ವುಳೂಇನ ಐದು ನಿಬಂಧನೆಗಳಲ್ಲಿ ಒಂದು
ವುಳೂ ನಿರ್ವಹಿಸಲು ಉಪಯೋಗಿಸುವ ನೀರು ತ್ವಹೂರ್ (ಸ್ವತಃ ಶುದ್ದಿಯುಳ್ಳದ್ದೂ, ಇನ್ನೊಂದನ್ನು ಶುದ್ಧಿ ಮಾಡುವಂತದ್ದೂ) ಆಗಿರುವುದು.
ನೀರು ಮೂರು ವಿಧ
1) ತ್ವಹೂರ್
2) ತ್ವಾಹಿರ್
3) ಮುತನಜ್ಜಿಸ್
ಇವುಗಳಲ್ಲಿ ಒಂದನೆಯ ತ್ವಹೂರ್ ನಿಂದ ಮಾತ್ರವೇ ವುಳೂ ಸಿಂಧುವಾಗ ಬಹುದು. ಬರೀ ತ್ವಾಹಿರ್‌ನಿಂದ ಹಾಗೂ ಮುತನಜ್ಜಿಸ್ ನಿಂದ ವುಳೂ ಸಿಂಧು ಆಗುವುದಿಲ್ಲ.
(1) ತ್ವಹೂರ್
ಯಾವುದೇ ಪ್ರತ್ಯೇಕ ವಿಶೇಷಣಗಳಿಲ್ಲದ ನೀರನ್ನು ತ್ವಹೂರ್ ಎನ್ನಲಾಗುತ್ತದೆ. ಪ್ರತ್ಯೇಕ ವಿಶೇಷಣಗಳು ಇದ್ದಲ್ಲಿ ಅದನ್ನು ತ್ವಹೂರ್ ಎನ್ನಲಾಗುವುದಿಲ್ಲ. ಉದಾಹರ ಣೆಗೆ ಸಿಯಾಳದ ನೀರು, ಗಂಜಿ ನೀರು ಮುಂತಾದವು. ಇವುಗಳು ಶುದ್ಧವಾದ ನೀರು ಆಗಿದ್ದರೂ ತ್ವಹೂರ್ ಅಲ್ಲದ ಕಾರಣ ಇವುಗಳಿಂದ ವುಳೂ ನಿರ್ವಹಣೆ ಸರಿಯಾಗುವುದಿಲ್ಲ.
ಆದರೆ ನೀರು ನಿಲ್ಲುವ ಸ್ಥಳಗಳ ಜೊತೆಗೆ ಹೆಸರು ಸೇರಿಸುವ ನದಿಯ ನೀರು, ಸಮು ದ್ರದ ನೀರು ಮುಂತಾದ ವಿಶೇಷಣಗಳಿಂದ ತೊಂದರೆ ಇರುವುದಿಲ್ಲ. ಒಟ್ಟಿನಲ್ಲಿ ವುಳೂ ಮಾಡಲು ಬರಿ ನೀರು ಮಾತ್ರ ಕಡ್ಡಾಯ ವಾಗಿದ್ದು ಇದನ್ನು ಮಾತ್ರವೇ ತ್ವಹೂರ್ ಎನ್ನಲಾಗುತ್ತದೆ.
(2) ತ್ವಾಹಿರ್
ಸ್ವತಃ ಶುದ್ಧವಿದ್ದರೂ ಮತ್ತೊಂದನ್ನು ಶುದ್ಧಿ ಮಾಡಲು ಈ ನೀರಿನಿಂದ ಸಾಧ್ಯವಿಲ್ಲ. ಈಗಾಗಲೇ ವಿವರಿಸಲಾದ ಸಿಯಾಳದ ನೀರು, ಗಂಜಿ ನೀರು, ಚಾ, ಕಾಫಿ ಮುಂತಾದ ಪಾನೀಯಗಳೆಲ್ಲವೂ ಈ ವಿಭಾಗದಲ್ಲಿ ಸೇರುತ್ತವೆ.
(3) ಮುತನಜ್ಜಿಸ್
ಮಲಿನ ವಸ್ತುಗಳ ಸ್ಪರ್ಶ ಕಾರಣದಿಂದ ನೀರು ನಜಸ್ ಆಗುತ್ತದೆ. ಇದು ಸ್ವತಃ ಶುದ್ದಿ ಇಲ್ಲದ್ದೂ, ಮತ್ತೊಂದನ್ನು ಶುಚೀಕರಿಸಲು ಸಾಧ್ಯವಿಲ್ಲದ್ದೂ ಆಗಿರುತ್ತದೆ.
ಇಲ್ಲಿ ಅಲ್ಪ ಪ್ರಮಾಣದ ನೀರಿನ ಹಾಗೂ ಹೆಚ್ಚಿನ ಪ್ರಮಾಣದ ನೀರಿನ ವಿಧಿಗಳಲ್ಲಿ ವ್ಯತ್ಯಾಸವಿದೆ. ಎರಡು ಖುಲ್ಲತ್ (ಸುಮಾರು 191 ಲೀಟರ್)ಗಿಂತ ಕಡಿಮೆಯಾದ ನೀರನ್ನು ಅಲ್ಪ ಪ್ರಮಾಣದ ನೀರು ಎಂದೂ, ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿರುವ ನೀರನ್ನು ಹೆಚ್ಚಿನ ಪ್ರಮಾಣದ ನೀರು ಎಂದೂ ಇಸ್ಲಾಮ್ ಗಣಿಸುತ್ತದೆ.