ಕರ್ನಾಟಕ ಮಣ್ಣಿನಲ್ಲಿ ಜ್ಞಾನ ಕ್ರಾಂತಿಯ ಅಲೆಯನ್ನು ಸೃಷ್ಟಿಸಿದ, ಪ್ರಬುದ್ದವಾದ ನ್ಯಾಯ ತೀರ್ಪುಗಳ ಮೂಲಕ ಸಮಾಜಕ್ಕೆ ಭದ್ರವಾದ ನಾಯಕತ್ವವನ್ನು ನೀಡಿದ, ನಾಡು ಕಂಡ ಅಪ್ರತಿಮ ವಿದ್ದಾಂಸರಾಗಿದ್ದಾರೆ ಶೈಖುನಾ ಬೇಕಲ್ ಇಬ್ರಾಹೀಂ ಮುಸ್ಲಿಯಾರ್. ಉತ್ತರ ಕೇರಳದ ಬೇಕಲ್‌ನಲ್ಲಿ ಸುದೀರ್ಘ ನಲ್ವತ್ತು ವರ್ಷಕ್ಕಿಂತ ಹಚ್ಚು ಸೇವೆಗೈದದ್ದರಿಂದ ಬೇಕಲುಸ್ತಾದ್ ಎಂದು ಅರಿಯಲ್ಪಟ್ಟರೂ ವಾಸ್ತವದಲ್ಲಿ ಅವರ ಹುಟ್ಟು, ವಾಸ್ತವ್ಯ ಕರ್ನಾಟಕದಲ್ಲಿ. ಸಮಕಾಲೀನ ಯುಗದಲ್ಲಿ ಕರುನಾಡು ಕಂಡ ಮೇರು ವಿದ್ವಾಂಸ ಯಾರು ಎಂದು ಕೇಳಿದರೆ ಉತ್ತರ ಸ್ಪಷ್ಟ. ಅದುವೇ ಬೇಕಲುಸ್ತಾದ್.
ಬೇಕಲುಸ್ತಾದ್ ಇಲ್ಲದ ಸಮಾಜದಲ್ಲಿ ಅಕ್ಬರಶಃ ಅನಾತಥ್ವವು ಕಾಡುತ್ತಿದೆ. ‘ವಿದ್ವಾಂಸರ ಮರಣವು ಜಗತ್ತಿನ ಮರಣ’ ಎಂಬ ಆಪ್ತ ವಾಕ್ಯದ ಒಳಾರ್ಥವು ನನಗೆ ಸರಿಯಾಗಿ ತಿಳಿದದ್ದು ಮೊನ್ನೆ ಸೆಪ್ಟಂಬರ್ 24ರ ಗುರುವಾರ, ಶೈಖುನಾ ಬೇಕಲುಸ್ತಾದ್ ವಫಾತಾದ ವೇಳೆಯಲ್ಲಾಗಿತ್ತು. ಅಂದು ವಿದ್ವತ್ ಚಕ್ರವರ್ತಿಯೊಬ್ಬರ ವಿದಾಯದಿಂದ ನಾಡು ದುಃಖಿಸಿದ್ದು ಸ್ವಲ್ಪ ಮಾತ್ರವಲ್ಲ. ಅವರ ಜನಾಝ ಸಂದರ್ಶನಕ್ಕೆ ಹರಿದು ಬಂದ ಸಾವಿರಾರು ಮಂದಿಯ ಕಣ್ಣೀರಕೋಡಿ ಹರಿದಿತ್ತು. ತನ್ನೂರು ಮರಿಕ್ಕಳದ ಮಸ್ಜಿದ್ ಪ್ರಾಂಗಣದಲ್ಲಿ ಅವರ ಶರೀರವನ್ನು ಖಬ್ರ್ ನೊಳಕ್ಕಿಳಿಸುವಾಗ ಸೇರಿದ್ದ ಜನ ಸಂದಣಿಯ ಕಣ್ಣಲ್ಲಿ ಕಣ್ಣೀರು ಇಣುಕಲು ಕಾರಣವೂ ಇತ್ತು. ಅಲ್ಲಿ ಕೇವಲ ಅವರ ಶರೀರವನ್ನು ಮಾತ್ರ ದಫನ ಮಾಡಿದ್ದಾಗಿರಲಿಲ್ಲ. ಅವರ ಜೊತೆಗೆ ಅರಿವಿನ ಸಾಗರವನ್ನೇ ಆರಡಿ ಮಣ್ಣಿಗಿಳಿಸಲಾಗಿತ್ತು. ‘ವಿದ್ವಾಂಸರ ಮರಣದ ಮೂಲಕ ಅರಿವನ್ನು ಅಲ್ಲಾಹು ಎತ್ತುತ್ತಾನೆ’ ಎಂಬ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ನುಡಿಯ ಸಾಕ್ಸಾತ್ಕಾರದ ನೇರ ಚಿತ್ರಣವು ಅಲ್ಲಿ ಕಾಣುತ್ತಿತ್ತು.
ಝೈದಿಬ್ನ್ ಸಾಬಿತ್ ರಳಿಯಲ್ಲಾಹು ಅನ್‌ಹು ಎಂಬ ಪ್ರಸಿದ್ದರಾದ ಸ್ವಹಾಬಿ, ಹಲವು ಭಾಷೆಗಳು ತಿಳಿದಿದ್ದ, ವಹ್ಯ್ ಬರೆದಿಡುತ್ತಿದ್ದ ಪ್ರಸ್ತುತ ಮಹ್ಮಾತರು ವಫಾತಾದಾಗ ಇಬ್ನ್ ಅಬ್ಬಾಸ್ ರಳಿಯಲ್ಲಾಹು ಅನ್‌ಹುರವರು ಹೇಳಿದ ಮಾತನ್ನು ಸಈದಿಬ್ನುಲ್ ಮುಸಯ್ಯಬ್ ರಳಿಯಲ್ಲಾಹು ಅನ್‌ಹುರವರು ವಿವರಿಸುತ್ತಿದ್ದಾರೆ. ಅಂದು ಇಬ್ನು ಅಬ್ಬಾಸ್ ರಳಿಯಲ್ಲಾಹು ಅನ್‌ಹುರವರು ಹೇಳಿದರು; “ಜ್ಞಾನವು ಹೇಗೆ ಎತ್ತಲ್ಪಡುವುದು ಎಂದು ತಿಳಿಯಬೇಕಾದರೆ ಇಂದು ನೋಡಿ. ಹೇರಳ ಜ್ಞಾನವನ್ನು ಇಲ್ಲಿ ದಫನ ಮಾಡಲಾಗುತ್ತಿದೆ”. ಅಬೂಹುರೈರಾ ರಳಿಯಲ್ಲಾಹು ಅನ್‌ಹುರವರು ಈ ರೀತಿ ಹೇಳಿದ್ದರು; “ಸಮುದಾಯದ ದೊಡ್ಡ ವಿದ್ವಾಂಸರೊಬ್ಬರ ಮರಣವು ಇಂದು ನಡೆಯಿತು. ಇಬ್‌ನ್ ಅಬ್ಬಾಸ್ ರಳಿಯಲ್ಲಾಹು ಅನ್‌ಹುರವರು ಅಲ್ಲಾಹನು ಅದಕ್ಕೆ ಬದಲಿ ನೀಡುವನು ಎಂಬ ನಿರೀಕ್ಷೆ ನಮಗಿದೆ.’’ ಬೇಕಲುಸ್ತಾದರ ದಫನ ಸಮಯದಲ್ಲಿ ಮೇಲಿನ ಮಾತುಗಳು ನನ್ನ ನೆನಪಿಗೆ ಬಂದಿತ್ತು. ಆದರೆ ಬೇಕಲುಸ್ತಾದರಿಗೆ ಬದಲಿ ಯಾರು? ಅವರ ಸ್ಥಾನ ತುಂಬುವವರಾರು? ಎಂಬ ಚಿಂತೆಯೇ ನಮಗಿರುವುದು. ಇಲ್ಲ, ಬೇಕಲುಸ್ತಾದರಿಗೆ ಸರಿಸಾಟಿ ಅವರು ಮಾತ್ರ. ಸಮುದಾಯಕ್ಕೆ ಅರಿವು ಮತ್ತು ನಾಯಕತ್ವದ ಯಾವ ಅಗತ್ಯ ಬಂದಾಗಲೂ ಎಲ್ಲರೂ ಹೆಚ್ಚು ಚಿಂತಿತರಾಗದೆ ಯಾವುದಕ್ಕೂ ನಾವು ಬೇಕಲುಸ್ತಾದರನ್ನು ಕಂಡು ಪರಿಹರಿಸೋಣ ಎಂಬ ಮಾತು ಬರುತ್ತಿತ್ತು. ಆ ಮೂಲಕ ಅಲ್ಲಿ ಅಂತಿಮ ಪರಿಹಾರವಾಗುತ್ತಿತ್ತು. ಇಂದು ಈ ದೊಡ್ಡ ನಷ್ಟವನ್ನು ಹೇಗೆ ತಾನೇ ತುಂಬುವುದು?! ತನ್ನ ಮರಣದ ಮೂಲಕ ವಿದ್ವಾಂಸ ಜಗತ್ತನ್ನು ಅವರು ತಟ್ಟಿ ಎಬ್ಬಿಸಿದಂತಿದೆ. ನಿದ್ರೆಯು ಸಾಕಿನ್ನು, ಪ್ರತಿಯೊಬ್ಬರೂ ಎಚ್ಚರವಾಗಿರಿ, ಅರಿವಿನಾಳಕ್ಕಿಳಿಯಿರಿ ಎಂಬ ಮೌನ ಸಂದೇಶವನ್ನು ಅವರ ಜನಾಝವು ನಮ್ಮೊಂದಿಗೆ ಸಾರಿ ಸಾರಿ ಹೇಳುವಂತಿತ್ತು.
ಕಳೆದ ಶತಮಾನ ಕಂಡ ಶ್ರೇಷ್ಠ ಸಯ್ಯಿದ್, ವಿದ್ವಾಂಸ ಶೈಖುನಾ ತಾಜುಲ್ ಉಲಮಾರು ವಫಾತಾದಾಗ ಅವರ ಬಗ್ಗೆ ಮೌಲಿದೊಂದನ್ನು ರಚಿಸಬೇಕೆಂದು ಸಯ್ಯಿದ್ ಉಜಿರೆ ಮಲ್‌ಜಅ ತಂಙಳ್ ರವರು ತೀವ್ರ ಒತ್ತಾಯ ಪಡಿಸಿದ್ದರು. ನನ್ನಿಂದಾಗದು ಎಂದು ಎಷ್ಟು ಹೇಳಿದರೂ ಅವರ ಒತ್ತಾಯ ನನ್ನನ್ನು ಲೇಖನಿ ಹಿಡಿಯುವಂತೆ ಮಾಡಿತ್ತು. ತಾಜುಲ್ ಉಲಮಾರ ಪ್ರಥಮ ವಾರ್ಷಿಕ ಸ್ಮರಣೆಗೆ ಹದಿನೈದು ದಿನವಿರುವಾಗ ಅವರು ಹೇಳಿದರು. ಆಂಡ್‌ನ ದಿನ ಪಾರಾಯಣ ಮಾಡಲು ರೆಡಿಯಾಗಿರಬೇಕು ಎಂಬ ಕಡ್ಡಾಯದಿಂದ ಹೇಗೂ ಸಣ್ಣ ಮೌಲಿದ್ ಅರಬಿ ಕೃತಿಯೊಂದನ್ನು ರಚಿಸಿದ್ದೆ. ಮಲ್‌ಜಮಲ್‌ಜಅನಲ್ಲಿ ನಡೆದ ತಾಜುಲ್ ಉಲಮಾರ ಪ್ರಥಮ ಆಂಡ್‌ನಲ್ಲಿ ವಿದ್ವಾಂಸರ ಸಮ್ಮುಖ ಅದರ ಪಾರಾಯಣವೂ ನಡೆದಿತ್ತು. ಆದರೆ ಅದನ್ನು ಎಲ್ಲರಿಗೂ ಸಿಗುವಂತೆ ಪ್ರಕಟಿಸುವ ಧೈರ್ಯವಿರಲಿಲ್ಲ.
ಆ ಸಂದರ್ಭ ಇದನ್ನು ಬೇಕಲುಸ್ತಾದರಿಗೆ ತೋರಿಸಿ ಅಭಿಪ್ರಾಯ ಪಡೆಯೋಣ ಎಂದು ಭಾವಿಸಿ ಹೇಗೋ ಧೈರ್ಯ ಮಾಡಿ ಉಸ್ತಾದರ ಮನೆಗೆ ಮೌಲಿದ್ ಪ್ರತಿಯನ್ನು ಕೊಂಡು ಹೋಗಿದ್ದೆ. ವಿಷಯವರಿತ ಉಸ್ತಾದರು ಪ್ರತಿಯನ್ನು ಕೈಯ್ಯಲ್ಲಿ ಪಡೆದುಕೊಂಡು ಪ್ರಥಮವಾಗಿ ಅವರು ಹೇಳಿದ ಮಾತು ನನಗೆ ಈಗಲೂ ನೆನಪಿದೆ. ‘ವಮಿನಲ್ ವರಇ ಅನ್ ತತ್‌ರುಕಲ್ ಮದ್‌ಹ ಕಮಾ ತತ್ರುಕುಝ್ಝುಮ್ಮ ಆಕ್ಷೇಪಗಳನ್ನು ಕೈ ಬಿಡುವಂತೆ ಒ ಬ್ಬ ವ್ಯಕ್ತಿಯ ಮದ್ಹ್ ಹೇಳುವುದನ್ನೂ ಕೈ ಬಿಡುವುದು ಸೂಕ್ಷತೆಯಾಗಿದೆ’ ಎಂದರ್ಥ ಬರುವ ಮಾತನ್ನು ಅವರು ಹೇಳಿದಾಗ ಈ ಮೌಲಿದ್ ಪ್ರಕಾಶನ ಅಸಾಧ್ಯ ಎಂದು ಭಾವಿಸಿದ್ದೆ. ಉಸ್ತಾದರ ಅನುಮತಿ ಸಿಕ್ಕರೆ ಮತ್ತೆ ಹಿಂದಿರುಗಿ ನೋಡಬೇಕೆಂದಿಲ್ಲ ಎಂದು ಭಾವಿಸಿ ಅತ್ತ ತೆರಳಿದ್ದು. ಆದರೆ ಉಸ್ತಾದರ ಆರಂಭದ ಈ ಮಾತು ಅವರ ಅನಿಷ್ಟವನ್ನು ಸೂಚಿಸುವಂತಿತ್ತು. ಬಳಿಕ ಅವರು ಹೇಳಿದರು; ‘’ಓ, ಇದು ತಾಜುಲ್ ಉಲಮಾರ ಮೌಲಿದ್ ತಾನೇ? ಅವರ ಮೌಲಿದ್ ಮಾಡಲೇ ಬೇಕಾದುದು. ಅವರದ್ದನ್ನು ಮಾಡದಿದ್ದರೆ ಇನ್ಯಾರ ಮೌಲಿದ್ ರಚಿಸುವುದು?” ಹೀಗೆ ಪ್ರೋತ್ಸಾಹದ ಮಾತುಗಳನ್ನಾಡತೊಡಗಿದರು. ಅವರ ಮಾತುಗಳು ಮೌಲಿದ್ ಕೃತಿಯ ಪ್ರಕಾಶನಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ನಂತರ ನಮ್ಮನ್ನು ಒಂದುವರೆ ಘಂಟೆಗಳ ಕಾಲ ಕುಳ್ಳಿರಿಸಿ ತಾಜುಲ್ ಉಲಮಾರ ಅರಿವಿನ ಸೇವೆಯ ಬಗ್ಗೆ ಅದ್ಬುತವಾಗಿ ವಿವರಿಸತೊಡಗಿದರು. ಕರಾಮತ್‌ಗಿಂತ ಹೆಚ್ಚು ಈ ಮೌಲಿದ್‌ನಲ್ಲಿ ಅವರ ಇಲ್ಮ್ಗೆ ಸಲ್ಲಿಸಿದ ಸೇವೆ ಮತ್ತು ಅವರ ಅರಿವಿನಾಳದ ಬಗ್ಗೆ ದಾಖಲಾಗಲಿ ಎಂದರು. ಪ್ರಸ್ತುತ ಕಿತಾಬಿಗೆ ಉಸ್ತಾದರ ನಿರ್ದೇಶನದಂತೆ ತಾಜುಲ್ ಉಲಮಾರ ಇಲ್ಮ್ ನ ಬಗ್ಗೆಯಿರುವ ದೀರ್ಘ ಒಂದು ಉಲ್ಲೇಖವನ್ನು ಹೆಚ್ಚುವರಿಯಾಗಿ ಸೇರಿಸಲಾಯಿತು ಕೂಡಾ. ಹತ್ತು ನಿಮಿಷದ ಅಂದಾಜಿನಲ್ಲಿದ್ದ ನಮ್ಮೊಂದಿಗೆ ಒಂದುವರೆ ಗಂಟೆ ವ್ಯಯಿಸಿದ ಆ ಮಹಾನ್ ಉಸ್ತಾದರು ನಮಗೆ ನೀಡಿದ ಪ್ರಚೋದನೆ, ದುಆಗಳು ಬದುಕಿನಲ್ಲಿ ಅನುರ್ಘ್ಯುವಾದ ಅನುಭೂತಿಯನ್ನು ನೀಡಿತ್ತು. ವಿವಿಧ ಅಗತ್ಯಗಳಿಗೆ ಇನ್ನೂ ಕೆಲವು ಬಾರಿ ಉಸ್ತಾದರ ಬಳಿ ಹೋದಾಗಲೆಲ್ಲಾ ಅವರ ಅನೇಕ ಅನುಭವಗಳು, ಅರಿವಿನ ಪ್ರವಾಹಗಳೆಲ್ಲಾ ಪುಸ್ತಕ ರೂಪದಲ್ಲಿ ಹೊರ ಬರಬೇಕೆಂಬ ಆಸೆಯನ್ನು ಅವರು ಪ್ರಕಟಿಸಿದ್ದರು. ಅವರ ಮುಂದೆ ಒಂದು ತಂಡವು ಹೋಗಿ ತಪಸ್ಸು ಕುಳಿತಿದ್ದರೆ ಅವರ ವಿಶಾಲವಾದ ಅರಿವನುಭವಗಳ ಬರಹ ರೂಪವು ಈ ಸಮುದಾಯಕ್ಕೆ ಮಹಾ ವರದಾನವಾಗಿ ಲಭಿಸುತ್ತಿತ್ತೇನೋ? ಆದರೆ ಅದು ನಮಗೆ ಮಹಾ ನಷ್ಟವಾಗಿ ಪರಿಣಮಿಸಿತು. ಉಸ್ತಾದರ ಆ ಆಸೆಯನ್ನು ಈಡೇರಿಸಲಾಗದ ಬೇಸರ ತೀವ್ರವಾಗಿ ಕಾಡುತ್ತಿದೆ.
ಯಾವ ಸಮಯದಲ್ಲೂ ಇಲ್ಮ್ನ ಬಗ್ಗೆ ಮಾತ್ರ ಚರ್ಚಿಸುತ್ತಿದ್ದ ಉಸ್ತಾದರು ಕಳೆದ ಐದು ದಶಕಗಳಿಂದ ಜ್ಞಾನದ ಜ್ಯೋತಿರ್ಗೋಳವಾಗಿ ಇಲ್ಲಿ ತುಂಬಿ ನಿಂತಿದ್ದರು. ತಾಜುಲ್ ಫುಖಹಾ- ಕರ್ಮಶಾಸ್ತಜ್ಞರ ಕಿರೀಟ- ವೆಂಬ ಗೌರವ ನಾಮದಿಂದ ಅರಿಯಲ್ಬಟ್ಟ ಅವರು ಅರಿವಿನ ಎಲ್ಲಾ ಶಾಖೆಗಳಲ್ಲೂ ತುಂಬಿದ ಕೊಡವಾಗಿದ್ದರು. ಅಲ್ಲಾಹನು ಅವರ ಸ್ಥಾನಮಾನಗಳನ್ನು ಉನ್ನತ್ತಿಗೇರಿಸಲಿ. ಅವರ ಬರಕತ್ ನಿಂದ ನಮಗೆ ಉಪಕಾರಪ್ರದವಾದ ಧಾರಾಳ ಅರಿವನ್ನು ನೀಡಿ ಅನುಗ್ರಹಿಸಲಿ, ಆಮೀನ್.