ಇಮಾಂ ಜಝೂಲಿ ರಳಿಯಲ್ಲಾಹು ಅನ್‌ಹು
– ಟಿ.ಎಂ. ಅನ್ಸಾರ್ ಸಅದಿ ತಂಬಿನಮಕ್ಕಿ
ವಿಶ್ವ ಪ್ರಸಿದ್ಧ ದಲಾಯಿಲುಲ್ ಖೈರಾತ್ ಇದರ ರಚನೆಕಾರರಾಗಿದ್ದಾರೆ ಇಮಾಂ ಸುಲೈಮಾನ್ ಜಝೂಲಿ. ಇವರು ಮೊರಕ್ಕೋದ ಇತಿಹಾಸದಲ್ಲಿ ಅವಿಸ್ಮರಣೀಯರೆನಿಸಿಕೊಂಡ ಏಳು ಮಂದಿಯಲ್ಲಿ ಒಬ್ಬರು. ಜನಿಸಿದ್ದು ಹಿಜರಿ 807ರಲ್ಲಿ, ಮೊರಕ್ಕೋದ ಜಝೂಲಿ ಎಂಬಲ್ಲಿ. ಊರಿನಲ್ಲೇ ಪ್ರಾಥಮಿಕ ಶಿಕ್ಷಣ ಪಡೆದರು. ಉನ್ನತ ಶಿಕ್ಷಣ ಪಡೆದದ್ದು ಫಾಝ್‌ನ ಮದ್ರಸತು ಸ್ಸಫಾರ್‌ನಲ್ಲಿ. ಬಾಲ್ಯದಲ್ಲೇ ಮಾಲಿಕಿ ಮಧ್ಹಬ್‌ನ ಅಧಿಕೃತ ಗ್ರಂಥಗಳಾದ ಫರ್‌ಇಬ್ನು ಹಾಜಿಬ್, ಹಾಗೂ ಮುದವ್ವನ ಕಂಠಪಾಟ ಮಾಡಿದ ಅವರು ಫಿಕ್ಹ್, ಅರಬಿ, ಗಣಿತ ಇತ್ಯಾದಿ ವಿಷಯಗಳಲ್ಲಿ ಆಳವಾದ ಪಾಂಡಿತ್ಯವನ್ನು ಪಡೆದುಕೊಂಡರು. ಅಬದುಲ್ ಅಬ್ಬಾಸಿಲ್ ಹಲ್‌ಫಾನಿ ಹಾಗೂ ಅವರ ಸಹೋದರ, ಖಾಝಿ ಅಬ್ದುಲ್ ಅಝೀಝ್ ಇವರ ಪ್ರಮುಖ ಗುರುವರ್ಯರು.
ಅಲ್ಲಿಂದ ಮೊರೊಕ್ಕೋ, ತಲಿಂಸಾನ್, ಟುನೀಷ್ಯಾದೆಡೆಗೆ ಅವರ ಅರಿವಿಗಾಗಿನ ಅಲೆದಾಟ ಸಾಗಿತು. ಶಿಕ್ಷಣದ ಜತೆಗೆ ಅನೇಕ ಪ್ರಬೋಧನಾ ಚಟುವಟಿಕೆಗಳಲ್ಲೂ ವಿದ್ವಾಂಸರೊಂದಿಗಿನ ಚರ್ಚೆಗಳಲ್ಲೂ ಭಾಗಿಯಾದರು. ಅದಕ್ಕಾಗಿ ಬಲುದೂರದ ಸಂಚಾರವನ್ನು ಕೈಗೊಂಡರು.
ಫಾಝ್‌ನಿಂದ ತನ್ನೂರಾದ ಜಝೂಲಿಗೆ ಮರಳಿದರೂ ಅಲ್ಲಿ ಎದುರಾದ ಕೆಲವು ಸಮಸ್ಯೆಗಳಿಂದಾಗಿ ಫಾಝ್‌ಗೆ ಪುನಃ ಬರಬೇಕಾಯಿತು. ಇದು ಇವರ ಬದುಕಿಗೆ ಹೊಸ ತಿರುವನ್ನು ನೀಡಿತು. ಅಲ್ಲಿಂದ ಆಧ್ಯಾತ್ಮಿಕತೆಯೆಡೆಗೆ ಮುಖ ಮಾಡಿದ ಅವರು ಒಬ್ಬ ಆಧ್ಯಾತ್ಮಿಕ ಗುರುವಿನ ಹುಡುಕಾಟದಲ್ಲಿ ತೊಡಗಿದರು. ನಾಡಿನಾದ್ಯಂತ ಸಂಚರಿಸಿದರು. ಸರ್ರೂಖ್ ಎಂಬ ವಿದ್ವಾಂಸರ ನಿರ್ದೇಶನದಂತೆ ಶೈಖ್ ಮುಹಮ್ಮದುಲ್ ಅಂಗಾರ್ ಎಂಬ ಆಧ್ಯಾತ್ಮಿಕ ಪುರುಷರ ಸಮಕ್ಷಮಕ್ಕೆ ತೆರಳಿ ಶಿಷ್ಯತ್ವವನ್ನೂ ಆಧ್ಯಾತ್ಮಿಕ ಸರಣಿಯ ಮಾರ್ಗದರ್ಶನವನ್ನೂ ಪಡೆದರು. ಆ ಬಳಿಕ ಸಾಹಿಲ್ ಎಂಬಲ್ಲಿಗೆ ತೆರಳಿದ ಜಝೂಲಿಯವರಿಗೆ ಮುಹಮ್ಮದುಲ್ ಅಂಗಾರುಸ್ಸಗೀರ್ ಎಂಬ ಇನ್ನೊಬ್ಬ ಆಧ್ಯಾತ್ಮಿಕ ಪುರುಷರ ಪರಿಚಯವಾಗುತ್ತದೆ. ಇದು ಅವರನ್ನು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಔನ್ನತ್ಯಕ್ಕೇರಲು ನೆರವು ನೀಡಿತು. ಆ ಬಳಿಕ 14 ವರ್ಷಗಳ ಕಾಲ ಕಠಿಣವಾದ ಏಕಾಂತವಾಸವನ್ನು ಕಳೆದರು. ನಂತರ ಅಲ್ಲಿಂದ ಅಸ್ಫಿಯಾ ಎಂಬಲ್ಲಿಗೆ ತೆರಳಿ ಧರ್ಮಬೋಧನೆಯ ಮೂಲಕ ಜನರನ್ನು ಇಸ್ಲಾಮಿನತ್ತ ಆಹ್ವಾನಿಸಿದರು. ಹಾಗೂ ಅವರನ್ನು ಆರಾಧನೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು. ಅವರು ಸಲ್ಲಿಸಿದ ಅಮೋಘ ಧರ್ಮ ಸೇವೆಗಾಗಿ ಅಹ್ಲುಲ್ ಸ್ವಲಾಹ್ ಎಂಬ ಪದವಿಯೂ ದೊರೆಯಿತು. ಆ ಕಾಲದಲ್ಲೇ ನಾಡಿದಾದ್ಯಂತ ಅವರ ಖ್ಯಾತಿ, ಕೀರ್ತಿಗಳು ಹಬ್ಬಿದ್ದವು. ವಿಶ್ವದ ನಾನಾ ಕಡೆಯಿಂದ ವಿದ್ಯಾದಾಹಿಗಳು ಅವರ ಬಳಿಗೆ ಹರಿದು ಬರತೊಡಗಿದರು. ಬಳಿಕ ಆಫುಗಾಲ್ ಎಂಬಲ್ಲಿಗೆ ತೆರಳಿದ ಇಮಾಮರಿಂದ 12000ದಷ್ಟು ಮಂದಿ ಶಿಷ್ಯತ್ವವನ್ನು ಸ್ವೀಕರಿಸಿದರು..!
ಅಧ್ಯಾಪನೆ, ಧರ್ಮಬೋಧನೆ ಇತ್ಯಾದಿಗಳ ಜತೆಗೆ ಪ್ರತೀ ದಿನ ಖುರ್‌ಆನ್ ಹಾಗೂ ದಲಾಯಿಲುಲ್ ಖೈರಾತ್ ಖತಂ ಪೂರ್ತೀಕರಿಸುತ್ತಿದ್ದರು. ಅತ್ಯಂತ ದೇವಭಕ್ತರಾಗಿದ್ದ ಇಮಾಮರು ಆ ಕಾಲದ ಖುತುಬ್ ಆಗಿದ್ದರೆಂಬುದು ಕೆಲವು ವಿದ್ವಾಂಸರ ನಿಗಮನ. ಅವರಿಂದಾಗಿ ಮೊರಕ್ಕೋದಾದ್ಯಂತ ತ್ವರೀಖತ್ ವ್ಯಾಪಿಸಿದವು. ಏಕ ಕಾಲಕ್ಕೆ 12665 ಶಿಷ್ಯರಿಗೆ ಅಧ್ಯಾಪನೆ ನಡೆಸುವ ಗುರು ಎಂಬ ಹೆಗ್ಗಳಿಕೆಯೂ ಅವರಿಗಿತ್ತು.
ಅನೇಕ ಅಮೂಲ್ಯ ಗ್ರಂಥಗಳನ್ನು ಇಮಾಮರು ಜಗತ್ತಿಗೆ ಸಮರ್ಪಿಸಿದ್ದಾರೆ. ಆ ಪೈಕಿ ವಿಶ್ವಪ್ರಸಿದ್ಧವಾದುದು ದಾಲಾಯಿಲುಲ್ ಖೈರಾತ್ ಆಗಿದೆ. ಫಾಝ್‌ನ ಪ್ರಸಿದ್ಧ ಜಾಮಿಉಲ್ ಖರ್ವಿಯ್ಯೀನ್ ಗ್ರಂಥಾಲಯದಲ್ಲಿ ಇಮಾಂ ಜಝೂಲಿಯವರು ದಲಾಯಿಲುಲ್ ಖೈರಾತ್ ರಚಿಸಿದರು. ವಿದ್ವಾಂಸರನ್ನೂ, ಜನಸಾಮಾನ್ಯರನ್ನೂ ಒಗ್ಗೂಡಿಸಿ ಇದಕ್ಕಾಗಿ ಬೃಹತ್ ಮಜ್ಲಿಸ್‌ಗಳನ್ನೇ ಏರ್ಪಡಿಸುತ್ತಿದ್ದರು. ಇದಕ್ಕೆ ಅನೇಕ ವ್ಯಾಖ್ಯಾನ ಗ್ರಂಥಗಳೂ ರಚಿಸಲ್ಪಡಲಾಗಿದೆ.
ಹಿಜರಿ 869ರ ಬುಧವಾರ ಇಮಾಮರು ಇಹಲೋಕ ತ್ಯಜಿಸಿದರು. ಸುಬ್‌ಹಿ ನಮಾಝಿನ ಎರಡನೇ ರಕಅತ್‌ನ ಮೊದಲ ಸುಜೂದ್‌ನಲ್ಲಿದ್ದ ವೇಳೆಯಲ್ಲಾಗಿತ್ತು ವಫಾತ್ ಸಂಭವಿಸಿದ್ದು. ಅಂದು ಳುಹ್‌ರ್ ನಮಾಝ್‌ಗೆ ಮುಂಚಿತವಾಗಿ ಅವರನ್ನು ದಫನ ಮಾಡಲಾಗಿತ್ತು. ಇಮಾಮರ ಖಬರಿನಿಂದ ಕಸ್ತೂರಿಯ ಸುವಾಸನೆಯು ಹೊರ ಹೊಮ್ಮುತ್ತಿದ್ದವು.
ದಫನ ನಡೆಸಿ 62 ವರ್ಷಗಳ ಬಳಿಕ ಹಿಜರಿ 930ರಲ್ಲಿ ಅಂದಿನ ರಾಜ ಅಹ್ಮದುಲ್ಲಾ ಅಹ್ರಜ್ ಅವರ ನಿರ್ದೇಶನದಂತೆ ಜಝೂಲಿ ಇಮಾಮರ ಭೌತಿಕ ಶರೀರವನ್ನು ಮೊರೊಕ್ಕೋಗೆ ವರ್ಗಾಯಿಸಲಾಯಿತು. ಇಮಾಮರು ಮರಣ ಹೊಂದಿದ ದಿನದಂತೆಯೇ ಅವರ ಮೃತದೇಹವಿತ್ತು. ಅದರಲ್ಲಿ ಯಾವುದೇ ಬದಲಾವಣೆಯೂ ಉಂಟಾಗಿರಲಿಲ್ಲ. ಗಡ್ಡ, ತಲೆಗೂದಲು ಆಗಷ್ಟೇ ತೊಳೆದಂತೆ ಶುಭ್ರವಾಗಿತ್ತು. ಶರೀರವನ್ನು ಮುಟ್ಟಿ ನೋಡಿದರೆ ಜೀವವಿರುವಂತೆ ನೆತ್ತರ ಸಂಚಾರ ನಡೆಯುತ್ತಿತ್ತೆಂದು ಈ ಘಟನೆಯ ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ಚರಿತ್ರೆ ಗ್ರಂಥಗಳು ಉಲ್ಲೇಖಿಸಿವೆ. ಬಳಿಕ ಆ ರಾಜರನ್ನೂ ಇಮಾಂ ಜಝೂಲಿಯವರ ಖಬರ್ ಸಮೀಪವೇ ದಫನ ಮಾಡಲಾಯಿತು.