ಜಾಬಿರುಬ್ನು ಅಬ್ದಿಲ್ಲಾ ಮತ್ತು ತ್ವಲ್ಹತುಬ್ನು ಸಹ್ಲಿಲ್ ಅನ್ಸಾರಿರಿಂದ ವರದಿ. ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು. ಒಬ್ಬ ಮುಸ್ಲಿಮನ ಪಾವಿತ್ರತೆಗೆ ಧಕ್ಕೆಯಾಗುವ ಹಾಗೂ ಅವನ ಗೌರವಕ್ಕೆ ಚ್ಯುತಿ ಬರುವ ಸಂದರ್ಭದಲ್ಲಿ (ಮಧ್ಯಪ್ರವೇಶಿಸಲು ಸಾಧ್ಯವಿದ್ದೂ) ಕಡೆಗಣಿಸಿದರೆ ಆ ವ್ಯಕ್ತಿಗೆ ಅಲ್ಲಾಹನ ಸಹಾಯ ಅಗತ್ಯವಾದ ಸಂದರ್ಭದಲ್ಲಿ ಅಲ್ಲಾಹು ಅವನನ್ನೂ ಕಡೆಗಣಿಸುವನು. ಒಬ್ಬ ಮುಸ್ಲಿ ಮನ ಪಾವಿತ್ರತೆಗೆ ಧಕ್ಕೆ ಹಾಗೂ ಅವನ ಗೌರವಕ್ಕೆ ಚ್ಯುತಿ ಬರುವ ಸಂದರ್ಭದಲ್ಲಿ ಒಬ್ಬ ಆತನ ನೆರವಿಗೆ ಧಾವಿಸಿದರೆ ಅಲ್ಲಾಹನ ನೆರವು ಅಗತ್ಯವೆನಿಸಿದ ಸಂದರ್ಭದಲ್ಲಿ ಅಲ್ಲಾಹು ಅವನಿಗೆ ನೆರವಾಗುವನು. (ಅಬೂದಾವೂದ್-4884, ಅಹ್ಮದ್ -6415)
ಮುಸ್ಲಿಮರು ವಿಶ್ವಾಸಾಚಾರಗಳಲ್ಲಿ ಸಹೋದರರಾದಂತೆ ಸಂಕಷ್ಟದ ಸಂದರ್ಭದಲ್ಲಿ ಸಂಬಂಧಿಕರೂ ಆಗಿರುವರು. ಈ ಎರಡು ಸಂಬಂಧಗಳು ಸಾಕಾರಗೊಂಡಾಗ ಅಲ್ಲಾಹ ಕೃಪೆ, ನೆರವು ಒಲಿಯಲಿದೆ ಎಂಬುದನ್ನು ಮೇಲಿನ ಹದೀಸ್ ಸೂಚಿಸುತ್ತದೆ. ತಾನು ಅಳವಡಿಸಿಕೊಂಡಿರುವ ಅದೇ ಆದರ್ಶ, ನಂಬಿಕೆ, ವಿಶ್ವಾಸಗಳನ್ನು ಪಾಲಿಸುವ ಇನ್ನೊಬ್ಬ ವ್ಯಕ್ತಿಯ ಪ್ರಾಣ, ಮಾನ, ಘನತೆ, ಸಂಪತ್ತು ಇತ್ಯಾದಿಗಳನ್ನು ಸಂರಕ್ಷಿಸುವ, ಅದಕ್ಕೆ ಅಪಾಯ ಎರಗದಂತೆ ಕಾಪಾಡುವ ಹೊಣೆಗಾರಿಕೆ ಒಬ್ಬ ವಿಶ್ವಾಸಿಯ ಮೇಲಿದೆ. ಇದು ಇಸ್ಲಾಮೀ ಸಾಹೋದರ್ಯತೆಯ ಮೂಲಭೂತ ಅಂಶವೂ ಹೌದು. ಪರಸ್ಪರ ಪ್ರೀತಿ, ಕರುಣೆ, ಸಹಾನುಭೂತಿ ಇತ್ಯಾದಿಗಳಲ್ಲಿ ವಿಶ್ವಾಸಿಗಳು ಒಂದು ಶರೀರದಂತಾಗಿರುವರು. ಯಾವುದಾದರೊಂದು ಅಂಗ ಖಾಯಿಲೆಗೆ ತುತ್ತಾದರೆ ಇತರ ಅಂಗಗಳೂ ನಿದ್ದೆಬಿಟ್ಟು, ಜ್ವರದ ಮೂಲಕ ಸ್ಪಂದಿಸುತ್ತದೆ ಎಂದಿರುವರು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಪರಸ್ಪರ ನೆರವು ನೀಡುವುದು, ಸಂಕಷ್ಟ ಕ್ಕೆ ಸ್ಪಂದಿಸುವುದು, ಅವರಿಗಾಗಿ ಮಿಡಿಯುವುದು ವಿಶ್ವಾಸಿಯ ಬಾಧ್ಯತೆಯೆಂಬುದು ಈ ಹದೀಸ್ನ ಮರ್ಮ.
ಉಮರ್ ತನ್ನ ಸೇನಾಧಿಪತಿಗಳಿಗೆ ಕಳುಹಿಸಿದ ಪತ್ರಗಳಲ್ಲಿ ನಿಮ್ಮ ಶತ್ರುಗಳಿಗಿಂತ ನಿಮ್ಮ ಪಾಪಗಳಿಗೆ ನಾನು ಹೆಚ್ಚು ಹೆದರುತ್ತೇನೆ ಎಂದಿದ್ದರು. ಪಾಪಗಳು ಸೋಲಿಗೂ, ಶತ್ರುಗಳ ಮೇಲುಗೈಗೂ ಕಾರಣವಾಗಬಹುದು. ಶತ್ರುಗಳೊಂದಿಗಿನ ಯುದ್ಧದ ಸಂದರ್ಭದಲ್ಲಿ ಸೂಕ್ತವಾದ ನೈತಿಕ ಬೆಂಬಲ, ಭೌತಿ ಕ ನೆರವು ಮತ್ತು ಆತ್ಮಸ್ಥೈರ್ಯವನ್ನು ತುಂಬದಿದ್ದರೆ ಅದು ಆತ್ಯಂತಿಕವಾಗಿ ಎದುರಾಳಿಗಳಿಗೆ ನೀಡುವ ಪರೋಕ್ಷ ನೆರವಾಗಬಹುದೆಂದೂ ಈ ಪತ್ರದಲ್ಲಿನ ಎಚ್ಚರಿಕೆಯನ್ನು ವಿದ್ವಾಂಸರು ವಿಶ್ಲೇಷಿ ಸಿರುವರು.
ಮುಸ್ಲಿಮರು ಬಿಕ್ಕಟ್ಟು ಎದುರಿಸುವ ಸಂದರ್ಭಗಳಲ್ಲಿ ಗರಿಷ್ಟ ಸಾಮರ್ಥ್ಯದಲ್ಲಿ ಅವರಿಗೆ ಬೆಂಬಲ ಸೂಚಿಸಲು ಒಗ್ಗಟ್ಟು ಪ್ರದರ್ಶಿಸುವುದು ವಿಶ್ವಾಸಿಯ ಲಕ್ಷಣವಾಗಿದೆ. ನಿರ್ಣಾಯಕ ಸಂದರ್ಭದಲ್ಲಿ ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ಹೇಗೆ ನೆರವಾಗಲು ಸಾಧ್ಯ ಎಂಬುದನ್ನು ಒಬ್ಬ ವಿಶ್ವಾಸಿ ಚಿಂತನೆ ನಡೆಸಬೇಕಾಗಿದೆ. ಪ್ರಾಕೃತಿಕ ವಿಕೋಪಗಳಿಂದ ತತ್ತರಿಸಿದಾಗ, ಆರ್ಥಿಕ ಮುಗ್ಗಟ್ಟಿನಿಂದ ಜೀವನ ನಿರ್ವಹಣೆ ದುಸ್ತರವಾದಾಗ, ರೋಗಗಳಿಂದ ಅಸಹಾಯಕತೆಗೆ ಸಿಲುಕಿದಾಗ ಅವರ ನೆರವಿಗೆ ಧಾವಿಸುವುದು, ಅದಕ್ಕಾಗಿ ನುರಿತ ಸೇವಾ ತಂಡಗಳನ್ನು ಸನ್ನದ್ಧಗೊಳಿಸುವುದು ಇತ್ಯಾದಿಗಳೆಲ್ಲಾ ಇದೇ ಹದೀಸ್ನ ವ್ಯಾಪ್ತಿಗೆ ಬರುತ್ತದೆ.
ಅದೇ ರೀತಿ ಸಂಕಷ್ಟದ, ಅಪಾಯದ ಸಂದರ್ಭಗಳಲ್ಲಿ ವಿಮುಖತೆ ತೋರುವುದರ ಬಗ್ಗೆ ಈ ಹದೀಸ್ನಲ್ಲಿ ಆಕ್ಷೇಪವನ್ನೂ ವ್ಯಕ್ತಪಡಿಸಲಾಗಿದೆ. ಇಂತಹಾ ಸಂದರ್ಭಗಳಲ್ಲಿ ಅಂತರವನ್ನು ಕಾಯ್ದುಕೊಳ್ಳುವುದು ಕಾಪಟ್ಯವೆಂದೂ ಅಂತಹಾ ಕಪಟಿಗಳು ಎದುರಿಸುವ ಶಿಕ್ಷೆಯ ಬಗ್ಗೆಯೂ ಹದೀಸ್ ಗಳಲ್ಲಿ ವಿವರಿಸಲಾಗಿದೆ. ತನ್ನ ಬೆಂಬಲ ನೆರವು ಪ್ರಾರ್ಥನೆ ನೊಂದವರಿಗೆ, ಸಂಕಷ್ಟದಲ್ಲಿರುವವರಿಗೆ ಸದಾ ಅಗತ್ಯವಿದೆಯೆಂಬುದನ್ನು ಮನಗಾಣುವುದು ಒಬ್ಬ ವಿಶ್ವಾಸಿಯ ಲಕ್ಷಣವಾಗಿದೆ.
ಇಂದು ಜಾಗತಿಕವಾಗಿ ಮನುಷ್ಯನ ಹಕ್ಕು ಮತ್ತು ಘನತೆಯ ಬದುಕನ್ನು ಕಿತ್ತುಕೊಳ್ಳಲಾಗುತ್ತಿದೆ. ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಶತ್ರುಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಇಂತಹಾ ಪರಿ ಸ್ಥಿತಿಯಲ್ಲಿ ಅವರಿಗಾಗಿ ಮಿಡಿಯದ, ಪ್ರಾರ್ಥಿಸದ, ಒಗ್ಗಟ್ಟು ಪ್ರದರ್ಶಿಸದ ಸ್ವಾರ್ಥಭರಿತ ಮನೋಭಾವವು ವಿಶ್ವಾಸಿಗಳಿಗೆ ಒಮ್ಮೆಯೂ ಭೂಷಣವಲ್ಲ. ಅಲ್ಲಿನ ಪರಿಸ್ಥಿತಿಯನ್ನು ಅವ ಲೋಕಿಸುವುದು, ಚಾರಿತ್ರಿಕ ಹಿನ್ನಲೆಯನ್ನು ಅರಿಯುವುದು, ಅದನ್ನು ನಮ್ಮ ಮಕ್ಕಳಿಗೆ ತಿಳಿಸುವುದು, ಅವರಿಗಾಗಿ ಪ್ರಾರ್ಥಿಸುವುದು ಇತ್ಯಾದಿ ಕಾರ್ಯಗಳು ಕೂಡಾ ನೊಂದವರಿಗೆ ನಾವು ಸೂಚಿಸುವ ಬೆಂಬಲವೇ ಆಗಿದೆ. ನಮ್ಮ ಸಾಮರ್ಥ್ಯದಲ್ಲಿನ ಪರಿಣಾಮಕಾರಿ ಪ್ರತಿರೋಧವೂ ಇದಾಗಿದೆ. ಹೀಗಾದರೆ ಮಾತ್ರ ಸಂದಿಗ್ಧತೆಯ ಸಂರ್ದದಲ್ಲಿ ಅಲ್ಲಾಹನ ನೆರವು ನಮಗೆ ಲಭಿಸೀತು. ಇಲ್ಲದಿದ್ದರೆ ಅಂತಹಾ ಸಂದರ್ಭದಲ್ಲಿ ನಾವು ಅನಾಥರಾಗಬೇಕಾದೀತು.
ಶತ್ರುವಿನ ಹಿಡಿತದಿಂದ ನಿರಪರಾಧಿಗಳನ್ನು ಬಿಡಿಸಲು ಶಸ್ತ್ರಗಳೇ ಬೇಕೆಂದಿಲ್ಲ. ಕೆಲವೊಮ್ಮೆ ಪ್ರಾರ್ಥನೆ ಗಳೂ ಶಸ್ತ್ರಕ್ಕಿಂತ ಪ್ರಬಲವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ನಬಿ ಸ್ವಲ್ಲಲ್ಲಾ ಹು ಅಲೈಹಿ ವಸಲ್ಲಮರು ಸೂಚಿಸಿದ ವಿಷಯವೂ ಹೌದು. ವಿಶ್ವದೆಲ್ಲೆಡೆ ಬಿಕ್ಕ ಟ್ಟಿನಿಂದ ಬಿಡುಗಡೆಗಾಗಿ ಹವಣಿಸುವ ವಿಶ್ವಾಸಿಗಳ ಮೋಚನೆಗೆ ಪ್ರಾರ್ಥನೆಗಿಂತ ಪರಿಣಾಮಕಾರಿ ಹಾದಿ ಇನ್ನೊಂದಿಲ್ಲ. ಫೆಲೆಸ್ತೀನ್ನಂತಹಾ ಪುಟ್ಟ ದೇಶಗಳು ರಕ್ತಸಿಕ್ತಗೊಂಡಿರುವಾಗ ಸಾಮ್ರಾಜ್ಯ ಶಾಹಿ ಶಕ್ತಿಗಳ ಪರ ನಿಲ್ಲುವ ಮುಸ್ಲಿಂ ನಾಮಧಾರಿ ರಾಷ್ಟ್ರಗಳಿಗೂ ಈ ಹದೀಸ್ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂಬುದನ್ನು ಬೇರೆಯಾಗಿ ಹೇಳಬೇಕಾದ ಅಗತ್ಯವಿಲ್ಲ.