ಬರೆದು ಮುಗಿಸಲಾಗದ ಬದುಕನ್ನು ಬಿಟ್ಟು ಹೋದ ‘ತಾಜುಲ್ ಉಮರಾ ಬಾವ ಹಾಜಾರ್’
1991ರ ಮೇ 19/ದ್ಸುಲ್ ಖಅದ್ 5ರಂದು ನನ್ನ ತಂದೆಯವರು ವಫಾತ್ ಆದಾಗ ಉಂಟಾದ ಅನಾಥ ಪ್ರಜ್ಞೆನನ್ನನ್ನು ಮತ್ತೆ ಕಾಡಿದ್ದು ಮೊನ್ನೆಯೇ, 2021ರ ಮೇ 10ರಂದು. ತಂದೆಯ ವಿದಾಯದ ವೇಳೆ ನಾನಿನ್ನೂ 12ರ ಹುಡುಗನಾಗಿದ್ದರಿಂದ ಅಂದಿನ ಭಾವತೀವ್ರತೆಗಳೇನೂ ನೆನಪಿಗೆ ಬರುತ್ತಿಲ್ಲ. ಅಮ್ಮನ ಬೀಡಿಯ ಬಲದಿಂದ ಹೈಸ್ಕೂಲ್ ಓದುತ್ತಿದ್ದೆ. ನಾನು 9ನೇ ತರಗತಿಯಲ್ಲಿರುವಾಗ ಅಲ್ ಅನ್ಸಾರ್ ಶತ್ರಿಕೆ ಶುರುವಾಗಿತ್ತು. ಬಾಲ್ಯದಿಂದಲೇ ಓದುವ ಹುಚ್ಚು ಹೆಚ್ಚಿದ್ದ ನಾನು ಬೇಕಲ್ ಉಸ್ತಾದರ ಮನೆಯಲ್ಲಿ ಅದರ ಪ್ರತಿಯನ್ನು ಪ್ರಥಮ ಬಾರಿ ಕಂಡಾಗಲೇ ಫಿದಾ ಆಗಿದ್ದೆ. ದೇರಳಕಟ್ಟೆಯಲ್ಲಿ ಅದರ ಕಚೇರಿಗೆ ಹೋಗಿ ವ್ಯವಸ್ಥಾಪಕರಾಗಿದ್ದ ಡಿ.ಐ. ಅಬೂಬಕರ್ರವರ ಕೃಪೆಯಿಂದ ಮೂರು ತಿಂಗಳ ಉಚಿತ ಚಂದಾದಾರಿಕೆಯನ್ನು ಪಡೆದಿದ್ದೆ. ಅಲ್ ಅನ್ಸಾರ್ ಎಷ್ಟು ಹುಚ್ಚು ಹಿಡಿಸಿತ್ತಂದರೆ, ಬುಧವಾರವಾಗಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದವು. ಒಂದೇ ಸಿಟ್ಟಿಂಗ್ನಲ್ಲಿ ಓದು ಮುಗಿಸಿದಾಗ ಮತ್ತೆ ನಿರಾಶೆ. ಇನ್ನು ಒಂದು ವಾರ ಕಾಯಬೇಕಲ್ಲ!
ಓದುತ್ತಾ ಬರೆಯುವ ಹಂಬಲ ಮೂಡಿತು. ಬರೆದೆ. ಮೊದಲ ಸಂಪುಟದ 50ನೇ ಸಂಚಿಕೆ (30 ಜುಲೈ 1992) ಯಲ್ಲಿ ನನ್ನ ಮೊದಲ ಬರಹ ‘ಮಹಿಳಾ ಸ್ವಾತಂತ್ರ್ಯ’ ಯಾವುದೇ ಎಡಿಟಿಂಗ್ ಇಲ್ಲದೆ ಪ್ರಕಟಗೊಂಡದ್ದು ನನ್ನ ಬರಹಾ ಸಕ್ತಿಗೆ ಸ್ಫೂರ್ತಿಯಾಯಿತು. ಆಗೆಲ್ಲ ಪತ್ರಿಕೆಯಲ್ಲಿ ಹೆಸರು ಮುದ್ರಿತವಾಗಿ ಕಾಣುವುದೇ ದೊಡ್ಡ ಸಾಧನೆ ಎನಿಸಿತ್ತು. ಮತ್ತೆ ಮತ್ತೆ ಬರೆದೆ ಸ್ವಲ್ಪ ಕಾಸೂ ಸಿಗುತ್ತಿತ್ತು.
ಹತ್ತನೇ ತರಗತಿ ಮುಗಿದು ದರ್ಸ್ ಮತ್ತು ಪಿಯು ಕಾಲೇಜ್ ಸೇರ ಬೇಕಾದ ಹಂತದಲ್ಲಿ ಡಿ.ಐ. ಕೃರಂಗಳ ನನ್ನನ್ನು ಬಾವ ಹಾಜಾರ್ರವರಿಗೆ ಪರಿಚಯಿಸಲು ಕರೆದುಕೊಂಡು ಹೋಗುತ್ತಾರೆ. ಮೊದಲೊಮ್ಮೆ ಕಚೇರಿಯಲ್ಲಿ ಕಂಡದ್ದು ಬಿಟ್ಟರೆ ಪರಿಚಯವೇನೂ ಇರಲಿಲ್ಲ. ಮಾತುಕತೆಯ ವೇಳೆ ನನ್ನ ತಂದೆಯವರ ಪರಿಚಯ ಅವರಿಗಿದ್ದದ್ದನ್ನು ನೆನಪಿಸಿಕೊಂಡರು. ನಗರದ ಕಸಾಯಿಗಲ್ಲಿಯಲ್ಲಿ. ಒಮ್ಮೆ ತಾತ್ಕಾಲಿಕವಾಗಿ ಅರ್ಲು ರಿಯಾದಲ್ಲಿ ಕೂಡಾ ಮುದರ್ರಿಸರಾಗಿದ್ದ ತಂದೆಯವರು ತಮ್ಮ ಮನೆಯ ಕಾರ್ಯಕ್ರಮಗಳಿಗೆಲ್ಲ ಬರುತ್ತಿದ್ದರೆಂದು ಹೇಳಿದರು. ನಂತರ ಶುರುವಾಯಿತು ಇಂಟರ್ವ್ಯೂ.
‘ಈಗ ಮಳೆ ಬರುತ್ತಿದೆ” ಎಂದು ಇಂಗ್ಲೀಷ್ನಲ್ಲಿ ಹೇಗೆ ಹೇಳುವುದು ಎಂದು ಕೇಳಿದರು. ನನ್ನ ಗಂಟಲಿನ ಹಸೆ ಆರಿ ಹೋಗಿತ್ತು. ನಂತರ ಅವರೇ ಎರಡು ಆಯ್ಕೆ ಕೊಟ್ಟರು Now rain is coming, Its raining ಇದರಲ್ಲಿ ಯಾವುದು ಸರಿ? ಎಂದು ಕೇಳಿದರು. ಯಾವುದೇ ಸಂದೇಹವಿಲ್ಲದೆ ಹೇಳಿದೆ “Nowrain is coming”. ಹಾಜಾರ್ ಡಿಐಯತ್ತ ನೋಡಿ, “‘ಇವರಿಗೆ ಎಲ್ಲ ಗೊತ್ತು ಅಂತ ನೀನು ಹೇಳಿದ್ದೆ. ಈಗ ನೋಡಿದರೆ ಏನೂ ಗೊತ್ತಿಲ್ಲವಲ್ಲ” ಎಂದುಹೇಳಿದರು.
ಇಂಗ್ಲೀಷ್ನಲ್ಲಿ ಹೇಳಿದ್ದಲ್ಲ. ಕನ್ನಡದಲ್ಲಿ ಒಳ್ಳೆ ಉಷಾರಿದ್ದಾರೆ” ಎಂದರವರು. ಸರಿ, ಹಾಗಾದರೆ ಕನ್ನಡದ್ದೇ ಕೇಳೋಣ ಎನ್ನುತ್ತಾ ”ಮುಕುರಂ ಕೈಯೊಳಿರಲ್ಕೆ ನೀರ ನೇಳಲೇಕೈ” ಎಂದರೆ ಏನು? ಅಂತ ಕೇಳಿದರು. ನಾನು ಸಂಪೂರ್ಣ ಬೆವೆತು ಹೋಗಿದ್ದೆ.
‘ನಿಮಗೆ ಏನೂ ಗೊತ್ತಿಲ್ಲ ಅಂತ ನಾನು ಹೇಳುವುದಿಲ್ಲ. ಆದರೆ ಗೊತ್ತಾಗ ಬೇಕಾದುದು ತುಂಬಾ ಇದೆ” ಅಂದವರೆ ಒಂದಷ್ಟು ಪ್ರೇರಣಾತ್ಮಕ ಉಪದೇಶಗಳನ್ನು ಕೊಟ್ಟರು. ಒಳ್ಳೆಯ ಚಹಾ ಸತ್ಕಾರ ಕೂಡಾ ಸಿಕ್ಕಿತು. ಎಲ್ಲಕ್ಕಿಂತ ಖುಷಿ ಕೊಟ್ಟದ್ದಂದರೆ ಅವರು ಮರಳುವಾಗ ಕೊಟ್ಟ ಹಣದ ಕಟ್ಟು. ಜೀವನದಲ್ಲಿ ಮೊದಲ ಬಾರಿ 100ರ 50 ನೋಟುಗಳನ್ನು ಎಣಿಸಿದ್ದೆ! 28 ವರ್ಷಗಳ ಹಿಂದಿನ ಐದು ಸಾವಿರವೆಂದರೆ ಹೆಚ್ಚು ಕಡಿಮೆ ಎರಡು ಪವನ್ ಚಿನ್ನ ಖರೀದಿಸಬಹುದಾದಷ್ಟು ಹಣ. ದರ್ಸ್ನಿಂದ ಊರಿಗೆ ಬಂದಾಗಲೆಲ್ಲ ನನ್ನನ್ನು ಭೇಟಿಯಾಗಬೇಕೆಂದೂ ಹೇಳಿದ್ದರು. ನಾನು ಇಂಗ್ಲಿಷ್ನಲ್ಲಿ ಹಿಂದುಳಿದಿರುವ ಬಗ್ಗೆ ನನಗೆ ಖೇದ ಮೂಡಿದ್ದರಿಂದ ಅಲ್ಲಿಂದ ಮರಳುವಾಗಲೇ ಮುಂದೊಂದು ದಿನ ಅವರಂತೆ ಚೆನ್ನಾಗಿ ಇಂಗ್ಲಿಷ್ ಮಾತಾಡಬೇಕೆಂದು ದೃಢ ನಿರ್ಧಾರ ಮಾಡಿದ್ದೆ. ಅದು ಸಾಧ್ಯವಾಗದಿದ್ದರೂ ಬೈಗುಳದ ಸಾಧ್ಯತೆ ಇರುವ ವಿಚಾರಗಳನ್ನು ಅವರ ಮುಂದೆ ಪ್ರಸ್ತಾಪಿಸುವುದಿದ್ದರೆ ಇಂಗ್ಲಿಷ್ ನಲ್ಲೇ ಮಾತನಾಡುವಷ್ಟಾದೆ. ಆಗ ಅವರ ಪ್ರತಿಕ್ರಿಯೆ ಕೂಡಾ ಇಂಗ್ಲಿಷ್ ನಲ್ಲೇ ಇರುವುದರಿಂದ ಹಕ್ಕದಲ್ಲಿರುವವರಿಗೇನೂ ಅರ್ಥವಾಗುವುದಿಲ್ಲ. ಮತ್ತು ಏನೇ ಬೈದರೂ ನನ್ನ ಮುಖದಲ್ಲಿ ಮುಗುಳ್ನಗುವಿದ್ದರಾಯಿತು. ಯಾರಿಗೂ ಸಂದೇಹಬರುವುದಿಲ್ಲ ಎನ್ನುವುದಾಗಿತ್ತು ನನ್ನ ಲಾಜಿಕ್ಕು.
ಬಾವ ಹಾಜಾರ್ ಎನ್ನುವಾಗ ಸಣ್ಣದೊಂದು ಸಿಟ್ಟಿನ ನೆನಪು ಕೆಲವರಿಗಾದರೂ ಆಗುವುದುಂಟು. ತಾಜುಲ್ ಉಲಮಾರವರ ಬಗ್ಗೆಯೂ ತಥೈವ. ಈ ಬಗ್ಗೆ ವಿಶ್ಲೇಷಿಸುತ್ತಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರು ಒಮ್ಮೆ ಮಾತನಾಡಿದ್ದುಂಟು. ಅಲ್ಲಾಹನ ಅಸ್ಮಾಲ್ (ಹೆಸರುಗಳು)ಗಳಲ್ಲಿ ಜಲಾಲತ್ (ಗಂಭೀರತೆ) ಮತ್ತು ಜಮಾಲತ್ (ಸೌಮ್ಯತೆ) ಅಂತ ಇದೆ. ಜಲಾಲತ್ನ ಇಸ್ಮ್ಗಳನ್ನು ಹೆಚ್ಚು ಸ್ಮರಿಸುವವರಲ್ಲಿ ಗಂಭೀರ ಲಕ್ಬಣಗಳು ಕಾಣಿಸಿ ಕೊಳ್ಳುತ್ತವೆ. ಸರಿಯಿಲ್ಲದ್ದನ್ನು ಕಂಡಾಗ ತಕ್ಷಣ ಕೋಪ ಬಂದು ಬಿಡುತ್ತದೆ. ಕೋಪ ಅಷ್ಟೇ ವೇಗದಲ್ಲಿ ತಣಿದೂ ಬಿಡುತ್ತದೆ. ಅದು ವ್ಯಕ್ತಿ ನಿಷ್ಕ್ಶವಾದ ಕೋಪವಲ್ಲ, ವಸ್ತುನಿಷ್ಠವಾದ ಕೋಪ. ಅದನ್ನೇ ‘ಸಾತ್ವಿಕ ಕೋಪ’ ಎನ್ನುವುದು. ಬಾವ ಹಾಜಾರ್ರವರ ಕೋಪ ಈ ಬಗೆಯದು. ಕೋಪ ಹೋದ ಬಳಿಕ ಪಶ್ಚಾತ್ತಾಪವಾಗುವುದು, ಕೋಪದಿಂದ ಬೇಜಾರಾದವರಲ್ಲಿ ಮಾಫ್ ಕೇಳಿ ಸಂತೈಸುವುದು ಅವರ ಸಾಮಾನ್ಯ ಗುಣವಾಗಿತ್ತು. ಕಚೇರಿಗೆ ಬಂದಾಗ ಅವರು ಕೋಪಗೊಳ್ಳುವುದನ್ನು ಕೆಲವು ಬಾರಿ ನಾವು ಸಂಭ್ರಮಿಸಿದ್ದೂ ಇದೆ. ಮರಳುವಾಗ ಒಳ್ಳೆಯ ಹಣ ಕೊಡುತ್ತಾರೆ ಎಂದು! ಕೋಪತಾಹಗಳು ಹೊರಗೆ ಮಾತ್ರ. ಹೃದಯ ಹರಮ ಸ್ವಚ್ಛವಾಗಿತ್ತು ಎನ್ನುವುದರ ದ್ಯೋತಕವಾಗಿದ್ದರು ಹಾಜಾರ್.
1993ರ ಎಪ್ರಿಲ್ನ ಮೊದಲ ಭೇಟಿಯಿಂದ 2021ರ ಮೇ 5ರ ಕೊನೆಯ ಭೇಟಿಯವರೆಗಿನ 28 ವರ್ಷಗಳ ಬಾಂಧವ್ಯದಲ್ಲಿ ಬಾವ ಹಾಜಾರ್ ನನ್ನ ಪೋಷಕರಾಗಿದ್ದರು, ಪ್ರೇರಕರಾಗಿದ್ದರು. ನನ್ನ ಬಿಎ, ಎಂಎ, ಹಮ್ಮೆ ಎಲ್ಲವೂ ಆಗಿದ್ದರು. ಆದರೆ ಎಲ್ಲೂ ಅವರು ಅದನ್ನು ಹೇಳಿಕೊಂಡದ್ದಿಲ್ಲ. ಪತ್ರಿಕೋದ್ಯಮ ಮತ್ತು ಕನ್ನಡ ಸಾಹಿತ್ಯದಲ್ಲಿ ಪದವಿ ಮುಗಿಸಿ ವೃತ್ತಿ ಜೀವನವನ್ನು ಪ್ರವೇಶಿಸ ಬಯಸಿದಾಗ ಅಲ್ ಅನ್ಸಾರನ್ನು ಆರಿಸಿಕೊಳ್ಳಲು ಕಾರಣ ಈ ಬಾಂಧವ್ಯವೇ ಆಗಿತ್ತು.
1999ರ ಜೂನ್ ತಿಂಗಳಲ್ಲಿ ಅಲ್ಅನ್ಸಾರ್ ಪತ್ರಿಕೆಯ ಅಧೀನದಲ್ಲಿ ಇನ್ನಷ್ಟೇ ಆರಂಭಗೊಳ್ಳಬೇಕಿದ್ದ ಮ್ಕೊಲಾಂಜಿ ಮಾಸಿಕವನ್ನು ನಿರ್ವಹಿಸುವ ಜವಾಬ್ದಾರಿಯೊಂದಿಗೆ ವೃತ್ತಿ ಜೀವನ ಪ್ರವೇಶಿಸಿದೆ. ಅಂದು ಹಾಜಾರ್ ಹೇಳಿದ ಮಾತು ಇನ್ನೂ ನೆನಪಿನಲ್ಲಿದೆ; “ಅಲ್ ಅನ್ಸಾರ್ನಲ್ಲಿ ದುಡಿಯುವುದು ಸಂಬಳಕ್ಕಾಗಿ ಅಲ್ಲ. ನಾವಿಲ್ಲಿ ಕೂಡುವುದು ನಿಮ್ಮ ಹರಿಶ್ರಮದ ಕಾಲು ಭಾಗ ಸಂಬಳ ಮಾತ್ರ. ಮುಕ್ಕಾಲು ಭಾಗ ನಿಮ್ಮ ಪರಲೋಕಕ್ಕೆ ಡೆಪಾಸಿಟ್” ಎಂದಿದ್ದರು. ಹಾಗಾಗಿಯೇ ಏನೋ, ಯಾವತ್ತೂ ಅಲ್ ಅನ್ಸಾರ್ನಲ್ಲಿ ದುಡಿಯುವಾಗ ಸಂಬಳವನ್ನು ಲೆಕ್ಕ ಹಾಕಿದ್ದಿಲ್ಲ. ಹಾಜಾರ್ ಕೊಡುವಾಗಲೂ ಅಷ್ಟೇ, ನಮ್ಮ ಪರಿಶ್ರಮದ ಲೆಕ್ಕ ನೋಡುತ್ತಿರಲಿಲ್ಲ. ಭೇಟಿಯಾದಾಗಲೆಲ್ಲ ಹಣವೋ, ಅತ್ತರೋ, ಗಿಫ್ಟೋ ಏನಾದರೊಂದು ಕೊಡದೆ ಕಳಿಸಿದ್ದು ಕಮ್ಮಿ. ಕೂಡುವುದೆಂದರೆ ಅವರಿಗೊಂದು ಬಗೆಯ ಹುಚ್ಚು. ಪ್ರಯೋಜನ ಕಡೆದವರಿಗಿಂತ ಕೊಟ್ಟ ಹಾಜಾರಿಗೇ ಖುಷಿ ಹಚ್ಚು.
ನಾವೆಲ್ಲ ಅವರ ಕಚೇರಿ ಸಿಬ್ಬಂದಿಗಳಾಗಿದ್ದೆವು. ಆದರೆ ಅವರೆಂದೂ ‘ಬಾಸ್’ ಆಗಿರಲಿಲ್ಲ. ಮಾತಿನಲ್ಲೋ, ವರ್ತನೆಯಲ್ಲೋ ತಾನು ಸಂಬಳ ಕೊಡುವ ಸಿಬ್ಬಂದಿ ಎಂಬ ಭಾವವೇ ಅವರಲ್ಲಿ ನುಸುಳಿದ್ದಿಲ್ಲ. ಯಾರಲ್ಲಾದರೂ ನಮ್ಮನ್ನು ಪರಿಚಯಪಡಿಸುವಾಗ ಬಹಳ ಗೌರವ ಮತ್ತು ಪ್ರಶಂಸೆಯ ಮಾತುಗಳನ್ನು ಬಳಸುತ್ತಿದ್ದರು. ಐದು ವರ್ಷದ ಹಿಂದೆ ನನ್ನ ಕೆಲವು ಗೆಳೆಯರು ‘ಕೆಎಂ ಫ್ರೆಂಡ್ಸ್’ ಎಂಬ ಗ್ರೂಪ್ ರಚಿಸಿ ನನಗೊಂದು ಪ್ರಶಸ್ತಿ ಕೊಟ್ಟಿದ್ದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹಲವು ಬಿಝಿಗಳನ್ನು ಬದಿಗಿಟ್ಟು ಬಂದಿದ್ದ ಹಾಜಾರ್ ಮಾತನಾಡುತ್ತಾ, ‘ನನ್ನ ಕಾಮ್ರೇಡ್ ಮತ್ತು ಮಾರ್ಗದರ್ಶಕ’ ಎಂದು ನನ್ನ ಬಗ್ಗೆ ಹೇಳಿದ್ದರು. ತನ್ನ ಸಿಬ್ಬಂದಿಯನ್ನು ಕಾಮ್ರೇಡ್ ಅಥವಾ ಆಪ್ತ ಸಂಗಾತಿ ಎನ್ನುವುದೇ ತುಂಬಾ ದೊಡ್ಡದಾಯಿತು. ಇನ್ನು ‘ಮಾರ್ಗದರ್ಶಕ’ ಎಂದರೆ? ನನಗೆ ಮುಜುಗರವಾಗಿತ್ತು. ಆದರೆ ಅವರು ಅದನ್ನು ವೈಭವೀಕರಿಸುವುದಲ್ಲ ಆತ್ಮೀಯತೆಯಿಂದ ಸಹಜವಾಗಿಯೇ ಹೇಳಿದ್ದರು. ಅದು ಹಾಜಾರ್.
ಉಲಮಾಗಳನ್ನು, ಮುತಅಲ್ಲಿಮರನ್ನು, ಬಡವರನ್ನು, ಯತೀಂ ಮಕ್ಕಳನ್ನು ಪ್ರೀತಿಸುವ ಹಲವರನ್ನು ನೀವು ಕಂಡಿರಬಹುದು. ಆದರೆ ಅವರೊಂದಿಗೆ ಬೆರೆಯುವವರು ಹೆಚ್ಚಿರಲಾರರು. ಅವರಲ್ಲೊಬ್ಬರಾಗಿ ಬಿಡುತ್ತಿದ್ದುದು ಹಾಜಾರ್ ಹಿರಿಮೆ. ತಮ್ಮ ಕಾರ್ ಡ್ರೈವರ್ಗಳನ್ನು ಜೊತೆಯಲ್ಲಿ ಕೂರಿಸಿ ಊಟ ಮಾಡುವುದು ನಮಗೆ ಅಪರೂಪವಾಗಿ ಕಂಡರೂ ಅವರಿಗೆ ಸಾಮಾನ್ಯ ಸಂಗತಿಯಾಗಿತ್ತು.
Live for others / ‘ಹರರಿಗಾಗಿ ಬದುಕು’ ಎನ್ನುವುದು, ಮತ್ತೊಬ್ಬರನ್ನು ಖುಷಿಹಡಿಸಿ ಬದುಕು ಎನ್ನುವುದು ಅವರ ಜೀವನೋದ್ದೇಶವಾಗಿತ್ತು. ಕಷ್ಟದಲ್ಲಿರುವವರಿಗೆ ನೆರವಾಗಲು ಗರಿಷ್ಠ ಪ್ರಯತ್ನಿಸಿದ್ದರು. ಸಾಧ್ಯವಾಗದಿದ್ದಾಗ ತೀವ್ರ ನೊಂದುಕೊಳ್ಳುತ್ತಿದ್ದರು. ಎಷ್ಟೇ ಶ್ರೀಮಂತನಾದರೂ, ಉದಾರಿಯಾದರೂ ವ್ಯಾಪಾರದ ಲಾಭದಿಂದ ಕೊಡಬೇಕೇ ಹೊರತು ಅಸಲು ಹಣಕ್ಕೆ ಕೈ ಹಾಕಬಾರದು ಎಂಬ ಸಾಮಾನ್ಯ ತತ್ವವನ್ನು ಅವರು ಉಲ್ಲಂಘಿಸಿದ್ದೇ ಹೆಚ್ಚು. ನಿರೀಕ್ಷಿಸಿ ಬಂದವರನ್ನು ನಿರಾಶೆಗೊಳಿಸಿದ್ದಿಲ್ಲ. ಕೈಗೇನಾದರೂ ಕಾಸು ಬಂದರೆ ಕೊಟ್ಟು ಮುಗಿಸಿದರಷ್ಟೇ ಸಮಾಧಾನ. ಮತ್ತೊಬ್ಬರನ್ನು ಖುಷಿಷಡಿಸಲು ಅವರು ಪಟ್ಟ ಪ್ರಯತ್ನಗಳು ಸಣ್ಣದೇನಲ್ಲ. ಆಪ್ತರಾದ ಬಡವರ ಮನೆಗೆ ಸಕಲ ಊಟೋಪಚಾರ ಪಾರ್ಸೆಲ್ ಸಮೇತ ದಿಢೀರನೆ ಭೇಟಿಕೊಟ್ಟು ಮನೆ ಮಂದಿಯಲ್ಲನ್ನೆಲ್ಲ ಉಣ್ಣಿಸಿ ಖುಷಿ ಕಾಣುವುದು, ಕಷ್ಟಗಳನ್ನು ಮುಂಚಿತರಾಗಿಯೇ ಊಹಿಸಿ ನೆರವು ನೀಡುವುದು, ಸಮಸ್ಯೆಗಳಿಗೆ ಗುರಿಯಾದವರನ್ನು ಸಂತೈಸುವುದು, ತಮ್ಮ ಉಪಸ್ಥಿತಿಯನ್ನು ಬಯಸಿದವರ ಮದುವೆಗೆ ಎಷ್ಟೇ ಒತ್ತಡವಿದ್ದರೂ ಹೊಂದಿಸಿಕೊಂಡು ಹೋಗಿ ಮನೆಮಂದಿಯನ್ನು ಖುಷಿಹಡಿಸುವುದು, ಪ್ರತಿಭೆಗಳಿಗೆ ಪ್ರೋತ್ಸಾಹಿಸುವುದು, ಉಲಮಾ ಸಾದಾತುಗಳನ್ನು ಗೌರವಿಸುವುದು. ಹೀಗೆ ಎಷ್ಟಷ್ಟು ಗುಣಗಳು. ಒಂದೊಂದಕ್ಕೂ ಸಾಕ್ಷಿಯೊದಗಿಸುವ ಎಷ್ಟಷ್ಟು ಘಟನೆಗಳು!
ಸ್ಥಳೀಯ ಟ್ಯಾಬ್ಲಾಯ್ಡ್ ಪತ್ರಿಕೆಯೊಂದರ ಸಂಪಾದಕನು (ಮುಂದೆ ಆತ ಸಲಫಿಯಾಗಿದ್ದು, ಈಗ ಬದುಕಿಲ್ಲ) ಓರ್ವ ತಂಙಳ್ರವರ ಬಗ್ಗೆ ‘ಆ ತಂಙಳ್ ನನ್ನ ಪತ್ರಿಕೆಗೆ ಜಾಹೀರಾತು ಕೊಟ್ಟು ಹಣ ಕೊಟ್ಟಿಲ್ಲ’ ಎಂದು ಕೆಲವರಲ್ಲಿ ದೂರಿಕೊಳ್ಳುತ್ತಿದ್ದರು. ಇದನ್ನು ಹಾಜಾರಾರ ಆಪ್ತರೊಬ್ಬರು ಹಾಜಾರಲ್ಲಿ ಹೇಳಿಕೊಂಡಾಗ ತಕ್ಷಣ ಹಾಜಾರರು ಆ ಹಣವನ್ನು (3ಸಾವಿರ ಎನ್ನುವುದು ನೆನಪು, ಕಡಿಮೆಯಿರಲೂ ಬಹುದು) ಆಪ್ತನ ಕೈಗಿತ್ತು, ಇದನ್ನು ಆ ಸಂಪಾದಕನಿಗೆ ಕೊಟ್ಟು ”ನಿಮ್ಮ ವಿಷಯ ತಂಙಳ್ಗೆ ನಾನು ಹೇಳಿದ್ದೆ – ತಂಙಳ್ ಇದನ್ನು ಕೊಟ್ಟಿದ್ದಾರೆ” ಎನ್ನಬೇಕು. ಎಲ್ಲೂ ನಾನು ಕೊಟ್ಟದ್ದು ಎಂದು ಗೊತ್ತಾಗಬಾರದು. ತಂಙಳೇ ಕೊಟ್ಟದ್ದೆಂದು ಆತ ತಿಳಿಯಬೇಕು” ಎಂದು ಹೇಳಿದ್ದರು. (ಈ ಘಟನೆಯನ್ನು ಆ ಆಪ್ತ ವ್ಯಕ್ತಿಯೇ ನನ್ನಲ್ಲಿ ಹೇಳಿದ್ದು) ಇಲ್ಲಿ ತಂಙಳ್ ರವರನ್ನು ಆರೋಪ ಮುಕ್ತಗೊಳಿಸುವುದು, ಒಂದೊಮ್ಮೆ ತಂಙಳ್ ಹಾಗೇ ಬಾಕಿಯಿಟ್ಟಿದ್ದರೆ ಅವರನ್ನು ಋಣ ಮುಕ್ತಿಗೊಳಿಸುವುದಾಗಿತ್ತು ಹಾಜಾರರ ಉದ್ದೇಶ. ಉಲಮಾ ಸಾದಾತುಗಳ ಮೇಲಿನ ಅವರ ಗೌರವಾದರಗಳು ಅತ್ಯಂತ ಪ್ರಮಾಣಿಕವಾಗಿತ್ತು. ದೊಡ್ಡ ಪ್ರಸಿದ್ದಿ ಪ್ರಚಾರ ಗಳಿರುವ ಉಲಮಾಗಳನ್ನಷ್ಟೇ ಗೌರವಿ ಸುವ, ಅವರ ಜತೆ ನಿಂತು ಪೋಟೋ ತೆಗೆಸಿ ಪ್ರತಿಷ್ಠೆ ಪ್ರದರ್ಶಿಸುವ ಮಹಬ್ಬತ್ ಆಗಿರಲಿಲ್ಲ. ಬದಲು ಸಾಮಾನ್ಯ ಒಬ್ಬರು ಉಸ್ತಾದರು ಆದರೂ ಹಾಜಾರ್ ಗೌರವಿಸುತ್ತಿದ್ದರು.
ಅಕ್ಬರಶಃ ಅವರು “ಆಶಿಖು ರ್ರಸೂಲ್” (ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್) ಆಗಿದ್ದರು. ಅಹ್ಲುಬೈತ್ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕುಟುಂಬ. ಅವರನ್ನು ಪ್ರೀತಿಸುವುದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲಿನ ಪ್ರೀತಿಯ ಭಾಗ. ಉಲಮಾಗಳು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಉತ್ತಾರಾಧಿಕಾರಿಗಳು. ಅವರನ್ನು ಪ್ರೀತಿಸುವುದು ಪ್ರವಾದಿ ಪ್ರೇಮದ ಭಾಗ. ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಯತೀಂ ಆಗಿ ಜನಿಸಿದ್ದರು. ಆದ್ದರಿಂದ ಯತೀಂ ಮಕ್ಕಳನ್ನು ಪ್ರೀತಿಸುವುದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲಿನ ಪ್ರೀತಿಯಿಂದಲೆ. ಹೀಗೆ ಪ್ರತಿಯೊಂದಕ್ಕೂ ಪ್ರವಾದಿ ಪ್ರೇಮವನ್ನು ಜೋಡಿಸುತ್ತಿದ್ದರು. ಅವರ “ಸುಗಂಧ ಪ್ರೇಮ’ ಕೂಡಾ ಆ ಬಗೆಯದು. ಕೆಲವು ವರ್ಷಗಳಿಂದ ಅವರ ಮೂಗಿನ ಗ್ರಾಹ್ಯ ಶಕ್ತಿ ಕುಂದಿ, ವಾಸನೆಯನ್ನು ಅನುಭವಿಸಲು ಆಗುತ್ತಿರಲಿಲ್ಲ. ಆದರೂ ಚೆನ್ನಾಗಿ ಸುಗಂಧ ಹಚ್ಚುತ್ತಿದ್ದರು. ತಮಗೆ ಅದರ ಸುವಾಸನೆ ಗೊತ್ತಾಗದಿದ್ದರೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಇಷ್ಟ ಪಟ್ಟಿದ್ದರು ಎಂಬ ಕಾರಣದಿಂದಲೇ ಸುಗಂಧ ಬಳಸುತ್ತಿದ್ದರು. ಸನ್ಮಾನ, ಪುರಸ್ಕಾರಗಳ ಬಗೆಗೆಲ್ಲ ಒಲ್ಲವಿಲ್ಲದ ಹಾಜಾರ್, ಶಾಲು ಹೊದಿಸುವುದನ್ನು ಮಾತ್ರ ವಿರೋಧಿಸುತ್ತಿರಲಿಲ್ಲ. ಏಕೆಂದರೆ ಕಅಬ್ ಬಿನ್ ರುುಹೈರ್ ರವರಿಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಶಾಲು ಹೊದಿ ಸಿದ ಹಿನ್ನಲೆಯಿರುವುದರಿಂದ!
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಹೆಸರಿನ ಜತೆ ಸ್ವಲಾತನ್ನು ಪೂರ್ಣವಾಗಿ ಬರೆಯದಿದ್ದರೆ ಕೋಪಿಸಿಕೊಳ್ಳುತ್ತಿದ್ದರು. ಭಾಷಣಕಾರರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲ ಮರ ಹೆಸರು ಹೇಳಿ ಸ್ವಲಾತ್ ಹೇಳದಿದ್ದರೆ ನಂತರ ಆ ಭಾಷಣ ಕೇಳಲು ಆಸಕ್ತಿ ತೋರಿಸುತ್ತಿರಲಿಲ್ಲ. ಸಾಧ್ಯವಾದರೆ ಅವರನ್ನು ತರಾಟೆಗೆ ತೆಗೆದು ಕೊಳ್ಳುತ್ತಿದ್ದರು. ಇಲ್ಲವೇ ಉಪದೇಶಿಸುತ್ತಿದ್ದರು. ಮಸ್ಹಿದುತ್ತಖ್ವಾಕ್ಕೆ ರಮಳಾನ್ ಪ್ರಭಾಷಣಕ್ಕೆ ಬಂದಿದ್ದ ಕೇರಳದ ಖ್ಯಾತ ವಾಗ್ಮಿಯೊಬ್ಬರು ಹಾಜಾರ್ ಬಗ್ಗೆ ತಿಳಿದು ಅವರನ್ನು ಭೇಟಿ ಯಾಗಲು ಹೋಗಿದ್ದರು. ನಾನೂ ಜೊತೆ ಗಿದ್ದೆ. ಆ ವೇಳೆ ಹಾಜಾರ್ ಮಾತನಾ ಡುತ್ತಾ, ‘ನೀವು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಹೆಸರು ಹೇಳು ವಾಗ ತಪ್ಪದೆ ಸ್ವಲಾತ್ ಹೇಳಿದರೆ ಇನ್ನಷ್ಟು ಹರಿಣಾಮಕಾರಿಯಾಗಿರು ತ್ತದೆ ಎಂದಿದ್ದರು. ಆ ಉಸ್ತಾದರೂ ಅದರಿಂದ ಖುಷಿಪಟ್ಟಿದ್ದರು ಮತ್ತು ಇನ್ನು ಖಂಡಿತಾ ಗಮನಿಸುವುದಾಗಿ ಹೇಳಿದ್ದರು. ಸ್ವಲಾತ್ಗೆ ಸಂಬಂಧಿಸಿದಂತೆ ಮತ್ತೆ ಮತ್ತೆ ಪ್ರಮಾದವುಟಾಗಿದ್ದ ಒಂದು ಸಂದರ್ಭದಲ್ಲಿ ಶತ್ರಿಕಾ ಕಚೇರಿಯಲ್ಲಿ ತೀವ್ರ ವಾಗ್ದಾಳಿ ಮಾಡಿದ್ದ ಹಾಜಾರ್, ‘ನಿಮಗೆ ನನ್ನನ್ನು ಹುಚ್ಚನಂತೆ ಕಾಣಬಹುದು ನನ್ನ ಮಯ್ಯಿತ್ ಕೊಂಡೊಯ್ಯುವಾಗ ನೀವು ಸ್ವಲಾತ್ನ ಹುಚ್ಚನ ಮಯ್ಯಿತ್ ಅದು ಅಂತ ಹೇಳಬೇಕು ಎನ್ನುವುದು ನನ್ನ ಆಸೆ” ಎಂದಿದ್ದರು! ಆ ಹುಚ್ಚು ನಮ್ಮಲ್ಲಿ ಹೆಚ್ಚು ಬೆಳೆಯಲು ಪ್ರಾರ್ಥಿಸೋಣ.
‘ಈಮಾನಿನ ಬಳಿಕ ಇಸ್ಲಾಮಿನಲ್ಲಿ ಅತ್ಯಂತ ಶ್ರೇಷ್ಠವಾದ ಕಾರ್ಯವೆಂದರೆ ಜನರನ್ನು ಪ್ರೀತಿಸುವುದು’ ಎಂಬ ಪ್ರವಾದಿವಚನವನ್ನು ಬದುಕಿಗೆ ಅಕ್ಬರಶಃ ಅನ್ವಯಗೊಳಿಸಿ ಬದುಕಿದವರು ಬಾವ ಹಾಜಾರ್. ಆದ್ದರಿಂದಲೇ ಅವರ ಆಪ್ತರಿಗೆಲ್ಲ ಅವರ ವಿದಾಯದ ದುಃಖದಿಂದ ಇನ್ನು ಹೊರಬರಲಾಗುತ್ತಿಲ್ಲ. ಅವರಿಲ್ಲದ ಬದುಕನ್ನು ಊಹಿಸಲಾಗುತ್ತಿಲ್ಲ. ಗದ್ದದಿತ ಕಂಠದಿಂದಲ್ಲದೆ ಅವರ ಬಗ್ಗೆ ಮಾತನಾಡಲಾಗುತ್ತಿಲ್ಲ. ಕಣ್ಣು ಒದ್ದೆಯಾಗದೆ ಅವರನ್ನು ನೆನಪಿಸಲಾಗುತ್ತಿಲ್ಲ. ನಾವೇ ಹೀಗಾಗ ಬೇಕಾದರೆ ಸ್ವಜೀವಕ್ಕಿಂತ ಪ್ರೀತಿಸಿದ್ದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ವಿದಾಯವನ್ನು ಅವರ ಸ್ವಹಾಬತ್ ಹೇಗೆ ತಾಳಿಕೂಂಡಿರಬಹುದು ಎಂದು ಹಾಜಾರರ ಮಯ್ಯಿತ್ನ ಮುಂದೆ ನಿಂತಾಗ ನನಗೆ ಅನ್ನಿಸಿದ್ದಿದೆ. ಯಾ ಅಲ್ಲಾಹ್…
ಬರೆದಷ್ಟು ಮುಗಿಯದ ಬದುಕಾಗಿತ್ತು ಬಾವಹಾಜಾರರದು. ಏಕೆಂದರೆ ಬರೆದು ಮುಗಿಸಲಾಗದಷ್ಟು ಭವ್ಯ ಬದುಕನ್ನು ಬದುಕಿದ್ದ ಮಹಾನುಭಾವ ಬಾವ ಹಾಜಾರ್. ಬರೆಯಲು ಬಹಳಷ್ಟಿದೆ. ದೊಡ್ಡದೊಂದು ಪುಸ್ತಕ ಬರೆದರೂ ಮುಗಿಯದಷ್ಟಿದೆ. ಮುಂದೊಮ್ಮೆ ಪ್ರಯತ್ನಿಸುತ್ತೇನೆ, ಇನ್ಮಾಅಲ್ಲಾಹ್. ನಮಗೆ ಅವರ ಸಾಂಗತ್ಯ ಸ್ವರ್ಗ ಲೋಕದಲ್ಲೂ ಮುಂದುವರಿಯಲಿ, ಆಮೀನ್.