ಆರಾಧನೆ
ನಾವೆಲ್ಲರೂ ಅಲ್ಲಾಹುವಿನ ದಾಸ ರಾಗಿದ್ದೇವೆ. ಆತನ ಆಜ್ಞೆಯನ್ನು ಪಾಲಿಸ ಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಆಜ್ಞೆಗಳು ಹಲವು ರೀತಿ ಇದ್ದರೂ ಆ ಪೈಕಿ ಸರಳ ಮತ್ತು ಸುಲಭವಾದುದು ದಿನನಿತ್ಯ ನಿರ್ವಹಿಸಬೇಕಾದ ಐದು ವೇಳೆಯ ನಮಾಝ್ ಎಂಬ ಶ್ರೇಷ್ಠ ಆರಾಧನೆಯಾಗಿದೆ.
ಅರಬೀ ಭಾಷೆಯಲ್ಲಿ ಇದನ್ನು ಸ್ವಲಾತ್ ಎನ್ನಲಾಗುತ್ತದೆ.
ತಕ್ಬೀರತುಲ್ ಇಹ್ರಾಮ್‌ನಿಂದ ಆರಂಭಿಸಿ ಸಲಾಂ ಹೇಳುವವರೆಗಿನ ನಿರ್ದಿಷ್ಟ ಕರ್ಮಗಳು ಹಾಗೂ ನುಡಿಗಳಾಗಿವೆ ನಮಾಝ್.
ದಿನನಿತ್ಯ ಐದು ವೇಳೆಯ ನಮಾಝ್ ಕಡ್ಡಾಯ ಎಂಬುದು ಈ ಸಮುದಾಯಕ್ಕೆ ಅಲ್ಲಾಹು ನೀಡಿದ ವಿಶೇಷ ಕೊಡುಗೆಯಾಗಿದೆ. ಆದಮ್ ಅಲೈಹಿಸ್ಸಲಾಮ್‌ರವರಿಂದ ನಂತರದ ಪ್ರತೀ ಜನಾಂಗಕ್ಕೂ ನಮಾಝ್ ಕಡ್ಡಾಯಗೊಳಿಸಲಾಗಿದ್ದರೂ ಐದು ವೇಳೆಯ ನಮಾಝ್ ಯಾರಿಗೂ ಇದ್ದಿರಲಿಲ್ಲ. ಪ್ರವಾದಿತ್ವ ಲಭ್ಯವಾದ ಹತ್ತನೇ ವರ್ಷ ರಜಬ್ 27ರಂದು (ಇಸ್ರಾಅ- ಮಿಅರಾಜ್ ನಡೆದ ರಾತ್ರಿ) ನಮಾಝ್ ಕಡ್ಡಾಯಗೊಂಡಿತು.
ನಮಾಝ್‌ನ ಮಹತ್ವ
ಸರ್ವ ಆರಾಧನೆಗಳ ಮೂಲ ಉದ್ದೇಶ, ಅಲ್ಲಾಹುವಿನ ಆಜ್ಞೆಗಳಿಗೆ ಶಿರ ಬಾಗು ವುದರ ಮೂಲಕ ಆಧ್ಯಾತ್ಮಿಕ ಚೈತನ್ಯ ಪಡೆದು ಆತನ ಸಂತೃಪ್ತಿಗಳಿಸುವುದಾಗಿದೆ.
ಈ ಆಜ್ಞೆಗಳ ಪೈಕಿ ನಮಾಝ್, ಒಂದನೇ ಸ್ಥಾನದಲ್ಲಿ ನಿಲ್ಲುತ್ತದೆ.
ಅಲ್ಲಾಹು ಹೇಳುತ್ತಾನೆ; ಸತ್ಯ ವಿಶ್ವಾಸಿಗಳ ಮೇಲೆ ನಮಾಝನ್ನು ಸಮಯ ನಿಗದಿ ಪಡಿಸಿ ಕಡ್ಡಾಯಗೊಳಿಸಲಾಗಿದೆ (ಸೂರಾ ಅನ್ನಿಸಾ -103)
ನಿಶ್ಚಯವಾಗಿಯೂ ನಮಾಝ್ ನಿಷಿದ್ಧ ಕಾರ್ಯಗಳಿಂದಲೂ ನೀಚ ಪ್ರವರ್ತಿಗಳಿಂದಲೂ ತಡೆಯುತ್ತದೆ (ಸೂರಾ ಅಲ್ ಅಂಕಬೂತ್ – 45)
ಸರ್ವ ಶಿಸ್ತುಗಳನ್ನು ಪಾಲಿಸಿ ಭಯ ಭಕ್ತಿಯೊಂದಿಗೆ ನಮಾಝ್‌ನಲ್ಲಿ ಮಗ್ನ ನಾಗುವವರಿಗೆ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡು ನೇರ ಹಾದಿಯಲ್ಲಿ ನೆಲೆಯೂರಲು ಸಾಧ್ಯವಾಗುವುದು ಅನ್ನುವುದು ಅನುಭವ ಸತ್ಯವಾಗಿದೆ.
ಅಬೂ ಹುರೈರಾರವರಿಂದ ವರದಿ; ಅವರು ಹೇಳಿದರು; ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಹೇಳಿದ್ದನ್ನು ನಾನು ಕೇಳಿರುವೆನು; ಓ ಜನರೇ, ನೀವು ಹೇಳಿರಿ, ನಿಮ್ಮಲ್ಲಿ ಯಾರಾದರೂ ಒಬ್ಬರ ಮನೆಯ ಮುಂಭಾಗದಲ್ಲಿ ಒಂದು ನದಿ ಹರಿಯುತ್ತಿದ್ದು ಪ್ರತಿದಿನವೂ ಐದು ಬಾರಿ ಆ ನದಿಯಲ್ಲಿ ಆತನು ಸ್ನಾನ ಮಾಡುತ್ತಿದ್ದರೆ ಆತನ ಶರೀರದಲ್ಲಿ ಏನಾದರೂ ಕೊಳಕು ಉಳಿಯಬಹುದೇ ಎಂದು ಕೇಳಿದಾಗ ಸ್ವಹಾಬಿಗಳು ಉತ್ತರಿಸಿದರು; ಇಲ್ಲ, ಆತನ ಶರೀರದಲ್ಲಿ ಯಾವ ಕೊಳಕೂ ಉಳಿಯದು.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು; ಐದು ವೇಳೆಯ ನಮಾಝ್‌ನ ಉದಾಹರಣೆಯೂ ಇದೇ ರೀತಿ ಆಗಿರುತ್ತದೆ. ಈ ನಮಾಝ್ ನ ಕಾರಣವಾಗಿ ಅಲ್ಲಾಹನು ಸರ್ವ ಪಾಪಗಳನ್ನು ಮನ್ನಿಸುತ್ತಾನೆ.