ಪ್ರಶ್ನೆ : ನನ್ನ ಪತಿ ಇತ್ತೀಚೆಗೆ ಅಮಲು ಪದಾರ್ಥ ವಿಕ್ಸಿ ಸೇವಿಸುತ್ತಾರೆ. ಅವರು ಮಗ್ರಿಬ್ ಮತ್ತು ಇಶಾ ನಮಾಜು ಮಾಡುವುದಿಲ್ಲ. ಅದನ್ನು ಖಳಾ ಪೂರೈಸುತ್ತಾರೆ. ವಿಕ್ಸಿಯನ್ನು ನೀರು ಬೆರೆಸಿ ಕುಡಿಯುತ್ತಾರೆ. ಸರಿಯಾಗಿ ಮಾತನಾಡುತ್ತಾರೆ. ಈ ರೀತಿ ಅದನ್ನು ಸೇವಿಸಬಹುದಾ? ಇದರಿಂದ ಅವರಿಗೆ ತೊಂದರೆಗಳಿವೆಯೆ? ತಿಳಿಸುವಿರಾ?
ಉತ್ತರ : ಅಮಲು ಪದಾರ್ಥದ ಸೇವನೆ ಸ್ಪಷ್ಟವಾದ ಹರಾಮ್ ಆಗಿದ್ದು ಅತಿ ಕಠಿಣ ಏಳು ಪಾಪಗಳಲ್ಲೊಂದಾಗಿದೆ. ಈ ಬಗ್ಗೆ ಎಲ್ಲ ಪಾಪಗಳ ಕೀಲಿಕೈ ಎಂದು ಹದೀಸ್ ವಚನಗಳು ಎಚ್ಚರಿಕೆ ನೀಡಿದೆ. ಸ್ವತ ಈ ಪಾಪದಿಂದ ದೂರ ನಿಲ್ಲುವುದರೊಂದಿಗೆ ಪತಿ, ಮಕ್ಕಳು ಸಹಿತ ಕುಟುಂಬದ ಎಲ್ಲರನ್ನೂ ಇತರರನ್ನೂ ಈ ಪಾಪದಿಂದ ತಡೆಯುವ ಪ್ರಯತ್ನ ನಡೆಸುವುದು ಸತ್ಯ ವಿಶ್ವಾಸಿಗಳಿಗೆ ಕಡ್ಡಾಯವಾಗಿದೆ.
ಅಮಲು ಪದಾರ್ಥ ಸೇವನೆ ಅಲ್ಲಾಹನ ಬಳಿ ಕಠಿಣ ಪಾಪವಾಗುವುದರೊಂದಿಗೆ ಅದು ಒಂದು ಮನೆಯ, ಕುಟುಂಬದ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ಸಾಮಾಜಿಕ ನೆಮ್ಮದಿಗೆ ಅಡ್ಡಿಯುಂಟು ಮಾಡುತ್ತದೆ ಅದನ್ನು ರೂಢಿ ಮಾಡಿಕೊಂಡವನನ್ನು ದಿನ ಕಳೆದಂತೆ ತನ್ನ ದಾಸನನ್ನಾಗಿಸಿಕೊಂಡು ಇಡಿ ಬದುಕನ್ನೇ ಡೋಲಾಯಮಾನಗೊಳಿಸುತ್ತದೆ.
ಅಮಲು ಪದಾರ್ಥದ ಅಮಲಿನ ಅಂಶವನ್ನು ನೀರು ಯಾ ಇತರ ವಸ್ತುಗಳನ್ನು ಬೆರೆಸಿ ಕಡಿಮೆಗೊಳಿಸುವುದರಿಂದ ಅದು ಹರಾಮ್‌ನಿಂದ ಮುಕ್ತವಾಗುವುದಿಲ್ಲ. ಕಡಿಮೆ ಪ್ರಮಾಣದ ಅಮಲು ಇದ್ದರೂ ಅದನ್ನು ಕುಡಿಯುವುದು ಹರಾಮ್ ಆಗಿದೆ. ಅಮಲು ಪದಾರ್ಥ ಸೇವನೆ ಮೂಲಕ ಬುದ್ಧಿ ಸ್ಥಿಮಿತದಲ್ಲಿಲ್ಲದಿದ್ದರೆ ವುಳೂ, ನಮಾಝ್ ಸಿಂಧುವಾಗುವುದಿಲ್ಲ. ಮನಪೂರ್ವಕ ಅಮಲು ಸೇವಿಸಿ ನಮಾಝ್ ಮಾಡದಿದ್ದರೆ ಪ್ರಜ್ಞೆ ಮರಳಿದ ತಕ್ಷಣ ನಮಾಝ್ ಖಳಾ ಪೂರೈಕೆ ಕಡ್ಡಾಯವಾಗಿದೆ. ಮದ್ಯಪಾನ ಹರಾಮ್ ಎನಿಸಲು ಅದು ಬುದ್ಧಿಯ ಸ್ಥಿಮಿತ ತಪ್ಪುವಷ್ಟು ಪ್ರಮಾಣದಲ್ಲಿರಬೇಕೆಂದಿಲ್ಲ. ಅತಿ ಕಡಿಮೆ ಪ್ರಮಾಣದಲ್ಲಿದ್ದರೂ ಅದು ಹರಾಮ್ ಆಗಿದ್ದು ಬುದ್ಧಿ ಸ್ಥಿಮಿತ ತಪ್ಪದಿದ್ದಾಗ ನಮಾಜು ಆತನಿಗೆ ಕಡ್ಡಾಯವಾಗಿಯೇ ಇರುತ್ತದೆ.