ಪ್ರ : ಜಮಾಅತ್ ನಮಾಝ್‌ಗಳಲ್ಲಿ ಸೇರುವ ಮಅಮೂಮ್‌ಗಳಿಗೆ ಯಾವಾಗೆಲ್ಲ ಸೂರ ಪಾರಾಯಣ ಸುನ್ನತ್ತಿದೆ? ಈ ಬಗ್ಗೆ ಸಮಗ್ರ ವಿವರಣೆ ನೀಡುವಿರಾ?
ಉ : ಮಅಮೂಮ್‌ಗಳಿಗೆ ಸಂಬಂಧಿಸಿದಂತೆ ಸೂರಾ ಪಾರಾಯಣದ ಕ್ರಮವು ಮೂರು ವಿಧಾನದಲ್ಲಿದೆ.
1.ಮಅಮೂಮನ ಸೂರಾ ಪಾರಾಯಣ ಇಮಾಮ್ ವಹಿಸುವುದು.
2.ಇಮಾಮರಿಗೆ ಸೂರಾ ಪಾರಾಯಣ ಸುನ್ನತ್ತಿಲ್ಲದ ಕೊನೆಯ ರಕ್‌ಅತ್‌ಗಳಲ್ಲಿ ಮಅಮೂಮ್ ಸೂರಾ ಓದುವುದು.
3. ಇಮಾಮ್ ಸಲಾಮ್ ಹೇಳಿದ ನಂತರ ಬಾಕಿ ರಕ್‌ಅತ್‌ಗಳನ್ನು ನಿರ್ವಹಿಸುವ ಮಅಮೂಮ್ ಸೂರಾ ಪಾರಾಯಣ ಮಾಡುವುದು.
ಈ ಮೂರು ಕ್ರಮಗಳ ವಿವರಣೆ ಹೀಗಿದೆ.
4. ಮಅಮೂಮನ ಸೂರಾ ಪಾರಾಯಣವನ್ನು ಇಮಾಮನೇ ವಹಿಸುವುದು. ಇದು ಎರಡು ಸಂಧರ್ಭಗಳಲ್ಲಿ ನಡೆಯುತ್ತದೆ.
(A) ಇಮಾಮರಿಗೆ ದನಿಎತ್ತಿ ಪಾರಾಯಣ ಸುನ್ನತ್ತಿರುವ ನಮಾಝ್‌ಗಳಲ್ಲಿ ಇಮಾಮರೊಂದಿಗೆ ಪ್ರಥಮ ರಕ್‌ಅತ್‌ಗಳಲ್ಲೇ ಸೇರುವ ಮಅಮೂಮ್‌ಗಳು ಇಮಾಮರು ದನಿಯೆತ್ತಿ ಸೂರಾ ಪಾರಾಯಣ ನಡೆಸುವಾಗ ಮಅಮೂಮ್‌ಗಳು ಸೂರಾ ಪಾರಾಯಣವನ್ನು ಆಲಿಸಬೇಕು. ಅವರಿಗೆ ಸ್ವತಃ ಓದುವುದು ಸುನ್ನತ್ತಿಲ್ಲ. ನಮಾಝ್‌ನಲ್ಲಿ ಸೂರಾ ಪಾರಾಯಣ ಮಾಡಬೇಕೆಂಬ ಬೇಡಿಕೆಯು ಇದರಿಂದಲೇ ಈಡೇರುತ್ತದೆ. ಮಅಮೂಮ್‌ಗಳ ಪಾರಾಯಣವನ್ನು ಇಮಾಮರೇ ವಹಿಸಿಕೊಂಡು ಸೂರಾ ಪಾರಾಯಣ ಮಾಡುತ್ತಾರೆ. ಹಾಗಿರುವಾಗ ಇಮಾಮ್ ದನಿತಗ್ಗಿಸಿ ಓದುವ ನಮಾಝ್‌ಗಳಲ್ಲಿ ಮಅಮೂಮ್‌ಗಳು ಸ್ವತಃ ಪಾರಾಯಣ ನಡೆಸಬೇಕು. ಇವರ ಪಾರಾಯಣವನ್ನು ಇಮಾಮ್ ವಹಿಸುವುದಿಲ್ಲ.
(B) ಮಅಮೂಮನಿಗೆ ಫಾತಿಹಾ ಪೂರ್ತಿ ಓದಲು ಸಮಯ ಸಿಗದ ರಕ್‌ಅತ್‌ಗಳಲ್ಲಿ. ಮಅಮೂಮನು ಫಾತಿಹಾ ಪೂರ್ತಿ ಓದಲು ಸಮಯ ಸಿಗದ ಕಾರಣ ಮಸ್ಪೂಖನಾದರೆ ಅವನಿಗೆ ಆ ರಕ್‌ಅತ್‌ನ ಸೂರಾ ಪಾರಾಯಣದ ಸುನ್ನತ್ತಾದ ಬೇಡಿಕೆ ಇರುವುದಿಲ್ಲ. ಇಂತಹ ರಕ್‌ಅತ್‌ಗಳಲ್ಲಿ ಸೂರಾ ಪಾರಾಯಣ ಮಾಡದಿರುವುದನ್ನು ಮುಂದಿನ ರಕ್‌ಅತ್ ಗಳಲ್ಲಿ ಪೂರೈಸಬೇಕೆಂಬ
ಬೇಡಿಕೆಯೂ ಇರುವುದಿಲ್ಲ.
ಮೇಲಿನ, ಸಂದರ್ಭಗಳಲ್ಲಿ ಮಅಮೂಮರ ಸೂರಾ ಪಾರಾಯಣವನ್ನು ಇಮಾಮ್ ವಹಿಸುತ್ತಾನೆ. ಮಅಮೂಮನಿಗೆ ಸೂರಾ ಪಾರಾಯಣ ಸುನ್ನತ್ತಿಲ್ಲ.
(C) ಇಮಾಮರಿಗೆ ಸೂರಾ ಪಾರಾಯಣ ಸುನ್ನತ್ತಿಲ್ಲದ ಕೊನೆಯ ರಕ್‌ಅತ್‌ಗಳಲ್ಲಿ ಮಅಮೂಮ್ ಸೂರಾ ಓದುವುದು. ಈ ವಿಧಿಯು ಇಮಾಮರೊಂದಿಗೆ ಪೂರ್ತಿ ರಕ್‌ಅತ್‌ಗಳು ಲಭ್ಯವಾಗದವರಿಗೆ ಅನ್ವಯವಾಗುತ್ತದೆ.
ನಾಲ್ಕು ರಕ್‌ಅತ್‌ಗಳಿರುವ ನಮಾಝ್‌ಗಳಲ್ಲಿ ಇಮಾಮರೊಂದಿಗೆ ಒಂದು ಅಥವಾ ಎರಡು ರಕ್‌ಅತ್‌ಗಳು ಮಾತ್ರ ಸಿಗುವ ಮಅಮೂಮ್‌ಗಳು ತಮಗೆ ದೊರಕಿದ ಆ ರಕ್‌ಅತ್‌ಗಳಲ್ಲಿ ಸಮಯ ಸಿಗುವುದಾದರೆ ಸೂರಾ ಪಾರಾಯಣ ಸುನ್ನತ್ತಾಗಿರುತ್ತದೆ. ಇಮಾಮರು ಸಾವಧಾನವಾಗಿ ಪಾರಾಯಣ ಮಾಡುವವನಾಗಿದ್ದು ಮಅಮೂಮನು ಬೇಗನೇ ಓದುವವನಾದರೆ ಮಅಮೂಮನಿಗೆ ಫಾತಿಹಾ ಓದಿದ ಬಳಿಕ ಸೂರಾ ಪಾರಾಯಣಕ್ಕೆ ಸಮಯ ಸಿಗಬಹುದು. ಹಾಗಿದ್ದರೆ ಅವನಿಗೆ ಸೂರಾ ಪಾರಾಯಣ ಸುನ್ನತ್ತಿದೆ. ಎಷ್ಟು ರಕ್‌ಅತ್‌ಗಳಲ್ಲಿ ಸೂರಾ ಪಾರಾಯಣ ಸಾಧ್ಯವಾಗಿರುವುದೋ ಅಷ್ಟು ರಕ್‌ಅತ್‌ಗಳ ಸೂರಾ ಪಾರಾಯಣದ ಬೇಡಿಕೆ ಈಡೇರಿದಂತಾಗುತ್ತದೆ.
(D) ಇಮಾಮ್ ಸಲಾಮ್ ಹೇಳಿದ ನಂತರ ಬಾಕಿ ರಕ್‌ಅತ್‌ಗಳನ್ನು ನಿರ್ವಹಿಸುವ ಮಅಮೂಮನ ಸೂರಾ ಪಾರಾಯಣ. ಇಮಾಮರೊಂದಿಗೆ ಲಭ್ಯವಾದ ರಕ್‌ಆತ್‌ಗಳ ಪೈಕಿ ತಮ್ಮ ಪ್ರಥಮ ಎರಡು ರಕ್‌ಅತ್‌ಗಳಲ್ಲಿ ಫಾತಿಹಾ ಓದಿದ್ದು, ಸೂರಾ ಪಾರಾಯಣಕ್ಕೆ ಸಮಯ ಲಭ್ಯವಾಗದವರು ಇಮಾಮ್ ಸಲಾಮ್ ಹೇಳಿದ ನಂತರ ನಿರ್ವಹಿಸುವ ಬಾಕಿ ರಕ್‌ಅತ್‌ಗಳಲ್ಲಿ ಸೂರಾ ಪಾರಾಯಣ ಮಾಡುವುದು ಸುನ್ನತ್ತಿದೆ. ಇದನ್ನು ಕೆಳಗಿನ ಉದಾಹರಣೆಯಿಂದ ತಿಳಿಯಬಹುದು. ಇಶಾ ನಮಾಝ್‌ನ ಕೊನೆಯ ಎರಡು ರಕ್‌ಅತ್‌ಗಳಲ್ಲಿ ಜಮಾಅತ್‌ಗೆ ಸೇರಿದ ಮಅಮೂಮ್, ಎರಡು ರಕ್‌ಅತ್‌ಗಳಲ್ಲಿ ಫಾತಿಹಾ ಪೂರ್ತಿ ಓದಿದ್ದಾನೆ; ಸೂರಾ ಓದಲು ಸಮಯ ಸಿಗಲಿಲ್ಲ. ಹಾಗಿದ್ದಲ್ಲಿ ಇಮಾಮ್ ಸಲಾಮ್ ಹೇಳಿದ ನಂತರ ನಿರ್ವಹಿಸುವ ಎರಡೂ ರಕ್‌ಅತ್‌ಗಳಲ್ಲಿ ಸೂರಾ ಓದುವುದು ಸುನ್ನತ್ತಿದೆ. (ಕ್ರಮ ಮೂರರಂತೆ) ಒಂದು ರಕ್‌ಅತ್‌ನಲ್ಲಿ ಸೂರಾ ಓದಿಲ್ಲ. ಹಾಗಿದ್ದರೆ ಕ್ರಮ ಎರಡರಂತೆ ಇಮಾಮ್‌ನ ಸಲಾಮಿನ ಬಳಿಕ ನಿರ್ವಹಿಸುವ ಎರಡು ರಕ್‌ಅತ್‌ಗಳಲ್ಲಿ ಒಂದರಲ್ಲಿ ಸೂರಾ ಪಾರಯಣ ಸುನ್ನತ್ತಿದೆ. ಒಂದು ರಕ್‌ಅತ್‌ನ ಸೂರಾ ಪಾರಾಯಣ ಅವನಿಗೆ ಲಭ್ಯವಾಗಿದೆ.
ಮೂರನೇ ರಕ್‌ಅತ್‌ನಲ್ಲಿ ಮಅಮೂಮನಿಗೆ ಫಾತಿಹಾ ಪೂರ್ತಿ ಓದಲು ಸಮಯ ಸಿಕ್ಕಿಲ್ಲ. ಅವನು ಇಮಾಮಿನೊಂದಿಗೆ ರುಕೂಅಗೆ ಹೋಗಿದ್ದಾನೆ.
ನಾಲ್ಕನೇ ರಕ್‌ಅತ್‌ನಲ್ಲಿ ಫಾತಿಹಾ ಪೂರ್ತಿ ಓದಿದ್ದಾನೆ. ಸೂರಾ ಪಾರಾಯಣ ಮಾಡಲು ಸಮಯ ಸಿಕ್ಕಿಲ್ಲ. ಹಾಗಿದ್ದರೆ ಇಮಾಮ್ ಸಲಾಮ್ ಹೇಳಿದ ಬಳಿಕದ ಒಂದು ರಕ್‌ಅತ್ ನಲ್ಲಿ ಮಾತ್ರ ಕ್ರಮ ಎರಡರಂತೆ ಸೂರಾ ಪಾರಾಯಣ ಸುನ್ನತ್ತಿದೆ. ಇನ್ನೊಂದು ರಕ್‌ಅತ್‌ನಲ್ಲಿ ಕ್ರಮ 1. 8 ಯಂತೆ ಸೂರಾ ಪಾರಾಯಣ ಸುನ್ನತ್ತಿಲ್ಲ.




















