ತಾಜುಶ್ಶರೀಅಃ ಶೈಖುನಾ ಅಲೀ ಕುಂಞಿ ಮುಸ್ಲಿಯಾರ್ ಶಿರಿಯ

ಪವಿತ್ರ ಪಂಡಿತ ಪರಂಪರೆಯ ಮತ್ತೊಂದು ಕೊಂಡಿ ಕಳಚಿದೆ. ನಡೆನುಡಿಗಳಲ್ಲಿ, ವೇಷಭೂಷಣದಲ್ಲೆಲ್ಲ ಹಳೇಕಾಲದ ಸಾತ್ವಿಕ ಪರಂಪರೆಯ ಪ್ರತೀಕದಂತಿದ್ದ ಮಹಾವಿದ್ವಾಂಸ ತಾಜುಶ್ಶರೀಅಃ ಶೈಖುನಾ ಅಲೀ ಕುಂಞಿ ಮುಸ್ಲಿಯಾರ್ ಶಿರಿಯ ಅಲ್ಲಾಹನ ವಿಧಿಗೆ ಓಗೊಟ್ಟಿದ್ದಾರೆ. ದಕ್ಷಿಣ ಭಾರತದ ಅತ್ಯುನ್ನತ ಉಲಮಾ ಒಕ್ಕೂಟವಾದ ’ಸಮಸ್ತ’ದ ಅತ್ಯಂತ ಹಿರಿಯ ಸದಸ್ಯರಾಗಿರುವ, ಪ್ರಸ್ತುತ ಅದರ ಉಪಾಧ್ಯಕ್ಷರೂ, ಜಾಮಿಅ ಸಅದಿಯ್ಯಾ ವಿದ್ಯಾಸಂಸ್ಥೆಯ ಉಪಾಧ್ಯಕ್ಷರೂ ಕೆಲವು ಮೊಹಲ್ಲಾಗಳ ಖಾಝಿಗಳೂ ಆಗಿರುವ ತಾಜುಶ್ಶರೀಅಃ ತಮ್ಮ 87ನೇ ವರ್ಷದಲ್ಲಿ ಕೊನೆಯುಸಿರೆಳೆದರು. ಕೆಲವು ದಿನಗಳಿಂದ ಅವರು ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಗಡಿನಾಡು ಕಾಸರಗೋಡಿನ ಕುಂಬಳೆ ಸಮೀಪ ಒಳಯಂ ಎಂಬಲ್ಲಿ ಅಬ್ದುರ‍್ರಹ್ಮಾನ್ ಹಾಜಿ-ಮರಿಯಮ್ಮ ದಂಪತಿಯ ಪುತ್ರನಾಗಿ 1935ರಲ್ಲಿ ಜನಿಸಿದ ಉಸ್ತಾದ್, 5ನೇ ತರಗತಿ ತನಕ ಕನ್ನಡದಲ್ಲಿ ಶಾಲಾ ಶಿಕ್ಷಣ ಪಡೆದರು. ಜೊತೆಯಲ್ಲಿ ಮೂಸಾ ಮುಕ್ರಿ ದಂಪತಿಯ ಬಳಿ ಪ್ರಾಥಮಿಕ ಧಾರ್ಮಿಕ ಶಿಕ್ಷಣವನ್ನೂ ಪಡೆದರು. ಹದಿನಾಲ್ಕನೇ ವಯಸ್ಸಿನಲ್ಲಿ ದರ್ಸ್ ಶಿಕ್ಷಣಕ್ಕೆ ತೆರಳಿದ ಅವರು ಪೊಸೋಟ್, ತಳಿಪರಂಬ ಮೊದಲಾದ ಕಡೆ ಪ್ರೌಢ ಧಾರ್ಮಿಕ ಶಿಕ್ಷಣವನ್ನು ಪಡೆದರು. ಸಮಸ್ತದ ಉನ್ನತ ನಾಯಕರಾಗಿದ್ದ ಕೋಟುಮಲ ಅಬೂಬಕರ್ ಮುಸ್ಲಿಯಾರ್, ಶಂಸುಲ್ ಉಲಮಾ ಇ.ಕೆ. ಅಬೂಬಕರ್ ಮುಸ್ಲಿಯಾರ್ ಮೊದಲಾದವರು ಪ್ರಮುಖ ಗುರುಗಳು. ದರ್ಸ್‌ನಲ್ಲಿ ಹಿರಿಯ ಮುತಅಲ್ಲಿಮರಾಗಿದ್ದ ವಲಿಯುಲ್ಲಾಹಿ ಸಿಎಂ ಮಡವೂರು, ಇಕೆ ಹಸನ್ ಮುಸ್ಲಿಯಾರ್ ಮೊದಲಾದವರ ಬಳಿಯೂ ಓದಿದ್ದಾರೆ. 1963ರಲ್ಲಿ ಉತ್ತರಪ್ರದೇಶದ ದಯೂಬಂದ್ ನಲ್ಲಿ ಎಂಎಫ್ ಡಿ ಪದವಿ ಪಡೆದ ಬಳಿಕ ಕಾಸರಗೋಡು, ಕಣ್ಣೂರು ಜಿಲ್ಲೆಯ ವಿವಿಧ ಮೊಹಲ್ಲಾಗಳಲ್ಲಿ ಮುದರ್ರಿಸರಾಗಿ ಸೇವೆ ಸಲ್ಲಿಸಿದ್ದರು. ಒಂದು ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲೂ ಮುದರ್ರಿಸರಾಗಿದ್ದ ಅವರು, ಕಳೆದ ಎರಡು ದಶಕಗಳಿಂದ ಪೊಯ್ಯತ್ತಬೈಲಿನಲ್ಲಿ ಮುದರ್ರಿಸರಾಗಿ ಸೇವೆಸಲ್ಲಿಸುತ್ತಾ ಬಂದಿದ್ದಾರೆ. ಆರು ದಶಕಗಳ ದರ್ಸ್ ಸೇವೆಯಿಂದ ಅಸ್ಸಯ್ಯಿದ್ ಕುಂಬೋಲ್ ತಂಙಲ್, ಮರ್ಹೂಮ್ ಬೇಕಲ್ ಉಸ್ತಾದ್, ಬೆಳ್ಳಿಪಾಡಿ ಉಸ್ತಾದ್ ಸೇರಿದಂತೆ ಸಾವಿರಾರು ಉನ್ನತ ಉಲಮಾಗಳನ್ನು ಅವರು ಸಮಾಜಕ್ಕೆ ಸಮರ್ಪಿಸಿದ್ದಾರೆ.
1964ರಲ್ಲಿ ಸಮಸ್ತದ ಕೇಂದ್ರ ಸದಸ್ಯರಾಗಿದ್ದ ಕಾಂಞಂಗಾಡ್ ಅಬೂಬಕರ್ ಹಾಜಿಯವರ ಪುತ್ರಿ ಮರಗೂರು ಮರ್ಯಂರವರನ್ನು ವಿವಾಹವಾದ ಉಸ್ತಾದ್, ಮಾವನ ಮರಣದಿಂದ ತೆರವಾದ ಸಮಸ್ತದ ಸದಸ್ಯತ್ವಕ್ಕೆ ಆಯ್ಕೆಯಾಗಿ ದ್ದರು. ೧೯೮೯ರ ಸಮಸ್ತ ವಿಭಜನೆಯ ಪೂರ್ವದಲ್ಲೇ ಅದರ ಸದಸ್ಯರಾಗಿದ್ದ ಉಲಮಾಗಳ ಪೈಕಿ ನಮ್ಮೊಂದಿಗಿದ್ದ ಇಬ್ಬರೇ ನಾಯಕರಲ್ಲಿ ಒಬ್ಬರಾಗಿದ್ದರು ತಾಜುಶ್ಶರೀಅಃ. ಇನ್ನೊಬ್ಬರೆಂದರೆ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್. ತಾಜುಲ್ ಉಲಮಾ ನಾಯಕತ್ವದಲ್ಲಿ ಗುರುತಿಸಲ್ಪಟ್ಟಿದ್ದ ಅವರು 2014ರಿಂದ ಸಮಸ್ತದ ಉಪಾಧ್ಯಕ್ಷರಾಗಿದ್ದರು.
40 ವರ್ಷಗಳ ಹಿಂದೆ ತಮ್ಮ ಊರಿನಲ್ಲಿ ’ಲತೀಫಿಯಾ’ ಎಂಬ ವಿದ್ಯಾ ಸಂಸ್ಥೆಯನ್ನು ಕಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಅವರು, ಪ್ರಸ್ತುತ ಅದರ ಅಧ್ಯಕ್ಷರಾಗಿದ್ದರು. ಉನ್ನತ ಉಲಮಾ ಸಾದಾತುಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರು ಪ್ರವಾದಿ ಪ್ರೇಮ ಹಾಗೂ ಆಧ್ಯಾತ್ಮಿಕತೆ ಯಲ್ಲಿ ಹೆಚ್ಚು ಒಲವು ಹೊಂದಿದ್ದರು. ಆಕರ್ಷಕ ವಾಗ್ಮಿಯೂ ಆಗಿದ್ದ ಅವರು ಶೋತೃಗಳಲ್ಲಿ ಪ್ರವಾದಿ ಪ್ರೇಮ ಹಾಗೂ ಆಧ್ಯಾತ್ಮಿಕ ಚಿಂತನೆಯನ್ನು ಹಚ್ಚುತ್ತಿದ್ದರು. ಆಕರ್ಷಕವಾದ ವೈಯಕ್ತಿಕ ನಡವಳಿಕೆಗಳಿಂದಲೂ ಜನಾನುರಾಗಿಯಾಗಿದ್ದರು. ಉಲಮಾ ಸಮೂಹ ಅವರನ್ನು ‘ತಾಜುಶ್ಶರೀಅಃ’ (ಶರೀಅತ್ತಿನ ಕಿರೀಟ) ಎನ್ನುವ ಬಿರುದಿನೊಂದಿಗೆ ಗೌರವಿಸಿತ್ತು.
ಸಾಂಪ್ರದಾಯಿಕ ಪಳ್ಳಿ ದರ್ಸ್, ಆತ್ಮೀಯ ಉಪದೇಶಗಳು ಸೇರಿದಂತೆ ಇಸ್ಲಾಮೀ ಪರಂಪರೆಯ ಸಾಕ್ಷಿಪ್ರಜ್ಞೆಯಂತಿದ್ದ ಉಸ್ತಾದರ ವಿದಾಯವು ಸಮುದಾಯಕ್ಕೆ ಬಹು ದೊಡ್ಡ ನಷ್ಟವೇ ಸರಿ. ಅಲ್ಲಾಹು ಅವರಿಗೆ ಪಾರತ್ರಿಕ ಔನ್ನತ್ಯವನ್ನು ಅನುಗ್ರಹಿಸಲಿ, ಆಮೀನ್.

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors