ತಾಜುಲ್ ಉಲಮಾ ಶೈಖುನಾ ಅಸ್ಸಯ್ಯಿದ್ ಅಬ್ದುರ‍್ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್

ಹಿಜರಿ 1341-1435

ತಾಜುಲ್ ಉಲಮಾ ಶೈಖುನಾ ಅಸ್ಸಯ್ಯಿದ್ ಅಬ್ದುರ‍್ರಹ್ಮಾನ್ ಲ್ ಬುಖಾರಿ ಉಳ್ಳಾಲ ತಂಙಳ್

ಸಮಕಾಲೀನ ಮುಸ್ಲಿಂ ಜಗತ್ತಿನ ಅಗ್ರೇಸರ ವಿದ್ವಾಂಸ, ಅಹ್ಲುಸ್ಸುನ್ನಃದ ಅಮರ ನಾಯಕ, ಉಲಮಾ ಲೋಕಕ್ಕೆ ಕಿರೀಟ ಪ್ರಾಯರಾದ ಅಗ್ರಗಣ್ಯ ನೇತಾರ, ಆಧ್ಯಾತ್ಮಿಕ ನಭೋಮಂಡಲದ ಮಿನುಗು ತಾರೆ ಶೈಖುನಾ ತಾಜುಲ್ ಉಲಮಾ ಕೀರ್ತಿಶೇಷರಾದರು. ಹಿಜ್‌ರಾ 1341ರ ರಬೀಉಲ್ ಅವ್ವಲ್ 25 ರಂದು ಭೂಲೋಕ ಕಂಡ ಪ್ರವಾದಿ ಕುಟುಂಬದ ಪುನೀತ ಸದಸ್ಯ 1435ರ ರಬೀಉಲ್ ಅವ್ವಲ್ 30 ರಂದು 95ನೇ ಪ್ರಾಯದಲ್ಲಿ ಧನ್ಯ ಬದುಕಿಗೆ ವಿದಾಯ ಹೇಳಿದರು. ಒಂದು ಪುರುಷಾಯುಸ್ಸನ್ನಿಡೀ ಕರಾವಳಿ ಕನ್ನಡದ ತಟದಲ್ಲಿ ಕಳೆದು ‘ಉಳ್ಳಾಲ ತಂಙಳ್’ ಎಂದೇ ಜನಪ್ರಿಯರಾದ ಶೈಖುನಾ ತಾಜುಲ್ ಉಲಮಾರ ವಿದಾಯದಿಂದ ಸುನ್ನೀ ಜಗತ್ತಿಗೆ, ವಿಶೇಷತಃ ದಕ್ಷಿಣ ಭಾರತಕ್ಕೆ ಅಕ್ಷರಶಃ ಅನಾಥ ಭಾವನೆ ಅಪ್ಪಳಿಸಿದೆ.

ಕಿರೀಟ ಕಳಕೊಂಡ ಉಲಮಾ ಜಗತ್ತು

ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರಳಿಯಲ್ಲಾಹು ಅನ್ ಹು) ಎಂಬ ಮಹಾನ್ ಸಂತಪುರುಷರ ಸಾನಿಧ್ಯದಿಂದ ಅನುಗ್ರಹೀತವಾದ, ಆಧ್ಯಾತ್ಮಿಕ ಜಗತ್ತಿನ ನಕ್ಷೆಯಲ್ಲೊಂದು ಸ್ನಾನ ಹಡೆದ ಅನುಗ್ರಹೀತ ಪ್ರದೇಶ ಉಳ್ಳಾಲ. ಮದನೀ ತಂಙಳ್ ರಳಿಯಲ್ಲಾಹು ಅನ್‌ಹುರವರ ಆಗಮನದಿಂದ ವಿಳಾಸವೇ ಇಲ್ಲದಿದ್ದ ಉಳ್ಳಾಲ ಪ್ರಖ್ಯಾತಿಗೆ ಬಂತು. ಆ ಮಹತ್ಸನ್ನಿಧಿಗೆ ಸೇವಾ ದೀಕ್ಷೆಯೊಂದಿಗೆ ಆರು ದಶಕಗಳ ಹಿಂದೆ ಆಗಮಿಸಿದ ಇನ್ನೋರ್ವ ಸಯ್ಯಿದ್, ಉಳ್ಳಾಲದ ಖ್ಯಾತಿಯ ಕಿರೀಟಕ್ಕೆ ಹೊಸ ಗರಿ ಮೂಡಿಸಿದ ಶೈಖುನಾ ತಾಜುಲ್ ಉಲಮಾ ಸಯ್ಯಿದ್ ಅಬ್ದುರ‍್ರಹ್ಮಾನ್ ಅಲ್‌ಬುಖಾರಿ, ಉಳ್ಳಾಲ ತಂಙಳ್ ಇನ್ನಿಲ್ಲ. ಮುಸ್ಲಿಂ ಸಮುದಾಯಕ್ಕೆ ಸಮರ್ಥ ಸಾರಥ್ಯವನ್ನು ನೀಡುತ್ತಾ ಬಂದಿರುವ ಶೈಖುನಾ ತಾಜುಲ್ ಉಲಮಾ ಸಾರ್ಥಕ ಜೀವನದ ತೊಂಬತ್ತನಾಲ್ಕು ವರ್ಷದೊಂದಿಗೆ, ಸಾರ್ಥಕ ಸೇವೆಯ ಅರವತ್ತೈದನೇ ವರ್ಷವನ್ನು ಪೂರೈಸಿ ಧನ್ಯ ಬದುಕಿಗೆ ವಿದಾಯ ಹೇಳಿದ್ದಾರೆ.
ಆರು ಶತಮಾನಗಳ ಹಿಂದೆ, ಹಿಜ್‌ರಾ 800ರಲ್ಲಿ ರಷ್ಯಾದ ‘ಬುಖಾರಾ’ದಿಂದ ಭಾರತದ, ಕೇರಳದ ಕಣ್ಣೂರು ಜಿಲ್ಲೆಯ ವಳಪಟ್ಟಣಂಗೆ ಬಂದ, ಪ್ರವಾದಿ ಕುಟುಂಬಕ್ಕೆ ಸೇರಿದ ವಿದ್ವಾಂಸ, ಪ್ರತಿಷ್ಠಿತ ಬುಖಾರಿ ವಂಶಸ್ಥರಾದ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ತಂಙಳ್‌ರವರ ಮೂಲಕ ದಕ್ಷಿಣ ಭಾರತದಲ್ಲಿ ಅಹ್ಲುಬೈತ್‌ನ ಪರಂಪರೆ ಹರಡಿದೆ. ಈ ಕುಟುಂಬದಲ್ಲಿ ಸಯ್ಯಿದ್ ಅಬೂಬಕರ್ ಚೆರುಕುಂಞಿ ತಂಙಳ್ ಹಾಗೂ ಸಯ್ಯಿದತ್ ಹಲೀಮಾ ಬೀವಿಯವರ ದ್ವಿತೀಯ ಪುತ್ರರಾದ ಸಯ್ಯಿದ್ ಅಬ್ದುರ‍್ರಹ್ಮಾನ್ ಅಲ್‌ಬುಖಾರಿಯವರು, ಹಿಜ್‌ರಾ 1341ರಲ್ಲಿ, ಪ್ರವಾದಿ ಶ್ರೇಷ್ಠರ ಪವಿತ್ರ ಜನನದಿಂದ ಅನುಗ್ರಹೀತವಾದ ರಬೀಉಲ್ ಅವ್ವಲ್ ತಿಂಗಳ ಚಾಂದ್ 25ರಂದು, ಪ್ರಣ್ಯಮಯವಾದ ಶುಕ್ರವಾರ ರಾತ್ರಿಯಂದು, ಕಲ್ಲಿಕೋಟೆಯ ಕರುವನ್ ತುರುತ್ತಿ ಎಂಬಲ್ಲಿ ಜನಿಸಿದರು. ಬೆಳೆಯುತ್ತಲೇ ಪ್ರಾಯಕ್ಕೂ ಮೀರಿದ ಪಕ್ವತೆಯೊಂದಿಗೆ ಹುಟ್ಟೂರಲ್ಲೇ ವಿದ್ಯಾಭ್ಯಾಸ ಆರಂಭಿಸಿ, ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿಯೇ ಪ್ರದರ್ಶಿಸಿದರು. ಮುಂದೆ ಹಲವು ಪ್ರತಿಷ್ಠಿತ ವಿದ್ಯಾ ಕೇಂದ್ರಗಳಲ್ಲಿ ಪ್ರೌಢ ಶಿಕ್ಷಣ ಪಡೆದು, ಉಲಮಾ ಜಗತ್ತಿನ ದಿಗ್ಗಜರಾಗಿದ್ದ ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್, ಶಮ್ಸುಲ್ ಉಲಮಾ ಇ.ಕೆ.ಅಬೂಬಕರ್ ಮುಸ್ಲಿಯಾರ್, ಶೈಖ್ ಹಸನ್ ಹಝ್ರತ್ ಮೊದಲಾದವರ ಶಿಷ್ಯನಾಗಿ, ದಕ್ಷಿಣ ಭಾರತದ ಪ್ರತಿಷ್ಠಿತ ಉಚ್ಛ ವಿದ್ಯಾಲಯವಾಗಿದ್ದ ತಮಿಳ್ನಾಡಿನ ವೆಲ್ಲೂರು ಬಾಖಿಯಾತ್‌ನಿಂದ ಪ್ರಥಮ ರ್‍ಯಾಂಕ್‌ನೊಂದಿಗೆ ‘ಬಾಖವಿ’ (ಎಂ.ಎಫ್.ಬಿ.) ಪದವೀಧರರಾಗಿ ಹೊರ ಬಂದರು.
25 ವರ್ಷಗಳ ವಿದ್ಯಾ ತಪಸ್ಸಿನಿಂದ ಪರಿಪಕ್ವ ವಿದ್ವಾಂಸರಾಗಿ ಹೊರ ಬಂದ ತಂಙಳ್‌ರವರು, ಕಾಸರಗೋಡು ಖಾಝಿಯಾಗಿದ್ದ  ಮಹಾವಿದ್ವಾಂಸ, ತಮ್ಮ ಗುರುಗಳಲ್ಲೊಬ್ಬರೂ ಆಗಿದ್ದ ವೆಳಿಮುಕ್ಕ್ ಅಬ್ದುರ‍್ರಹ್ಮಾನ್ ಮುಸ್ಲಿಯಾರ್‌ರ ನಿರ್ದೇಶನದಂತೆ ಉಳ್ಳಾಲಕ್ಕೆ ಬಂದರು. ಆ ಗುರುವಿನ ಕಾರ್ಡ್ ಸಂದೇಶವನ್ನು ಹಾಲಿಸಿ, 1951ರಲ್ಲಿ, ಹಿಜ್‌ರಾ 1369ರ ಪುಣ್ಯ ರಮಳಾನ್ ತಿಂಗಳ ಮೊದಲ ಗುರುವಾರದಂದು ಉಳ್ಳಾಲದಲ್ಲಿ ಬಂದಿಳಿಯುವ ಮೂಲಕ, ಹೊಸದೊಂದು ಇತಿಹಾಸ ರಚನೆಗೆ ನಾಂದಿ ಹಾಡಿದರು.
ಕೇವಲ ಒಂದು ವರ್ಷದ ಅವಧಿಗಾಗಿ ಇಲ್ಲಿಗೆ ಬಂದಿದ್ದರೂ, ಅಲ್ಲಾಹನ ವಿಧಿ ಇನ್ನೂ ಅವರನ್ನು ಇಲ್ಲೇ ಮುಂದುವರಿಸುತ್ತಿದೆ. ಮೊದಲೆರಡು ದಶಕ ಕಾಲ ಉಳ್ಳಾಲದ ‘ಕನ್ಝುಲ್ ಉಲೂಂ’ದರ್ ಸಿನಲ್ಲಿ ಮುದರ‍್ರಿಸ್ ಆಗಿ ಸೇವೆ ಸಲ್ಲಿಸಿ,1972ರಲ್ಲಿ ಅದು ಕಾಲೇಜ್ ಆಗಿ ಪರಿವರ್ತನೆಗೊಂಡಾಗ ಅದರ ಪ್ರಿನ್ಸಿಪಾಲ್ ಆಗಿ ನಿಯುಕ್ತರಾದರು. 1978ರಲ್ಲಿ ಉಳ್ಳಾಲದ ಖಾಯಿಯಾಗಿದ್ದ ವೆಳಿಮುಕ್ಕ್ ಔರಾನ್ ಕುಟ್ಟಿ ಮುಸ್ಲಿಯಾರ್ ನಿಧನರಾದಾಗ, ಸರ್ವ ಸಮ್ಮತ ವಿದ್ವಾಂಸರೆಂಬ ನೆಲೆಯಲ್ಲಿ ತಂಙಳ್‌ರವರೇ ಖಾಝಿ ಸ್ಥಾನಕ್ಕೂ ನಿಯೋಜಿತರಾದರು. ತಮ್ಮ ನಿರಾಕರಣೆಯ ಹೊರತಾಗಿಯೂ, ಬಹುಜನರ ಒತ್ತಡಕ್ಕೆ ಮಣಿದು 1978ರ ನವೆಂಬರ್ 9ರಂದು ಪ್ರಧಾನ ಗುರುಗಳೂ, ಅಗ್ರಗಣ್ಯ ವಿದ್ವಾಂಸರೂ ಆದ ಮರ್ಹೂಂ ಕಣ್ಣಿಯತ್ ಉಸ್ತಾದರಿಂದ ಶಿರವಸ್ತ್ರ ತೊಡಿಸುವ ಮೂಲಕ ಖಾಝಿ ಸ್ಥಾನ ಅಲಂಕರಿಸಿದರು. ಪ್ರಸ್ತುತ ದಕ್ಷಿಣ ಕನ್ನಡ, ಕಾಸರಗೋಡು, ಶಿವಮೊಗ್ಗ, ಕೊಡಗು ಹಾಗೂ ಕೇರಳದ ಕೆಲವು ಜಿಲ್ಲೆಗಳ ನೂರಾರು ಮೊಹಲ್ಲಾಗಳಲ್ಲಿ ಖಾಝಿಯಾಗಿದ್ದಾರೆ.
ಆರುವರೆ ದಶಕದಿಂದಲೂ ಧಾರ್ಮಿಕ ಶಿಕ್ಷಣ ನೀಡುವ ಕೈಂಕರ್ಯದಲ್ಲಿ ಬೆಳೆದು ಬಂದ ಶೈಖುನಾರಿಗೆ ಕರ್ನಾಟಕ, ಕೇರಳ ಹಾಗೂ ನೆರೆಯ ಪರಿಸರದಲ್ಲೆಲ್ಲಾ ದೊಡ್ಡ ಶಿಷ್ಯ ಪರಂಪರೆಯೇ ಇದೆ. ಹಿಂದಿನ ಕನ್ಝುಲ್ ಉಲೂಂ ದರ್ಸಿನಲ್ಲಿ ಕಲಿತವರು, ನಂತರದ ‘ಮದನಿ’ ಪದವೀಧರರು, ಅವರ ಶಿಷ್ಯಂದಿರು, ಶಿಷ್ಯಂದಿರ ಶಿಷ್ಯ ಪರಂಪರೆಯ ಕಾರಣ ಪುರುಷರಾಗಿದ್ದಾರೆ ಉಳ್ಳಾಲ ತಂಙಳ್. ಮರ್ಹೂಂ ಶೈಖುನಾ ಸಜೀಪ ಉಸ್ತಾದ್, ಅಸ್ಸಯ್ಯಿದ್ ಕುಂಬೋಳ್ ತಂಙಳ್, ಮಂಗಳೂರು ಖಾಝಿ ಮರ್ಹೂಂ ಸಿ.ಎಂ. ಅಬ್ದುಲ್ಲ ಮುಸ್ಲಿಯಾರ್, ಉಡುಪಿ ಖಾಝಿ ಬೇಕಲ್ ಉಸ್ತಾದ್, ಹಿರಿಯರಾದ ತಾಯಕ್ಕೋಡ್ ಉಸ್ತಾದ್, ಮಾಣಿ ಉಸ್ತಾದ್, ಮಂಜನಾಡಿ ಅಬ್ಬಾಸ್ ಉಸ್ತಾದ್ ಮೊದಲಾದ ನಾಡಿನ ಘನವೆತ್ತ ವಿದ್ವಾಂಸರೆಲ್ಲರೂ ಆ ಶಿಷ್ಯ ವೃಂದದ ಧನ್ಯ ಸದಸ್ಯರು. ಆಯಾಸವಿಲ್ಲದ ಸಕ್ರಿಯತೆಯೊಂದಿಗೆ ಅರಬಿಕ್ ಕಾಲೇಜ್ ಪ್ರಿನ್ಸಿಪಾಲ್, ನೂರಾರು ಮೊಹಲ್ಲಾಗಳ ಖಾಝಿ ಹುದ್ದೆಗಳಲ್ಲದೆ 44 ವರ್ಷ ತುಂಬುತ್ತಿರುವ ಪ್ರತಿಷ್ಠಿತ ಕಾಸರಗೋಡು ಜಾಮಿಯಾ ಸಅದಿಯಾದ ಆರಂಭಕಾಲದಿಂದಲೂ ಅಧ್ಯಕ್ಷತೆ, ವಿಶ್ವೋತ್ತರ ವಿದ್ಯಾಸಮುಚ್ಛಯವಾದ ಕಾರಂದೂರು ಮರ್ಕಝುಸ್ಸಖಾಫತಿಸ್ಸುನ್ನಿಯ್ಯಾ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳ ಪದಾಧಿಕಾರಿ, ನಿರ್ದೇಶಕ ಮೊದಲಾದ ಹುದ್ದೆಗಳನ್ನು ನಿರ್ವಹಿಸುತ್ತಿದ್ದರು.
1957ರಿಂದಲೂ ದಕ್ಷಿಣ ಭಾರತದ ಅಧಿಕೃತ ಉಲಮಾ ಸಂಘಟನೆಯಾದ ಸಮಸ್ತದ ಉಪಾಧ್ಯಕ್ಷರಾಗಿಯೂ, ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿಯೂ, ಸಮಸ್ತ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಹಿರಿಯ ಉಪಾಧ್ಯಕ್ಷರೆಂಬ ನೆಲೆಯಲ್ಲಿ ಸಭಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಾ ಬಂದ ಶೈಖುನಾ ತಂಙಳ್‌ರವರು 1989ರಿಂದ ಸಮಸ್ತದ ಅಧ್ಯಕ್ಷರಾಗಿದ್ದಾರೆ. ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಗೌರವ ನಿರ್ದೇಶಕರಾಗಿ ಅಂತರಾಷ್ಟ್ರೀಯ ಇಸ್ಲಾಮೀ ವೇದಿಕೆಗಳಲ್ಲೂ, ಜಾಗತಿಕ ವಿದ್ವತ್ ವಲಯದಲ್ಲೂ ಗುರುತಿಸಲ್ಪಟ್ಟ ಭಾರತದ ಮಹಾವಿದ್ದಾಂಸ. ಸೌದಿ, ಈಜಿಷ್ಟ್, ಇರಾಖ್, ಯು.ಎ.ಇ, ಮಲೇಶ್ಯಾ ಸೇರಿದಂತೆ ವಿವಿಧ ವಿದೇಶ ರಾಷ್ಟ್ರಗಳಿಗೆ ಸಂದರ್ಶನ ನೀಡಿದ್ದು, ಹಲವು ಬಾರಿ ಹಜ್ ನಿರ್ವಹಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪ್ರತಿ ವರ್ಷವೂ ಹಜ್ ನಿರ್ವಹಿಸುತ್ತಿದ್ದಾರೆ.
ಅತ್ಯುತ್ತಮ ಭಾಷಣಗಾರರಾಗಿಯೂ ತಂಙಳ್‌ರವರು ಖ್ಯಾತಿವೆತ್ತಿದ್ದಾರೆ. ಅಗಾಧವಾದ ಪಾಂಡಿತ್ಯದಿಂದ ವಿದ್ವತ್ ಲೋಕದ ಅತ್ಯುನ್ನತ ತಾರೆಗಳಲ್ಲೊಬ್ಬರಾಗಿ ಮಿನುಗುತ್ತಿರುವ ಶೈಖುನಾರಿಗೆ ದಶಕದ ಹಿಂದೆ ಉಲಮಾ ಸಮೂಹ ನೀಡಿದ ‘ತಾಜುಲ್ ಉಲಮಾ’ (ವಿದ್ವತ್ ಕಿರೀಟ) ಪದವಿಯು ಅರ್ಹತೆಗೆ ಸಂದ ಗೌರವವಾಗಿದೆ. ವಿದ್ಯಾ ಸಂಪನ್ನತೆಯನ್ನು ಬರೀ ಜ್ಞಾನ ಪ್ರಸಾರಕ್ಕಷ್ಟೇ ಸೀಮಿತಗೊಳಿಸದೆ, ಜೀವನದ ತುಂಬ ಕಾರ್ಯಕ್ಕಿಳಿಸಿದ ಉಖ್‌ರವೀ ಆಲಿಮ್. ಇಳಿವಯಸ್ಸಿನಲ್ಲೂ ನಿರಂತರ ಆಧ್ಯಾತ್ಮಿಕ ಚಿಂತನೆ, ಆರಾಧನೆಗಳಲ್ಲಿ ತಲ್ಲೀನರಾಗಿದ್ದು, ಸುನ್ನತ್ ಕಾರ್ಯಗಳನ್ನು ನಿರ್ವಹಿಸಲು ಅತೀವ ಕಾಳಜಿ ವಹಿಸುತ್ತಿದ್ದರು. ರಾತ್ರಿ, ಹಗಲು ಬಹು ಹೊತ್ತು ನಮಾಝ್, ಖುರ್‌ಆನ್ ಪಾರಾಯಣ, ದ್ಸಿಕ್ರ್‌ಗಳಲ್ಲಿ ತಲ್ಲೀನರಾಗಿರುವುದು, ಧಾರ್ಮಿಕ, ಚಟುವಟಿಕೆಗಳಲ್ಲಿ ಯವ್ವನೋತ್ಸಾಹದಲ್ಲಿ ಸಕ್ರಿಯರಾಗಿರುತ್ತಿದ್ದುದು ನಿಜಕ್ಕೂ ಒಂದು ವಿಶೇಷ. ಕಲಿತ ಸತ್ಯವನ್ನು ಎಲ್ಲೂ ಯಾವಾಗಲೂ ಹೇಳಬಲ್ಲ ಉಲಮಾ ಧೀರತೆಯನ್ನು ಎಂದೂ ಬಿಟ್ಟು ಕೊಡದ, ಗತಕಾಲೀನ-ಸಮಕಾಲೀನ ಔಲಿಯಾಗಳನೇಕರೊಂದಿಗೆ ಗಾಢವಾದ ಆಧ್ಯಾತ್ಮಿಕ ಸಂಬಂಧ, ಸಂಪರ್ಕವನ್ನು ಹೊಂದಿರುವ ಶೈಖುನಾರವರು ಅಸಂಖ್ಯ ಅನುಯಾಯಿಗಳಿಗೆ, ಉಲಮಾ, ಉಮರಾ, ಜನಸಾಮಾನ್ಯರಿಗೆ ಆಧ್ಯಾತ್ಮಿಕ ನಾಯಕರಾಗಿ ಆಶೀರ್ವದಿಸುತ್ತಲೇ ಬಂದಿದ್ದಾರೆ.
ವಿದ್ಯಾ ಸಂಪನ್ನತೆಯಿಂದ ತುಂಬು ಕೊಡವಾದ ಜ್ಞಾನಗೇಹ, ಸಮೃದ್ದಿ ಪೂರ್ಣವಾದ ಅವರ ಪವಿತ್ರ ಹಸ್ತಗಳು, ಬರ್ಕತ್ ಪೂರ್ಣವಾದ ಪಾವನ ನಾಲಗೆ ತಮ್ಮ ಅನುಯಾಯಿಗಳಿಗೆ ಆಶ್ರಯ ನೀಡುತ್ತಿದ್ದುದು, ಅವರ ವಿದಾಯದಿಂದ ಅನುಯಾಯಿಗಳು ಅಕ್ಬರಶಃ ಅನಾಥರಾಗಿದ್ದಾರೆ. ಅಲ್ಲಾಹು ಅವರೊಂದಿಗೂ ನಮಾಗೂ ಸ್ವರ್ಗ ಕೊಡಲಿ.

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors