ಸಮಾಜ ಕಟ್ಟುವ ನಾಯಕರು ಬೇಕು

ಸಂಪಾದಕೀಯ
ಸಮಾಜ ಕಟ್ಟುವ ನಾಯಕರು ಬೇಕು
ನಮ್ಮ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಾಣಲು ಹುಟ್ಟಿಕೊಂಡ ಸಂಘಟನೆಗಳ ಲೆಕ್ಕವೂ ಸಣ್ಣದೇನಲ್ಲ. ಸಂಘಟನೆಗಳ ಹೆಸರಲ್ಲಿಯೂ ಅಲ್ಲದೆಯೂ ಸಮಾಜದ ಸುಧಾರಕರಾಗಿ, ಮಾರ್ಗದರ್ಶಕರಾಗಿ, ನಾಯಕರಾಗಿ ಹಲವರ ಮುಖಗಳನ್ನು ಈ ಸಮಾಜವು ಕಂಡಿದೆ. ಹಲವರ ಭಾಷಣಗಳಿಗೆ ಮಾರುಹೋಗಿದೆ. ಹಲವರ ಚಿಂತನೆಗಳಿಗೆ ತಲೆಬಾಗಿಸಿದೆ. ಹಲವರ ಆವೇಶಗಳಲ್ಲಿ ತನ್ನನ್ನು ಹಂಚಿಕೊಂಡಿದೆ.
ಸಮಾಜದ ನಾಯಕರಾಗಿ ಬೆಳೆದು ಬಂದವರಿಂದ, ಅವರು ಕಟ್ಟಿದ ಸಂಘಟನೆಗಳಿಂದ, ಸಮಾಜದಲ್ಲಿ ಇತ್ತೀಚಿನ ವರ್ಷಗಳಲ್ಲಿ ಏನು ಬದಲಾವಣೆಗಳಾಗಿವೆ ಎನ್ನುವ ಪ್ರಶ್ನೆಗೆ ಆಯಾ ಸಂಘಟನೆಗಳಿಗೂ ಅವುಗಳ ನಾಯಕರಿಗೂ ಉತ್ತರಗಳಿರಬಹುದು. ಸಮಾಜವು ತನ್ನಲ್ಲಿ ತಾನು ಮಾಡಿಕೊಂಡ ಪರಿವರ್ತನೆಗಳನ್ನು, ಅಥವಾ ಪರಿಸರದ ಒತ್ತಡಗಳಿಗೆ ಸಿಲುಕಿ ಉಂಟಾದ ಬದಲಾವಣೆಗಳನ್ನು, ಸಾಧನೆಗಳನ್ನು ತನ್ನ ಸಾಧನೆಗಳೆಂದು ಹೇಳಿಕೊಳ್ಳಲು ಒಬ್ಬರಿಗೊಬ್ಬರು ಪೈಪೋಟಿ ನಡೆಸಬಹುದು. ಆದರೆ ಸಮಾಜದಲ್ಲಿ ಸುಧಾರಣೆಯ, ಪ್ರಗತಿಯ, ಪರಿವರ್ತನೆಯ ಹೆಸರಿನಲ್ಲಿ ಏನು ನಡೆಯುತ್ತಿದೆ ಮತ್ತು ಏನು ನಡೆಯಬೇಕು ಎನ್ನುವ ಮುಕ್ತ ಮತ್ತು ಆಳ ಚಿಂತನೆ ಅಗತ್ಯವಿದೆ.
ಈ ದಿಕ್ಕಿನಲ್ಲಿ ನಾವು ಚಿಂತನೆ ಹರಿಸುವಾಗ ನಮ್ಮ ಬದುಕಿನ ವಾಸ್ತವ ಚಿತ್ರಣದತ್ತ ನಾವು ಕಣ್ಣು ಹರಿಸುವುದು ಮುಖ್ಯವೆನಿಸುತ್ತದೆ. ಭಾರತ ವಿವಿಧ ಧರ್ಮ, ಜಾತಿ, ಪಂಗಡ, ಭಾಷೆ, ಸಂಸ್ಕೃತಿಗಳ ಬೀಡು ಎನ್ನುವುದು ಒಂದು ಭಾಷಣದ ತುಣುಕಲ್ಲ; ಬದಲು ಅದು ನಮ್ಮೆಲ್ಲರ ಬದುಕಿನ ಅನುಭವ.
ಬದುಕು ರೂಪಿಸಲು ಬೆಳಗ್ಗೆದ್ದು ಹೊರಟು ರಾತ್ರಿ ಮನೆಗೆ ಮರಳುವಾಗ ನಾವು ಈ ವೈವಿಧ್ಯತೆಗಳ ಭಾಗವಾಗಿ ಮನೆ ತಲುಪಿರತ್ತೇವೆ. ವಿವಿಧ ಧರ್ಮ, ಜಾತಿ, ಸಂಸ್ಕೃತಿ, ವಿಶ್ವಾಸ ಆಚಾರಗಳನ್ನು ಹೊಂದಿದವರ ವಾಹನಗಳಿಗೆ ಹತ್ತಿ ಇಳಿದು, ಅವರೊಂದಿಗೆ ನಕ್ಕು ನಲಿದು, ವ್ಯವಹಾರ ನಡೆಸಿ, ಅವರಿವರ ಹೋಟೇಲುಗಳಿಗೆ ಹೊಕ್ಕು, ಹೊಟ್ಟೆ ತುಂಬಿಸಿಕೊಂಡು, ಕಿಸೆಯಿಂದ ಅವರಿವರಿಗೆ ಕೊಟ್ಟು, ಅವರಿಂದ ಇಸಿದು, ಎಲ್ಲರೊಳಗೊಬ್ಬನಾಗಿ ಮನೆ ತಲುಪುತ್ತೇವೆ. ಪ್ರತಿದಿನ ನಮ್ಮ ದೇಹದ ನರನಾಡಿಗಳಲ್ಲಿ ಹರಿದಾಡುವ ರಕ್ತವು ಈ ಎಲ್ಲಾ ಪ್ರಕ್ರಿಯೆಗಳ ನಡುವೆ ಎಲ್ಲರಿಂದ ಬೇಕಾದುದನ್ನು ಪಡೆದು ಹರಿದು ಕೊಂಡಿರುತ್ತದೆ. ಇದು ಬದುಕು. ಯಾವ ಸಂಘಟನೆ ಇರಲಿ ನಾಯಕನಿರಲಿ; ಮೊದಲಾಗಿ ಆ ಸಂಘಟನೆ, ನಾಯಕನ ಸಮಾಜದ ಪ್ರತಿಯೊಬ್ಬರಿಗೂ ಎಲ್ಲರೊಳಗೊಬ್ಬನಾಗಿ ಬದುಕಲು ಮಾರ್ಗದರ್ಶನ ನೀಡಬೇಕು. ಪ್ರೀತಿಯೆಂಬುದು ಬದುಕಿನ ಆತ್ಮ. ಪ್ರೀತಿ ಇಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ. ಪ್ರೀತಿ ಇದ್ದರೆ ಮಾತ್ರ ಒಬ್ಬನಿಗೆ ಬದುಕಲು ಸಾಧ್ಯ. ಪ್ರೀತಿ ಎಲ್ಲರೊಂದಿಗೆ ಒಂದೇ ತೆರನಲ್ಲದಿದ್ದರೂ ಸಮಾಜದಲ್ಲಿ ಸುಂದರವಾದ ಬದುಕನ್ನು ನಡೆಸಲು ಬೇಕಾದ ಪ್ರೀತಿಯೊಂದು ಎಲ್ಲರಲ್ಲೂ ಇರಲೇಬೇಕು. ಬದುಕು ಸಾಗಿಸುವ ಈ ಪ್ರೀತಿಯನ್ನು ಸಂಘಟನೆ. ನಾಯಕ ಎಲ್ಲರಿಗೆ ಕಲಿಸಿಕೊಡಬೇಕು. ಆಗ ಮಾತ್ರ ಆತ ನಾಯಕನಿರುತ್ತಾನೆ. ಯಾವ ಸಂಘಟನೆ, ನಾಯಕ ಸಮಾಜವನ್ನು ಒಡೆದು, ಪರಸ್ಪರ ದ್ವೇಷವನ್ನು ಹರಡಿ, ಸಮಾಜದಲ್ಲಿ ಹಲವರನ್ನು ಬೇರ್ಪಡಿಸಿ, ಹಲವರಿಂದ ಬೇರ್ಪಟ್ಟು, ಪರಸ್ಪರ ಅಂತರ ಸೃಷ್ಟಿಸಿ ಬದುಕುವ ರೀತಿಯನ್ನು ಕಲಿಸಿಕೊಡುವನೋ ಆತ ಸಮಾಜದ ನಾಯಕನಲ್ಲ. ಅಂತಹ ನಾಯಕರಿರುವ ಸಂಘಟನೆಗಳು ಒಂದು ಸಮಾಜವನ್ನು ಕಟ್ಟುವ, ಬೆಳೆಸುವ, ಪ್ರಗತಿಯೆಡೆಗೆ ಸಾಗಿಸುವ ಸಂಘಟನೆಯಲ್ಲ.
ದ್ವೇಷದ ಕಿಡಿಯನ್ನು ಹೊತ್ತಿಸಿ ಸ್ವಾರ್ಥವನ್ನು ಮೆರೆಯುವ ಜನರ ನಡುವೆ ಪ್ರೀತಿಯ, ಮಾನವೀಯತೆಯ ತಣ್ಣೀರನ್ನು ಹರಿಸಿ ದ್ವೇಷವನ್ನು ನಂದಿಸಿ ಬಿಡಲು ನಾಯಕನಿಗೆ ಸಾಧ್ಯವಾಗಬೇಕು. ಸಮಾಜದ ಅಭಿವೃದ್ಧಿಯನ್ನು ಬಯಸುವ ನಾಯಕರು, ಸಂಘಟನೆಗಳು ಮಾಡಬೇಕಾದ ಕೆಲಸವದು. ದ್ವೇಷದ ಕಿಡಿ ತೀವ್ರವಾದಂತೆ ಅದನ್ನು ನಂದಿಸಲು ಹೊಸ ತಂತ್ರಗಳನ್ನು ಹೆಣೆಯಬೇಕು. ಹೊರತು ವಿರುದ್ಧ ದಿಕ್ಕಿನಿಂದ ಇನ್ನೊಂದು ಕಿಡಿಯನ್ನು ಹೊತ್ತಿಸಿ ಬಿಡುವುದಿಲ್ಲ. ಅದು ನಾಶದ ದಾರಿ. ಇಂತಹ ಪ್ರತೀಕಾರದ ನಡೆಗಳು ಸಮಾಜವನ್ನು ನಾಶ ಕೊಯ್ಯಬಹುದಷ್ಟೇ.
ಭಾರತದಲ್ಲಿ ಮುಸ್ಲಿಂ ಸಮಾಜಕ್ಕೆ ಮಾರ್ಗದರ್ಶನ ನೀಡಿದ, ನಾಯಕತ್ವ ವಹಿಸಿದ ಆಧ್ಯಾತ್ಮಿಕ ನಾಯಕರು, ಉಲಮಾಗಳು ಸೃಷ್ಟಿಕರ್ತನಿಗೆ ನಿಕಟವಾಗಿ ಬದುಕಿದರು. ಜೊತೆಗೆ ಸೃಷ್ಟಿಗಳೆಲ್ಲರೊಂದಿಗೆ ಪ್ರೀತಿಯ, ಸಹಿಷ್ಣುತೆಯ, ಸೌಹಾರ್ದತೆಯ ಬದುಕನ್ನು ನಡೆಸಿದರು. ಕರುಣೆಯುಳ್ಳವರನ್ನು ಕರುಣಾಳು ಕರುಣಿಸುವನು; ಭೂಮಿಯಲ್ಲಿರುವವರಿಗೆ ನೀವು ಕರುಣೆ ತೋರಿರಿ, ಭೂಮ್ಯಾಕಾಶಗಳ ಅಧಿಪತಿ ನಿಮಗೆ ಕರುಣೆ ನೀಡುವನು ಎಂದು ಅವರು ಬೋಧಿಸಿದರು. ಪ್ರವಾದಿ ಸಲ್ಲಲ್ಲಾಹು ಅಲೈಹಿ ವ ಸಲ್ಲಮರು ಕಲಿಸಿಕೊಟ್ಟ ಬೋಧನೆಯಿದು. ಈ ಮಾರ್ಗದರ್ಶನ ಮಾತ್ರ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯಬಹುದು. ಗತಕಾಲದ ಆಧ್ಯಾತ್ಮ ಪುರುಷರು, ಸಮಾಜವನ್ನು ಮುನ್ನಡೆಸಿದ ನಾಯಕರು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಹಿಜರಿ ಪೂರ್ವ ಮತ್ತು ಹಿಜರಿ ನಂತರದ ಬದುಕನ್ನು, ಹೋರಾಟಗಳನ್ನು, ವಿವಿಧ ಧರ್ಮಾನುಯಾಯಿಗಳೊಂದಿಗಿನ ನಿಲುವುಗಳನ್ನು ತಿಳಿಯದವರಲ್ಲ. ಅದನ್ನೆಲ್ಲ ಮನಗಂಡೇ ಈ ಸುಂದರ ಭಾರತವನ್ನು ಕಟ್ಟುವಲ್ಲಿ ಅವರು ಪಾಲುದಾರರಾದರು. ಆದರೆ ಇಂದು ಸಮಾಜದ ಸುಧಾರಣೆಯ, ಪ್ರಗತಿಯ ಹೆಸರಿನಲ್ಲಿ ನಡೆಯಬೇಕಾದುದು ನಡೆಯುತ್ತಿಲ್ಲ. ಆವೇಶಭರಿತ ದ್ವೇಷ ಭಾಷಣಗಳಿಂದ ಚಪ್ಪಾಳೆ ಗಿಟ್ಟಿಸಬಹುದು. ಆದರೆ ಸಮಾಜವನ್ನು ಕಟ್ಟಿ ಬೆಳೆಸಿ ಉಳಿಸಲು ಪ್ರೀತಿಯನ್ನು ಹರಡುವ ನಾಯಕರೇ ಬೇಕು.

Author

One Response

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors