ಸಂಪಾದಕೀಯ…
ಒಬ್ಬ ಉತ್ತಮ ಕೃಷಿಕ ಕೃಷಿಗೆ ಸೂಕ್ತ ಸಮಯ ಮತ್ತು ಸ್ಥಳವನ್ನು ಆರಿಸಿಕೊಳ್ಳುವನು. ಮೀನುಗಾರ ಮೀನುಗಾರಿಕೆಯ ಸಮಯದಲ್ಲಿ ಸದಾ ನಿರತನಾಗಿರುವನು. ಒಬ್ಬ ವ್ಯಾಪಾರಿಯೂ ಅಷ್ಟೇ, ವ್ಯಾಪಾರದ ಸೀಸನ್‌ನ್ನು ಆತ ಮಿಸ್ ಮಾಡಲಾರ.
ಒಬ್ಬ ಕೃಷಿಕನಿಗೆ, ಮೀನುಗಾರನಿಗೆ, ವ್ಯಾಪಾರಿಗೆ ಅದರ ಸೀಸನ್‌ಗಳು ಅತಿ ಮುಖ್ಯ. ಅವರ ವೃತ್ತಿಯಲ್ಲಿನ ಸೋಲು ಗೆಲುವನ್ನು ಈ ಸಮಯವು ನಿರ್ಧರಿಸುತ್ತದೆ.
ಆ ಸಮಯದಲ್ಲಿನ ಅವರ ಶ್ರಮ, ಅರ್ಪಣಾಭಾವ, ತಲ್ಲೀನತೆ ಸರಿಸುಮಾರು ಮುಂದಿನ ಒಂದು ವರ್ಷಕ್ಕಿರುವ ಆದಾಯವನ್ನೂ ತಂದು ಕೊಡುತ್ತದೆ. ಆದರೆ ಆ ಸಮಯದಲ್ಲಿ ಕೃಷಿಕ ಉಡಾಫೆ, ಆಲಸ್ಯತನ ತೋರಿದರೆ ಅದು ಆತನ ಕೃಷಿಯ ಮೇಲೆ ನೇತ್ಯಾತ್ಮಕ ಪರಿಣಾಮ ಬೀರಬಹುದು. ನಿರೀಕ್ಷಿಸದಷ್ಟು ಫಸಲು ಬಾರದಿರಬಹುದು. ಮೀನುಗಾರ ತೋರುವ ನಿರುತ್ಸಾಹ ಆತನ ವೃತ್ತಿಗೆ ಕುತ್ತನ್ನುಂಟು ಮಾಡಬಹುದು. ವ್ಯಾಪಾರಿ ತೋರುವ ಅಸಡ್ಡೆಯು ಆತನ ವ್ಯಾಪಾರ ನೆಲಕಚ್ಚಲೂ ಕಾರಣವಾಗಬಹುದು.
ಹೀಗೆ ಪ್ರತಿಯೊಂದು ಕ್ಷೇತ್ರವನ್ನು ಪ್ರತಿನಿಧಿಸುವವರಿಗೂ ನಿರ್ದಿಷ್ಟ ಸೀಸನ್‌ಗಳಿವೆ. ಒಬ್ಬ ವಿಶ್ವಾಸಿಯ ಸೀಸನ್ ರಮಳಾನ್ ತಿಂಗಳಾಗಿದೆ. ಹಲವು ಶ್ರೇಷ್ಟತೆಗಳು ತುಂಬಿರುವ, ಒಂದಕ್ಕೆ ಹಲವು ಪಟ್ಟು ಅಧಿಕ ಪುಣ್ಯಗಳಿರುವ ಈ ತಿಂಗಳ ಪ್ರತೀ ಘಳಿಗೆಗಳೂ ಒಬ್ಬ ವಿಶ್ವಾಸಿಯ ಪಾಲಿಗೆ ಅತಿ ಮುಖ್ಯ. ಅಲ್ಲಾಹು ನೀಡಿದ ಶುದ್ಧಾತ್ಮವನ್ನು ಪಾಪಕೃತ್ಯಗಳಿಂದ ಮಲಿನಗೊಳಿಸಿದ ಮನುಷ್ಯನು ಅದನ್ನು ಶುದ್ಧೀಕರಿಸಿ ಅವನ ಕೃಪೆಗೆ ಪಾತ್ರವಾಗಬೇಕು. ಇಲ್ಲದಿದ್ದರೆ ಆತನಿಗೆ ಪಾರತ್ರಿಕ ಯಶಸ್ಸು ಅಸಾಧ್ಯ. ಅದಕ್ಕೊಂದು ಸೂಕ್ತ ಸಮಯವಾಗಿದೆ ರಮಳಾನ್. ಆದರೆ ಈ ಅತ್ಯಮೂಲ್ಯ ಸಮಯದಲ್ಲಿ ನಾವು ತೋರುವ ಅಸಡ್ಡೆ, ಆಲಸ್ಯತನ ನಮ್ಮ ಬದುಕು ದಿವಾಳಿಯಾಗಲು ಕಾರಣವಾಗಬಹುದು. ಆದ್ದರಿಂದಲೇ ಪಾರತ್ರಿಕ ಜಯ-ಅಪಜಯವನ್ನು ನಿರ್ಧರಿಸುವಲ್ಲಿ ಈ ಸಮಯ ನಿರ್ಣಾಯಕ ಎಂದರೆ ತಪ್ಪಿಲ್ಲ. ಅರಸಿ ಬಂದ ಅವಕಾಶವನ್ನು ಕೈ ಚೆಲ್ಲಿದರೆ ನಮ್ಮಷ್ಟು ದೊಡ್ಡ ಅವಕಾಶ ವಂಚಿತರು ಇನ್ಯಾರಿದ್ದಾರೆ ಹೇಳಿ..?
ರಮಳಾನ್ ಆಗಮಿಸಿ ನಿರ್ಗಮಿಸುವಾಗ ನಮ್ಮಲ್ಲಿ ಹಲವು ತರಹದ ಬದಲಾವಣೆಗಳು ಬರಬೇಕು. ಆ ಬದಲಾವಣೆ ಬದುಕಿನಾದ್ಯಂತ ಮುಂದುವರೆಯಬೇಕು. ಆದ್ದರಿಂದ ಈ ತಿಂಗಳ ಪ್ರತೀ ಕ್ಷಣವೂ ವ್ಯರ್ಥವಾಗಬಾರದು. ಅಲ್ಲಾಹನ ದಯೆ, ಕೃಪೆಗೆ ಪಾತ್ರವಾಗಲು ನಮಗೆ ಸಾಧ್ಯವಾಗಬೇಕು. ಪಶ್ಚಾತ್ತಾಪ ಪಟ್ಟು ಪಾಪ ಮುಕ್ತವಾಗಬೇಕು. ರಹ್ಮತ್ ಮತ್ತು ಮಗ್ಫಿರತ್ ಸಂರಕ್ಷಣೆ ಮತ್ತು ಗೆಲುವನ್ನು ಸಂಕೇತಿಸುತ್ತದೆ. ಅಂತಹಾ ಗೆಲುವು ನಮ್ಮದಾಗಬೇಕು. ಕೇವಲ ಹೊಟ್ಟೆ ಮಾತ್ರ ಉಪವಾಸ ಆಚರಿಸಿದರೆ ಸಾಲದು ನಾಲಗೆ, ಕಿವಿ, ಮೆದುಳು ಮತ್ತು ಮೊಬೈಲು ಕೂಡಾ ನಮ್ಮ ಉಪವಾಸದಲ್ಲಿ ಭಾಗಿಯಾಗಬೇಕು. ಅವಕ್ಕೆ ಒಂದಷ್ಟು ವಿಶ್ರಾಂತಿ ನೀಡಬೇಕು. ಹಾಗಾದರೆ ಮಾತ್ರ ಅನಗತ್ಯ ಕಾರ್ಯಗಳಿಂದ ನಮ್ಮ ಉಪವಾಸವನ್ನು ರಕ್ಷಿಸಿ ಪರಲೋಕದಲ್ಲಿ ಗೆಲುವನ್ನು ಖಚಿತ ಪಡಿಸಲು ಸಾಧ್ಯ. ಈ ರಮಳಾನ್ ಅಂತಹಾ ಹೊಸ ಸಾಧ್ಯತೆಗೆ ಬಾಗಿಲು ತೆರೆಯಲಿ ಎಂದು ಆಶಿಸೋಣ.