ಮನೆ ಕಾಯುವ ನಾಯಿ!

 

ಪ್ರಶ್ನೆ : ಮನೆ ಕಾಯಲಿಕ್ಕಾಗಿ ನಾಯಿ ಸಾಕುವುದರ ವಿಧಿ ಏನುತೋಟಕೃಷಿಗಳನ್ನು ಕಾಯಲು ನಾಯಿಗಳನ್ನು ಸಾಕಬಹುದೆನಾಯಿ ಇರುವಲ್ಲಿ ಮಲಕ್‌ಗಳು ಬರುವುದಿಲ್ಲವೆನ್ನುತ್ತಾರೆಹೌದೆಕಾರಣವೇನು?

ಉತ್ತರ : ನಾಯಿಗಳನ್ನು ಸಾಕುವ ಬಗ್ಗೆ ಹದೀಸ್ ಗ್ರಂಥಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಫಿಖ್‌ಹ್ ಗ್ರಂಥಗಳು ಈ ಬಗ್ಗೆ ಸವಿಸ್ತಾರ ಚರ್ಚೆಗಳನ್ನು ನಡೆಸಿವೆ. “ಯಾರು ನಾಯಿಯನ್ನು ಸಾಕುವನೋ ಅವನ ಸತ್ಕರ್ಮದಿಂದ ದಿನವೂ ಒಂದು ರಾಶಿ ಸತ್ಕರ್ಮಗಳನ್ನು ಅಳಿಸಿ ಹಾಕಲಾಗುತ್ತದೆ. ಕೃಷಿ ಹಾಗೂ ಜಾನುವಾರುಗಳ ನಾಯಿ ಹೊರತು’ ಎಂಬ ಹದೀಸನ್ನು ಇಮಾಮ್ ಬುಖಾರೀ ಮತ್ತು ಮುಸ್ಲಿಮ್ ವರದಿ ಮಾಡಿರುವರು. ಕೆಲವು ವರದಿಗಳಲ್ಲಿ ಕೃಷಿ, ಜಾನುವಾರುಗಳೊಂದಿಗೆ ಬೇಟೆ ನಾಯಿಗಳನ್ನೂ ಪ್ರಸ್ತಾಪಿಸಲಾಗಿದೆ. ಈ ಹದೀಸ್‌ಗಳನ್ನು ವ್ಯಾಖ್ಯಾನಿಸುತ್ತಾ ಇಮಾಮ್ ನವವೀ ರಳಿಯಲ್ಲಾಹು ಅನ್ಹುರವರು ತಮ್ಮ ಶರಹ್ ಮುಸ್ಲಿಮ್‌ನಲ್ಲಿ ಕೃಷಿ ತೋಟಗಳನ್ನು ಕಾಯುವುದು, ಜಾನುವಾರುಗಳನ್ನು ಕಾಯುವುದು ಮತ್ತು ಬೇಟೆ ಎಂಬೀ ಅಗತ್ಯಗಳಿಗಾಗಿ ನಾಯಿಗಳನ್ನು ಸಾಕುವುದು ಅನುವದನೀಯವೆಂದೂ ಅನಗತ್ಯವಾಗಿ ಮನೆಗಳಲ್ಲಿ ನಾಯಿಗಳನ್ನು ಸಾಕುವುದು ನಿಷಿದ್ಧವೆಂದೂ ವಿವರಿಸಿದ್ದಾರೆ. ಮುಂದುವರಿದು ಇಮಾಮ್ ನವವೀ ರಳಿಯಲ್ಲಾಹು ಅನ್ಹುರವರು ಹೇಳುತ್ತಾರೆ; “ಮನೆ ಮತ್ತು ದಾರಿಗಳನ್ನು ಕಾಯಲು ನಾಯಿಗಳನ್ನು ಸಾಕಬಹುದೇ ಎಂಬ ವಿಷಯದ ಬಗ್ಗೆ ಎರಡು ಅಭಿಪ್ರಾಯಗಳಿವೆ. ಹದೀಸ್‌ಗಳ ಬಾಹ್ಯಾರ್ಥ ಪ್ರಕಾರ ಅದು ಅನುವದನೀಯವಲ್ಲವೆಂದಾಗಿದೆ. ಆದರೆ ಹದೀಸ್‌ಗಳಲ್ಲಿ ಅನುವಾದನೀಯವೆಂದು ಹೇಳಲಾದ ಮೂರು ಅಗತ್ಯಗಳಿಗೆ ತುಲನೆ ಮಾಡುವಾಗ ಮನೆ, ದಾರಿಗಳನ್ನು ಕಾಯಲು ನಾಯಿ ಸಾಕಬಹುದು ಎಂಬ ಅಭಿಪ್ರಾಯವು ಸ್ಪಷ್ಟವಾಗುತ್ತಿದ್ದು ಈ ಅಭಿಪ್ರಾಯವು ಪ್ರಬಲವೂ ಆಗಿದೆ. ” (ಶರಹ್ ಮುಸ್ಲಿಮ್  10/236)

ಮೇಲಿನ ವಿವರಣೆಯಂತೆ ಮನೆಗಳಲ್ಲಿ ಆಟವಾಡಿ ಸಮಯ ದೂಡುವ ಸಲುವಾಗಿಯೂ, ಚೆಂದಕ್ಕಾಗಿಯೂ ಪಾಶ್ಚಾತ್ಯ ಅನುಕರಣೆಯ ರೀತಿಯಲ್ಲಿಯೂ ನಾಯಿಗಳನ್ನು ಸಾಕುವುದು ನಿಷಿದ್ಧವೆಂದೂ, ತೋಟ, ಜಾನುವಾರುಗಳನ್ನು ಕಾಯಲು ಅನುವದನೀಯವೆಂದೂ ಮನೆ ಕಾಯಲು ಸಾಕುವ ಬಗ್ಗೆ ವಿದ್ವಾಂಸರಿಗೆ ಅಭಿಪ್ರಾಯ ಭಿನ್ನತೆಯಿದ್ದು ಪ್ರಬಲಾಭಿಪ್ರಾಯದಂತೆ ಅನುವದನೀಯವೆಂದೂ ಮನವರಿಕೆಯಾಗುತ್ತದೆ. ಅನಗತ್ಯವಾಗಿ ನಾಯಿ ಸಾಕುವುದರಿಂದ ಮಾಲಕನ ಪುಣ್ಯ ಕರ್ಮಗಳು ನಷ್ಟವಾಗುತ್ತವೆಯೆಂದೂ ಹದೀಸ್ ಸ್ಪಷ್ಟಪಡಿಸುತ್ತದೆ.

ಮೇಲಿನ ವಿವರಣೆಯು ನಾಯಿ ಸಾಕುವುದು ಅನುವಾದನೀಯವೋ ಅಲ್ಲವೋ ಎಂಬ ಬಗ್ಗೆಯಿರುವ ಕರ್ಮಶಾಸ್ತ್ರಕ್ಕೆ ಸಂಬಂಧಿಸಿದ ವಿವರಣೆಯಾಗಿದೆ. ಆದರೆ ನಾಯಿ ಸಾಕುವ ವಿಷಯಕ್ಕೆ ಸಂಬಂಧಿಸಿದ ಕೆಡುಕಿನ ಮಗ್ಗುಲುಗಳನ್ನು ಬೇರೆ ಹದೀಸ್‌ಗಳು ವಿವರಿಸುತ್ತದೆ. ‘ಯಾವ ಮನೆಯಲ್ಲಿ ನಾಯಿ ಇದೆಯೋ, ಆ ಮನೆಗೆ ಅಲ್ಲಾಹನ ಮಲಕ್‌ಗಳು ಪ್ರವೇಶಿಸುವುದಿಲ್ಲ” ಎಂಬ ಹದೀಸ್ ವಚನವನ್ನು ಇಮಾಮ್ ಮುಸ್ಲಿಮ್ ವರದಿ ಮಾಡಿದ್ದಾರೆ. ನಾಯಿ ಹೆಚ್ಚಾಗಿ ಮಲಿನ ವಸ್ತುಗಳನ್ನು ತಿನ್ನುತ್ತವೆ. ಕೊಳಕುಗಳೊಂದಿಗೆ ಇರುವ ನಾಯಿಯು ಹೆಚ್ಚು ದುರ್ವಾಸನೆ ಬೀರುತ್ತಿರುತ್ತದೆ. ಮಲಕ್‌ಗಳು ಮಲಿನ ವಸ್ತುಗಳಿಂದಲೂ, ಕೊಳಕು ದುರ್ವಾಸನೆಗಳಿಂದಲೂ ದೂರವಿರುತ್ತವೆ. ಆದ್ದರಿಂದಲೇ ನಾಯಿ ಇರುವೆಡೆ ಮಲಕ್‌ಗಳು ಪ್ರವೇಶಿಸುವುದಿಲ್ಲ ಎನ್ನಲಾಗಿದೆ. ಅದಲ್ಲದೆ ಕೆಲವು ನಾಯಿಗಳ ಬಗ್ಗೆ ಹದೀಸ್‌ನಲ್ಲಿ ‘ಶೈತಾನ್‌ಗಳು ಎಂಬ ಪ್ರಸ್ತಾಪವಿದೆ’ ‘ಶೈತಾನ್‌ಗಳಿರುವಲ್ಲಿ ಮಲಕ್‌ಗಳು ಇರುವುದಿಲ್ಲ ತಾನೆ? ನಾಯಿಗಳಿರುವಲ್ಲಿ ಮಲಕ್‌ಗಳು ಪ್ರವೇಶಿಸದಿರಲು ಮೇಲಿನ ಕಾರಣಗಳನ್ನು ಇಮಾಮ್ ನವವೀ ರಳಿಯಲ್ಲಾಹು ಅನ್ಹುರವರು ತಮ್ಮ ಶರಹ್ ಮುಸ್ಲಿಮ್‌ನಲ್ಲಿ ವಿವರಿಸುತ್ತಾರೆ.

ಆದರೆ ಈ ಹದೀಸ್‌ನಲ್ಲಿ ವಿವರಿಸಲಾದ ಮಲಕ್‌ಗಳು ರಹ್ಮತ್ ಮತ್ತು ಬರಕತ್ತುಗಳ ಮಲಕ್‌ ಗಳಾಗಿದ್ದು ಎಲ್ಲ ಮಲಕ್‌ಗಳಿಗೂ ಇದು ಅನ್ವಯವಲ್ಲವೆಂದಾಗಿದೆ ವಿದ್ವಾಂಸರ ಒಮ್ಮತಾಭಿಪ್ರಾಯ. ಕಾರಣ ಮನುಷ್ಯನ ಒಳಿತು ಕೆಡುಕುಗಳನ್ನು ಬರೆದಿಡುವ ಮಲಕ್‌ಗಳು ಹಾಗೂ ಇತರ ವಿಷಯಗಳ ಹೊಣೆ ನೀಡಲಾದ ಮಲಕ್‌ಗಳು ಸದಾ ಮನುಷ್ಯನ ಜತೆಗಿದ್ದು ನಾಯಿಗಳಿರುವ ಮನೆಯಲ್ಲೂ ಅಲ್ಲದ ಕಡೆಯೂ ಅವರು ಪ್ರವೇಶಿಸುತ್ತಾರೆ. ಆದ್ದರಿಂದ ನಾಯಿಗಳಿರುವ ಮನೆಗೆ ರಹ್ಮತ್‌ನ ಮಲಕ್‌ಗಳು ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟವಾಗುತ್ತದೆ.

ಇನ್ನು ಮೊದಲು ವಿರಿಸಿದಂತೆ ನಾಯಿ ಸಾಕಲು ಅನುವದನೀಯವೆಂದು ಹೇಳಲಾದ ಸಂದರ್ಭ, ಸ್ಥಳಗಳಿಗೂ ‘ರಹ್ಮತ್‌ನ ಮಲಕ್‌ಗಳು ಪ್ರವೇಶಿಸುವುದಿಲ್ಲ’ ವೆಂಬ ವಿಧಿಯು ಅನ್ವಯವಾಗುವುದೇ ಅಥವಾ ನಾಯಿ ಸಾಕುವುದು ನಿಷಿದ್ದ ಎಂದು ವಿವರಿಸಿದ ಸ್ಥಳಗಳಿಗೆ ಮಾತ್ರವೇ ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಅಲ್ಲಾಮಾ ಖತಾಬೀಯವರು ಪ್ರಸ್ತುತ ರಹ್ಮತ್‌ನ ಮಲಕ್‌ಗಳ ಪ್ರವೇಶದ ತಡೆಯು ಸಾಕಣೆ ನಿಷಿದ್ಧವಾಗುವ ಸ್ಥಳ ಸಂದರ್ಭಗಳಿಗೆ ಮಾತ್ರವೆಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಅದು ಪ್ರಬಲಾಭಿಪ್ರಾಯವಲ್ಲ. ಇಮಾಂ ನವವೀ ರಳಿಯಲ್ಲಾಹು ಅನ್ಹುರವರು ತಮ್ಮ ಶರಹ್ ಮುಸ್ಲಿಂನಲ್ಲಿ ವಿವರಿಸುವ ಪ್ರಕಾರ, ನಾಯಿ ಸಾಕುವುದು ನಿಷಿದ್ಧವಾದ ಅಥವಾ ಅನುವದನೀಯವಾದ ಎಲ್ಲ ಸ್ಥಳ ಸಂದರ್ಭಗಳೆಲ್ಲಕ್ಕೂ ರಹ್ಮತ್‌ನ ಮಲಕ್‌ಗಳು ಪ್ರವೇಶಿಸುವುದಿಲ್ಲವೆಂಬ ವಿಧಿಯು ವ್ಯಾಪಕವಾಗಿ ಅನ್ವಯವಾಗುತ್ತದೆ. ನಾಯಿ ಸಾಕುವುದು ಅನುವದನೀಯವೆಂಬ ವಿಧಿಯಿದ್ದರೂ ಅಲ್ಲಿಗೆ ಮಲಕ್‌ಗಳು ಪ್ರವೇಶಿಸುವುದಿಲ್ಲವೆನ್ನುತ್ತಾ ಶರಲ್ ಅದನ್ನು ನಿರುತ್ಸಾಹ ಪಡಿಸುತ್ತಿದೆ. (ಶರಹ್ಮು ಸ್ಲಿಮ್ 14/85)

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors