ಅಸ್ವಸ್ಥತೆ, ರಗಳೆ ಎಂಬಿತ್ಯಾದಿ ಅರ್ಥಗಳನ್ನು ಹೊಂದಿರುವ ನೌಸೀಸ್ (nousees) ಎಂಬ ಲಾಟೀನ್ ಪದದಿಂದ ನೋಯ್ಸ್ ಎಂಬ ಪದ ಉಧ್ಭವಿಸಿದೆ. ನೋಯ್ಸ್ ಎಂದರೆ ಶಬ್ದ ಎಂದರ್ಥ. ವಿಚಾರ ವಿನಿಯಮಯಕ್ಕಿರುವ ಪ್ರಮುಖ ಸಾಧನವಾಗಿದೆ ಧ್ವನಿ. ಆದರೆ ಅದು ಸ್ಪಷ್ಟವಾಗಿರಬೇಕು, ಅಷ್ಟೇ ಮಿತವಾಗಿರಬೇಕು. ಶಬ್ದವನ್ನು decible ಎಂಬ ಯುನಿಟ್‌ನಿಂದ ಅಳೆಯಲಾಗುತ್ತದೆ. ಮೋಟಾರ್ ವಾಹನದ ಶಬ್ದ 100 ಡಿಬಿಯೆಂದೂ, ಸಿಡಿಲಿನ ಶಬ್ದವನ್ನು 120 ಡಿ.ಬಿಯೆಂದೂ, ಸಿಡಿಮದ್ದಿನ ಶಬ್ದವನ್ನು 150 ಡಿ.ಬಿಯೆಂದೂ ಅಂದಾಜಿಸಬಹುದು. ಏಕ ಕಾಲಕ್ಕೆ 120 ಡಿಬಿ ಶಬ್ದ ಹಾಗೂ ನಿರಂತರ ವಾಗಿ 70 ಡಿ.ಬಿ ಶಬ್ದವನ್ನು ಕೇಳುವುದರಿಂದ ಹೃದಯದಂತಹಾ ಅಂಗಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಅಲ್ಲದೆ ಮಾನಸಿಕ ಒತ್ತಡಕ್ಕೂ, ಶ್ರವಣ ಶಕ್ತಿ ಕುಂದಲೂ, ಶಬ್ದಮಾಲಿನ್ಯ ಉಂಟಾಗಲೂ ಕಾರಣವಾಗಬಹುದು.
ಒಬ್ಬ ವ್ಯಕ್ತಿ ಉಂಟುಮಾಡುವ ದೊಡ್ಡ ಮಟ್ಟದ ಶಬ್ದದ ಪ್ರತಿಕೂಲ ಪರಿಣಾಮಗಳಿಗೆ ಆತ ಯಾವೆಲ್ಲಾ ರೀತಿಯಲ್ಲಿ ಹೊಣೆಗಾರನಾಗುವನು ಎಂದು ಕರ್ಮಶಾಸ್ತ್ರ ಗ್ರಂಥಗಳು ಚರ್ಚಿಸಿವೆ. ಎತ್ತರದ ಸ್ಥಳದಲ್ಲಿ ಆಡುತ್ತಿರುವ ಮಗು ಒಬ್ಬ ವ್ಯಕ್ತಿಯ ಶಬ್ದವನ್ನು ಕೇಳಿ ಬೆಚ್ಚಿ ಕೆಳಗೆ ಬಿದ್ದು ಗಾಯಗೊಂಡರೆ, ಜೋರಾಗಿ ಧ್ವನಿಯೆತ್ತಿ ಓಡಿಸುವ ವೇಳೆ ಗಾಬರಿಯಿಂದ ಓಡಿದ ಇತರರ ಸಾಕುಪ್ರಾಣಿ ಬಾವಿ ಅಥವಾ ಇತರ ಸ್ಥಳಗಳಿಗೆ ಬಿದ್ದು ಗಾಯಗೊಂಡರೆ, ಅಥವಾ ಪ್ರಾಣ ಕಳೆದುಕೊಂಡರೆ ಶಬ್ದವೆತ್ತಿದ ವ್ಯಕ್ತಿಯೇ ಅದಕ್ಕೆ ಜವಾ ಬ್ದಾರನಾಗುವನು. ಹಾಗೂ ನಿರ್ದಿಷ್ಟ ಮೊತ್ತವನ್ನು ನಷ್ಟಪರಿಹಾರವಾಗಿಯೂ ಆತ ಭರಿಸಬೇಕು. (ತುಹ್ಫಾ 9/4).
ಶೌಚಾಲಯದಲ್ಲಿ…
ಶೌಚಾಲಯಕ್ಕೆ ಪ್ರವೇಶಿಸುವ ಮೊದಲು ಹೇಳಬೇಕಾದ ದ್ಸಿಕ್ರ್ ಹೇಳಲು ಮರೆತರೆ ಶೌಚಾಲಯದಲ್ಲಿ ಮನಸ್ಸಿನಲ್ಲೇ ಪಠಿಸಬಹುದು. (ತುಹ್ಫ 1/172) ಸಾಮಾನ್ಯವಾಗಿ ದ್ಸಿಕ್ರ್‌ಗಳ ಪುಣ್ಯಲಭಿಸಬೇಕಾದರೆ ಅದು ಸ್ವಶರೀರಕ್ಕೆ ಕೇಳುವಂತೆ ನಾಲಗೆಯಿಂದಲೇ ಹೇಳಬೇಕು. ಆದರೆ ಮನಸ್ಸಿನಲ್ಲಿ ಜಪಿಸಲು ನಿರ್ದೇಶಿಸಲ್ಪಟ್ಟ ಸಂದರ್ಭದಲ್ಲಿ ಮನಸ್ಸಿನಲ್ಲಿ ಜಪಿಸುವುದೂ ಪ್ರತಿಫಲಾರ್ಹವಾಗಿದೆಯೆಂದು ಶಬ್‌ರಾಮಲ್ಲಿಸಿ (ಹಾಶಿಯತುನ್ನಿಹಾ 1/141) ಉಲ್ಲೇಖಿಸಿರು ವರು. ಶೌಚಮಾಡುವ ಸ್ಥಳದಲ್ಲಿ ಸೀನಿದರೆ ಅಲ್ ಹಂದುಲಿಲ್ಲಾಹ್ ಎಂದು ಮನಸ್ಸಿನಲ್ಲಿ ಹೇಳುವುದು ಕೂಡಾ ಇದೇ ಪಂಕ್ತಿಗೆ ಸೇರುತ್ತದೆ. (ಹಾಶಿಯತು ತರ್ಮಸಿ 1/784).
ಒಟ್ಟಿನಲ್ಲಿ ಹೃದಯದಲ್ಲಿ ಪಠಿಸುವುದು ಸಂಪೂರ್ಣವಾಗಿ ನಿಷ್ಪ್ರ ಯೋಜಕವಲ್ಲ ಎಂಬುದು ಇದರಿಂದ ಸ್ಪಷ್ಟ. ಅದನ್ನು ನಾಲಗೆಯಿಂದ ಉಚ್ಚರಿಸುವುದಕ್ಕೆ ವಿಶೇಷ ಪುಣ್ಯವಿದೆ. ಮನಸ್ಸಿನಲ್ಲೇ ಹೇಳುವ ದ್ಸಿಕ್ರ್‌ಗಳಿಗೆ ಕಂಠಪಾಟ ಮಾಡುವುದಕ್ಕಿರುವ ಪುಣ್ಯ ಲಭಿಸುತ್ತದೆಯೆಂದು ಇಬ್ನು ಹಜರ್ ಸಮರ್ಥಿಸಿರುವರು. (ಫತಾವಲ್ ಹದೀಸಿಯ್ಯ 48)
ಶೌಚಾಲಯಕ್ಕೆ ಪ್ರವೇಶಿಸುವ ಮೊದಲು ಮತ್ತು ನಂತರ ದ್ಸಿಕ್ರ್ ಹೇಳುವುದು ಸುನ್ನತ್ತಾಗಿದೆ. ಆದರೆ ಹೇಳುವ ಕ್ರಮದಲ್ಲಿ ತಪ್ಪಾದರೆ ಪ್ರತಿಫಲ ನಷ್ಟವಾಗುತ್ತದೆ. (ಶರ್‌ಹುಲ್ ಮುಅದ್ದಬ್ 2/99)
ಮಅಮೂಮ್ ನಮಾಝ್ ನಲ್ಲಿನ ಖುರ್‌ಆನ್ ಪಾರಾಯಣ, ದ್ಸಿಕ್ರ್, ತಸ್‌ಬೀಹ್ ಇತ್ಯಾದಿಗಳನ್ನು ಪಠಿಸಬೇಕಾದುದು ತನಗೆ ಮಾತ್ರ ಕೇಳಿಸುವ ರೂಪದಲ್ಲಾಗಿದೆ. ಆದರೆ ಇದಕ್ಕೆ ಅಪವಾದವೆನಿಸುವ ಕಾರ್ಯಗಳಿವೆ. ಜೋರಾಗಿ ಓದಬೇಕಾದ ನಮಾಝ್‌ಗಳಲ್ಲಿ ಇಮಾಮಿನ ಫಾತಿಹಾ ಕೇಳಿಸಿದರೆ ಕೊನೆಯಲ್ಲಿ ಆಮೀನ್ ಹೇಳುವುದು, ಸುಬ್‌ಹ್, ರಮಳಾನಿನ ಹದಿನೈದರ ನಂತರದ ವಿತ್ರ್ ಹಾಗೂ, ಸಂದಿಗ್ಧ ಸಂದರ್ಭಗಳ ಕಡ್ಡಾಯ ನಮಾಝ್‌ಗಳಲ್ಲಿ ನಿರ್ವಹಿಸುವ ಖುನೂತ್‌ಗೆ ಆಮೀನ್ ಹೇಳುವುದು, ಇಮಾಮಿನ ಪಾರಾಯಣ ಸ್ಥಗಿತಗೊಂಡಾಗ ಅದನ್ನ ನೆನಪಿಸುವುದು, ನಮಾಝ್‌ನಲ್ಲಿ ಪ್ರಮಾದ ಉಂಟಾದಾಗ ಇಮಾಮನ್ನು ಎಚ್ಚರಿಸಲು ಸುಬ್‌ಹಾನಲ್ಲಾಹ್ ಎಂದು ಹೇಳುವುದು, ಪೆರ್ನಾಳ್ ನಮಾಝ್‌ನಲ್ಲಿ ಪ್ರತ್ಯೇಕವಾಗಿ ತಕ್ಬೀರ್ ಹೇಳುವುದು, ಇಮಾಮಿನ ಖುರ್‌ಆನ್ ಪಾರಾಯಣದಲ್ಲಿ ಅಪಾಯಗಳನ್ನು ಪರಾಮರ್ಶೆಗೈದ ಸಂದರ್ಭದಲ್ಲಿ ಮೋಕ್ಷ ಬೇಡುವುದು, ನಿರೀಕ್ಷೆಯ ವಚನಗಳಲ್ಲಿ ಕಾರುಣ್ಯದ ಪ್ರಾರ್ಥನೆ ನಡೆಸುವುದು ಇತ್ಯಾದಿಗಳನ್ನು ಜೋರಾದ ಶಬ್ದದಿಂದ ಹೇಳಬೇಕು. ಇವುಗಳನ್ನು ಇಮಾಮಿನಂತೆ ಮುಅಮೂಮ್ ಕೂಡಾ ಎತ್ತರದ ಶಬ್ದದಿಂದ ಓದಬೇಕು. (ನಿಹಾಯ 1/491, ಮುಗ್‌ನಿ 1/248, ತುಹ್ಫ-ಇಬ್ನು ಕಾಸಿಂ 3/42-43, ಬೈಜೂರಿ 1/333, ಶರ್‌ಹುಲ್ ಮುಹದ್ದಬ್ 4/74)
ಇತರರು ಕೇಳಿಸದಂತೆ ಓದ ಬೇಕಾದ ಳುಹ್‌ರ್ ಅಸರ್ ನಮಾಝ್‌ಗಳಿಗೆ ಕೆಲವು ಇಮಾಮರು ಧ್ವನಿವರ್ಧಕ ಬಳಸುವುದನ್ನು ಕಾಣಬಹುದು. ಹೀಗೆ ಧಾರ್ಮಿಕ ವಿಧಿಗೆ ವಿರುದ್ಧವಾಗಿ ಫಾತಿಹಾ ಕೇಳಿದ ಮಅಮೂಮ್ ಅದಕ್ಕೆ ಆಮೀನ್ ಹೇಳಬಾರದು. (ಅತ್ತಜ್‌ರೀದ್ 1/200, ಹಾಶಿಯತು ಶರ್ವಾನಿ 2/51)
ಮಹಿಳೆ ಮತ್ತು ಶಬ್ದ
ಅನಿವಾರ್ಯ ಸಂದರ್ಭಗಳಲ್ಲಿ ಮಹಿಳೆಯ ಶಬ್ದವು ಅನ್ಯಪುರುಷರು ಕೇಳುವುದರಲ್ಲಿ ವಿರೋಧವಿಲ್ಲ. ಆದರೆ ಆಸ್ವಾದವೆನಿಸುವ ಅಥವಾ ವಿರುದ್ಧ ಲಿಂಗದೊಂದಿಗೆ ಭಾವನಾತ್ಮಕ ಆಕರ್ಷಣೆ ಉಂಟು ಮಾಡುವ ರೂಪದಲ್ಲಿದ್ದರೆ ಅದು ತಪ್ಪಾಗಿದೆ. (ತುಹ್ಫಾ 7/192, ನಿಹಾಯ 6/187, ಫುತೂಹಾ ತುಲ್ ವಹ್ಹಾಬ್ 4/121)
ಅದೇ ರೀತಿ ಅನ್ಯಪುರುಷರು ಕಾಲಿಂಗ್ ಬೆಲ್ ಮಾಡಿದಾಗ ಅಂಗೈ ಬಾಯಿಗೆ ನೇರವಾಗಿ ಇಟ್ಟು, ಅಥವಾ ಇನ್ನಿತರ ವಿಧಾನದಲ್ಲಿ ಎತ್ತರದ ಶಬ್ದವನ್ನೆತ್ತಿ ಪ್ರತಿಕ್ರಿಯಿಸುವುದು ಪುಣ್ಯಾರ್ಹವಾಗಿದೆ. (ರೌಳ ತುತ್ತಾಲಿಬೀನ್ 7/21, ಅಸ್‌ನಲ್ ಮತಾಲಿಬ್ 3/110, ಮುಗ್‌ನಿಲ್ ಮುಹ್‌ತಾಜ್ 4/210)
ಅನ್ಯಪುರುಷರು ಇರುವ ಸಂದರ್ಭದಲ್ಲಿ ಮಹಿಳೆಯು ನಮಾಝ್ ನಿರ್ವಹಿಸುವಾಗ ಫಾತಿಹಾ, ಸೂರತ್, ಆಮೀನ್ ಸ್ವಶರೀರಕ್ಕೆ ಮಾತ್ರ ಕೇಳಿಸುವ ರೂಪದಲ್ಲಿ ನಿರ್ವಹಿಸುವುದು ಸುನ್ನತ್ತಾಗಿದೆ. ಅನ್ಯ ಪುರುಷರು ಕೇಳಿಸುವಂತೆ ಶಬ್ದವನ್ನು ಎತ್ತರಿಸುವುದು ಕರಾಹತ್ ಆಗಿದೆ. ಆದರೆ ಪತಿ, ವೈವಾಹಿಕ ಸಂಬಂಧ ನಿಷಿದ್ಧವಾದವರು, ಅಥವಾ ಯಾರೂ ಇಲ್ಲದ ಸಂದರ್ಭದಲ್ಲಿ ಶಬ್ದ ಎತ್ತರಿಸಲು ಸುನ್ನತ್ ಇರುವ ಕಾರ್ಯಗಳನ್ನು ಉಚ್ಚಸ್ವರದಲ್ಲಿ ಓದುವುದಾಗಿದೆ ಪುಣ್ಯಾರ್ಹ. ಅಂತಹಾ ಸಂದರ್ಭದಲ್ಲೂ ಪುರುಷನಿಗಿಂತ ತಗ್ಗಿದ ಧ್ವನಿಯೇ ಉತ್ತಮ. (ನಿಹಾಯ 1/248, ತುಹ್ಫಾ 2/57, ಮುಗ್‌ನಿ 1/248, ಶರ್‌ಹು ಬಾಫಳ್‌ಲ್ ತರ್ಮಸಿ 2/798, 2/818820).
ನಮಾಝ್ ಅಥವಾ ನಮಾಝೇತರ ಸಂದರ್ಭಗಳಲ್ಲಿ ಅನ್ಯಪುರುಷರು ಕೇಳಿಸುವಂತೆ ಮಹಿಳೆಯು ಖುರ್‌ಆನ್ ಪಾರಾಯಣಗೈಯ್ಯುವುದು ಹರಾಂ ಎಂದು ಇಮಾಂ ಖತ್ವೀಬುಶ್ಶಿರ್ಬೀನಿ ಅಭಿಪ್ರಾಯ ತಾಳಿರುವರು. (ಮುಗ್‌ನಿ ಮುಹ್ ತಾಜ್ 1/320) ಆದರೆ ಮೇಲೆ ಸೂಚಿಸಿದಂತೆ ಅದು ಕೂಡಾ ಕರಾಹತ್ ಆಗಲಿರುವುದೆಂಬುದು ಇತರ ಮಿಕ್ಕ ವಿದ್ವಾಂಸರ ನಿಲುವು. (ಹಾಶಿಯತುಶರ್‌ವಾನಿ 1/320)
ಮಹಿಳೆಯ ಸಂಗೀತ
ಪ್ರತ್ಯೇಕವಾಗಿ ನಿಷೇಧ ಹೇರಿರುವ ವಾದ್ಯೋಪಕರಣಗಳನ್ನು ಬಳಸದೆ ಹಾಡುವ ಸಂಗೀತಕ್ಕೆ ವಿರೋಧವಿಲ್ಲ. ಆದರೆ ಮಹಿಳೆಯರ ಸಂಗೀತವನ್ನು ಅನ್ಯಪುರುಷರು ಆಲಿಸುವುದು ಕರಾಹತ್ ಆಗಿದೆ. ಆಸ್ವಾದನೆ ಅಥವಾ ಲೈಂಗಿಕ ಉತ್ತೇಜನ ಉಂಟಾಗುವುದಿದ್ದರೆ ಹರಾಂ ಆಗಿದೆ. (ತುಹ್ಫಾ 1/466, ಅಲ್ ಮಿನ್‌ಹಾಜುಲ್ ಖವೀಂ 1/78).
ಶಬ್ದ ಎಷ್ಟು ಎತ್ತರಿಸಬೇಕು…?
ತಕ್ಬೀರತುಲ್ ಇಹ್‌ರಾಂ, ಫಾತಿಹಾ, ಅತ್ತಹ್ಯಾತ್, ಸಲಾಂ ಮುಂತಾದ ನಮಾಝ್‌ನ ಮೌಖಿಕವಾದ ಕಡ್ಡಾಯ ಕಾರ್ಯಗಳನ್ನು ಪರಿಗಣಿಸಲ್ಪಡಲು ಮತ್ತು ಐಚ್ಛಿಕ ಕಾರ್ಯಗಳಾದ ಖುರ್‌ಆನ್ ಪಾರಾಯಣ, ದ್ಸಿಕ್ರ್ ಇತ್ಯಾದಿಗಳು ಫಲಾರ್ಹವಾಗಲು ಸ್ವಂತಶರೀರಕ್ಕೆ ಕೇಳಿಸುವಂತೆ ನಿರ್ವಹಿಸಬೇಕೆಂದು ಕರ್ಮಶಾಸ್ತ್ರ ಗ್ರಂಥಗಳು ನಿರ್ದೇಶಿಸುತ್ತದೆ. (ಶರಹುಲ್ ಮುಹದ್ದಬ್ 3/295, ಅಲ್ ಮಿನ್‌ಹಾಜುಲ್ ಖವೀಂ 88)
ಅಸಾಮಾನ್ಯವಾದ ಶಬ್ದಕೋಲಾಹಲಗಳಿಲ್ಲದ ಸ್ಥಳದಲ್ಲಿ ಶ್ರವಣ ಶಕ್ತಿಯಿರುವ ವ್ಯಕ್ತಿ ನಮಾಝ್‌ನಲ್ಲಿನ ಖುರ್‌ಆನ್ ಮತ್ತು ದ್ಸಿಕ್ರ್‌ಗಳನ್ನು ಸ್ವಶರೀರಕ್ಕೆ ಕೇಳಿಸುವ ರೂಪದಲ್ಲಿ ಉಚ್ಚರಿಸಬೇಕೆಂಬುದು ಧಾರ್ಮಿಕ ನಿಯಮವಾಗಿದೆ. ಇನ್ನು ಧ್ವನಿವರ್ಧಕದ ಕಾರಣಕ್ಕಾಗಿಯೋ, ಇತರ ಶಬ್ದಗಳ ಅಡಚಣೆಯಿಂದಾಗಿಯೋ, ಅಥವಾ ತನ್ನ ಶ್ರವಣ ಶಕ್ತಿಯ ದೌರ್ಬಲ್ಯದಿಂದಲೋ ಉಚ್ಚರಿಸುವ ವ್ಯಕ್ತಿಗೆ ಕೇಳಲು ಸಾಧ್ಯವಾಗದಿದ್ದರೆ ಅದು ನಮಾಝ್‌ನ ಸಿಂಧುತ್ವಕ್ಕೆ ಅಡ್ಡಿಯಾಗುವುದಿಲ್ಲ. (ಶರ್‌ಹು ಬಾಫಳ್‌ಲ್-ತರ್‌ಮಸಿ 2/613)
ಉಚ್ಚರಿಸಬೇಕಾದ ತ್ವಲಾಖ್, ಹರಕೆ ಮುಂತಾದ ಪ್ರಕ್ರಿಯೆಗಳಲ್ಲಿ ಮಧ್ಯಮ ರೂಪದ ಶ್ರವಣ ಶಕ್ತಿಯಿರುವ ವ್ಯಕ್ತಿ ಇತರ ಅಡ್ಡಿಗಳೇನೂ ಇರದಿದ್ದರೆ ಸ್ಪಷ್ಟವಾಗಿ ಕೇಳಿಸುವ ರೂಪದಲ್ಲಿ ಹೇಳಿದರೆ ಮಾತ್ರ ಅದನ್ನು ಪರಿಗಣಿಸಲ್ಪಡುವುದು. (ತುಹ್ಫ 8/6, 8/63).
ಜನಾಬತ್, ಹೈಳ್, ನಿಫಾಸ್ ಮುಂತಾದ ಹಿರಿಯ ಅಶುದ್ಧಿಯಿರುವವರು ಖುರ್‌ಆನ್ ಪಾರಾಯಣಗೈಯ್ಯುವಾಗ ಹಾಗೂ ಶೌಚಾಲಯದಲ್ಲಿ ದ್ಸಿಕ್ರ್ ಪಠಿಸುವಾಗ ಮೇಲೆ ವಿವರಿಸಿದ ರೂಪದಲ್ಲಿ ಜೋರಾದ ಶಬ್ದ ಹೊರಡುವುದರ ಮಾನದಂಡದಲ್ಲಿ ಅದನ್ನು ಕರಾಹತ್ ಎಂದು ಪರಿಗಣಿ ಸಲಾಗುತ್ತದೆ. (ತುಹ್ಫ 1/271, 1/170) ಆದ್ದರಿಂದ ಗುಣುಗುವುದು, ಸ್ವಶರೀರಕ್ಕೆ ಕೇಳದ ಹಾಗೆ ಕೇವಲ ತುಟಿ ಅಲ್ಲಾಡಿಸುವುದು ಮನಸ್ಸಿನಲ್ಲೇ ಓದುವುದು ಇತ್ಯಾದಿ ರೀತಿಯ ಓದು ತಪ್ಪೆನಿಸುವುದಿಲ್ಲ. (ನಿಹಾಯ 1/221, ಮುಗ್‌ನಿ 1/158-59).