ಇಬ್ನು ನಫೀಸ್
(ರಕ್ತ ಪರಿಚಲನಾ ಶರೀರ ಶಾಸ್ತ್ರದ ಪಿತಾಮಹ)
– ಟಿ.ಎಂ. ಅನ್ಸಾರ್ ಸಅದಿ ತಂಬಿನಮಕ್ಕಿ
ಮೊಟ್ಟ ಮೊದಲು ಹೃದಯ ಮತ್ತು ಶ್ವಾಸನಾಳದ ರಚನೆ ಹಾಗೂ ಅದರ ರಕ್ತಪರಿಚಲನೆಯನ್ನು ನಿಖರವಾಗಿ ಕಂಡು ಹಿಡಿದ ಮೊದಲ ವೈದ್ಯ ವಿಜ್ಞಾನಿಯಾಗಿದ್ದಾರೆ ಇಬ್ನು ನಫೀಝ್. ಇವರು ಪ್ರತಿಪಾದಿಸಿದ ರಕ್ತಪರಿಚಲನಾ ಸಿದ್ಧಾಂತವು ಶಾರೀರಿಕ ವೈದ್ಯಶಾಸ್ತ್ರದ ಪ್ರಗತಿಗೆ ನಾಂದಿ ಹಾಡಿತು. ಅದುವರೆಗಿನ ವೈದ್ಯಕೀಯ ವಿಜ್ಞಾನಿಗಳಿಗಿಂತ ಭಿನ್ನವಾಗಿ ಇಬ್ನು ನಫೀಝ್ ಸರ್ಕುಲೇಟರಿ ಫಿಸಿಯೋಲಜಿಯಲ್ಲಿ ಕೊರೋನರಿ ಸಿದ್ಧಾಂತ ಹಾಗೂ ಮೈಕ್ರೋಟ್ಯೂಬುಲರ್ ರಕ್ತಪರಿಚಲನಾ ತತ್ವವನ್ನು ಪರಿಚಯಿಸಿದರು.
1213ರಲ್ಲಿ ಡಮಸ್ಕಸ್ನ ಅಲ್ ಕರಾಷಿಯಾದಲ್ಲಿ ಇಬ್ನು ನಫೀಝ್ ಜನಿಸಿ ದರು. ಸಣ್ಣ ಪ್ರಾಯದಲ್ಲೇ ಧಾರ್ಮಿಕ ಜ್ಞಾನ, ತತ್ವಶಾಸ್ತ್ರ, ಸಾಹಿತ್ಯ ಇತ್ಯಾದಿಗಳನ್ನು ಕಲಿತರು. 12ನೇ ಶತಮಾನದಲ್ಲಿ ಟರ್ಕಿಶ್ ರಾಜಕುಮಾರ ನೂರುದ್ದೀನ್ ಮಹ್ಮೂದ್ ಬಿನ್ ಝಂಘಿ ಸ್ಥಾಪಿಸಿದ ನೂರಿ ವೈದ್ಯಕೀಯ ವಿದ್ಯಾಲಯದಲ್ಲಿ 10 ವರ್ಷಗಳ ಕಾಲ ಅಧ್ಯಯನ ನಡೆಸಿದರು. ಪ್ರಸಿದ್ಧ ಡಮಸ್ಕಸ್ ವೈದ್ಯ ಇಬ್ನು ಉಸೈಬಿ ಇಬ್ನು ನಫೀಸ್ರ ಸಮಕಾಲೀನರಾಗಿದ್ದರು. 1236ರಲ್ಲಿ ಸುಲ್ತಾನ್ ಅಲ್ ಕಾಮಿಲ್ರವರ ಮನವಿಯ ಮೇರೆಗೆ ಇಬ್ನು ನಫೀಸ್ ಮತ್ತು ಅವರ ಕೆಲವು ಸಹಚರರು ಈಜಿಪ್ಟ್ಗೆ ತೆರಳಿದರು. ಸ್ವಲಾಹುದ್ದೀನ್ ಅಯ್ಯೂಬಿ ಸ್ಥಾಪಿಸಿದ ಅಲ್ ನಸೇರಿ ಆಸ್ಪತ್ರೆಯಲ್ಲಿ ಇಬ್ನುನಫೀಸ್ರನ್ನು ಮುಖ್ಯವೈದ್ಯರನ್ನಾಗಿ ನೇಮಿಸಲಾಯಿತು. ಅಲ್ಲಿ ಅವರು ವೈದ್ಯಕೀಯ ಶಿಕ್ಷಣವನ್ನು ನೀಡುವುದರೊಂದಿಗೆ ಅದರಲ್ಲಿ ತಾನೂ ಹೆಚ್ಚಿನ ಅಧ್ಯಯನ, ಅಭ್ಯಾಸದಲ್ಲಿ ಮಗ್ನರಾದರು. ಜತೆಗೆ ಮದ್ರಸತುಲ್ ಮಸ್ರೂರಿಯ್ಯದಲ್ಲಿ ಕರ್ಮ ಶಾಸ್ತ್ರವನ್ನೂ ಕಲಿತರು. ತನ್ನ ಬದುಕಿನ ಮಿಕ್ಕ ಭಾಗವನ್ನೂ ಈಜಿಪ್ಟ್ನಲ್ಲಿ ಕಳೆದ ಇಬ್ನು ನಫೀಸ್ ಬಗ್ದಾದ್ನ ಪತನ ಹಾಗೂ ಮಮ್ಲೂಕನ್ನರ ಉತ್ಥಾನ ಇತ್ಯಾದಿ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದ್ದರು.
ಕ್ರಿ.ಪೂ 350ರಲ್ಲಿ ಅರಿಸ್ಟಾಟಲ್ ಹೃದಯವನ್ನು ಮೂರು ಕೋಣೆಗಳಿರುವ ಅಂಗವೆಂದು ಪರಿಚಯಿಸಿದ್ದರು. ಆದರೆ ಗ್ರೀಕ್ ವೈದ್ಯವಿಜ್ಞಾನಿ ಗಾಲನ್ ಹೃದಯಕ್ಕೆ ಯಾವುದೇ ಕೋಣೆಗಳಿಲ್ಲವೆಂದೂ, ರಕ್ತಪರಿಚಲನಾ ವ್ಯವಸ್ಥೆಯ ಮೂಲವು ಯಕೃತ್ತಿನಿಂದಾಗಿದೆ ಎಂಬ ತತ್ವವನ್ನು ಪ್ರತಿಪಾದಿಸಿದ. ಬಲಭಾಗದಿಂದ ಎಡಕ್ಕೆ ಇಂಟರ್ವೆಂಟ್ರಿಕ್ಯುಲರ್ ಸೆಪ್ಟಂನ ರಕ್ತವು ಅಗೋಚರ ರಂಧ್ರವೊಂದರ ಮೂಲಕ ಹಾದು ಹೋಗುತ್ತದೆಯೆಂದೂ, ರಕ್ತನಾಳ ಹಾಗೂ ಧಮನಿಗಳು ಮುಚ್ಚಲ್ಪಟ್ಟದ್ದ ವೆಂದೂ ಗಾಲನ್ ವಾದಿಸಿದ. ಎರಡನೇ ಶತಮಾನದವರೆಗೆ ಇದೇ ಸಿದ್ಧಾಂತವು ನೆಲೆನಿಂತಿತ್ತು. ಆದರೆ ಹೃದಯ ಮತ್ತು ಶ್ವಾಸಕೋಶದ ನಡುವಿನ ರಕ್ತದ ಹರಿವನ್ನು ನಿಖರವಾಗಿ ಮಂಡಿಸುವ ಮೂಲಕ ಗಾಲನ್ನ ವಾದವನ್ನು ಇಬ್ನು ನಫೀಸ್ ಅಲ್ಲಗೆಳೆದರು. ಹೃದಯದ ಎರಡು ಬದಿಗಳ ನಡುವೆ ರಕ್ತ ಹಾದುಹೋಗುವ ಏಕೈಕ ಮಾರ್ಗವಾಗಿ ಶ್ವಾಸಕೋಶ ಧಮನಿ ರಕ್ತಪರಿಚಲನೆ ಎಂಬ ಹೊಸ ತತ್ವವನ್ನು ಇಬ್ನು ನಫೀಸ್ ಪ್ರಸ್ತುತಪಡಿಸಿದರು. ಆದ್ದರಿಂದ ಈ ಸಿದ್ಧಾಂತದ ಪಿತಾಮಹರಾಗಿ ಇಬ್ನು ನಫೀಸ್ ಗುರುತಿಸಿಕೊಳ್ಳುತ್ತಾರೆ.
ಇಬ್ನು ಸೀನಾರ ಅಲ್ ಖಾನೂನ್ ಫೀ ತ್ವಿಬ್ ಎಂಬ ಗ್ರಂಥಕ್ಕೆ ಇವರು ಹತ್ತು ಸಂಪುಟಗಳನ್ನೊಳಗೊಂಡ ವ್ಯಾಖ್ಯಾನ ಗ್ರಂಥವನ್ನು ಬರೆದರು. ನೇತ್ರರೋಗಗಳ ಬಗ್ಗೆ ವಿವರಿಸುವ ಅಲ್ ಮುಅದ್ದಬ್ ಫಿಲ್ ಕುಹ್ಲ್ ಹಾಗೂ ವೈದ್ಯಶಾಸ್ತ್ರದ ಜ್ಞಾನಕೋಶವೆಂದೇ ಪರಿಗಣಿಸಲ್ಪಡುವ ಅಶ್ಶಮೀಲ್ ಫೀತ್ವಿಬ್ ಎಂಬ ಈ ಎರಡು ಗ್ರಂಥಗಳು ವೈದ್ಯಶಾಸ್ತ್ರಕ್ಕೆ ಇವರು ಸಲ್ಲಿಸಿದ ಅಮೋಘ ಕೊಡುಗೆಯಾಗಿದೆ. ಅಶ್ಶ ಮೀಲ್ ಫೀ ತ್ವಿಬ್ಗೆ ಇವರು ಮುನ್ನೂರು ಸಂಪುಟಗಳಿರುವ ಟಿಪ್ಪಣಿಯನ್ನೂ ಬರೆದಿರುವರು. ಇದು ಈ ಗ್ರಂಥಧ ಅಗಾಧತೆ ಮತ್ತು ಹಿರಿಮೆಗೊಂದು ಗರಿಮೆ.
ಅರ್ರಿಸಾಲ ಅಲ್ ಕಾಮಿಲಿಯ ಫಿಲ್ ಸಿಯರಿ ಅಲ್ ನಬವಿಯ್ಯ ಇಬ್ನು ನಫೀಸ್ರವರ ವೈದ್ಯಕೀಯ ಕಾದಂಬರಿಯಾಗಿದೆ. ಜೀವಶಾಸ್ತ್ರ, ಕೋಸ್ ಮೋಳಜಿ, ಎಂಪೀರಿಸಿಸಂ, ಎಪಿಸ್ಟಮೋಲಜಿ, ಫ್ಯೂಚರೋಲಜಿ, ಸೈಕೋಲಜಿ ಇತ್ಯಾದಿಗಳು ಕಾದಂಬರಿಯ ಮುಖ್ಯವಸ್ತು. ಈ ಕಾದಂಬರಿ ವೈಜ್ಞಾನಿಕ ಹಾಗೂ ಧಾರ್ಮಿಕ ದೃಷ್ಟಿಕೋನಗಳ ಅಭಿವ್ಯಕ್ತಿಯೂ ಆಗಿದೆ ಈ ಕಾದಂಬರಿ. ಇದನ್ನು Theologus autodidactus ಎಂಬ ಹೆಸರಿನಲ್ಲಿ ಇಂಗ್ಲೀಷ್ಗೆ ಅನುವಾ ದಿಸಲಾಗಿದೆ. 1288ರ ಡಿಸೆಂಬರ್ 17ರಂದು ಕೈರೋದಲ್ಲಿ ತನ್ನ ಎಂಬತ್ತನೇ ವಯಸ್ಸಿನಲ್ಲಿ ಇಬ್ನು ನಫೀಸ್ ಎಂಬ ಈ ಅನನ್ಯ ಪ್ರತಿಭೆ ಕೀರ್ತಿಶೇಷರಾದರು.