ಹೆಣ್ಣೆ! ಕಂಜೂಸಾಗದಿರು

 

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು; ಒಳಿತಿನ ಯಾವುದೇ ಸಣ್ಣ ಕಾರ್ಯಗಳನ್ನು ನೀವು ನಿಸ್ಸಾರವಾಗಿ ಕಾಣಬೇಡಿ. ಒಬ್ಬನ ಬಳಿ ಏನೂ ಇಲ್ಲದಿದ್ದರೆ ತನ್ನ ಸಹೋದರನ ಬಳಿ ಪ್ರಸನ್ನತೆಯೊಂದಿಗೆ ವರ್ತಿಸಲಿ. ನೀವು ಮಾಂಸವನ್ನು ಖರೀದಿಸಿದರೆ ಅಥವಾ ಬೇರೇನನ್ನಾದರೂ ಬೇಯಿಸುವುದಾದರೆ ಅದರಲ್ಲಿ ಸಾರು ಹೆಚ್ಚುವಂತೆ ಮಾಡಿ, ಅದರಿಂದ ನಿಮ್ಮ ನೆರೆಕರೆಯವರಿಗೂ ಸುರಿದು ಕೊಡಿ.

(ವರದಿ: ಅಬೂದ್ಸರ್ ರಳಿಯಲ್ಲಾಹು ಅನ್ಹು, ಉಲ್ಲೇಖ: ತುರ್‌ಮುದ್ಸೀ)

 

ಊಟಕ್ಕೊಂದು ಪಲ್ಯ ಮಾಡುವುದಾದರೆ ಅದು ಹೇಗೆ ನಿನ್ನ ನೆರೆಕರೆಯವರಿಗೂ ಪ್ರಯೋಜನ ಹಿಡಿಯಬಲ್ಲುದೆಂಬುದನ್ನು ತಿಳಿಸಿಕೊಡುವ ಪ್ರವಾದಿ ವಚನವಿದು. ಳಿತಿನ ಯಾವುದೇ ಕಾರ್ಯವನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸೂಚಿಸದೆ ಬಿಟ್ಟಿಲ್ಲ. ಯಾವ ರೀತಿ ನಮಾಝ್, ಝಕಾತ್, ದ್ಸಿಕ್ರ್, ಖುರ್ ಆನ್ ಮುಂತಾದವುಗಳನ್ನು ಕಲಿಸಿ ಕೊಟ್ಟರೋ ಅದೇ ರೀತಿ ನಿಮ್ಮ ಮಲಗುವ ಕೋಣೆ, ಅಡುಗೆ ಕೋಣೆ, ಸ್ನಾನದ ಕೋಣೆ, ಊಟ, ಪಲ್ಯ ಹೀಗೆ ಎಲ್ಲವನ್ನ ಅವರು ವಿವರಿಸಿಕೊಟ್ಟಿದ್ದಾರೆ. ಈ ಎಲ್ಲ ವಿವರಣೆಯಲ್ಲೂ ಒಬ್ಬ ವ್ಯಕ್ತಿಯತ್ತ ಕೇಂದ್ರೀಕರಿಸದೆ ಆ ವ್ಯಕ್ತಿಯ ಸುತ್ತಮುತ್ತ ಯಾರೆಲ್ಲ ಇದ್ದಾರೋ ಅವರಿಗೆಲ್ಲ ಒಳಿತಾಗುವಂತೆ ಬೋಧಿಸಿದ್ದಾರೆ. ಮೇಲಿನ ಹದೀಸ್ ವಚನ ಅಂತಹವುಗಳಲ್ಲೊಂದಷ್ಟೆ.

ನೆರೆಕರೆ ಎಂಬುದು ಒಬ್ಬ ವ್ಯಕ್ತಿಯ, ಒಂದು ಕುಟುಂಬದ ಬದುಕಿನ ಒಂದು ಮುಖ್ಯ ಭಾಗ. ನೆರೆಕರೆಗಳಿಲ್ಲದೆ ಬದುಕುವುದು ಕಷ್ಟ ಸಾಧ್ಯವೆಂಬುದು ಹೆಚ್ಚಿನವರಿಗೆ ಅನಭವ ವೇದ್ಯ. ನೆರೆಕರೆ ಇರುವಾಗ ಅವರು ಬದುಕಿನ ಭಾಗವಾಗಿ ಬಿಟ್ಟು ಅದೊಂದು ಸಾಮಾನ್ಯ ವಿಷಯ ವಾಗಿಬಿಡುತ್ತದೆ. ಆದರೆ ನೆರೆಕರೆ ಇಲ್ಲದಿದ್ದರೆ ಮಾತ್ರ ಅದರ ಕಷ್ಟ ತಿಳಿಯುತ್ತದೆ. ಕಣ್ಣಿದ್ದವನಿಗೆ ಕಣ್ಣಿನ ದೃಷ್ಟಿ ಇಲ್ಲದಾಗುವಾಗ ಕಣ್ಣಿನ ಪ್ರಾಮುಖ್ಯತೆ ತಿಳಿಯುವಂತೆ.

ಇಸ್ಲಾಮ್ ನೆರಕೆರೆಯ ಬಾಂಧವ್ಯಕ್ಕೆ ಬಹಳಷ್ಟು ಪ್ರಾಮುಖ್ಯತೆಯನ್ನು ಕೊಟ್ಟಿದೆ. ಒಂದು ಮನೆಯೊಳಗೆ ವಾಸಿಸುವ ಕುಟುಂಬವೊಂದರ ನೆಮ್ಮದಿ ಯಾವುದೆಲ್ಲ ವಿಯಗಳನ್ನು ಅವಲಂ ಬಿಸಿದೆಯೆಂದು ಕುಟುಂಬ ವ್ಯವಸ್ಥೆಯ ಮೇಲೆ ಮಾನವನನ್ನು ಭೂಮಿಯ ಮೇಲೆ ವಾಸಿಸುವಂತೆ ಮಾಡಿದ ಅಲ್ಲಾ ಹನಿಗೆ ತಿಳಿದಿರುವ ಕಾರಣದಿಂದಲೇ ಅವನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಈ ಎಲ್ಲ ವಿಷಯಗಳನ್ನು ಬೋಧಿಸಿದ್ದಾರೆ.

ನೆರೆಕರೆಯವನು ಒಬ್ಬನ ಕೆಡುಕುಗಳಿಂದ ಮುಕ್ತನಾಗದಿದ್ದರೆ ಆತನು ಸ್ವರ್ಗ ಪ್ರವೇಶಿಸಲಾರ ಎಂದಿದ್ದಾರೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಯಾರು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದಾರೋ ಅವರು ನೆರೆಕರೆಯವರನ್ನು ಗೌರವಿಸಲಿ ಎನ್ನುತ್ತದೆ ಇನ್ನೊಂದು ಹದೀಸ್ ವಚನ. ಜಿಬ್‌ರೀಲ್ ಅಲೈಹಿಸ್ಸಲಾಮರು ನೆರೆಕರೆಯವರ ಬಗ್ಗೆ ನನಗೆ ತಿಳಿಸಿದ ವಿಷಯಗಳನ್ನು ನೋಡಿದಾಗ ನೆರೆಕರೆಯವರು ಸೊತ್ತುಗಳ ವಾರೀಸುದಾರರಲ್ಲಿ ಸೇರಿ ಬಿಡುವರೋ ಎಂದೆನಿಸಿತು ಎಂಬ ಪ್ರವಾದಿ ವಚನವು ಇಸ್ಲಾಮ್ ನೆರೆಕರೆಯ ಬಾಂಧವ್ಯಕ್ಕೆ ಎಷ್ಟು ಮಹತ್ವ ನೀಡಿದೆಯೆಂಬುದನ್ನು ಎತ್ತಿ ತೋರಿಸುತ್ತದೆ.

ವ್ಯಭಿಚಾರವೆಂಬುದು ಮಹಾ ಪಾಪ, ಖುರ್‌ಆನ್ ಹದೀಸ್‌ಗಳೆರಡಲ್ಲೂ ಈ ಮಹಾ ಪಾಪದ ಬಗ್ಗೆ ಸಾಕಷ್ಟಿವೆ. ಈ ಅತಿ ನೀಚಗೆಟ್ಟ ಕೆಡುಕನ್ನು ವಿವರಿಸುವಾಗ ನೆರೆಕರೆಯಲ್ಲಿರುವ ಹೆಣ್ಣು ಮಕ್ಕಳಿಗೆ ತೊಂದರೆ ನೀಡುವ ಬಗ್ಗೆ ಅದನ್ನು ಇನ್ನಷ್ಟು ನೀಚವೆನ್ನುತ್ತದೆ ಹದೀಸ್ ವಚನ. ಸಹಾಬಿವರ್ಯರೊಬ್ಬರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಪಾಪಗಳ ಪೈಕಿ ಅತಿ ಕಠಿಣವಾದುದು ಯಾವುದೆಂದು ಕೇಳಿದಾಗ ಅಲ್ಲಾಹನಿಗೆ ಶಿರ್ಕ್ ಮಾಡುವುದು ಎಂದುತ್ತರಿಸಿದರು. ನಂತರ ಯಾವುದೆಂದು ಕೇಳಿದಾಗ ನಿನ್ನ ನೆರೆಕರೆಯವನ ಪತ್ನಿಯೊಂದಿಗೆ ವ್ಯಭಿಚರಿಸುವುದು ಎಂದರು. ವ್ಯಭಿಚಾರವೇ ಮಹಾಪಾಪವಾಗಿದ್ದು ನೆರೆಕರೆಯವನ ಪತ್ನಿಯೊಂದಿಗೆ ಎನ್ನುವುದು ಅದನ್ನು ಇನ್ನಷ್ಟು ಕಠಿಣ ಪಾಪ ಮಾಡಿಬಿಡುತ್ತದೆ. ನೆರೆಕರೆಯವರಿಗೆ ರಕ್ಷಣೆ ನೀಡಬೇಕಾದವನು; ನೆರೆಕರೆಯೊಂದಿಗೆ ಉತ್ತಮ ಬಾಂಧವ್ಯದಿಂದಿರಬೇಕಾದವನು ಅದನ್ನು ಹಳಸಿ ಬಿಡುವಂತೆ ಮಾಡುವುದೇ ಅದು ಇನ್ನಷ್ಟು ಕಠಿಣ ಪಾಪವಾಗಲು ಕಾರಣ.

ನೆರೆಕರೆಯೊಂದಿಗೆ ಎಲ್ಲ ರೀತಿಯಲ್ಲೂ ಉತ್ತಮ ಬಾಂಧವ್ಯವನ್ನು ಉಳಿಸಬೇಕು. ಅವರ ಸುಖ, ದುಃಖಗಳಲ್ಲಿ ಪಾಲ್ಗೊಳ್ಳಬೇಕು. ಅವರು ಹಸಿದಿದ್ದರೆ ಅವರಿಗೆ ಸಹಾಯ ಮಾಡಬೇಕು. ಮನೆಯಲ್ಲೊಂದು ವಿಶೇಷವಿದ್ದರೆ, ಮಾಂಸ ಅಥವಾ ಒಂದು ವಿಶೇಷ ಪಲ್ಯ ಮಾಡಿದ್ದರೆ ಅದನ್ನು ಕೇವಲ ಮನೆಯವರಿಗಷ್ಟೇ ಸೀಮಿತಗೊಳಿಸದೆ ಸ್ವಲ್ಪ ಹೆಚ್ಚು ಮಾಡಿ ನೆರೆಕರೆಯವರಿಗೂ ಕೊಡಬೇಕು ಎನ್ನುತ್ತದೆ ಹದೀಸ್ ವಚನ, ಖರ್ಚು ವೆಚ್ಚಗಳನ್ನು ಕಡಿತಗೊಳಿಸುವುದು, ಸರಳ ಬದುಕು, ಉಳಿತಾಯ ಮುಂತಾದ ಹೆಸರಿನಲ್ಲಿ ಮನೆಯ ಹೊರಗೆ ಏನನ್ನೂ ಹರಿಯ ಬಿಡದವರಿಗೆ ಈ ಪುಣ್ಯಗಳೇನೂ ಸಿಗದು. ಇಂತದಕ್ಕೆಲ್ಲ ಸ್ವಲ್ಪ ವಿಶಾಲ ಮನಸ್ಸು ಆಗತ್ಯ. ಮನೆಯಲ್ಲಿರುವ ಮಹಿಳೆಯರು ಇಂತದ್ದನ್ನೆಲ್ಲ ಗಮನಿಸಿದರೆ ಪುಕ್ಕಟೆ ಪುಣ್ಯಗಳು ಅಮಗೆ ಧಾರಾಳ ಲಭ್ಯ. ಕಂಜೂಸು ಮಹಿಳೆಯರಿದ್ದರೆ ನೆರೆಕರೆಗಳಿಗೆ ಮಾಂಸದ ವಾಸನೆ ಮಾತ್ರ ದೊರಕಿತಷ್ಟೆ. ಮನೆಯ ಯಜಮಾನ ಬಯಸಿದರೂ ಬೇಡವೆನ್ನುವ, ಬೇರೇನಾದರೂ ಸಬೂಬು ಹೇಳುವ ಮಹಿಳೆಯರು ಇಂತಹ ಪುಣ್ಯಗಳಿಗೆ ತಡೆಹಾಕುವರು. ನಗರದ ಬದುಕು ಈಗೀಗ ಯಾಂತ್ರಿಕ. ಅಲ್ಲಿ ಸಂಬಂಧಗಳಿಗೆಲ್ಲ ಬೆಲೆ ಕಡಿಮೆ. ಫ್ಲಾಟುಗಳಲ್ಲಿ ವಾಸಿಸುವ ಹಲವು ಮಂದಿಗೆ ತಮ್ಮ ಫ್ಲಾಟ್‌ನ ಹತ್ತಿರದ ಫ್ಲಾಟ್‌ಗಳಲ್ಲಿರುವವರ ಪರಿಚಯ ಇರುವುದಿಲ್ಲ. ತಾವಾಯಿತು; ತಮ್ಮ ಕೆಲಸವಾಯಿತು; ತಮ್ಮ ಫ್ಲಾಟ್‌ಗಳ ಕೋಣೆಗಳಾಯಿತು ಎಂದಿದ್ದು ಬಿಡುತ್ತಾರೆ. ಸಂಕಷ್ಟಗಳು ಬರುವಾಗ ನೆರವಿಗೆ ಮೊಬೈಲುಗಳನ್ನ ಅವಲಂಬಿಸಿರುವವರು ನೆರೆಕರೆಗಳನ್ನೆಲ್ಲ ಗಮನಿಸುವುದಿಲ್ಲ. ಇದೆಲ್ಲ ಇಸ್ಲಾಮೀ ಬದುಕಿನ ವ್ಯವಸ್ಥೆಗ ಳಲ್ಲ. ಇಸ್ಲಾಮ್ ಎಲ್ಲರೊಂದಿಗೆ ಜತೆ ಸೇರಿ ಸಹಬಾಳ್ವೆಯ, ಸಹಕಾರದ ಪ್ರೀತಿಯ ಸುಂದರ ಬದುಕನ್ನು ಕಲಿಸುತ್ತದೆ.

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors