ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಒಮ್ಮೆ ನಮ್ಮ ಬಳಿಗೆ ಬಂದಾಗ ಕೂದಲು ಕೆದರಿರುವ ವ್ಯಕ್ತಿಯೊಬ್ಬರನ್ನು ನೋಡಿದರು. ‘ತನ್ನ ಕೂದಲನ್ನು ಒಪ್ಪವಾಗಿಡುವ ಏನೂ ಇವನಿಗೆ ದೊರಕಲಿಲ್ಲವೇ?’ ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್.
ಬೇರೊಬ್ಬ ವ್ಯಕ್ತಿ ಕೊಳಕು ವಸ್ತ್ರವನ್ನು ಧರಿಸಿರುವುದನ್ನು ಕಂಡರು. ‘ಇವನಿಗೆ ತನ್ನ ವಸ್ತ್ರ ಒಗೆಯಲು ಏನೂ ಸಿಕ್ಕಿಲ್ಲವೇ?’ ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್.
ಉಲ್ಲೇಖ-ಅಬೂದಾವೂದ್ ವರದಿ: ಜಾಬಿರ್ ಬಿನ್ ಅಬ್ದುಲ್ಲಾಹ್ ರಳಿಯಲ್ಲಾಹು ಅನ್ಹು
ಮನುಷ್ಯನ ಮುಕ್ತ ಮನಸ್ಸು ಬಯಸುವ ಪ್ರಾಕೃತಿಕ ಬೇಡಿಕೆಗಳಿಗೆ ಪೂರಕವಾದ ಧರ್ಮವಾಗಿದೆ ಇಸ್ಲಾಮ್. ಶುಚಿತ್ವ ಈ ಪೈಕಿ ಅತಿಮುಖ್ಯವಾದುದು. ಮನುಷ್ಯನ ಮುಕ್ತ ಮನಸ್ಸು ಶುಚಿತ್ರವನ್ನು ಬಯಸುತ್ತದೆ. ಕೊಳಕು, ಮಲಿನಗಳು ಮನಸ್ಸಿಗೆ ರೇಜಿಗೆ ಹುಟ್ಟಿಸುತ್ತದೆ. ಸ್ನಾನ ಮಾಡಿ ಶುಭ್ರ ವಸ್ತ್ರವನ್ನು ಧರಿಸಿದಾಗ ಮನಸ್ಸಿಗೆ ನೆಮ್ಮದಿ. ಅದೇ ಸ್ನಾನ ಮಾಡದೆ ಕೊಳಕು ವಸ್ತ್ರಗಳನ್ನೆಲ್ಲ ಧರಿಸಿರುವಾಗ ಇತರ ಕೆಲಸಗಳು ಕೂಡಾ ಉತ್ಸಾಹದಿಂದಿರುವುದಿಲ್ಲ. ತಲೆಗೂದಲುಗಳೆಲ್ಲ ಕೆದರಿಕೊಂಡಿದ್ದರೆ ಕಾಣುವವರಿಗೆ ಅಸಹ್ಯ. ಮನಸ್ಸಿಗೂ ಒಂದು ತರ ಕಿರಿಕಿರಿ. ಅದೇ ಕೂದಲು ಬಾಚಿ ಓರಣವಾಗಿದ್ದರೆ ಒಂದು ಬಗೆಯ ಸಂತೃಪ್ತಿ. ಇದೆಲ್ಲ ಸಮ ಸ್ತಿತಿಯಲ್ಲಿರುವ ಮನುಷ್ಯನ ಮನಸ್ಸಿನ ಭಾವಗಳು.
ಮನುಷ್ಯನ ಈ ಭಾವಗಳನ್ನೆಲ್ಲ ಅರ್ಥೈಸಿಕೊಂಡು ಮಾತನಾಡಿದ್ದಾರೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಮೇಲಿನ ಹದೀಸ್ ವಚನ ಇದ ಕ್ಕೊಂದು ಉದಾಹರಣೆಯಷ್ಟೆ.
ಕೂದಲು ಬಾಚದೆ ಅತ್ತಿತ್ತ ಹರಡಿ ಕೊಂಡಿರುವ ಕೆದರಿದ ಕೂದಲಿನ ವ್ಯಕ್ತಿಯನ್ನು ಕಂಡಾಗ ಪ್ರವಾದಿ ಸ್ವಲ್ಲಾಲಾಹು ಅಲೈಹಿ ವಸಲ್ಲಮರಿಗೆ ಅದಷ್ಟು ಹಿಡಿಸಲಿಲ್ಲ. ಅದನ್ನು ಸರಿಯಾಗಿ ಓರಣವಾಗಿಡುವಂತದ್ದೇನೂ ಸಿಗಲಿಲ್ಲವೇ ಎನ್ನುವ ಮೂಲಕ ಅಷ್ಟೇನೂ ತೀಕ್ಷ್ಯವಲ್ಲ ದಿದ್ದರೂ ಮೃದು ವಿರೋಧವನ್ನು ವ್ಯಕ್ತಪಡಿಸಿದರು. ಕೊಳಕು ತುಂಬಿದ ವಸ್ತ್ರ ಧರಿಸಿದವನನ್ನು ಕಂಡಾಗಲೂ ಅದೇ ರೀತಿ ಪ್ರತಿಕ್ರಿಯಿಸಿದರು.
ತಲೆಗೂದಲು ಬಾಚುವುದು, ಎಣ್ಣೆ ಹಾಕುವುದು, ಶುಭ್ರ ವಸ್ತ್ರವನ್ನು ಧರಿಸುವುದು ಮುಂತಾದವುಗಳನ್ನೆಲ್ಲ ಇಸ್ಲಾಮ್ ಸುನ್ನತ್‌ಗೊಳಿಸಿದೆ. ಯಾರ ವಸ್ತ್ರವು ಶುಭ್ರವಾಗಿರುವುದೋ ಅವರ ಹಮ್ಮುಗಳು ಕಡಿಮೆಯಾಗುವುದು ಎಂಬ ಇಮಾಮ್ ಶಾಫಿಈ ರಳಿಯಲ್ಲಾಹು ಅನ್ಹು ರವರ ಮಾತು ಇಲ್ಲಿ ಉಲ್ಲೇಖನೀಯ.
ಶುಚಿತ್ವವು ಸತ್ಯ ವಿಶ್ವಾಸದ ಅರ್ಧ ಭಾಗವೆಂದಿರುವ ಇಸ್ಲಾಮ್ ಶುಚಿತ್ವವನ್ನು ಒಂದು ಆರಾಧನೆಯನ್ನಾಗಿಯೆ ಮಾಡಿದೆ. ನಮಾಝ್ಗಾಗಿ ನಿರ್ವಹಿಸುವ ವುಳೂಳ್ ನಿತ್ಯ ಐದು ಬಾರಿ ಕಡ್ಡಾಯ ವಾಗಿ ಶರೀರದ ಮುಖ್ಯ ಭಾಗಗಳನ್ನೆಲ್ಲ ಶುಚಿಯಾಗಿಡಲು ಸಹಾಯವಾಗುತ್ತದೆ. ಪತಿ ಪತ್ನಿ ಸಂಪರ್ಕವುಂಟಾದರೆ ಸ್ನಾನ ಕಡ್ಡಾಯವೆನ್ನುವ ಮೂಲಕ ದೇಹದ ಶುಚಿತ್ವಕ್ಕೆ ಕಡ್ಡಾಯ ನಿಯಮಗಳನ್ನು ಜಾರಿಗೊಳಿಸಿದೆ. ಜನ ಸೇರುವ ಸ್ಥಳಕ್ಕೆ ಹೋಗುವಾಗ ಸ್ನಾನವನ್ನು ಇಸ್ಲಾಮ್ ಸುನ್ನತ್ತೆಂದು ಘೋಷಿಸಿದೆ, ಇಸ್ಲಾಮಿನ ಇತರನೇಕ ವಿಷಯಗಳತ್ತ ಕಣ್ಣು ಹರಿಸುವಾಗ ಶುಚಿತ್ವಕ್ಕೆ ನೀಡಿದ ಮಹತ್ವ ಎದ್ದು ಕಾಣುತ್ತದೆ.
ತಲೆಗೂದಲು ಬಾಚುವುದು, ಶುಭ್ರ ವಸ್ತ್ರ ಧರಿಸುವುದು, ಪ್ರವಾದಿ ಚರ್ಯೆ, ಹಾಗೆಂದು ತಲೆಗೂದಲು ಬಾಚದೆ, ಶುಭ್ರ ವಸ್ತ್ರಗಳನ್ನು ಧರಿಸದೆ ಅಲ್ಲಾಹನ ಸಾಮೀಪ್ಯ ಪಡೆಯಲಾಗದು ಎಂದು ಹೇಳುವುದು ಸರಿಯಲ್ಲ. ಐಹಿಕ ವಿರಕ್ತಿಯಿರುವ ಕೆಲಮಂದಿ, ತಮ್ಮ ವಸ್ತ್ರ, ಶರೀರಗಳತ್ತ ಗಮನಿಸದೆ ಅಲ್ಲಾಹನ ಧ್ಯಾನದಲ್ಲಿ ನಿರತರಾಗುವುದುಂಟು. ಅದು ಆಧ್ಯಾತ್ಮಿಕ ವಿಷಯ. ಪ್ರವಾದಿ ಚರ್ಯೆಯೊಂದಿಗಿನ ವಿರೋಧವೋ, ಅದರ ಬಗ್ಗೆಯಿರುವ ಅನಾಸಕ್ತಿಯೋ ಇವರನ್ನು ಈ ಸ್ಥಿತಿಗೆ ತಲುಪಿಸಿದ್ದಲ್ಲ. ಬದಲು ಪ್ರವಾದಿ ಚರ್ಯೆಯ ಒಂದು ಮಗ್ಗುಲಿನಲ್ಲಿ ತೀವ್ರ ಆಸಕ್ತಿಯಿಂದ ಮುಳುಗಿದಾಗ ಅಷ್ಟೊಂದು ಮುಖ್ಯ ವೆನಿಸದ ಇನ್ನೊಂದು ಮಗ್ಗುಲಿನ ಬಗ್ಗೆ ಗಮನವಿರದೆ ಹೋಗುವುದಾಗಿದೆ ಇದು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲ ಮರ ಮಾತುಗಳಿಂದಲೇ ಇದನ್ನು ಮನವರಿಕೆಮಾಡಬಹುದು.
“ಕೂದಲು ಜಡೆಗಟ್ಟಿದ, ಧೂಳು ಮತ್ತಿದ ಕೊಳಕು ವಸ್ತ್ರಧರಿಸಿದ ಅದೆಷ್ಟು ಮಂದಿ! ಅಲ್ಲಾಹನ ಮೇಲೆ ಆಣೆ ಹಾಕಿ ಒಂದು ವಿಷಯ ಹೇಳಿದರೆ ಅದನ್ನವನು ನೆರವೇರಿಸಿ ಕೊಡುವನು” ಎಂಬ ತುರ್ಮುದ್ಸಿ ವರದಿ ಮಾಡಿದ ಹದೀಸ್ ವಚನವು ಪ್ರಸಿದ್ಧವಾದುದು. ಸಹಾಬಿ ಪ್ರಮುಖ ಬರಾಅ ಬಿನ್ ಮಾಲಿಕ್ ರಳಿಯಲ್ಲಾಹು ಅನ್ಹುರವರ ಬಗ್ಗೆಯಾಗಿದೆ ಈ ಹದೀಸ್, ಕೂದಲು ಬಾಚದೆ, ಧೂಳು ಮೆತ್ತಿ ಕೊಂಡಿರುವ ಸ್ಥಿತಿಯಲ್ಲಿದ್ದರೂ ಅವರು ಪ್ರಾರ್ಥನೆಗೆ ಉತ್ತರ ಸಿಗುವಂತಹ ಸ್ಥಾನಮಾನಕ್ಕೆ ತಲುಪಿ ದ್ದಾರೆ. ಅಂದರೆ ಒಂದೆಡೆ ತಮ್ಮ ಶರೀರ ವಸ್ತ್ರಗಳನ್ನು ಗಮನಿಸಲು ಸಾಧ್ಯವಾಗದಿದ್ದರೂ ಅಲ್ಲಾಹನ ಸಾಮೀಪ್ಯ ಪಡೆಯುವ ಇತರ ವಿಷಯಗಳಲ್ಲಿ ಅವರು ಜಯಗಳಿಸಿದ್ದಾರೆಂದರ್ಥ.
ಇಲ್ಲಿ ಕೂದಲು ಬಾಚದೆ ಇರುವುದು ಹಾಗೂ ಕೊಳಕು ವಸ್ತ್ರ ಧರಿಸಿರುವುದು ಆ ಬಗ್ಗೆಯಿರುವ ಅನಾಸಕ್ತಿಯಲ್ಲ. ಪ್ರವಾದಿ ಚರ್ಯೆಯ ನಿರಾಕರಣೆಯೂ ಅಲ್ಲ. ಇನ್ನೊಂದು ಆಧ್ಯಾತ್ಮಿಕ ವಿಷಯದ ಆಸಕ್ತಿಯಿಂದ ಇದು ಗಮನಿಸದೆ ಬಿಟ್ಟು ಹೋಗುತ್ತಿದೆಯಷ್ಟೆ. ಈ ಸ್ಥಿತಿಯಲ್ಲಿಲ್ಲದವರು ಶುಚಿತ್ವದ ಬಗ್ಗೆ ಹದೀಸ್ ವಚನ ನೀಡುವ ಪಾಠಗಳನ್ನು ಗಮನಿಸುವುದು ಅಗತ್ಯ.