ತನ್ನ ಭವಿಷ್ಯದ ದಿನಗಳಿಗೆ ಬೇಕಾಗಿ ಆಹಾರ ಪದಾರ್ಥಗಳನ್ನು ಶೇಖರಣೆ ಮಾಡಿಡುವ ಕೆಲವು ಜೀವಿಗಳ ಪೈಕಿ ಒಂದಾಗಿದೆ ಇಲಿ.
ಮನುಷ್ಯ, ಕಾಗೆ, ಇರುವೆ, ಜೇನ್ನೊಣ ಮುಂತಾದ ಕೆಲವು ಜೀವಿಗಳು ಕೂಡ ನಾಳಿನ ಬದುಕಿಗೆ ಬೇಕಾದ ಆಹಾರವನ್ನು ಶೇಖರಿಸಿಡುತ್ತವೆ.
ಕೇವಲ ಮೂರು ವರ್ಷ ಮಾತ್ರ ಆಯುಷ್ಯ ಇರುವ ಈ ಜೀವಿ ತನ್ನ ಮೂರು ವರ್ಷದಲ್ಲಿ ಮೂವತ್ತು ವರ್ಷಗಳ ಅನ್ಯಾಯ ಮಾಡುತ್ತದೆ. ಉಪದ್ರವ, ಹಾನಿ, ಅನ್ಯಾಯ ಮಾಡುವ ವಿಷಯದಲ್ಲಿ ಇದಕ್ಕೆ ಸರಿಸಮಾನವಾದ ಜೀವಿ ಬೇರೊಂದಿಲ್ಲ. ಎಷ್ಟು ಬೆಲೆಬಾಳುವ ಅಮೂಲ್ಯ ವಸ್ತುವಾದರೂ ಯಾವುದೇ ಮುಲಾಜು ಇಲ್ಲದೆ ನಿಮಿಷದಲ್ಲಿ ನಾಶ ಮಾಡಿ ಬಿಡುತ್ತದೆ.
ಪ್ರವಾದಿ ನೂಹ್ ನಬಿಅಲೈಹಿಸ್ಸಲಾಮ್‌ರವರು ನಿರ್ಮಾಣವಾಗುತ್ತಿದ್ದ ಹಡಗಿನ ಹಲಗೆಗಳನ್ನು ಪರಸ್ಪರ ಜೋಡಿಸುವಲ್ಲಿ ಉಪಯೋಗಿಸಿದ್ದ ಹಗ್ಗಗಳನ್ನು ಕೂಡ ಈ ಅನಾಮಿಕ ಇಲಿ ಕತ್ತರಿಸಿ ನೂಹ್ ನಬಿ ಅಲೈಹಿಸ್ಸಲಾಮ್‌ರವರಿಗೆ ಅಪಾರ ನಷ್ಟ ಮಾಡಿದ ಜೀವಿಯಾಗಿದೆ.
ಒಂದು ದಿನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸ್ಸಲ್ಲಮರು” ನಿದ್ರಿಸುತ್ತಿದ್ದ ವೇಳೆ ಏನೋ ಒಂದು ಶಬ್ದ ಕೇಳಿತಂತೆ. ಎಚ್ಚರವಾಗಿ ನೋಡಿದಾಗ ತನ್ನ ಕೋಣೆಯಲ್ಲಿ ಉರಿಯುತ್ತಿದ್ದ ಎಣ್ಣೆದೀಪದ ಬತ್ತಿ ಕಾಣುವುದಿಲ್ಲ. ಆಗ ಒಂದು ಇಲಿ ಆ ದೀಪದ ಬತ್ತಿಯನ್ನು ಉರಿಯುತ್ತಿದ್ದಂತೆಯೇ ಬೇರೊಂದು ಜಾಗಕ್ಕೆ ಕೊಂಡು ಹೋಗುವುದನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸ್ಸಲ್ಲಮರು ಕಂಡರು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸ್ಸಲ್ಲಮರ ಮನೆಯನ್ನು ಸಂಪೂರ್ಣ ಬೆಂಕಿಗಾಹುತಿ ಮಾಡೋದಾಗಿತ್ತು ಈ ಕೆಟ್ಟ ಇಲಿಯ ದುರುದ್ದೇಶ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸ್ಸಲ್ಲಮರು ಕೂಡಲೇ ಅದನ್ನು ಕೊಂದು ಬಿಟ್ಟರು.
ಮತ್ತೊಮ್ಮೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸ್ಸಲ್ಲಮರು ಒಂದು ಚಾಪೆಯ ಮೇಲೆ ಕುಳಿತಿರುವಾಗ ಒಂದು ಇಲಿ ಎಲ್ಲಿಂದಲೋ ಒಂದು ಉರಿಯುತ್ತಿರುವ ದೀಪವನ್ನು ಕುಳಿತಿರುವ ಚಾಪೆಯ ಮೇಲೆ ತಂದು ಹಾಕಿತು. ಮಾತ್ರವಲ್ಲ ಚಾಪೆಯ ಒಂದು ಸಣ್ಣ ಭಾಗವೂ ಬೆಂಕಿಗಾಹುತಿಯಾಯಿತು.
ಈ ಕಾರಣದಿಂದ ರಾತ್ರಿ ಹೊತ್ತು ಮಲಗುವಾಗ ಯಾವಾಗಲೂ ಉರಿಯುತ್ತಿರುವ ದೀಪ, ಒಲೆಯ ಬೆಂಕಿ ಇತ್ಯಾದಿಗಳನ್ನು ನಂದಿಸಲು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸ್ಸಲ್ಲಮರು ಆಜ್ಞಾಪಿಸಿದರು. ಈ ಘಟನೆ ಇಮಾಮ್ ಅಬೂ ದಾವೂದ್‌ರವರು ವರದಿ ಮಾಡಿದ ಸ್ವಹೀಹಾದ ಹದೀಸಿನಲ್ಲಿದೆ.
ಇಲಿಯನ್ನು ಕಂಡ ಕಂಡಲ್ಲಿ ಕೊಲ್ಲುವುದು ಸುನ್ನತ್ತಾಗಿದೆ. ಎಷ್ಟರ ತನಕವೆಂದರೆ ಪವಿತ್ರ ಹರಮಿನಲ್ಲೂ ಕೊಲ್ಲುವುದು ಸಮ್ಮತಾರ್ಹ ಮತ್ತು ಸುನ್ನತ್ತಾಗಿದೆ. ಇದು ಇಮಾಂ ಬುಖಾರಿಯವರು ವರದಿ ಮಾಡಿದ ಹದೀಸಿನಲ್ಲಿದೆ.
ಬಾಟಲಿ, ಡಬ್ಬ ಮುಂತಾದ ಬಾಯಿ ಕಿರಿದಾದ ಪಾತ್ರೆಯಲ್ಲಿ ಬೆಣ್ಣೆ, ತುಪ್ಪದಂತಹಾ ಆಹಾರ ಪದಾರ್ಥಗಳನ್ನಿಟ್ಟರೆ ಇಲಿಯ ತಲೆ ಪಾತ್ರೆಯ ಒಳಗೆ ಹೋಗುವುದಿಲ್ಲವೆಂದಾದರೆ ಈ ಮಹಾ ಖದೀಮ ಏನು ಉಪಾಯ ಹೂಡುತ್ತದೆ ಗೊತ್ತಾ? ತನ್ನ ಬಾಲವನ್ನು ಅದರಲ್ಲಿ ಮುಳುಗಿಸುತ್ತದೆ. ನಂತರ ಬಾಲವನ್ನು ಹೊರ ತೆಗೆದು ಚೆನ್ನಾಗಿ ಚೀಪುತ್ತದೆ. ಹಿಗೆಯೇ ನಿರಂತರ ಮಾಡುತ್ತ ಬಾಟಲಿಯಲ್ಲಿ ಒಂದು ಹನಿಯೂ ಇಲ್ಲದಾಗುವ ತನಕ ಈ ಕೃತ್ಯವನ್ನೆಸಗುತ್ತದೆ.
ಆಹಾರ ಪದಾರ್ಥಗಳ ವಾಸನೆಯನ್ನು ಎಷ್ಟೋ ಪರ್ಲಾಂಗು ದೂರದಿಂದ ತಿಳಿಯುವ ಅತೀ ಸೂಕ್ಷ್ಮ ಜ್ಞಾನೇಂದ್ರಿಯ ಈ ಇಲಿಗೆ ಇದೆ.
ಇಲಿ ಮತ್ತು ಬೆಕ್ಕಿನ ಮದ್ಯೆ ಯಾವಾಗಲೂ ಹಗೆತನ ಮತ್ತು ವೈರತ್ವವಿರುತ್ತದೆ. ಮಾತ್ರವಲ್ಲ ಬೆಕ್ಕನ್ನು ಕಂಡರೆ ಇಲಿ ಭಯದಿಂದ ಮೂತ್ರ ವಿಸರ್ಜನೆ ಕೂಡ ಮಾಡುತ್ತದೆ.
ಪ್ರವಾದಿ ನೂಹ್ ನಬಿ ಅಲೈಹಿಸ್ಸಲಾಮರವರು ಹಡಗಿನಲ್ಲಿ ಮನುಷ್ಯರು ಮತ್ತು ಇತರ ಜೀವರಾಶಿಗಳಲ್ಲದೆ ಎಷ್ಟೋ ತಿಂಗಳುಗಳು ತಿನ್ನಲು ಬೇಕಾದ ಅಹಾರ ಸಾಮಾಗ್ರಿಗಳ ಬಂದೋಬಸ್ತು ಕೂಡ ಮಾಡಿದ್ದರು. ಅದರೆ ಇಲಿ ಅಲ್ಲಿಯೂ ತನ್ನ ಸ್ವಭಾವವನ್ನು ಬಿಡಲಿಲ್ಲ. ಅಹಾರ ಪದಾರ್ಥಗಳನ್ನು, ಅವಗಳನ್ನು ಶೇಖರಣೆ ಮಾಡಿಟ್ಟ ಪೊಟ್ಟಣಗಳನ್ನು, ಜನರ ಬಟ್ಟೆಬರೆಗಳನ್ನು, ಬ್ಯಾಗು, ಚೀಲ ಇತ್ಯಾದಿಗಳನ್ನು ಎಲ್ಲವನ್ನೂ ಕತ್ತರಿಸಿ ಹಾಳು ಮಾಡುತ್ತಿತ್ತು. ಕೊನೆಗೆ ನೂಹ್ ನಬಿ ಅಲೈಹಿಸ್ಸಲಾಮರವರ ಸನ್ನಿಧಿಗೆ ದೂರು ಕೊಡಲಾಯ್ತು. ಆಗ ಇದಕ್ಕೆ ಒಂದು ಪರಿಹಾರ ಬೇಕೆಂದು ಅಲ್ಲಾಹನಲ್ಲಿ ಬೇಡಿದಾಗ ಹಡಗಿನಲ್ಲಿ ಬೆಕ್ಕಿನ ಸೃಷ್ಟಿಯಾಯಿತು. ಬೆಕ್ಕನ್ನು ಕಂಡ ಕೂಡಲೇ ಇಲಿಯ ಎಲ್ಲಾ ಪೋಕರಿತನ ನಿಂತು ಹೋಯಿತು. ಮಾತ್ರವಲ್ಲ ಅವಿತು ಕುಳಿತಿತು.
ಅಕ್ಕಿ ಹಿಟ್ಟು ಮತ್ತು ಪಾರಿವಾಳದ ಹಿಕ್ಕೆಯನ್ನು ಮಿಶ್ರಣ ಮಾಡಿ ಒಂದು ಕಡೆ ಇಟ್ಟರೆ ಇದನ್ನು ತಿಂದ ಇಲಿಗಳು ನಿಮಿಷದಲ್ಲಿ ಸಾಯುತ್ತದೆ.
ಕಡಲ ಈರುಳ್ಳಿಯನ್ನು ಪುಡಿಮಾಡಿ ಇಲಿಯ ಹುತ್ತದ ಸಮೀಪ ಇಡುವುದಾದರೆ ಇದರ ವಾಸನೆಯಿಂದ ಇಲಿಗಳು ಸತ್ತು ಹೋಗುತ್ತದೆ.
ಇನ್ನು ಮನೆಯಲ್ಲಿ ಅಥವಾ ಇತರ ಜಾಗದಲ್ಲಿ ವಿಪರೀತ ಇಲಿಗಳ ಕಾಟವಿದ್ದು ಯಾವ ಉಪಚಾರವೂ ಫಲಕಾರಿಯಾಗದಿದ್ದಲ್ಲಿ ಜೀರಿಗೆ, ಬಾದಾಮು ಮತ್ತು ಸೋಡಾಪುಡಿ ಈ ಮೂರನ್ನು ಮಿಶ್ರಣ ಮಾಡಿ ಕೆಲವು ದಿನಗಳು ಹೊಗೆ ಹಿಡಿದರೆ ಇಲಿಗಳು ನಾಪತ್ತೆಯಾಗುತ್ತವೆ. ಇಲಿಯ ಕನಸು ಬಿದ್ದರೆ ಅದಕ್ಕೆ ಕೆಲವು ಕನಸು ವ್ಯಾಖ್ಯಾನ ತಜ್ಞರು ನೀಡಿದ ವ್ಯಾಖ್ಯಾನ ಹೀಗಿದೆ.
ತನ್ನ ಮನೆಯಲ್ಲಿರುವ ಇಲಿಗಳು ಮನೆಯಿಂದ ಹೊರಹೋಗುವ ದೃಶ್ಯವನ್ನು ಕನಸು ಕಂಡರೆ ಆ ಮನೆಯಲ್ಲಿ “ನಿಅಮತ್ ” ಮತ್ತು “ಬರಕತ್” (ಸಮೃದ್ಧಿ ಮತ್ತು ಐಶ್ವರ್ಯ) ಕಡಿಮೆಯಾಗುವುದರ ಸೂಚನೆಯಂತೆ.
ಒಬ್ಬನು ತನ್ನ ಮನೆಯಲ್ಲಿ ತುಂಬಾ ಇಲಿಗಳು ವಾಸವಿರುವುದನ್ನು ಕನಸು ಕಂಡರೆ ಆ ಮನೆಯಲ್ಲಿ ಅನ್ನಹಾರದಲ್ಲಿ ಸಮೃದ್ಧಿ ಉಂಟಾಗುವುದರ ನಿಶಾನೆಯಂತೆ. (ಯಾಕೆಂದರೆ ಅನ್ನ ಪಾನೀಯ ಇರುವಲ್ಲೇ ಇಲಿಗಳು ಇರುತ್ತದೆ)
ಮನೆಯಲ್ಲಿ ಇಲಿಗಳು ಅತ್ತಿತ್ತ ಓಡಿ ಆಟ ಆಡುವ ದೃಶ್ಯವನ್ನು ಕಂಡರೆ ಆ ಮನೆಯಲ್ಲಿ ನೆಮ್ಮದಿ, ಆರಾಮ, ಸಂತೋಷ ಇರುವುದರ ಸಂಕೇತಂರ್‍ಪಿ:u (ಯಾಕೆಂದರೆ ಆಟ ಆಡೋದು ಹೊಟ್ಟೆ ತುಂಬಿ ಮನಸ್ಸಿಗೆ ನೆಮ್ಮದಿ ಇರುವಾಗ ಮಾತ್ರ)
ಇಲಿ ಭಕ್ಷಯೋಗ್ಯವಲ್ಲ. ಇಸ್ಲಾಮ್ ಇದನ್ನು ತಿನ್ನುವುದನ್ನು ನಿಷಿದ್ಧಗೊಳಿಸಿದೆ.
ಸಂಗ್ರಹ: ಇಮಾಮ್ ದುಮೈರಿಯವರ ಹಯಾತುಲ್ ಹಯವಾನ್ ಇಮಾಮ್ ಅಶ್ಬೀಹೀಯವರ ಅಲ್ ಮುಸ್ತತ್ ರಪ್ ಫಿ ಕುಲ್ಲಿ ಫನ್ನಿನ್ ಮುಸ್ತಲ್ರಫ್ ಇಮಾಮ್ ನಾಬುಲ್ಸಿಯವರ ತಹ್ ತೀರುಲ್ ಅನಾಂ ಫೀ ತಹ್ಬೀರಿಲ್ ಮನಾಂ.