ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಹೇಳಿದರು; ವ್ಯಕ್ತಿಯೊಬ್ಬನು “ಜನರೆಲ್ಲ ನಾಶವಾದರು” ಎನ್ನುತ್ತಿದ್ದರೆ ಅವರ ಪೈಕಿ ಅತಿನಾಶ ಹೊಂದಿದವನು ಆ ವ್ಯಕ್ತಿಯೇ ಆಗಿರುವನು.
ವರದಿ : ಅಬೂಹುರೈರ ರಳಿಯಲ್ಲಾಹು ಅನ್ಹು ಉಲ್ಲೇಖ: ಮುಸ್ಲಿಮ್
ಇಮಾಮ್ ನವವೀ ರಳಿಯಲ್ಲಾಹು ಅನ್ಹು ಯವರು ತಮ್ಮ ರಿಯಾಳು ಸ್ವಾಲಿಹೀನ್‌ನಲ್ಲೂ ಅದ್ಸ್ಕಾರ್‌ನಲ್ಲೂ ಈ ಹದೀಸನ್ನು ಉಲ್ಲೇಖಿಸಿ ವಿವರಣೆಯನ್ನು ನೀಡಿದ್ದಾರೆ ಅನೇಕ ಮಂದಿಗೆ ಜನರನ್ನೆಲ್ಲ ದೂರುವ ಒಂದು ಚಪಲವಿದೆ. ನಾಲ್ಕು ಮಂದಿ ಸೇರಿ ಕುಳಿತು ಮಾತನಾಡುವಾಗ ಜನರ ಅವಸ್ಥೆಯೇನಿದು? ಎಲ್ಲ ಏನು ಮಾಡುತ್ತಾ ಇದ್ದಾರೆ? ಯಾರ ಬಳಿಯೂ ದೀನ್ ಎಂಬುದು ಇಲ್ಲ; ನೈತಿಕ ಪ್ರಜ್ಞೆಯಿಲ್ಲ ಎಂಬಿತ್ಯಾದಿ ಮಾತುಗಳನ್ನು ಮುಂದುವರಿಸುತ್ತಾ ಅನೇಕ ಮಂದಿಯ ಬದುಕನ್ನು ಜಾಲಾಡುತ್ತಾರೆ. ತಾನೊಬ್ಬ ದೊಡ್ಡ ಸುಬಗನೆಂಬ ಭಾವನೆಯೊಂದಿಗೆ ಇತರರನ್ನೆಲ್ಲ ಹಳಿಯುವ ಈ ಢಾಂಬಿಕರ ಬಗ್ಗೆ ಹದೀಸ್ ವಚನ ಫಹುವ ಅಹ್ಲಕುಹುಮ್ಎಂ ದಿದೆ.
ಇಮಾಮ್ ನವವೀ ರಳಿಯಲ್ಲಾಹು ಅನ್ಹು ಯವರು ಇದನ್ನು ವ್ಯಾಖ್ಯಾನಿಸುತ್ತಾ ಜನರನ್ನು ಕೀಳಾಗಿ ಕಾಣುವುದು ಹಾಗೂ ತನ್ನ ಬಗ್ಗೆ ತಾನು ಆತ್ಮರತಿಹೊಂದುವುದು ಈ ಮಾತಿನಲ್ಲಿ ಸ್ಪಷ್ಟವಿರುವುದರಿಂದ ಇದನ್ನು ವಿರೋಧಿಸಲಾಗಿದೆ ಎಂದಿದ್ದಾರೆ. ಜನರ ಬಗ್ಗೆ ಕೀಳಾಗಿ ಮಾತಾಡುವ ಅನೇಕ ಮಂದಿಗೆ ತಮ್ಮ ಕೀಳುತನಗಳು ಗಮನಕ್ಕೆ ಬಂದಿರುವುದಿಲ್ಲ. ಇತರರ ಆರ್ಥಿಕ ವಿಷಯಗಳು, ಕುಟುಂಬ ವಿಷಯಗಳು, ಇಬಾದತ್‌ನ ವಿಷಯಗಳು, ಕಲಿಕೆಯ ವಿಷಯಗಳು, ಮಾತುಕತೆಗಳು ಮುಂತಾಗಿ ಪ್ರತಿಯೊಂದನ್ನು ಟೀಕಿಸುತ್ತಾ ಎಲ್ಲರೂ ದೀನ್ ಕೈ ಬಿಟ್ಟವರೆಂದು ಬಿಂಬಿಸುವ ಈ ಮಂದಿ ಪ್ರತಿಯೊಂದು ವಿಷಯದಲ್ಲಿ ತಾವು ಮಾತ್ರ ಸರಿಯಾದ ದಾರಿಯಲ್ಲಿದ್ದಾರೆಂದು ಭಾವಿಸುತ್ತಾರೆ. ಮನುಷ್ಯನ ಕರ್ಮಗಳು ಮತ್ತು ಹೃದಯದ ಭಾವನೆಗಳು ಈ ಎರಡರ ಪೈಕಿ ಅತಿ ಮುಖ್ಯವಾದುದು ಹೃದಯದ ಭಾವನೆ, ಯಾರೊಬ್ಬನ ಹೃದಯದಲ್ಲಿ ಅಣುಗಾತ್ರದಷ್ಟು ಅಹಂ ಇದೆಯೋ ಆತ ಸ್ವರ್ಗ ಪ್ರವೇಶಿಸಲಾರ ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಲು ಕಾರಣ ಅಹಂ ಎಂಬ ಹೃದಯದ ಭಾವದ ಕೆಡುಕಿನ ತೀವ್ರತೆಯನ್ನು ಬಿಂಬಿಸುತ್ತದೆ. ಈ ಅಹಂನೊಂದಿಗೆ ಬೇರೆ ಸತ್ಕರ್ಮಗಳೆಲ್ಲ ನಿಷ್ಪಲವೆನಿಸುತ್ತದೆ. ಜನರು ಏನಾದರೂ ಕೆಟ್ಟದನ್ನು ಮಾಡಿರಬಹುದು. ಕೆಲವೊಮ್ಮೆ ಆ ಬಗ್ಗೆ ಅವರು ಗಮನಿಸದೆ ಇದ್ದಿರಬಹುದು. ಅಥವಾ ಪಾಪ ಪ್ರಜ್ಞೆಯೊಂದಿಗೆ ಪಾಪಗಳಲ್ಲಿ ಸಿಲುಕಿರಬಹುದು. ಯಾವುದಾದರೂ ಸಂದಿಗ್ಧತೆ ಯಲ್ಲಿ ಸಿಲುಕಿರಬಹುದು. ಆದರೆ ಹೃದಯ ಮಾತ್ರ ಪಾಪಪ್ರಜ್ಞೆ ಯಲ್ಲಿ ಖೇದಿಸುತ್ತಿರಬಹುದು. ಅದೇ ಸಂದರ್ಭ ಇಂತಹವರನ್ನೆಲ್ಲ ಜಾಲಾಡುವ ವ್ಯಕ್ತಿ ತನ್ನ ಹೃದಯದಲ್ಲಿ ಆತ್ಮರತಿಯೆಂಬ ಮಹಾ ವಿಷವನ್ನೇ ತೆಗೆದಿಟ್ಟು ಕೊಂಡಿದ್ದಾನೆ. ಆ ವಿಷವು ಆತನ ಸತ್ಕರ್ಮಗಳನ್ನೆಲ್ಲ ಕೊಂದು ಹಾಕುತ್ತಿದೆ. ದುಷ್ಕೃತ್ಯಗಳನ್ನು ಮಾಡಿದವ ಪಶ್ಚಾತ್ತಾಪದೊಂದಿಗೆ ಹೃದಯವನ್ನು ಶುಚಿಗೊಳಿಸುವಾಗ ಈತನ ಹೃದಯವು ಅಷ್ಟೇನೂ ಸುಲಭದಲ್ಲಿ ಪಶ್ಚಾತ್ತಾಪಕ್ಕೆ ಬಗ್ಗುವುದಿಲ್ಲ. ತಾನು ಪರವಾಗಿಲ್ಲವೆಂಬ ಭಾವವು ಆತನ ಭಾವದಲ್ಲಿರುವ ಪ್ರಮಾದಗಳನ್ನು ಆತನಿಗೆ ತಿಳಿಯಬಿಡುವುದಿಲ್ಲ.
ಇಮಾಮ್ ನವವೀ ರಳಿಯಲ್ಲಾಹು ಅನ್ಹು ಯವರು ಇಲ್ಲಿ ಈ ಮಾತಿನ ಇನ್ನೊಂದು ಮಗ್ಗುಲನ್ನು ಕೂಡಾ ವಿವ ರಿಸಿದ್ದಾರೆ. ಜನರ ಕೃತ್ಯಗಳ ಬಗ್ಗೆ ವಿಷಾದವನ್ನು ಪ್ರಕಟಿಸು ವ ರೀತಿಯಲ್ಲಿ “ಆಯ್ಯೋ ಜನರೆಲ್ಲ ನಾಶ ವಾಗುತ್ತಿದ್ದಾರೆ” ಎನ್ನುವ ಮಾತು. ಹೀಗೆ ವಿಷಾದ ಪ್ರಕಟಣೆಯ ಭಾವದೊಂದಿಗೆ ಈ ಮಾತನ್ನಾಡುವುದಕ್ಕೆ ವಿರೋಧ ವಿಲ್ಲ. ಮಾಲಿಕ್ ಬಿನ್ ಅನಸ್ ರಳಿಯಲ್ಲಾಹು ಅನ್ಹು, ಖತ್ರಾಬೀ ರಳಿಯಲ್ಲಾಹು ಅನ್ಹು ಹುಮೈದೀ ರಳಿಯಲ್ಲಾಹು ಅನ್ಹು ಮುಂತಾಗಿ ಅನೇಕ ವಿದ್ವಾಂಸರು ಹೀಗೆ ಹೇಳಿರುವರೆಂದು ಅದ್ಸ್ಕಾರ್ ವಿವರಿಸುತ್ತದೆ.
ಜನರೆಲ್ಲ ದಾರಿ ತಪ್ಪಿದ್ದಾರೆಂಬ ಮುದ್ರೆ ಹಾಕಿ ತಾನು ಇದೆಲ್ಲವನ್ನು ವೀಕ್ಷಿಸುತ್ತಾ ಸದಿದಾರಿಯಲ್ಲಿರುವನೆಂಬ ಭಾವನೆ ಸ್ವಯಂ ನಾಶದ ಸ್ಪಷ್ಟ ಕುರುಹೆಂದು ಹದೀಸ್ ಸೂಚಿಸುತ್ತದೆ.