ಸಂಪಾದಕೀಯ
ದಿನದಿಂದ ದಿನಕ್ಕೆ ನಮಗೆ ಹೊಸ ಬಗೆಯ ಸಂಕಷ್ಟ, ತೊಂದರೆಗಳು ಎದುರಾಗುತ್ತವೆ. ಬಿಕ್ಕಟ್ಟೊಂದರಿಂದ ಬಿಡುಗಡೆ ಪಡೆಯುತ್ತಿದ್ದಂತೆ ಮತ್ತೊಂದು ಸಮಸ್ಯೆ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತದೆ. ಸಾಲದ ಹಿಡಿತದಿಂದ ಬಿಡಿಸಿಕೊಂಡಾಗ ಆಸ್ಪತ್ರೆಗೆ ಹಣ ಒಟ್ಟುಗೂಡಿಸಬೇಕಾದ ಅನಿವಾರ್ಯತೆ ಬರುತ್ತದೆ. ಸಂಬಳ ಕೈ ಸೇರಿದಾಗ ಅದಕ್ಕಿಂತಲೂ ದೊಡ್ಡ ಮೊತ್ತದ ಖರ್ಚು ನಮಗಾಗಿ ಕಾಯುತ್ತಿರುತ್ತದೆ. ಈ ದಿನದ ಕಷ್ಟ ಒಂದು ನಮೂನೆಯಾದ್ದಾದರೆ ನಾಳಿನದ್ದು ಇನ್ನೊಂದು ನಮೂನೆ ಯದ್ದು. ಮುಂದಿನ ವಾರ ಈ ಎಲ್ಲಾ ರಗಳೆಗಳಿಂದ ಮುಕ್ತಿ ಪಡೆಯೋಣ ಎಂದುಕೊಂಡರೆ ಅಲ್ಲಿನ ಬವಣೆಗಳೇ ಇನ್ನೊಂದು ತೆರನಾದದ್ದು.
ಇನ್ನು ಸುಖದ ಕಥೆಯೂ ಇದಕ್ಕಿಂತ ಭಿನ್ನವಿಲ್ಲ. ದಿನಕ್ಕೆ ಅದೆಷ್ಟು ಆರಾಮದ ಸಮಯಗಳು, ಸಂತೋಷದ ಕ್ಷಣಗಳು, ನಿರಾಳದ ನಿಮಿಷಗಳು, ಅನುಕೂಲದ ಸಂದರ್ಭಗಳು ನಮಗೆ ಲಭಿಸಿಲ್ಲ ಹೇಳಿ..? ಆದರೆ ಒತ್ತಡದ, ಸಂಕಷ್ಟದ ನಡುವೆ ಖುಷಿಯನ್ನು ಆಸ್ವಾದಿಸುವಲ್ಲಿ, ಸುಖವನ್ನು ಸವಿಯುವಲ್ಲಿ ವಿಫಲರಾಗುತ್ತೇವೆ. ಅಂತಹಾ ಸಂದರ್ಭಗಳನ್ನು ಅಷ್ಟೇ ಬೇಗ ಮರೆತು ಹೋಗುತ್ತೇವೆ. ಸವಿದ ಸುಖಕ್ಕಾಗಿ ಶುಕ್ರ್ ಸಲ್ಲಿಸಲು ಸೋತು ಬಿಡುತ್ತೇವೆ.
ನಾವು ಯಾವ ಸಮಯದಲ್ಲಿ ತೊಂದರೆಯನ್ನು ಅನುಭವಿಸುತ್ತೇವೋ ಆ ಸಮಯವನ್ನು ದೂಷಿಸುತ್ತೇವೆ. ವಾಸ್ತವದಲ್ಲಿ ಈ ಸಂಕಷ್ಟ, ರಗಳೆ, ತೊಂದರೆಗಳೆಲ್ಲಾ ರಸ್ತೆಯಲ್ಲಿರುವ ಹೊಂಡಗಳಂತೆ. ಒಂದಷ್ಟು ಮುಂದುವರಿದಾಗ ರಸ್ತೆ ವಿಶಾಲ ವಾಗುತ್ತದೆ. ಪಯಣ ಸುಗಮಗೊಳ್ಳುತ್ತದೆ. ಮತ್ತೆ ಅದೇ ರೀತಿಯ ಕಳಪೆ ರಸ್ತೆಯ ಪ್ರದರ್ಶನವಾಗುತ್ತದೆ. ಬದುಕು ಕೂಡಾ ಹೀಗೇ.. ಅಲ್ಲಿ ನೂರಾರು ಹೊಂಡ, ಅಡೆತಡೆಗಳಿವೆ. ಮುಂದೆ ಸಾಗಿದಂತೆ ಬದುಕು ಮುಗ್ಗರಿಸುತ್ತದೆ. ಇನ್ನು ಕೆಲವೊಮ್ಮೆ ಸರಾಗವಾಗಿ ಚಲಿಸುತ್ತದೆ. ಮತ್ತೆ ಹೊಂಡಕ್ಕೆ ಬಿದ್ದು ಪರದಾಡುವ ಪರಿಸ್ಥಿತಿ ಬರುತ್ತದೆ. ಇದು ಮತ್ತೆ ಮರುಕಳಿಸುತ್ತಲೇ ಇರುತ್ತದೆ. ಇದ್ಯಾವುದೂ ಶಾಶ್ವತವಲ್ಲ.
ನೀನು ಕಾಲವನ್ನು (ಆಕ್ಷೇಪಿಸದಿರು) ಸುಮ್ಮನೆ ಬಿಡು. ಕಾಲ ಅದೇನು ಬಯಸುತ್ತದೋ ಅದು ನಡೆಯಲಿ. ಅಲ್ಲಾಹನ ವಿಧಿಯಲ್ಲಿ ನೀನು ತೃಪ್ತನಾಗು ಎಂದಿರುವರು ಇಮಾಂ ಶಾಫಿಈ. ಮುಂದುವರಿಯುತ್ತಾ ಅವರು; ಕಾಲದಲ್ಲಿ ಎದುರಾಗುವ ವಿಪತ್ತುಗಳ ಮುಂದೆ ಚಂಚಲಗೊಳ್ಳದಿರು. ಕಾರಣ ಇಹಲೋಕದ ವಿಪತ್ತುಗಳೇನೂ ಶಾಶ್ವತವಲ್ಲ ಎನ್ನುತ್ತಾರೆ. ಸಮಸ್ಯೆ, ಸಂಧಿಗ್ಧತೆ ಕಾಡುವಾಗ ನಾವು ಸಂಕಟ ಕ್ಕೊಳಗಾಗುತ್ತೇವೆ. ಎಲ್ಲವೂ ಮುಗಿದೇ ಹೋಯಿತೆಂದು ಭಾವಿಸುತ್ತೇವೆ. ಎಲ್ಲಾ ನಿರೀಕ್ಷೆಗಳನ್ನೂ ಕಳೆದುಕೊಳ್ಳುತ್ತೇವೆ. ಅಂತಹದ್ದೊಂದು ಕೆಟ್ಟ ಅನುಭವ ನಮಗೆ ಕೊರೋನ ಕೊಟ್ಟಿದೆ. ಆದರೆ ನಾವು ಮತ್ತೆ ಅಲ್ಲಿಂದ ಎದ್ದು ಬಂದಿದ್ದೇವೆ. ಅಲ್ಲಿನ ಪ್ರತಿಕೂಲ ಪರಿಸ್ಥಿತಿಯನ್ನು ಗೆದ್ದಿದ್ದೇವೆ. ಖಂಡಿತಾ ಕಷ್ಟದ ಜತೆಗೆ ಸುಖವಿದೆ ಎಂದು ಖುರ್‌ಆನ್ ಪುನರಾವರ್ತಿಸಿದೆ. ಕೊರೋನ ಕಾಲಕ್ಕೆ ಕೆಲವು ಕೋಟ್ಯಾಧಿಪತಿಗಳು ದಿವಾಳಿಗಳಾದರೆ, ದಿವಾಳಿಗಳಾಗಿದ್ದ ಅನೇಕ ಮಂದಿ ಆರ್ಥಿಕವಾಗಿ ಪ್ರಬಲರಾಗಿದ್ದಾರೆ. ತಮ್ಮ ಪ್ರತಿಭೆ, ಕೌಶಲ್ಯ, ಸೃಜನಶೀಲತೆಗಳನ್ನು ಬಳಸಿ ಬದುಕಿನಲ್ಲಿ ಆರ್ಥಿಕವಾದ ಬದಲಾವಣೆವನ್ನು ತಂದುಕೊಂಡ ಅನೇಕರಿದ್ದಾರೆ. ಎಲ್ಲವೂ ಕಳೆದುಕೊಂಡು ಬದುಕಿನಲ್ಲಿ ಕಂಗಾಲಾಗಿ ಕೂತವರೂ ಇದ್ದಾರೆ.
ಹಗಲುಗಳ ಬಳಿಕವೊಂದು ಇರುಳು ಇದ್ದೇ ಇರುತ್ತದೆ. ಎಲ್ಲಾ ಇರುಳುಗಳನ್ನು ಮರುದಿನದ ಬೆಳಗು ಒದ್ದೋಡಿಸಿಯೇ ತೀರುತ್ತದೆ. ಇದು ಜಗದ ನಿಯಮ. ಇಲ್ಲಿನ ಸುಖ-ದುಃಖ, ನೋವು-ನಿರಾಳ, ರೋಗ-ಆರೋಗ್ಯ, ಉತ್ಥಾನ-ಪತನ, ಅನುಕೂಲ-ಪ್ರತಿಕೂಲ ಯಾವುದಕ್ಕೂ ಸುದೀರ್ಘ ಅವಧಿಯಿರುವುದಿಲ್ಲ. ನಮ್ಮ ಬದುಕಿನ ಹಾಗೆಯೇ ಎಲ್ಲವೂ ತಾತ್ಕಾಲಿಕ.
ಆದರೆ ನಾವು ಬದುಕಿನಲ್ಲಿ ಒಂದಷ್ಟು ದಾವಂತಕ್ಕೆ ಬೀಳುತ್ತೇವೆ. ಸದಾ ಸುಖವಾಗಿರಲು ಬಯಸುತ್ತೇವೆ. ನಾಳೆಗಾಗಿ ಇಂದಿನ ಒಳಿತು, ಖುಷಿಗಳನ್ನು ಕಳೆದುಕೊಳ್ಳುತ್ತೇವೆ. ಅದಕ್ಕಾಗಿ ಎಂತಹಾ ಕಠಿಣ ಕೆಲಸಗಳಿಗೂ ಮುಂದಾಗುತ್ತೇವೆ. ಸಂಪಾದನೆಯ ಗುಂಗಿನಲ್ಲಿ ಆರೋಗ್ಯ, ಆರಾಧನೆ, ಮನೆ ಮಂದಿ ಎಲ್ಲರನ್ನೂ ಮರೆಯುತ್ತೇವೆ. ಬದುಕಿನ ನಿರ್ವಹಣೆಗೆ ಸಂಪಾದನೆ ಬೇಡವೆಂದಲ್ಲ. ಅದು ಅನಿವಾರ್ಯವೇ. ಆದರೆ ಸುಖದ ಹಿಂದೆ ಬಿದ್ದು ಸಂಪಾದನೆ, ಹಣವೇ ಸರ್ವಸ್ವವೆನಿಸಿಕೊಳ್ಳುವುದು ಎಷ್ಟು ಸರಿ.? ಧಾವಂತವಿಲ್ಲದ ದುಡಿಮೆ ಜೀವನ ನಿರ್ವಹಣೆಯ ಮೇಲೆ ಯಾವ ಪರಿಣಾಮವನ್ನೂ ಬೀರದು, ಕಠಿಣವಾದ ಪರಿಶ್ರಮ ಉಪಜೀವನಕ್ಕೆ ಎಷ್ಟು ಅಗತ್ಯವೋ ಅದಕ್ಕಿಂತ ಹೆಚ್ಚಿನದ್ದನ್ನೇನೂ ನೀಡದು ಎನ್ನುತ್ತಾರೆ ಇಮಾಂ ಶಾಫಿಈ. ಅರ್ಥಗರ್ಭಿತವಾದ ನುಡಿರತ್ನವಿದು. ಇಂದು ಇದೇ ಪರಿಸ್ಥಿತಿಯನ್ನು ಅನುಭವಿಸುವವರಿದ್ದಾರೆ. ಕಠಿಣ ಪರಿಶ್ರಮದಿಂದ ಬೇಕಾದಷ್ಟು ಸಂಪಾದಿಸುತ್ತಾರೆ. ಆದರೆ ಅವರ ಆದಾಯದ ಪ್ರಮಾಣವೆಷ್ಟೋ ಅಷ್ಟೇ ಅವರ ಖರ್ಚಿನ ಪಟ್ಟಿಯೂ ಬೆಳೆದಿರುತ್ತದೆ.
ಮನುಷ್ಯ ಯಾವಾಗ ತನ್ನ ಪಾಲಿಗೆ ಬಂದದ್ದು ಪಂಚಾಮೃತ ವೆಂದು ಬಗೆದು ತೃಪ್ತನಾಗುತ್ತಾನೋ ಆಗ ಅವನ ಬಾಳು ಬಂಗಾರವಾಗುತ್ತದೆ. ಇಲ್ಲದಿದ್ದರೆ ಎಲ್ಲವು ಇದ್ದೂ ಬರಿದಾಗುತ್ತಾನೆ. ಆದ್ದರಿಂದಲೇ ಇರುವುದರಲ್ಲಿ ಸಂತೃಪ್ತಗೊಳ್ಳುವ ಹೃದಯವಿದ್ದರೆ ನೀವು ಇಡೀ ಜಗತ್ತನ್ನೇ ಪಡೆದಿರುವ ವ್ಯಕ್ತಿಗೆ ಸಮಾನ ವೆಂದಿರುವರು ಇಮಾಂ ಶಾಫಿಈ ರಳಿಯಲ್ಲಾಹು ಅನ್‌ಹು.