ಮಕ್ಕಳಿಗೆ ತರಬೇತಿ
ಅಬ್ದುಲ್ಲಾಹಿ ಬಿನ್ ಅಮ್ರ್ ರಳಿಯಲ್ಲಾಹು ಅನ್‌ಹು ರವರಿಂದ ವರದಿ; ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು;
ನಿಮ್ಮ ಮಕ್ಕಳಿಗೆ ಏಳು ವರ್ಷ ಪ್ರಾಯವಾಗಿರುವಾಗ ನಮಾಝ್ ಮಾಡಲು ಆಜ್ಞಾಪಿಸಿರಿ. ಹತ್ತು ವರ್ಷ ಪ್ರಾಯದವರಾಗಿದ್ದು ನಮಾಝ್ ಉಪೇಕ್ಷಿಸಿದಲ್ಲಿ ಅವರನ್ನು ದಂಡಿಸಿರಿ. (ಅಬೂ ದಾವೂದು)
ನಮಾಝ್‌ನ ಬಗ್ಗೆ ಮಕ್ಕಳಿಗೆ ಮುಂಚಿತವಾಗಿಯೇ ತರಬೇತಿ ನೀಡ ಬೇಕೆಂದು ಇಸ್ಲಾಂ ನಿರ್ದೇಶಿಸುತ್ತದೆ. ತಂದೆ ತಾಯಂದಿರು ನಮಾಝ್ ಮಾಡುವಾಗ ಮಕ್ಕಳಿಗೂ ಈ ಬಗ್ಗೆ ಪ್ರಾಥಮಿಕ ಅರಿವನ್ನು ನೀಡಿ ನಮಾಝ್ ಮಾಡುವ ಪ್ರಜ್ಞೆಯನ್ನು ಅವರಲ್ಲಿ ಮೂಡಿಸುವುದು ಹೆತ್ತವರ ಕರ್ತವ್ಯವಾಗಿದೆ.
ಮಕ್ಕಳ ಆಹಾರ, ಅವರ ಶುಚಿತ್ವ, ಅವರ ಆರೋಗ್ಯ, ಅವರ ಶಿಕ್ಷಣ ಮುಂತಾದವುಗಳಲ್ಲಿ ಗಮನವಹಿಸುತ್ತಿರುವ ಹೆತ್ತವರು, ಮಕ್ಕಳ ನಮಾಝ್ ಬಗ್ಗೆ ತಾತ್ಸಾರ ಭಾವನೆ ಹೊಂದುವುದು ಸಲ್ಲದು. ಏಳನೇ ಪ್ರಾಯ ದಲ್ಲಿ ತರಬೇತಿ ನೀಡಲು ಹಾಗೂ ಹತ್ತನೇ ಪ್ರಾಯದಲ್ಲಿ ನಮಾಝ್ ಉಪೇಕ್ಷಿಸಿದರೆ ಶಿಕ್ಷೆ ನೀಡಲು ಬೋಧಿಸುವ ಪ್ರವಾದಿ ವಚನಗಳತ್ತ ತಂದೆ ತಾಯಂದಿರು ಹೆಚ್ಚು ಗಮನಹರಿಸಬೇಕಾಗಿದೆ.
ನಮಾಝ್‌ನ ಬಗ್ಗೆ ಅರಿವು
ನಮಾಝ್ ನಿರ್ವಹಿಸುವ ಪ್ರತಿಯೊಬ್ಬನೂ ಅದರ ವಿಧಿ ವಿಧಾನಗಳ ಬಗ್ಗೆ ಅರಿತಿರುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಆತನ ಆರಾಧನೆಯು ಫಲಶೂನ್ಯವಾಗುತ್ತದೆ. ನಮಾಝ್‌ನಲ್ಲಿ ಮುಖ್ಯವಾಗಿ ನಾಲ್ಕು ವಿಷಯಗಳ ಬಗ್ಗೆ ಅರಿತಿರಬೇಕಾಗಿದೆ.
1) ನಮಾಝ್‌ನ ನಿಬಂಧನೆಗಳು.
2) ನಮಾಝ್‌ನ ಕಡ್ಡಾಯ ಕರ್ಮಗಳು.
3) ನಮಾಝ್‌ನ ಐಚ್ಛಿಕ ಪುಣ್ಯಕರ್ಮಗಳು.
4) ನಮಾಝ್ ಅಸಿಂಧುವಾಗುವ ಸಂಗತಿಗಳು.
ನಮಾಝ್‌ನ ನಿಬಂಧನೆಗಳು
ನಮಾಝ್‌ಗೆ ಐದು ನಿಬಂಧನೆಗಳಿವೆ.
1) ಕಿರಿಯ ಹಾಗೂ ಹಿರಿಯ ಅಶುದ್ಧಿಗಳಿಂದ ಮುಕ್ತವಾಗಿರುವುದು.
2) ಮಾಲಿನ್ಯ ನಜಸ್‌ಗಳಿಂದ ಮುಕ್ತವಾಗಿರುವುದು.
3) ಔರತ್ (ಗೌಪ್ಯ ಭಾಗ) ಮುಚ್ಚುವುದು.
4) ಖಿಬ್ಲಾಭಿಮುಖವಾಗಿರುವುದು.
5) ನಮಾಝ್‌ನ ಸಮಯವಾಗಿದೆ ಎಂದು ಅರಿತಿರುವುದು.