ಶಾಂತಿ ಸೌಹಾರ್ದತೆ, ಸಹಬಾಳ್ವೆಯ ಪ್ರತಿಪಾದಕ “ತಾಜುಲ್ ಫುಖಹಾಅ ಬೇಕಲ್ ಉಸ್ತಾದ್”
ಕರ್ನಾಟಕ ರಾಜ್ಯದ ಪ್ರಭಾವೀ ಮುಸ್ಲಿಂ ಧರ್ಮಗುರುಗಳಾಗಿ ಸಮಾಜದ ವಿವಿಧ ಸ್ತರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಕ್ಷಣಿಕವಾದ ಇಹಲೋಕದಿಂದ ಮರೆಯಾಗಿ ಶಾಶ್ವತವಾದ ಪರಲೋಕ ಜೀವನಕ್ಕೆ ಯಾತ್ರೆಯಾದ ಕರ್ನಾಟಕ ರಾಜ್ಯ ಕಂಡ ಅಪೂರ್ವ ವಿದ್ವಾಂಸ, ಚಿಂತಕ ತಾಜುಲ್ ಫುಖಹಾಅ ಶೈಖುನಾ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಹಿಂದೂ ಮುಸ್ಲಿಂ ಕ್ರೆಸ್ತ ಸಮುದಾಯದ ಮಧ್ಯೆ ಸೌಹಾರ್ದತೆಯ ರಾಯಭಾರಿಯಾಗಿ ಶಾಂತಿ ಮತ್ತು ಸೌಹಾರ್ದತೆಗೆ ಗಣನೀಯ ಕೊಡುಗೆಗಳನ್ನು ನೀಡಿದ ಧೀಮಂತ ವ್ಯಕ್ತಿತ್ವದ ವಿದ್ವತ್ ಪ್ರತಿಭೆಯಾಗಿದ್ದಾರೆ.
ಇಸ್ಲಾಂ ಧರ್ಮದ ಸುಂದರ ಆಶಯಾದರ್ಶವಾದ ಸುನ್ನೀ (ಅಹ್ಲ್ ಸುನ್ನತ್ ವಲ್ ಜಮಾಅತ್) ತತ್ವಾದರ್ಶಗಳನ್ನು ನಾಲ್ಕು ಪ್ರಮಾಣಗಳಾದ ಖುರ್‌ಆನ್, ಹದೀಸ್, ಇಜ್‌ಮಾಅ, ಖಿಯಾಸ್ ಗಳ ಆಧಾರದಲ್ಲಿ ಜನರಿಗೆ ಮನದಟ್ಟಾಗುವ ರೀತಿಯಲ್ಲಿ ಸರಳ ಸುಂದರವಾಗಿ ವಿವರಿಸಿ ಕೊಡುವ ಅದ್ಭುತ ಭಾಷಣಗಾರ, ದರ್ಸ್ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸಾವಿರಾರು ವಿದ್ವಾಂಸರನ್ನು ಸಮಾಜಕ್ಕೆ ಸಮರ್ಪಿಸಿದ ಅನುಪಮ ಗುರುವರ್ಯ, ರಾಜ್ಯದ ವಿವಿಧ ಜಿಲ್ಲೆಗಳ ಸಂಯುಕ್ತ ಖಾಝಿ ಶೈಖುನಾ ತಾಜುಲ್ ಫುಖಹಾಅ ಪಿ.ಎಂ. ಇಬ್ರಾಹೀಮ್ ಮುಸ್ಲಿಯಾರ್ ಬೇಕಲ್, “ಬೇಕಲ್ ಉಸ್ತಾದ್” ಎಂದೇ ಚಿರಪರಿಚಿತರಾದ ವಿಸ್ಮಯ ವಿದ್ವತ್ ಪ್ರತಿಭೆ !
ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ, ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯ, ಕಾಸರಗೋಡು ಜಾಮಿಅಃ ಸಅದಿಯ್ಯ ಅರಬಿಕ್ ಕಾಲೇಜ್ ಪ್ರಾಂಶುಪಾಲ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಖಾಝಿ, ಅಲ್ ಅನ್ಸಾರ್ ಕನ್ನಡ ವಾರಪತ್ರಿಕೆ ಸಂಪಾದಕ ಸಹಿತ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ, ವಿವಿಧ ಸಂಘ, ಸಂಸ್ಥೆಗಳ ಮಾರ್ಗದರ್ಶಕರಾಗಿ ಸಮಾಜಕ್ಕೆ ಅಪಾರ ಕೊಡುಗೆಗಳನ್ನು ನೀಡಿದ ಧೀಮಂತ ವ್ಯಕ್ತಿತ್ವದ ಸರಳ ಸಜ್ಜನಿಕೆಯ ಮಾದರೀ ನಾಯಕ ಬೇಕಲ್ ಉಸ್ತಾದ್ ಕನ್ನಡ ನಾಡು ಕಂಡ ಅಪರೂಪದ ಮುಸ್ಲಿಂ ವಿದ್ವಾಂಸ.
ಕೇರಳ-ಕರ್ನಾಟಕ ಮತ್ತು ವಿದೇಶಗಳಲ್ಲಿ ನಡೆಯುವ ವಿವಿಧ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳ ಕೇಂದ್ರ ಬಿಂದುವಾಗಿ ಕೇಳುಗರನ್ನು ವಿಸ್ಮಯಗೊಳಿಸುವ ಮಾರ್ಮಿಕ ಉಪದೇಶಗಳು ಬೇಕಲ್ ಉಸ್ತಾದ್‌ರವರ ಭಾಷಣದ ಆಕರ್ಷಕ ಅಂಶಗಳಾಗಿದ್ದವು.
ಸಮಾಜದಲ್ಲಿ ತಾಂಡವವಾಡುವ ಅನಕ್ಷರತೆ, ಬಡತನ, ವರದಕ್ಷಿಣೆ ಪದ್ಧತಿ ವಿರುದ್ಧ ಸಮರವನ್ನೇ ಸಾರಿ ನಾಡಿನ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅವರು ದಣಿವರಿಯದೆ ದುಡಿದ ಒಬ್ಬ ಸಮಾಜ ಸುಧಾರಕರಾಗಿದ್ದರು.
ತನಗೆ ಕರತಲಾಮಲಕವಾದ ಆಳ ಜ್ಞಾನ ಮತ್ತು ಅಪೂರ್ವ ಬುದ್ಧಿಶಕ್ತಿಯಿಂದ ಸಮಾಜವನ್ನು ಅವರು ನಯನಾಜೂಕಿನಿಂದ ತಿದ್ದಿ, ತೀಡಿ ಸರಿದಾರಿಗೆ ತರುತ್ತಿದ್ದರು. ಬಿಡುವಿಲ್ಲದ ಧರ್ಮ ಪ್ರಚಾರ, ಕಾರ್ಯಕ್ರಮಗಳ ಮಧ್ಯೆ ಬಿಡುವು ಮಾಡಿಕೊಂಡು ಇನ್ನಿತರ ಸಾಮಾಜಿಕ ಕಾರ್ಯಕ್ರಮಗಳಿಗೂ ಹಾಜರಾಗುವ ಹೃದಯ ವಿಶಾಲತೆ ಇರುವ ಧೀಮಂತ ನಾಯಕರಾಗಿದ್ದ ಬೇಕಲ ಉಸ್ತಾದ್, ಗೃಹ ಪ್ರವೇಶ, ಮದುವೆ ಯಂಥಾ ಕಾರ್ಯಕ್ರಮಗಳಿಗೆ ಬಂದರೆ ಮಾತ್ರ ಮನೆ ಮಂದಿಗೂ ಸಾರ್ವಜನಿಕರಿಗೂ ಸಮಾಧಾನ!
ಸೇವೆಯನ್ನು ಒಂದು ತಪಶ್ಚರ್ಯೆಯಾಗಿ ಸ್ವೀಕರಿಸಿ ವಿವಿಧ ಮಜಲುಗಳತ್ತ ಚಿತ್ತ ಹರಿಸಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸುಧಾರಣೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಕ್ರಮ ಬದ್ಧವಾಗಿ ನಿರ್ವಹಿಸುವ ಅವರ ಚಾಕಚಕ್ಯತೆ ಯುವ ಜನಾಂಗಕ್ಕೆ ಯಾವತ್ತೂ ಮಾದರಿಯಾಗಿರುತ್ತಿತ್ತು.
1949ರಲ್ಲಿ ಬಂಟ್ವಾಳ ತಾಲೂಕಿನ ಪೂಡಲ್‌ನಲ್ಲಿ ಮುಹಮ್ಮದ್ – ಖದೀಜ ದಂಪತಿಗಳ ಮಗನಾಗಿ ಜನಿಸಿದ ಶೈಖುನಾ ತಾಜುಲ್ ಫುಖಹಾಅ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಡಿ.ಜಿ.ಕಟ್ಟೆ, ನರಿಂಗಾನ ಶಾಲೆಯಲ್ಲಿ ಲೌಕಿಕ ಶಿಕ್ಷಣ ಪಡೆದರು.
ನಂತರ ಧಾರ್ಮಿಕ ಪ್ರೌಢ ಶಿಕ್ಷಣದತ್ತ ಒಲವು ತೋರಿಸಿ ಮರಿಕ್ಕಳ ಜುಮುಅಃ ಮಸ್ಜಿದ್ ಖತೀಬ್ ಆಗಿದ್ದ ಮೊಂಟೆಪದವು ಮುಹಮ್ಮದ್ ಮುಸ್ಲಿಯಾರ್‌ರವರ ಬಳಿ ಕಲಿತು ಕಿನ್ಯ ಕೇಂದ್ರ ಜುಮುಅಃ ಮಸ್ಜಿದ್‌ನ ಹಿದಾಯ ದರ್ಸ್ ಮುದರಿಸ್ ಟಿ.ಪಿ.ಅಬ್ದುಲ್ ಖಾದಿರ್ ಮುಸ್ಲಿಯಾರ್ ಬಳಿ ಧಾರ್ಮಿಕ ಶಿಕ್ಷಣ ಪಡೆದರು.
ತಾಜುಶ್ಶರೀಅಃ ಶೈಖುನಾ ಅಲಿ ಕುಂಞ ಮುಸ್ಲಿಯಾರ್ ಶಿರಿಯ, ಮರ್ಹೂಂ ಆಲಂಪಾಡಿ ಉಸ್ತಾದ್ ಮತ್ತು ಭಾರತದ ಮುಸ್ಲಿಂ ಸಮುದಾಯದ ಆತ್ಮೀಯ ಗುರುವರ್ಯ, ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜ್ ಪ್ರಾಂಶುಪಾಲ್, ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಗೌರವಾಧ್ಯಕ್ಷ ಮರ್ಹೂಂ ಶೈಖುನಾ ತಾಜುಲ್ ಉಲಮಾ ಅಸಯ್ಯಿದ್ ಅಬ್ದರ‍್ರಹ್ಮಾನ್ ಕುಂಞ ಕೋಯ ತಂಙಳ್ ಅಲ್ ಬುಖಾರಿ ಉಳ್ಳಾಲರವರ ಬಳಿ ಕಲಿತು ೧೯೭೧ರಲ್ಲಿ ದಯೂಬಂದ್ ಶಿಕ್ಷಣ ಕೇಂದ್ರಕ್ಕೆ ಸೇರಿ ಅಲ್ಲಿಂದ “ಮೌಲವಿ ಫಾಝಿಲ್ ಖಾಸಿಮಿ “ಪದವಿ ಪಡೆದು ಸೂರಿಂಜೆಯಲ್ಲಿ ಮುರ‍್ರಿಸ್ ಆಗಿ ಸೇವೆ ಸಲ್ಲಿಸಿ, ಕಾಸರಗೋಡು ಜಿಲ್ಲೆಯ ಬೇಕಲ ದಲ್ಲಿ ಸುದೀರ್ಘ 40 ವರ್ಷಗಳ ಕಾಲ ಮುರ‍್ರಿಸ್ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇತಿಹಾಸ ನಿರ್ಮಿಸಿದ್ದರು.
ಕರ್ಮ ಶಾಸ್ತಗೋಳಶಾಸ್ತ ಸಹಿತ ವಿವಿಧ ವಿಷಯಗಳಲ್ಲಿ ಅಪಾರ ಪಾಂಡಿತ್ಯವಿರುವ ಬೇಕಲ್ ಉಸ್ತಾದ್‌ರನ್ನು ಬೃಹತ್ ಸುನ್ನೀ ಸಮ್ಮೇಳನವೊಂದರಲ್ಲಿ “ತಾಜುಲ್ ಫುಖಹಾಅ (ಕರ್ಮಶಾಸ್ತç ವಿದ್ವಾಂಸರ ಕಿರೀಟ) ಪದವಿ ನೀಡಿ ಗೌರವಿಸಲಾಗಿತ್ತು.
ತನ್ನ ಊರಾದ ಮರಿಕ್ಕಳ ಜುಮುಅಃ ಮಸ್ಜಿದ್ ಅಧ್ಯಕ್ಷರಾಗಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೀರ್ತಿ ಕೂಡ ಬೇಕಲ್ ಉಸ್ತಾದ್‌ರಿಗಿದೆ.
1997ರಿಂದ ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿಯಾಗಿ (ಇಸ್ಲಾಮಿಕ್ ನ್ಯಾಯಾಲಯದ ನ್ಯಾಯಮೂರ್ತಿ) ಧಾರ್ಮಿಕ ನಾಯಕತ್ವ ನೀಡಿದ ಬೇಕಲ್ ಉಸ್ತಾದ್ ಎಂಬ ಸಕಲಕಲಾವಲ್ಲಭ ವಿದ್ವತ್ ಪ್ರತಿಭೆ, ಸಮಾಜದಲ್ಲಿ ಎದುರಾಗುವ ಎಂಥಾ ಸಮಸ್ಯೆಗಳಿಗೂ ಕೂಡ ಇಸ್ಲಾಂ ಧರ್ಮದ ಪ್ರಮಾಣಗಳ ಆಧಾರದಲ್ಲಿ ಪರಿಹಾರ ನೀಡುತ್ತಿದ್ದರು.
ಹಿಂದೂ, ಕ್ರೆಸ್ತ ಸಮುದಾಯದ ವರ ಜತೆ ಅಬೇಧ್ಯ ಸಂಬಂಧವಿಟ್ಟು ನಾಡಿನ ಶಾಂತಿ ಸೌಹಾರ್ದತೆ, ಸಹಬಾಳ್ವೆಗೆ ಬೇಕಲ ಉಸ್ತಾದ್ ನೀಡಿದ ಕೊಡುಗೆ ಅಪಾರ.
ನಾಡಿನ ವಿವಿಧೆಡೆಗಳಲ್ಲಿ ನಡೆ ಯುವ ಸೌಹಾರ್ದ ಕಾರ್ಯಕ್ರಮಗಳಲ್ಲಿ ತನ್ನ ಮನಮೋಹಕ ಸೌಹಾರ್ದ ಭಾಷಣ ಮೂಲಕ ಎಲ್ಲಾ ವಿಭಾಗದವರ ಮನಗೆದ್ದು ಕರ್ನಾಟಕ ರಾಜ್ಯದ ಶಾಂತಿಯ ಪ್ರತಿಪಾದಕ ಎಂಬ ಕೀರ್ತಿ ಬೇಕಲ್ ಉಸ್ತಾದ್‌ರಿಗಿತ್ತು.
ಜಾಗತಿಕ ಮಾನವ ಸಮುದಾಯಕ್ಕೆ ಮಾರಕವಾಗಿರುವ ಭಯೋತ್ಪಾದನೆ, ಉಗ್ರವಾದ, ನೂತನವಾದ, ಕೋಮು ವಾದ, ವಿಧ್ವಂಸಕ ಚಟುವಟಿಕೆಗಳನ್ನು ಯಾವ ಸಮುದಾಯದವರು ಮಾಡಿ ದರೂ ಅದನ್ನು ಖಡಾತುಂಡವಾಗಿ ವಿರೋಧಿಸುತ್ತಿದ್ದ ಖಾಝಿ ಬೇಕಲ್ ಉಸ್ತಾದ್, ಇಸ್ಲಾಂ ಧರ್ಮ ಜಗತ್ತಿಗೆ ಕಲಿಸುವ ಮಾನವೀಯತೆ, ಸ್ನೇಹ, ವಿಶ್ವಾಸ, ಸಹಕಾರ ಮನೋಭಾವನೆ, ಹೃದಯ ವಿಶಾಲತೆ, ವಿಶ್ವ ಭ್ರಾತೃತ್ವ ಭಾವನೆಗಳೊಂದಿಗೆ ಎಲ್ಲಾ ಸಮು ದಾಯದ ಜನರು ಒಗ್ಗಟ್ಟಿನಿಂದ ಜೀವನನಡೆಸಬೇಕೆಂದು ತನ್ನ ಜೀವನದು ದ್ದಕ್ಕೂ ಸಾರಿದ ಶಾಂತಿಯ ಪ್ರತಿಪಾದಕರಾಗಿ ಸರ್ವರ ಮನ ಗೆದ್ದಿದ್ದರು.
ಅವರ ಮನೆ ಒಂದು ಸಾಂತ್ವನ ಕೇಂದ್ರವಾಗಿತ್ತು. ತನ್ನ ಮನೆಯಲ್ಲಿರುವ ವೇಳೆ ಹಿಂದೂ, ಕ್ರೆಸ್ತ ಸಮು ದಾಯದವರೂ ಅವರ ಬಳಿ ಬಂದು ವಿವಿಧ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು. ಕುಶಲೋಪರಿ ವಿಚಾರಿಸಲು ಬರುವವರನ್ನು ಕೂಡ ಕಾಣಬಹುದಿತ್ತು.
ಮುಸ್ಲಿಂ ಸಮುದಾಯ, ಇತರ ಸಮುದಾಯದವರೊಂದಿಗೆ ರಾಜ ಕೀಯ, ಸಾಂಘಿಕ ವಿಷಯಗಳಿ ಗಾಗಿ ಯಾವತ್ತೂ ವಿರೋಧವಿಡದೆ ಶಾಂತಿ ಮತ್ತು ಸೌಹಾರ್ದತೆಯೊಂದಿಗೆ ಒಂದೇ ತಂದೆ-ತಾಯಿಯರ ಮಕ್ಕಳಂತೆ ಪರಸ್ಪರ ಪ್ರೀತಿ ಮತ್ತು ವಿಶ್ವಾಸದೊಂದಿಗೆ ಸಹಬಾಳ್ವೆ ನಡೆಸಬೇಕೆಂದು ಸದಾ ಉಪದೇಶ ನೀಡಿ ನಾಡಿನಲ್ಲಿ ಸಾಮರಸ್ಯ ಮತ್ತು ನೆಮ್ಮದಿಯ ವಾತಾವರಣ ನಿರ್ಮಿ ಸಲು ಬೇಕಲ್ ಉಸ್ತಾದ್ ಎಂಬ ಮಹಾನ್ ಮಾನವಪ್ರೇಮಿ ನಿರಂತರ ಶ್ರಮಿಸುತ್ತಿದ್ದರು.
ತಾನು ಬದುಕಿರುವಷ್ಟು ಕಾಲ ಪ್ರಾಮಾಣಿಕತೆ, ಸತ್ಯನಿಷ್ಠೆ, ವಸ್ತುನಿಷ್ಠ ಮಾನವೀಯ ಸಂದೇಶಗಳ ಮೂಲಕ ಜೀವನವನ್ನು ಧನ್ಯಗೊ ಳಿಸಿ, ಸರ್ವರಿಗೂ ಮಾದರಿಯಾಗಿ ನಮ್ಮಿಂದ ಮರೆಯಾಗಿರುವ ತಾಜುಲ್ ಫುಖಹಾಅï ಶೈಖುನಾ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಎಂದೆಂದಿಗೂ ಮಾನವರ ಮನದಿಂದ ಮಾಸಿ ಹೋಗದ ನಿಷ್ಕಳಂಕ ವಿದ್ವಾಂಸರಾಗಿ ವಿಶ್ವ ವಿಖ್ಯಾತರಾಗಿದ್ದಾರೆ.




















