥ ಪೂರ್ಣವಾಗಿ ಯಾರಾದರೂ ಇಳಿದು ಬಿಟ್ಟರೆ ಅವನು ತನ್ನನ್ನು ತಾನೇ ಮರೆತು ಬಿಡುತ್ತಾನೆ.
ಖುರ್‌ಆನಿನ ವಾಕ್ಯಗಳಲ್ಲಿ ಪದ ಪುಂಜಗಳ ಚಮತ್ಕಾರವೊಂದು ಎದ್ದು ಕಾಣುತ್ತದೆ. ಒಂದಕ್ಕೊಂದು ಹೊಂದಾಣಿಕೆಯಾಗುವ ಪದಗಳು ಒಂದರ ಬೆನ್ನಿಗೊಂದರಂತೆ ಹರಿದು ಬರುತ್ತದೆ. ಯಾವುದೇ ಕೃತಕತೆಯಿಲ್ಲ; ಎಲ್ಲಿಂದಲೋ ಹುಡುಕಿ ತಂದು ಜೋಡಿಸಿದಂತಿಲ್ಲ. ಯಾವ ಪದವೂ ಅನಗತ್ಯವೆನಿಸುವುದಿಲ್ಲ. ವಿಚಾರಗಳು ನದಿ ನೀರಿನಂತೆ ತಡೆಯಿಲ್ಲದೆ ಹರಿಯುತ್ತದೆ. ಅದಕ್ಕೆ ಅಗತ್ಯವಿರುವ ಚೈತನ್ಯ ತುಂಬಿದ ಪದಗಳು ಹರಿದು ಬರುತ್ತಲೇ ಇವೆ. ವಾಕ್ಯಗಳು ಒಂದಕ್ಕೊಂದು ಸಮಾನವಿದೆ. ನಡುವೆ ಯಾವುದೇ ದುರ್ಬಲ ವಾಕ್ಯಗಳಿಲ್ಲ. ವಾಕ್ಯಗಳ ರಚನೆಯಲ್ಲಿ ಅಚ್ಚರಿಯನ್ನು ಮೂಡಿಸುವ ಈ ಪದ ಚಮತ್ಕಾರಗಳ ನಡುವೆ ವಿಚಾರಗಳು ಸೋರಿಹೋಗುವುದಿಲ್ಲ. ಪದಗಳ, ವಾಕ್ಯಗಳ ಪ್ರಾಸಬದ್ಧತೆಗಾಗಿ ವಿಷಯಗಳು ದಿಕ್ಕು ತಪ್ಪುವುದಿಲ್ಲ. ವಿಚಾರಗಳ ಪ್ರತಿಪಾದನೆಯೆ ಮುಖ್ಯವೆನಿಸಿ ಪದಗಳು, ವಾಕ್ಯಗಳು ಅದರ ಹಿಂದೆ ಚಲಿಸುತ್ತಿವೆ. ಪದಗಳನ್ನು ವಿಚಾರವು ಬೆನ್ನಟ್ಟುತ್ತಿಲ್ಲ. ವಿಚಾರಗಳನ್ನು ಪ್ರಬಲವಾಗಿ ಮಂಡಿಸುವ ಸ್ಫುಟವಾದ ಮಾತು. ಒಂದು ಮಗ್ಗುಲಿನಿಂದ ನೋಡುವಾಗ ಸರಳ ಸರಳ. ಆಳಕ್ಕಿಳಿದರೆ ಮುಗಿದು ಹೋಗದ ಪಯಣ. ಓದಿದರೆ ಇನ್ನಷ್ಟು ಓದಿಸುವ ಉತ್ಸಾಹ ಮೂಡಿಸುವ ಪ್ರತಿಪಾದನೆ. ಮನಸ್ಸಿಗೆ ಮುದ ನೀಡುವ ಮಾಂತ್ರಿಕ ಶಕ್ತಿಯೊಂದು ಅದರ ಒಳಗಡೆ ಇದ್ದಂತಿದೆ. ಸುಂದರವಾಗಿದೆ ಎನ್ನಲು ಇದು ಅಕ್ಷರಗಳ ಲಿಪಿಯ ವರ್ಣನೆಯಲ್ಲ. ಆದರೆ ವರ್ಣನಾತೀತ ವಿಶಿಷ್ಟ ಸೌಂದರ್ಯವೊಂದು ಮಾತಿನೊಳಗೆ ತುಂಬಿಕೊಂಡಿದೆ. ಅದಕ್ಕೇ ಇದು ‘ಅಹ್ಸನುಲ್ ಹದೀಸ್’ ಎನಿಸಿದೆ.
ಖುರ್‌ಆನಿನ ಕೆಲವು ಅಧ್ಯಾಯಗಳಲ್ಲಿರುವ ಪ್ರಾಸಬದ್ಧ ಸೂಕ್ತಗಳ ಸೌಂದರ್ಯವೇ ಬೇರೆ. ಇದರ ಪಾರಾಯಣದ ರಸಾನುಭೂತಿ ವರ್ಣನಾತೀತ. ವಾಸ್ತವದಲ್ಲಿ ಸೂಕ್ತಗಳ ಬಗ್ಗೆ ಪ್ರಾಸಬದ್ಧವೆನ್ನಲು ಅದು ಕವನವೋ ಕಾವ್ಯವೋ ಅಲ್ಲ. ಆದರೆ ಕಾವ್ಯಮಯ ಪ್ರಾಸಬದ್ಧ ಗದ್ಯ ಸಾಹಿತ್ಯಕ್ಕೆ ವಿಶೇಷ ಆಕರ್ಷಣೆಯಿದೆ. ಖುರ್‌ಆನ್ ಎಲ್ಲ ಕಾವ್ಯಗಳನ್ನೂ ಮೆಟ್ಟಿನಿಂತು, ತಾನು ಮಂಡಿಸುವ ವಿಚಾರಗಳತ್ತ ಜನಮನಗಳನ್ನು ಸೆಳೆಯುವ ಎಲ್ಲ ಸೌಂದ ರ್ಯಗಳನ್ನೂ ಹೊಂದಿದೆ. ಹಲವು ಅಧ್ಯಾಯಗಳ ಸೂಕ್ತಗಳ ಅಂತ್ಯಪ್ರಾಸ ಇವುಗಳಲ್ಲೊಂದು. ಖುರ್‌ಆನಿನ ವಿಶ್ಲೇಷಣಾಶಾಸ್ತದಲ್ಲಿ ಇದನ್ನು ಫವಾಸ್ವಿಲ್ ಎನ್ನಲಾಗುತ್ತದೆ.
ಖುರ್‌ಆನಿನ ಕೊನೆಯ ಭಾಗದ ಕಾಂಡಗಳಲ್ಲಿ ಇರುವ ಅಧ್ಯಾಯಗಳಲ್ಲಿ ಈ ಫವಾಸ್ವಿಲ್ ಹೆಚ್ಚು ಗಮನ ಸೆಳೆಯುತ್ತದೆ. ಖುರ್‌ಆನಿನ ಸಾಮಾನ್ಯ ಅರ್ಥ ವ್ಯಾಖ್ಯಾನಗಳನ್ನರಿತ ಪಾರಾಯಣಗಾರನು ಇದರ ರಸಾನುಭೂತಿಯಲ್ಲಿ ಮೈಮರೆತು ಲೀನವಾಗಿ ಬಿಡುತ್ತಾನೆ. ವನ್ನಜ್‌ಮಿ ಇದ್ಸಾ ಹವಾ... ದಲ್ಲಿ ತನ್ಮಯನಾಗುವಾಗ ಸಿಗುವ ಆನಂದವನ್ನು ಯಾವ ಭಾಷೆಯ ಎಂತಹುದೇ ಗಝಲ್‌ಗಳಿಗೂ ನೀಡಲು ಸಾಧ್ಯವಿಲ್ಲ. ಇಲ್ಲಿ ನಿರಂತರ ಐವ:o‰್ಣರಿ" ಸೂಕ್ತಗಳು ಅಕಾರದ ದೀರ್ಘದೊಂದಿಗೆ ಕೊನೆಗೊಳ್ಳುತ್ತದೆ. ನಂತರದ ಅಧ್ಯಾಯ ಅಲ್‌ಖಮರ್. ಹೆಸರಿಗೆ ತಕ್ಕಂತೆ ಚಂದ್ರನ ಸೌರಭವನ್ನು ಸೂಸುತ್ತದೆ. ಇಡೀ ಅಧ್ಯಾಯದ ಐವತ್ತೆಂದು ಸೂಕ್ತಗಳು ಅಲ್ ಖಮರ್...ಮುಸ್ತಮಿರ್... ಮುಸ್ತಖರ್...ಮುಝ್ದಜಿರ್... ಎನ್ನುತ್ತಾ ‘ರ್’ ಎಂಬ ಅಕ್ಷರದಲ್ಲೇ ಕೊನೆಗೊಳ್ಳುತ್ತದೆ. ನಂತರದ ಖುರ್‌ಆನಿನ ಮದುಮಗನೆಂದು ಕರೆಯಲಾಗುವ ಸೂರಾ ರ‍್ರಹಮಾನ್... ನ ಪಾರಾಯಣಾನು ಭೂತಿ ವಿವರಿಸಲಸದಳ. ಮುಂದಿನ ಅಲ್ ವಾಖಿಆ ನೀಡುವ ಹಿತಾನು ಭೂತಿ ಇನ್ನೊಂದು ತರ. ಹೀಗೆ ಪ್ರತಿಯೊಂದು ಅಧ್ಯಾಯಕ್ಕೆ ವಿವಿಧ ಆಸ್ವಾದಗಳಿವೆ. ಖುರ್‌ಆನಿನ ಆರಂಭದಿಂದ ಕೊನೆತನಕ ಇದು ವಿವಿಧ ತೆರನಾಗಿ ಮುಂದುವರಿಯುತ್ತದೆ. ಎಲ್ಲೂ ಪಾರಾಯಣ ವಿರಸತೆಯಿಲ್ಲ. ನೀರಸ ಹುಟ್ಟಿಸುವ ಪುನರಾವರ್ತನೆಯಿಲ್ಲ. ಒಂದು ಪುಟವಿಡೀ ತುಂಬಿಕೊಳ್ಳುವ ಸೂಕ್ತವಿದೆ. ಒಂದೇ ಪದದಲ್ಲಿ ಮುಗಿಯುವ ಸೂಕ್ತವೂ ಇದೆ. ಯಾವುದೇ ಚರಿತ್ರೆಯನ್ನು ಸ್ಪರ್ಶಿಸದೆ ವಿಚಾರಗಳು ಮಾತ್ರ ತುಂಬಿರುವ ಅಧ್ಯಾಯವಿದೆ. ಚರಿತ್ರಯೊಂದು ಇಡೀ ಅಧ್ಯಾಯವನ್ನು ತುಂಬಿಕೊಂಡು ಸತ್ಯವಿಶ್ವಾಸಿಯ ಬದುಕಿಗೆ ಬೇಕಾದ ವಿಚಾರಗಳನ್ನು ಬಿಂಬಿಸುವಂತದ್ದೂ ಇದೆ. ಒಂದೆಡೆ ಒಂದರ ಬೆನ್ನಿಗೊಂದರಂತೆ ಮನುಷ್ಯನೊಂದಿಗೆ ಚಿಂತನಾರ್ಹ ಪ್ರಶ್ನೆಗಳು. ಮತ್ತೊಂದೆಡೆ ಆಕಾಶ, ಭೂಮಿ, ಸೂರ್ಯ, ಚಂದ್ರ, ನಕ್ಷತ್ರ, ಗಾಳಿ, ಮೋಡ, ಮಳೆ, ಸಮುದ್ರ, ನೀರು, ಪರ್ವತ, ವೃಕ್ಷ, ಹಣ್ಣು, ಧಾನ್ಯ, ಜೇನು, ಜೇಡ, ನೊಣ, ಇರುವೆ, ಕೀಟ, ಒಂಟೆ, ಜಾನುವಾರುಗಳು ಮುಂತಾಗಿ ಮನುಷ್ಯನ ಕಣ್ಣೆದುರಿಗಿರವ ಅಚ್ಚರಿಗಳನ್ನು ಒಂದೊಂದಾಗಿ ಹೆಕ್ಕಿ ತೋರಿಸಿ ಸೃಷ್ಟಿಕರ್ತನಾದ ಅಲ್ಲಾಹನು ತನ್ನ ಸೃಷ್ಟಿವ್ಶೆಚಿಚ್ಯವನ್ನು ಪ್ರತಾಪವನ್ನು, ಸಾಮರ್ಥ್ಯವನ್ನು ಮುಂದಿಟ್ಟು ಮನುಷ್ಯನೊಂದಿಗೆ ತಾನು ಯಜಮಾನನೆಂದೂ ನೀನು ನನ್ನ ದುರ್ಬಲ ದಾಸನೆಂದೂ ತಿಳಿಸುವ ಪರಿ.
ಇದು ಪದಪುಂಜಗಳ ಕಸರತ್ತಲ್ಲ. ಲಯಬದ್ಧನಾದಗಳು ಸೃಷ್ಟಿಸುವ ಉನ್ಮಾದವಲ್ಲ. ಕವಿಯ ಕಲ್ಪನೆಗಳಲ್ಲ. ನವರಸಗಳ ಪ್ರದರ್ಶನವಲ್ಲ. ಪ್ರಾಸಗಳ ಲಾಸ್ಯಗಳಲ್ಲ. ಪ್ರೇಮ ಪ್ರಣಯಗಳು ಹುಟ್ಟು ಹಾಕುವ ಭ್ರಮೆಗಳಲ್ಲ. ರಬ್ಬುಲ್ ಆಲಮೀನ್-ಜಗಪಾಲಕನಾದ ಅಲ್ಲಾಹನು ಮಾನವ ರಾಶಿಯೊಂದಿಗೆ ಆಡಿದ ಮಾತುಗಳಿವು. ಶಿಸ್ತುಗಳನ್ನು ಪಾಲಿಸಿ ಪಾರಾಯಣ ಮಾಡುವವನು ಈ ಮಾತುಗಳ ಒಳಗಿಳಿದಂತೆ ಮೈಮರೆತು ಬಿಡುತ್ತಾನೆ. ಇದನ್ನು ಅಹ್ಸನುಲ್ ಹದೀಸ್ ಎಂದು ವಿಶ್ಲೇಷಣೆ ಮಾಡಿರುವ ಸೂಕ್ತವು ಮುಂದುವರಿದು ಹೇಳಿದಂತೆ ಜಗಪಾಲಕನಲ್ಲಿ ಭಯಭಕ್ತಿಯನ್ನು ಹೊಂದಿರುವ ಸತ್ಯವಿಶ್ವಾಸಿಗಳು ಇದನ್ನು ಪಾರಾಯಣ ಮಾಡುವಾಗ ರೋಮಾಂಚನಗೊಳ್ಳುತ್ತಾರೆ. ಒಂದೊಂದು ಸೂಕ್ತಗಳೂ ಅವರ ಮೈನವಿರೇಳಿಸುತ್ತದೆ. ಅವರ ದೇಹ ವಿಡೀ ಕಂಪನಗಳನ್ನು ಅದು ಸೃಷ್ಟಿಸಿ ಬಿಡುತ್ತದೆ. ಅವರ ಹಾವ ಭಾವಗಳನ್ನು ಅದು ಬದಲಿಸಿಬಿಡುತ್ತದೆ. ಶಬ್ದಗಳಲ್ಲಿ ಏರುಪೇರುಗಳುಂಟಾಗುತ್ತವೆ. ದೇಹವಿಡೀ ವಿನಯ ಭಾವ ತುಂಬುತ್ತದೆ. ಆಗಾಗ್ಗೆ ಅಳುವುಕ್ಕಿ ಬರುತ್ತದೆ. ಕಣ್ಣೀರು ಹರಿಯುತ್ತದೆ. ಪರಿಸರವೆಲ್ಲ ಮರೆತು ಬಿಡುತ್ತದೆ. ಹಸಿವು ದಾಹಗಳು ಬೆಟ್ಟ ಹತ್ತುತ್ತದೆ. ಸಮಯವು ಅವರಿಗೆ ಅರಿವಿಲ್ಲದಂತೆ ಸರಿದು ಹೋಗುತ್ತದೆ. ಮೇಲಿನ ಅದೇ ಸೂಕ್ತವು ಮುಂದುವರಿದು ಹೇಳಿದಂತೆ ಅವರ ಹೃದಯಗಳು ಅಲ್ಲಾಹನ ಸ್ಮರಣೆಯೆಡೆಗೆ ವಾಲುತ್ತವೆ. ಇದು ಅಲ್ಲಾಹನು ನೀಡುವ ಹಿದಾಯತ್. ತಾನಿಚ್ಚಿಸಿದವನಿಗೆ ಅದನ್ನವನು ನೀಡುವನು. ಅವನಿಚ್ಚಿಸುವ ದಾಸರಾಗುವ ಪ್ರಯತ್ನ ನಮ್ಮ ಬಳಿಯಿದೆ. ಅದರ ದಾರಿಗಳನ್ನು ಅಲ್ಲಾಹನು ನಮ್ಮ ಮುಂದೆ ತೆರೆದಿಟ್ಟಿದ್ದಾನೆ.




















