ಮಕ್ಕಳನ್ನು ಮುದ್ದು ಮಾಡುವ ಮುನ್ನ…

ಮಕ್ಕಳನ್ನು ಮುದ್ದು ಮಾಡುವ ಮುನ್ನ…
ಎಂ. ಮುಸ್ತಫಾ ಸಅದಿ ಹರೇಕಳ
ಮಕ್ಕಳು; ಅಲ್ಲಾಹನು ನಮಗೆ ಕೊಟ್ಟ ದೊಡ್ಡ ಸಂಪತ್ತು. ಮಕ್ಕಳಿಲ್ಲದೆ ಕಣ್ಣೀರಿಳಿಸುವ ದಂಪತಿಗಳು ನಮ್ಮ ಸಮಾಜದಲ್ಲಿ ಅದೆಷ್ಟೋ ಮಂದಿಯಿದ್ದಾರೆ. ಒಂದು ಮಗುವಿಗಾಗಿ ಏನೆಲ್ಲಾ ಚಿಕಿತ್ಸೆ, ಹರಕೆ ಮುಂತಾದವುಗಳನ್ನೆಲ್ಲ ಮಾಡಿಯೂ ದುಃಖಿತರಾದವರೂ ನಮ್ಮಲ್ಲಿ ಹಲವು ಮಂದಿ. ಗಂಡು ಮಗುವಿದ್ದು; ಒಂದು ಹೆಣ್ಣು ಮಗುವಿಗಾಗಿ ಆಸೆ ಪಡುವವರು, ಹೆಣ್ಣು ಮಗುವಿದ್ದು ಒಂದು ಗಂಡು ಮಗುವಿಗಾಗಿ ಆಸೆಪಡುವವರು. ಆದರೆ ಮಕ್ಕಳನ್ನು ಕೊಡುವುದು ಕೊಡದಿರುವುದು ಗಂಡು – ಹೆಣ್ಣು ಎಂಬ ವ್ಯತ್ಯಾಸ ಅದು ಅಲ್ಲಾಹನಿಗೆ ಬಿಟ್ಟದು. ಅಲ್ಲಾಹನು ಕೊಡುವ ನಿಧಿ, ಅವನು ಕೊಡುವ ಅಮಾನತ್‌. ಇದಕ್ಕೆಲ್ಲ ಅವನು ನಮ್ಮಿಂದ ಸೂಕ್ತವಾದ ಕೃತಜ್ಞತೆಯನ್ನು ಬಯಸುತ್ತಾನೆ. ಅವನು ಕೊಟ್ಟಂತಹ ಅನುಗ್ರಹಗಳನ್ನು, ಅದು ಮಕ್ಕಳಾಗಲಿ ಅಥವಾ ಇನ್ನಿತರ ಯಾವುದೇ ಕೊಡುಗೆಗಳಾಗಲಿ ಅದನ್ನು ಅವನು ಹೇಳಿದ ಸೂಕ್ತವಾದ ಮಾರ್ಗದಲ್ಲಿ ಬಳಸುವುದೇ ನಿಜವಾದ ಕೃತಜ್ಞತೆ. ಇದು ಅವನಿಗೆ ಸಲ್ಲುವ ಕೃತಜ್ಞತೆಯಾಗಿದ್ದು, ಅದು ತಂದೆ-ತಾಯಿಯಂದಿರ ಪರಮ ಕರ್ತವ್ಯ ಕೂಡಾ ಆಗಿರುತ್ತದೆ.
ಮಕ್ಕಳ ಬಗ್ಗೆ ಅಸಡ್ಡೆ ಅಪಾಯಕಾರಿ. ‘ನನ್ನ ಮಕ್ಕಳು ಅಂತವರಲ್ಲ’ ಎಂಬ ಭಾವನೆ ಪ್ರತಿ ಹೆತ್ತವರಲ್ಲಿರುತ್ತದೆ. ಏನಾದರೂ ಒಂದು ತಪ್ಪು ಮಾಡಿದರೆ ಯಾವುದನ್ನು ಪರಿಶೀಲಿಸದೆ ‘ನನ್ನ ಮಗ-ಮಗಳು ಹಾಗೇನು ಮಾಡುವವನಲ್ಲ/ಮಾಡುವವಳಲ್ಲ’ ಅವನು/ಳು ಅಂತಹ ಕಾರ್ಯಕ್ಕೆ ಇಳಿಯಲು ಸಾಧ್ಯವಿಲ್ಲ ಎಂಬ ಮಾತನ್ನು ಆಡಿ ಬಿಡುತ್ತಾರೆ. ಇದು ಮಹಾ ತಪ್ಪು. ಇದರಿಂದ ನಮ್ಮ ಮಕ್ಕಳಿಗೆ ಸಲುಗೆ ಸಿಕ್ಕಿ ಬಿಡುತ್ತದೆ. ನಮ್ಮ ಮನೆಯಲ್ಲಿ ಮಕ್ಕಳು ಒಳ್ಳೆಯ ಸ್ವಭಾವದವರಾಗಿರಬಹುದು. ಆದರೆ ಅವರಲ್ಲಿ ಒಂದು ವಿಕೃತ ಬುದ್ಧಿ ಇದ್ದೇ ಇರುತ್ತದೆ. ಇದು ಹೆತ್ತವರು ಗಮನಹರಿಸಬೇಕು. ಮಗು ಹುಟ್ಟಿದ ಕೂಡಲೇ ಸಂತೋಷ ಪಡುವುದರೊಂದಿಗೆ ನಮ್ಮ ಮೇಲೆ ದೊಡ್ಡ ಹೊಣೆಗಾರಿಕೆ ಬಂದು ಬಿಡುತ್ತದೆ ಎಂಬುವುದು ಕೂಡಾ ಮರೆಯಬಾರದು.
ಮಕ್ಕಳನ್ನು ಮುದ್ದು ಮಾಡಬೇಕು. ಆದರೆ ಮುದ್ದು ಅತಿಯಾಗಿರಬಾರದು. ಮಕ್ಕಳ ಮೇಲೆ ವಿಶ್ವಾಸವಿರಿಸಬೇಕು. ಆದರೆ ಅತೀ ವಿಶ್ವಾಸ ಕೂಡಾ ಸಲ್ಲದು. ಅವರಿಗೆ ಸಲುಗೆ ನೀಡಬೇಕು. ಆದರೆ ನಿಯಂತ್ರಣ, ಕಡಿವಾಣ ಕೂಡಾ ಅದರಲ್ಲಿ ಅಡಗಿಕೊಂಡಿರಬೇಕು. ಒಂದೆಡೆ ಸಲುಗೆ ನೀಡುತ್ತಿದ್ದಂತೆ ಇನ್ನೊಂದು ಕಡೆ ನಿಯಂತ್ರಣ ಕೂಡ ಇರಬೇಕು. ಅತಿ ಶಿಸ್ತು ಅಲ್ಲದ, ಅತೀ ಕೊಂಡಾಟವೂ ಇಲ್ಲದ ಮಧ್ಯಮ ರೀತಿಯಲ್ಲಿ ಅವರ ಬಾಲ್ಯ, ಸಹಜ ಆಟ, ಕುತೂಹಲ, ಜಿಜ್ಞಾಸೆಗಳಿಗೆ ಸ್ಫೂರ್ತಿ ಕೊಡುತ್ತಲೇ ಯಾವುದೂ ಕೂಡ ಅತಿಯಾಗದಂತೆ, ನಿಯಂತ್ರಣ ಮೀರದಂತೆ ನೋಡಿಕೊಳ್ಳುವ ಜಾಣ್ಮೆ, ನಯಗಾರಿಕೆ, ಕಲೆ ಇದ್ದವರಿಗೆ ಮಾತ್ರ ಇದನ್ನು ಸರಿಯಾದ ರೀತಿಯಲ್ಲಿ ಬಳಸಲು ಸಾಧ್ಯವಾಗುತ್ತದೆ.
ಇನ್ನು ವಿದ್ಯಾಭ್ಯಾಸದತ್ತ ಗಮನಹರಿಸಿದರೆ; ಮಕ್ಕಳನ್ನು ಮತ-ಭೌತಿಕ ಶಿಕ್ಷಣಗಳಿಗೆ ಸೇರಿಸಿ ಅದಕ್ಕೆ ಬೇಕಾಗುವ ವೆಚ್ಚವನ್ನು ಮಾತ್ರ ನಿರ್ವಹಿಸಿದರೆ ಸಾಲದು. ಅವರ ಶಿಕ್ಷಣದ ಬಗ್ಗೆ ಹೆಚ್ಚಿನ ನಿಗಾ ವಹಿಸಿಕೊಳ್ಳುವುದು ಅತ್ಯಗತ್ಯ. ನಮ್ಮ ಮಕ್ಕಳು ಶಾಲೆ ಯಾ ಮದ್ರಸಕ್ಕೆ ಸಮವಸ್ತ್ರ ಧರಿಸಿ ಬಹಳ ಅಚ್ಚುಕಟ್ಟಾಗಿ ಹೋಗಿ ಬರುತ್ತಾರೆ. ಹೇಳಿದ ಶುಲ್ಕ, ಪಠ್ಯೋಪಕರಣಗಳನ್ನೆಲ್ಲ ಕೊಟ್ಟಿದ್ದೇವೆ. ಅವರು ಚೆನ್ನಾಗಿ ಕಲಿಯುತ್ತಿದ್ದಾರೆ ಎಂಬ ಉಡಾಪೆ ಮನೋಭಾವ ಸರಿಯಲ್ಲ. ಅವರು ಚೆನ್ನಾಗಿ ಕಲಿಯುತ್ತಾರಾ? ಇಲ್ಲವೋ ಏನೆಲ್ಲಾ ಕಲಿತರು? ಅಧ್ಯಾಪಕರು ಏನೆಲ್ಲಾ ಹೇಳಿಕೊಟ್ಟಿದ್ದಾರೆ? ಮಗುವಿಗೆ ಪಾಠ ಸರಿಯಾಗಿ ಅರ್ಥವಾಗುತ್ತಾ? ಇವತ್ತು ಹೋಂ ವರ್ಕ್‌ ಕೊಟ್ಟಿಲ್ವಾ? ನೀನು ಹೋಂ ವರ್ಕ್‌ ಏಕೆ ಮಾಡಿಲ್ಲಾ? ಹೀಗೆ ಮಕ್ಕಳಲ್ಲಿ ಪ್ರತಿದಿನವೂ ಅಥವಾ ಒಂದು ವಾರಕ್ಕೊಮ್ಮೆಯಾದರೂ ಕೇಳುತ್ತಿರಬೇಕು. ಇಂಥಹಾ ಹೆತ್ತವರು ನಮ್ಮ ಸಮಾಜದಲ್ಲಿ, ನಮ್ಮ ಕುಟುಂಬದಲ್ಲಿ ಬಹಳ ವಿರಳ ಎಂದು ಹೇಳಿದರೆ ತಪ್ಪಗಾಲಾರದು. ಕೆಲವರು ಮಕ್ಕಳನ್ನು ಖಾಲಿ ಬಾಯಿ ಮಾತಲ್ಲೇ ನೀನು ಓದು, ಬರೆ, ಹೋಂವರ್ಕ್‌ ಮಾಡು ಹೀಗೆ ಹೇಳುತ್ತಾ ಅವರು ಅವರ ಪಾಡಿಗೆ ಬಿಟ್ಟು ಬಿಡುತ್ತಾರೆ. ಆದರ ಬದಲು ಅವರೊಂದಿಗೆ ಸೇರಿ ಅವರ ಪಾಠ ಪದ್ದತಿಗಳೊಂದಿಗೆ ಚರ್ಚಿಸಿ, ಅವರಿಗೆ ಬೇಕಾದ ಮಾಹಿತಿಗಳನ್ನು ನೀಡಿ ಅವರೊಂದಿಗೆ ಬೆರೆಯಲು ನಮ್ಮ ಹೆತ್ತವರಿಗಂತೂ ಸಮಯವೇ ಸಾಕಾಗುವುದಿಲ್ಲ. ಬೇರೆ ಕೆಲಸವೇನೂ ಇಲ್ಲದಿದ್ದರೂ ‘ಅತ್ತ ಕೆಲಸವೂ ಇಲ್ಲ, ಇತ್ತ ಪುರುಸೋತ್ತು ಎಂಬುದು ಇಲ್ಲವೇ  ಇಲ್ಲ’ ಅಂತ ಏನೋ ಒಂದು ಚಿಂತೆಯಲ್ಲಿ ನಮ್ಮ ಪಾಡೇ ನಮಗೆ ಅಂತ ಸುಮ್ಮನ್ನಿರುತ್ತಾರೆ. ಇದು ತುಂಬಾ ಅಪಾಯಕಾರಿಯಾದ ಸಂಗತಿ.
ಓರ್ವ ವ್ಯಕ್ತಿಯ ಧರ್ಮ ನಿಷ್ಠೆಯು ಅವನ ಬಾಲ್ಯದ ಬಾಳನ್ನು ಅವಲಂಭಿಸಿರುತ್ತದೆ. ‘ಗಿಡವಾಗಿ ಬಗ್ಗದಿದ್ದರೆ, ಮರವಾಗಿ ಬಗ್ಗಿತೇ’ ಎಂಬ ಗಾದೆ ಮಾತಿನಂತೆ ಬಾಲ್ಯದಿಂದಲೇ ಧಾರ್ಮಿಕ ಶಿಸ್ತು, ಆಚರಣೆಗಳನ್ನು ಅನುಸರಿಸುತ್ತಾ ಬದುಕಿದರೆ ಧರ್ಮದ ಚೌಕಟ್ಟಿನಲ್ಲಿ ಒಗ್ಗಿಕೊಳ್ಳುತ್ತಾರೆ. ದೊಡ್ಡವರಾದ ಬಳಿಕ ಇದ್ದಕ್ಕಿದ್ದಂತೆ ಒಂದು ಧಾರ್ಮಿಕ ಆಚರಣೆಗೆ ಹೊಂದಿಕೊಳ್ಳುವ ಸ್ವಭಾವ ಬಹಳ ಅಪರೂಪವಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಆದೇಶಿಸಿದಂತೆ ಮಕ್ಕಳಿಗೆ ಏಳು ವಯಸ್ಸಿನಲ್ಲೇ ನಮಾಝ್, ಉಪವಾಸ ಇನ್ನಿತರ ಧರ್ಮಾಚರಣೆಗಳ ಅಭ್ಯಾಸವನ್ನು ರೂಢಿ ಮಾಡಿಸಬೇಕು. ಏಳನೇ ಪ್ರಾಯದಲ್ಲಿ ಇಸ್ಲಾಮಿನ ಆಚರಣೆಗಳು, ಶಿಸ್ತು, ಸಾಮಾಜಿಕ, ವೈಯಕ್ತಿಕ ಶಿಷ್ಟಾಚಾರಗಳ ಪಾಲನೆ, ಉಡುಗೆ ತೊಡುಗೆಗಳಲ್ಲಿ ಬಗೆಗಿನ ಪ್ರಜ್ಞೆ ಮುಂತಾದ ಎಲ್ಲಾ ಕ್ರಮಗಳನ್ನು ತಪ್ಪದೆ ಅಭ್ಯಾಸ ಮಾಡುವ ಮನೋಭಾವ ನಮ್ಮ ಹೆತ್ತವರಲ್ಲಿ ಮೂಡಿಬರಬೇಕು. ಮದ್ರಸದಲ್ಲಿ ಅಥವಾ ಶಾಲೆಗಳಲ್ಲಿ ಉಸ್ತಾದ್‌ ಯಾ ಅಧ್ಯಾಪಕರಿಗೆ ಕಲಿಸಿಕೊಡಲು ಮಾತ್ರ ಸಾಧ್ಯ. ಕಲಿಸಿದ್ದನ್ನು ಆಚರಣೆಗೆ ಬರುವಂತೆ ಮಾಡಲು ಮನೆಯಲ್ಲಿ ಹೆತ್ತವರು ಮನಸ್ಸು ಮಾಡಬೇಕು. ಶೌಚಾಲಯಕ್ಕೆ ಹೋಗಿ ಬರುವಾಗ ಹೇಳುವ ದ್ಸಿಕ್ರ್‌, ಶುಚಿತ್ವದ ವಿಧಾನ, ಪಾಲಿಸಬೇಕಾದ ಕ್ರಮಗಳು, ರಾತ್ರಿ ಮಲಗುವ ವೇಳೆ ಹೇಳುವ ದ್ಲಿಕ್ರ್‌ಗಳು ರೂಢಿಸಿಕೊಳ್ಳಲು ಅಧ್ಯಾಪಕರುಗಳಿಗೆ ಸಾಧ್ಯವಿಲ್ಲ. ಅವುಗಳನ್ನೆಲ್ಲ ಮನೆಯಲ್ಲೇ ಹೆತ್ತವರು ನೋಡಿಕೊಳ್ಳೆಬೇಕಾಗಿದೆ. ಮಗ್ರಿಬ್‌ ಮತ್ತು ಇಶಾ ನಮಾಝ್’ಗಳನ್ನು ರಾತ್ರಿ ಉಸ್ತಾದರುಗಳಿಗೆ ಮಕ್ಕಳಿಂದ ಮಾಡಿಸಲು ಸಾಧ್ಯ. ಉಳಿದ ನಮಾಝ್’ಗಳನ್ನು ಹೊತ್ತೋತ್ತಿಗೆ ಸರಿಯಾಗಿ ಸರಿಯಾದ ರೀತಿಯಲ್ಲಿ ಹೆತ್ತವರೇ ಮಾಡಿಸಬೇಕು. ಧಾರ್ಮಿಕವಾದ ಅಥವಾ ಲೌಕಿಕವಾದ ಯಾವುದೇ ಕಾರ್ಯವನ್ನು ಮದ್ರಸ ಯಾ ಶಾಲೆಗಳಲ್ಲಿ ಕಾಲಂಶ ಮಾತ್ರ ಕಲಿಯಲು ಸಾಧ್ಯ. ಬಾಕಿ ಮುಕ್ಕಾಲಂಶ ಮನೆಯಲ್ಲೇ ರೂಢಿ ಮಾಡಿಸಬೇಕು.
ಇನ್ನು ಕೆಲವರು ಮಕ್ಕಳು ಕಲಿಯುವುದರಲ್ಲಿ ಹಿಂದೆ ಇದ್ದಾರೆ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಹೊಡೆದು, ಬಡಿದು, ಬೈದು ಏನೆಲ್ಲ ಅವಾಂತರ ಸೃಷ್ಟಿಸುತ್ತಾರೆ. ಇನ್ನು ಕೆಲವರು ಜಾನುವಾರುಗಳಿಗೆ ಬಡಿದಂತೆ ರಕ್ತ ಸುರಿಸುವಂತೆ, ಬಾಸುಂಡೆ ಬರುವಂತೆ ಪೆಟ್ಟು ಕೊಡುತ್ತಾರೆ. ಇನ್ನು ಕೆಲವರು ಕಣ್ಣಿಗೆ ಮೆಣಸು ಹಾಕುವುದುಂಟು ಇದರಿಂದ ಯಾವ ಪ್ರಯೋಜನವೂ ಇಲ್ಲ. ಮತ್ತೊಂದು ವಿಪರ್ಯಾಸವೆಂದರೆ ಎಲ್ಲರೂ ನೋಡುವ ರೀತಿಯಲ್ಲಿ ಎಲ್ಲರ ಎದುರಲ್ಲಿ ಹೊಡೆಯುವುದು ಬಡಿಯುವುದು ಒಂದು ಅಭ್ಯಾಸವಾಗಿ ಬಿಟ್ಟಿದೆ. ಇದು ಮಹಾ ತಪ್ಪು. ಇದರಿಂದ ಮಕ್ಕಳ ಮನಸ್ಸು ಕುಗ್ಗಿವುದು ಮಾತ್ರವಲ್ಲದೆ ತಂದೆ ತಾಯಿಯಲ್ಲಿರುವಂತಹ ಪ್ರೀತಿ ಕೂಡಾ ಇಲ್ಲದಂತಾಗಲು ಕಾರಣವಾಗಬಹುದು.
ಮಕ್ಕಳಿಗೆ ಹೊಡೆಯುವ ಮುನ್ನ ನಮ್ಮ ಮಕ್ಕಳು ಎಲ್ಲಿ ಎಡವಿದ್ದಾರೆ ಎಂಬುವುದರ ಬಗ್ಗೆ ಸರಿಯಾಗಿ ವಿಚಾರಿಸಬೇಕು. ನಂತರ ಅದಕ್ಕೆ ಬೇಕಾದ ಶಿಕ್ಷೆಯನ್ನು ಸರಿಯಾದ ರೀತಿಯಲ್ಲಿ ಸರಿಯಾಗಿ ನೀಡಬೇಕು. ಆಗ ಮಾತ್ರ ನಮ್ಮ ಮಕ್ಕಳು ಒಳ್ಳೆಯ ದಾರಿಗೆ ಬರಲು ಅನುಕೂಲವಾಗಬಹುದು. ಮಕ್ಕಳನ್ನು ಹೊಡೆದು ಬಡಿದು ಬೈದು ರಂಪಾಟ ಮಾಡುವ ಬದಲು ಮಕ್ಕಳಿಗೆ ಎಲ್ಲದರಲ್ಲೂ ಪೋತ್ಸಾಹ ಕೂಡಾ ಸಿಗುವಂತಾಗಬೇಕು.
ಬೆಳೆದು ಬರುವ ಮಕ್ಕಳಲ್ಲಿ ನೈತಿಕ ಪ್ರಜ್ಞೆ ಮೂಡಿಸುವ ಹೊಣೆಗಾರಿಕೆ ಈ ಕಾಲದಲ್ಲಿ ಹೆತ್ತವರ ಮೇಲೆ ಅನಿವಾರ್ಯ. ಇಂದಿನ ಪರಿಸ್ಥಿತಿ ಹಾಗಿದೆ. ಮನರಂಜನೆಯ ನೆಪದಲ್ಲಿ ಮನರಂಜನೆಯ ಕಾರ್ಯಕ್ರಮಗಳನ್ನು ನೈತಿಕ ಪ್ರಜ್ಞೆಯನ್ನು ನಾಮಾವಶೇಷಗೊಳಿಸಿ ಜೀವನವೆಂದರೆ ಹದಿಹರೆಯದ ಪ್ರೇಮ ಕಾಮ ಮಾತ್ರವೆಂದು ತೋರಿಸುವ ಧಾರಾವಾಹಿಗಳನ್ನು, ಹಿಂಸೆ, ಕೊಲೆ, ಕೊಳ್ಳೆ, ಹಗೆ, ವೈರಗಳನ್ನು ಬೆಳೆಸುವ ಸಿನಿಮಾಗಳನ್ನು ನಿರಂತರ ಬಿತ್ತರಿಸುವ ಟಿ.ವಿ., ಮೊಬೈಲ್ ಹಾವಳಿಗಳಿಂದ ಮಕ್ಕಳನ್ನು ದೂರವಿರಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸಬೇಕಾಗಿದೆ. ಆಟಕ್ಕ ತೀರಾ ಅನುಮತಿಸದೆ ಬಿಗು ನಿಯಂತ್ರಣ ಎಳೆ ವಯಸ್ಸಿನ ಸಹಜ ಉತ್ಸಾಹವನ್ನು ಅದುಮುವುದು ಅಪಾಯಕಾರಿ. ಆದರೆ ಎಲ್ಲಕ್ಕೂ ನಿಯಂತ್ರಣವಿರಬೇಕು. ನಮಾಝ್ ಖಳಾ ಮಾಡಿ ಮೈಮರೆತು ಶಿಕ್ಷಣ, ಶಿಸ್ತು, ಧರ್ಮಾಚರಣೆಗಳನ್ನು ಮರೆತು ಆಟ, ವಿನೋದಾವಳಿಗಳಲ್ಲೇ ತನ್ಮಯಗೊಳ್ಳದಂತೆ ಮಕ್ಕಳನ್ನು ನೋಡಿಕೊಳ್ಳಬೇಕಾಗಿದೆ. ಸಹವಾಸ ದೋಷವು ಬಲುದೊಡ್ಡ ಅಪಾಯಕಾರಿ. ಮಕ್ಕಳು ಎಂತಹವರೊಂದಿಗೆ ಸಹವಾಸ ಬೆಳೆಸುತ್ತಾರೆ, ಅವರ ಮಿತ್ರರು ಹೇಗಿದ್ದಾರೆ, ಮಕ್ಕಳು ಮಿತ್ರರ ಜೊತ ಎಲ್ಲಿಗೆಲ್ಲ ಹೋಗುತ್ತಾರೆ ಇತ್ಯಾದಿಗಳನ್ನು ಹೆತ್ತವರು ನೋಡಿಕೊಳ್ಳುತ್ತಾ ಸೂಕ್ತ ನಿಯಂತ್ರಣವನ್ನು ಇರಿಸಿಕೊಳ್ಳಬೇಕು. ಮಕ್ಕಳ ವಿಷಯದಲ್ಲಿ ಉಡಾಪೆ ಮನಸ್ಥಿತಿಯು ಬಲುದೊಡ್ಡ ದುಷ್ಪರಿಣಾಮವನ್ನುಂಟು ಮಾಡುತ್ತದೆ.
ಮಕ್ಕಳು ಧರ್ಮದ ಚೌಕಟ್ಟಿನಲ್ಲಿ ಬೆಳೆದರೆ ಅದರ ಫಲ ಮತ್ತು ಪುಣ್ಯ ಹೆತ್ತವರಿಗೂ ಲಭಿಸುತ್ತದೆ. ಮಕ್ಕಳು ಹಾಳಾದರೆ ಅದರ ದುಷ್ಫಲ ಮತ್ತು ಪಾಪವೂ ಹೆತ್ತವರ ತಲೆ ಮೇಲೆಯೇ ಬೀಳುತ್ತದೆ. ಪರಲೋಕದಲ್ಲಿ ನಮ್ಮ ಮಕ್ಕಳು ನಮ್ಮ ಪರವಾಗಿ ಸಾಕ್ಷ ನಿಲ್ಲುವಂತೆ ಮಾಡಬೇಕಾಗಿದೆ. ಅವರನ್ನು ಬೇಕಾಬಿಟ್ಟಿಯಾಗಿ ಬೆಳೆಸಿದರೆ ಆ ಕಾರಣದಿಂದ ಅವರು ಪಾಪಿಗಳಾಗಿ ಅಲ್ಲಾಹನ ಮುಂದೆ ನಿಲ್ಲುವಾಗ ನಮ್ಮ ಈ ದುರವಸ್ಥೆಗೆ ನಮ್ಮ ಹೆತ್ತವರೇ ಕಾರಣ ಎಂದು ಅಲ್ಲಾಹನಲ್ಲಿ ದೂರು ಹೇಳುವಂತಹ ಪರಿಸ್ಥಿತಿ ಎದುರಾಗಬಹುದು.
ನಾವು ಇಷ್ಟೊಂದು ಪ್ರೀತಿಯಿಂದ ಬೆಳೆಸಿದ ನಮ್ಮ ಕಣ್ಮಣಿ ಮಕ್ಕಳು ನಮ್ಮ ಬದ್ಧವೈರಿಗಳಾಗುವಂತಹ ದುರವಸ್ಥೆ ಯಾರಿಗೂ ಉಂಟಾಗದಿರಲಿ. ಅವರನ್ನು ಸರಿಯಾದ ಕ್ರಮದಲ್ಲಿ ಪೋಷಿಸಿ ಪ್ರೀತಿಸಿ ಉತ್ತಮ ಪ್ರಜ್ಞಾವಂತನನ್ನಾಗಿ ಮಾಡಿ, ನಮಗೂ ಸಮಾಜಕ್ಕೂ ಪ್ರಯೋಜನವಾಗುವಂತೆ ಮಾಡುವ ಜವಾಬ್ದಾರಿ ಎಲ್ಲಾ ಪೋಷಕರ ಮೇಲಿದೆ ಎಂಬುದು ನೆನಪಿರಲಿ.

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors