ಪ್ರಶ್ನೆ : ಇಲ್ಲೊಬ್ಬರು ಮಸೀದಿಯಲ್ಲಿ ಮಿಂಬರಿನೆದುರು ಮಲಗಿದರೆ ಜಿನ್ನ್ ಜಿನ್ನ್ ಗಳ ತೊಂದರೆಯಿದೆ ಎನ್ನುತ್ತಾರೆ. ಅವರು ಹೇಳುವುದನ್ನು ನಂಬಬಹುದೆ? ಹಾಗೆ ಮಸೀದಿಯಲ್ಲಿ ಮಲಗುವವರಿಗೆ ಜಿನ್ನ್ ತೊಂದರೆ ಕೊಡುವುದು ಎಂಬುದು ಇದೆಯೇ?
ಉತ್ತರ : ಯಾವುದೇ ಮಸೀದಿಯಲ್ಲಿ ಮಿಂಬರಿನ ಹತ್ತಿರ ಮಲಗಿದರೆ ಜಿನ್ನ್ ಗಳು ತೊಂದರೆ ನೀಡುತ್ತವೆ ಎಂಬುದು ಆಧಾರ ರಹಿತ ಮಾತು, ಜಿನ್ನ್ ಗಳು ಮನುಷ್ಯರಿಗೆ ಹಲವು ರೀತಿಯಲ್ಲಿ ತೊಂದರೆ ನೀಡಬಹುದು. ಆ ತೊಂದರೆ ಮಸೀದಿಯಲ್ಲಿ ಮಲಗಿದವರಿಗೂ ಇರಬಹುದು. ಮನೆಯಲ್ಲಿ ಮಲಗಿದವರಿಗೂ ಇರಬಹುದು. ಮಸೀದಿಯಲ್ಲಿ ಮಿಂಬರಿನ ಹತ್ತಿರ ಮಲಗಿದವರಿಗೆ ಜಿನ್ನ್ ಗಳು ತೊಂದರೆ ನೀಡುತ್ತವೆ ಯೆಂಬ ಪ್ರತ್ಯೇಕತೆಯೇನೂ ಇಲ್ಲ,
ಜಿನ್ನ್-ಶೈತಾನ್‌ಗಳು ಮಸೀದಿ, ಮನೆ ಮಠಗಳಲ್ಲೆಲ್ಲ ಕಡೆಯೂ ಇರುತ್ತವೆ. ಆರಾಧನೆ ನಡೆಸುವವರಿಗೆ ತೊಂದರೆ ನೀಡಲು ಶೈತಾನ್‌ಗಳು ಮಸೀದಿಯೊಳಕ್ಕೆ ಬರುತ್ತವೆ. ಜಿನ್ನ್ ಮತ್ತು ಶೈತಾನ್ ಒಂದೇ ವರ್ಗ, ಶೈತಾನ್ ಎಂಬ ಹೆಸರು ಅವರಲ್ಲಿ ದುಷ್ಟರಿಗೆ ಮಾತ್ರ ಸೀಮಿತ. ಜಿನ್‌ಗಳಲ್ಲಿ ಸಜ್ಜನರಿರುತ್ತಾರೆ. ಅವರ ಬಗ್ಗೆ ಶೈತಾನ್ ಎಂದು ಹೇಳುವುದಿಲ್ಲ. ಅಂತಹ ಜಿನ್ನ್ ಗಳು ಸಾಮಾನ್ಯವಾಗಿ ಮನುಷ್ಯರಿಗೆ ತೊಂದರೆಗಳನ್ನು ನೀಡಲಾರವು.
ನಿರ್ದಿಷ್ಟ ಮಸೀದಿಯೊಂದರಲ್ಲಿ ಸಜ್ಜನರಾದ ಜಿನ್ನ್ ಗಳು ವಾಸ್ತವ್ಯವಿರುವುದು ಅವಿಶ್ವಸನೀಯವೇನೂ ಅಲ್ಲ. ಜಿನ್ನ್ ಗಳು ಮನುಷ್ಯರಂತೆಯೇ ಒಂದು ವರ್ಗ. ಅವರು ಅಗೋಚರರಾಗಿರುತ್ತಾರೆ ಅಷ್ಟೆ. ನಿಗದಿತ ಮಸೀದಿಯಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಮಲಗುವವರಿಗೆ ಜಿನ್ನ್ ಗಳು ತೊಂದರೆ ನೀಡುತ್ತವೆಯೆಂದು ಯಾರಾದರೂ ಖಚಿತ ಅನುಭವದಿಂದ ಹೇಳುವುದಾದರೆ ಅದು ಅವಿಶ್ವಸನೀಯವೇನೂ ಅಲ್ಲ. ಮಲಗುವ ಮನುಷ್ಯರಿಂದ ಜಿನ್ನಗೇನಾದರೂ ತೊಂದರೆಯಾದಲ್ಲಿ ಆ ಜಿನ್ನ್ ಗಳು ಕೋಪಿಸಿ ಕೊಂಡು ಮನುಷ್ಯನಿಗೆ ತೊಂದರೆ ನೀಡುವ ಸಾಧ್ಯತೆಯಿದೆ. ಆದರೆ ಅಂತೆ ಕಂತೆಗಳಿಗೆ ಹೆಚ್ಚು ಮಾನ್ಯತೆಗಳು ಲಭ್ಯವಾಗುವ ಇಂದಿನ ಕಾಲದಲ್ಲಿ ಕೇಳಿದ್ದೆಲ್ಲವೂ ಸತ್ಯವಾಗಿರಬೇಕೆಂದೇನೂ ಇಲ್ಲ.
ಜಿನ್ನ್ ಅಗೋಚರ, ಅವುಗಳಿಂದುಂಟಾಗುವ ಉಪಕಾರ, ಉಪದ್ರವಗಳೆಲ್ಲವೂ ಮನುಷ್ಯನ ಅನುಭವಕ್ಕೆ ಬಿಟ್ಟಿದ್ದು. ಅವು ಒಬ್ಬನಿಗೆ ಉಪಕಾರ ಮಾಡಿದ್ದನ್ನು, ಅಥವಾ ತೊಂದರೆ ನೀಡಿದ್ದನ್ನು, ಅನುಭವಿಸಿ ಯಾ ವಿಶ್ವಾಸಾರ್ಹ ಖಚಿತ ಮಾಹಿತಿಯಿಂದ ತಿಳಿದವರು ಅದನ್ನು ನಂಬಬಹುದು. ಹೇಳಿದ್ದರಲ್ಲಿ ನಂಬಿಕೆ ಹುಟ್ಟದಿದ್ದರೆ ಬಿಡಬಹುದು. ಅದನ್ನು ನಂಬದಿರುವುದರಿಂದ ಸತ್ಯ ವಿಶ್ವಾಸಕ್ಕೆ ತೊಂದರೆಯೇನೂ ಇಲ್ಲ.
ಆದರೆ ಜಿನ್ನ್ ಎಂಬ ಅಗೋಚರ ಸೃಷ್ಟಿ ಇದೆಯೆಂದೂ ಇವು ಅಲ್ಲಾಹನ ಸೃಷ್ಟಿಗಳೆಂದೂ ವಿಶ್ವಾಸವಿಡುವುದು ಕಡ್ಡಾಯ. ಖುರ್‌ಆನ್ ಹದೀಸ್ ಗಳು ಅದನ್ನು ಸ್ಪಷ್ಟಪಡಿಸಿವೆ.