ಪ್ರಶ್ನೆ : ನಾನೊಬ್ಬಳು ಮನೆ ಮಂದಿಯ ಪ್ರೀತಿಯ ಹುಡುಗಿ. ನನಗೆ ಇಲ್ಲವೆನ್ನಲು ಏನೂ ಇಲ್ಲ. ನನ್ನನ್ನು ನೋಡಿಕೊಳ್ಳುವ ಕುಟುಂಬ, ಶ್ರೀಮಂತಿಕೆ ಹೀಗೆ ಎಲ್ಲವೂ ಇದೆ.ಆದರೆ ನಾನೀಗ ತುಂಬ ಮನ ನೊಂದಿದ್ದೇನೆ.ನನ್ನಿಂದ ಆಗಬಾರದ ಕೆಲಸವೊಂದು ನಡೆದು ಹೋಗಿದೆ. ಒಬ್ಬನ ದೇಹದ ಬಯಕೆಗೆ ನಾನು ಬಲಿಯಾಗಿದ್ದೇನೆ. ನನಗೆ ಬೇಕಾದವರ ಪರಿಚಯ ಮೂಲಕ ನನಗೆ ಹತ್ತಿರವಾಗಿ ನನ್ನ ಮಿತ್ರರೆನಿಸಿಕೊಂಡವ ನನ್ನನ್ನೊಂದುದಿನ ವಂಚಿಸಿ ಬಿಟ್ಟಿದ್ದಾನೆ. ನನ್ನ ಶೀಲ ಕೆಡಿಸಿ ಬಿಟ್ಟಿದ್ದಾನೆ. ನನ್ನಿಂದ ಆತ ದೂರವಾಗುವನೋ ಎಂದು ಹೆದರಿ ಆತನ ಬಯಕೆಗೆ ಒಪ್ಪಿ ಬಿಟ್ಟಿದ್ದೆ. ಈಗ ನಾನು ಮಾನಸಿಕವಾಗಿ ತುಂಬ ಸಂಕಟ ಅನುಭವಿಸುತ್ತಿದ್ದೇನೆ. ನನ್ನನ್ನು ಬೆಳೆಸಿದ, ಪ್ರೀತಿಸಿದ ನನ್ನ ಕುಟುಂಬಕ್ಕೆ ನಾನು ದ್ರೋಹವೆಸಗಿದೆ. ಅಲ್ಲಾಹನ ಬಳಿ ನಾನು ಮಹಾಪಾಪವನ್ನು ಮಾಡಿದೆ. ಈ ಪಾಪ ಭಾವದಿಂದ ಕೊರಗಿ ಕಂಗಾಲಾಗಿರುವೆನು. ಅನೇಕ ಬಾರಿ ನನಗೆ ಆತ್ಮಹತ್ಯೆ ಮಾಡಿಕೊಳ್ಳೋಣವೆಂದು ತೋರುತ್ತಿದೆ. ಆದರೆ ಅದೊಂದು ಪಾಪವೆಂಬ ಎಚ್ಚರಿಕೆ ಅದರಿಂದ ಹಿಂದಕ್ಕೆ ತಳ್ಳುತ್ತದೆ. ಆದರೂ ಸ್ವತ ನಾನು ಆತ್ಮಹತ್ಯೆಯ ಹತ್ತಿರವೇ ಸಾಗುವೆನೋ ಎಂದು ಭಾವಿಸುತ್ತಿದ್ದೇನೆ. ದಯವಿಟ್ಟು ನನಗೊಂದು ಮಾರ್ಗದರ್ಶನ ನೀಡಿ ನನಗೆ ಅಲ್ಲಾಹು ಮಾಫಿ ಮಾಡುವನೇ? ನಾನೆಸಗಿದ ದ್ರೋಹಕ್ಕೆ, ನನ್ನ ಪಾಪಕ್ಕೆ ಪಶ್ಚಾತ್ತಾಪವಿದೆಯೇ? ನನ್ನನ್ನು ಬೆಳೆಸಿದ, ಪ್ರೀತಿಸಿದ ನನ್ನ ಕುಟುಂಬಕ್ಕೆ ನಾನು ದ್ರೋಹವೆಸಗಿದೆ. ಅಲ್ಲಾಹನ ಬಳಿ ನಾನು ಮಹಾಪಾಪವನ್ನು ಮಾಡಿದೆ. ಈ ಪಾಪ ಭಾವದಿಂದ ಕೊರಗಿ ಕಂಗಾಲಾಗಿರುವೆನು. ಅನೇಕ ಬಾರಿ ನನಗೆ ಆತ್ಮಹತ್ಯೆ ಮಾಡಿಕೊಳ್ಳೋಣವೆಂದು ತೋರುತ್ತಿದೆ. ಆದರೆ ಅದೊಂದು ಪಾಪವೆಂಬ ಎಚ್ಚರಿಕೆ ಅದರಿಂದ ಹಿಂದಕ್ಕೆ ತಳ್ಳುತ್ತದೆ. ಆದರೂ ಸ್ವತ ನಾನು ಆತ್ಮಹತ್ಯೆಯ ಹತ್ತಿರವೇ ಸಾಗುವೆನೋ ಎಂದು ಭಾವಿಸುತ್ತಿದ್ದೇನೆ. ದಯವಿಟ್ಟು ನನಗೊಂದು ಮಾರ್ಗದರ್ಶನ ನೀಡಿ ನನಗೆ ಅಲ್ಲಾಹು ಮಾಫಿ ಮಾಡುವನೇ? ನಾನೆಸಗಿದ ದ್ರೋಹಕ್ಕೆ, ನನ್ನ ಪಾಪಕ್ಕೆ ಪಶ್ಚಾತ್ತಾಪವಿದೆಯೇ?
ಉತ್ತರ : ಪಾಪ ಮಾಡುವುದು ಮನುಷ್ಯ ಸಹಜ.
ಮನುಷ್ಯನನ್ನು ಪಾಪ ಮಾಡುವ ಪರಿಸರ ಹಾಗೂ ಪ್ರಕೃತಿಯಲ್ಲಿಯೇ ಅಲ್ಲಾಹು ಸೃಷ್ಟಿಸಿದ್ದಾನೆ. ಖಂಡಿತ ಶರೀರವು ಕೆಡುಕಿಗೆ ಹೆಚ್ಚು ಪ್ರೇರಣೆ ನೀಡುತ್ತದೆಯೆಂದು ಖುರ್‌ಆನ್ ಹೇಳಿದೆ. ಆದ್ದರಿಂದ ಪಾಪಗಳು ಮನುಷ್ಯನಲ್ಲಿ ಉಂಟಾಗುವುದೊಂದು ಸಹಜ ಪ್ರಕ್ರಿಯೆಯಾಗಿದೆ. ಪಾಪವೆಸಗುವುದು ಮನುಷ್ಯನ ಪ್ರಕೃತಿಗುಣವಾದರೆ, ಅದನ್ನು ಕ್ಷಮಿಸುವುದು ಅಲ್ಲಾಹನ ಗುಣ. ಅಲ್ಲಾಹನಿಗೆ ‘ತವ್ವಾಬ್’ ಎಂಬ ಹೆಸರೇ ಇದೆ. ಪಶ್ಚಾತ್ತಾಪಿಸುವವರ ಪಾಪಗಳನ್ನು ಕ್ಷಮಿಸುವವನು ಎಂದಾಗಿದೆ ಅದರ ಅರ್ಥ.
ಪಾಪವೆಸಗಿದ ತನ್ನ ದಾಸರನ್ನು ಪ್ರೀತಿಯಿಂದ ಕರೆದು ನಿಮ್ಮ ಪಾಪಗಳಿಂದ ಪಶ್ಚಾತ್ತಾಪಪಟ್ಟು, ಅದರಿಂದ ಮುಕ್ತರಾಗಿರಿ ಎಂದು ಅಲ್ಲಾಹನು ಖುರ್‌ಆನಿನ ಅನೇಕ ಸ್ಥಳಗಳಲ್ಲಿ ಕರೆ ನೀಡಿದ್ದಾನೆ. ಹಾಗೆ ಮನನೊಂದು ಪಶ್ಚಾತ್ತಾಪಿಸುವವರ ಪಾಪಗಳನ್ನು ಪುಣ್ಯಗಳನ್ನಾಗಿ ಮಾರ್ಪಡಿಸುವೆನೆಂಬ ಮಹಾ ಕೊಡುಗೆಯನ್ನೇ ಅಲ್ಲಾಹನು ನೀಡಿದ್ದಾನೆ. ಪಶ್ಚಾತ್ತಾಪಕ್ಕೆ ಅಷ್ಟು ಮಹತ್ವವಿದೆ. ತೊಂಬತ್ತೊಂಬತ್ತು ಮಂದಿಯನ್ನು ಕೊಂದು ಪಾಪ ಪರಿಹಾರಕ್ಕೆ ಹೊರಟು ನೂರನ್ನು ಭರ್ತಿ ಮಾಡಿ ಪಶ್ಚಾತ್ತಾಪದ ದಾರಿಯತ್ತ ಹೊರಟಾಗ ಆತನ ಪಾಪವನ್ನು ಕ್ಷಮಿಸಲಾಯಿತೆಂದು ಹದೀಸ್ ವಚನಗಳಿವೆ. ಮಹಾ ಪರ್ವತಗಳಂತಹ ಪಾಪವೆಸಗಿದರೂ ಅಲ್ಲಾಹನ ಬಳಿ ಮನನೊಂದು ಖೇದ ಪ್ರಕಟಿಸಿದರೆ ಅಲ್ಲಾಹನು ಕ್ಷಮಿಸುತ್ತಾನೆಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದಾರೆ. ಆದ್ದರಿಂದ ಪಾಪವನ್ನು ಅಲ್ಲಾಹು ಕ್ಷಮಿಸದೇ ಇರುವನೋ ಎಂಬ ಹತಾಶೆ, ನಿರಾಶೆ ಬೇಡ. ಅಲ್ಲಾಹನು ತೌಬಾ ಸ್ವೀಕರಿಸುವವನು ಎಂಬುದರಲ್ಲಿ ಪೂರ್ಣ ನಂಬಿಕೆಯಿಟ್ಟು ಮಾಡಿದ ಪಾಪದಿಂದ ಪೂರ್ಣ ಪ್ರಮಾಣದ ಪಶ್ಚಾತ್ತಾಪ ಹೃದಯದಾಳದಿಂದ ಪ್ರಕಟಗೊಳಿಸಿದರೆ ಅಲ್ಲಾಹು ಕ್ಷಮಿಸುವನು. “ನೀವು ಅಲ್ಲಾಹನ ಅನುಗ್ರಹದಿಂದ ನಿರಾಶರಾಗದಿರಿ. ಸತ್ಯ ನಿಷೇಧಿಗಳಲ್ಲದೆ ಅವನ ಅನುಗ್ರಹದಿಂದ ನಿರಾಶೆಗೊಳ್ಳುವುದಿಲ್ಲ”ವೆಂದು ಖುರ್‌ಆನ್ ಹೇಳುತ್ತದೆ.
ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಪ್ರತ್ಯೇಕವಾಗಿ ಪಾಪ ಕೃತ್ಯವೆಸಗಿರುವುದಕ್ಕೆ ಆತ್ಮಹತ್ಯೆ ಪರಿಹಾರವಾಗದು. ಆತ್ಮಹತ್ಯೆ ಅದಕ್ಕಿಂತ ದೊಡ್ಡ ಮಹಾಪಾಪ. ನಂತರ ಪಶ್ಚಾತ್ತಾಪದ ಅವಕಾಶವೇ ಇಲ್ಲವಾಗುತ್ತದೆ. ಅಂತಹ ಚಿಂತನೆಗಳಿಗೆ ಮನಸ್ಸನ್ನು ಯಾವತ್ತೂ ತೆರೆಯಕೂಡದು. ಬದುಕಿನಲ್ಲಿ ಘಟಿಸಿ ಹೋದ ರಹಸ್ಯ ಪಾಪಗಳನ್ನು ರಹಸ್ಯವಾಗಿಡಿ. ಅಲ್ಲಾಹನೊಂದಿಗೆ ಅದನ್ನು ಮನ ತುಂಬ ಹೇಳಿಕೊಳ್ಳಿ. ಕಣ್ಣೀರಿಳಿಸಿ. ಆಪ್ತರಲ್ಲಿ ಆಪ್ತ ಮಿತ್ರರೊಂದಿಗಾಗಲೀ, ತಂದೆ ತಾಯಿ ಕುಟುಂಬದೊಂದಿಗಾಗಲೀ ಅದನ್ನು ಹೇಳಬೇಡಿ. ಒಳಗೊಳಗೆ ಕೊರಗಿ ಹೋಗಬೇಡಿ. ಆತ್ಮಸ್ಥೆರ್ಯ ಪಡೆದುಕೊಳ್ಳಿ. ಮನಸ್ಸು ಗಟ್ಟಿ ಮಾಡಿ. ಇನ್ನೆಂದೂ ಆ ಪಾಪದತ್ತ ಸುಳಿಯದಿರುವ ದೃಢ ಪ್ರತಿಜ್ಞೆ ಮಾಡಿಕೊಳ್ಳಿ, ಅನೈತಿಕತೆಗೆ ಪ್ರೇರಣೆಯಾಗುವಂತಹ ಸಂಪರ್ಕಗಳನ್ನು ಸಂಪೂರ್ಣ ಕಡಿದುಕೊಳ್ಳಿ ನಿರಾಳವಾಗಿರಿ. ಸುಂದರ ಬದುಕಿನ ಮೂಲಕ ಪರಲೋಕದ ಯಶಸ್ಸು ಕಾಣಿರಿ. ಘಟಿಸಿ ಹೋದುದನ್ನು ಪುನ ಪುನ ನೆನಪು ಮಾಡಿಕೊಳ್ಳದಿರಿ. ಪೂರ್ಣ ರೂಪದ ಪಶ್ಚಾತ್ತಾಪ ಮಾಡಿದ ನಂತರ ಅಲ್ಲಾಹು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿದ್ದಾನೆ ಎಂಬ ಆಶಾಭಾವ ಹೊಂದಿಕೊಳ್ಳಿ. ಅಲ್ಲಾಹು ನಿಮ್ಮ ಖೇದವನ್ನು ಸ್ವೀಕರಿಸಲಿ.